ಸಮುದ್ರ ನೀರು ಸದ್ಬಳಕೆಯಾದರೆ ಕುಡಿಯುವ ನೀರಿಗೆ ಬರವಿಲ್ಲ
Team Udayavani, Mar 25, 2018, 5:26 PM IST
ಮಂಗಳೂರು ನಗರದಲ್ಲಿ ಉಪ್ಪು ನೀರು ಶುದ್ಧೀಕರಿಸುವ ಘಟಕ ಸ್ಥಾಪಿಸುವ ಮೂಲಕ ಸಮುದ್ರದ ನೀರನ್ನು ಕುಡಿಯಲು ಹಾಗೂ ವಾಣಿಜ್ಯ ಉದ್ದೇಶಗಳಿಗೆ ಸದ್ಬಳಕೆ ಮಾಡಿಕೊಳ್ಳುವ ಯೋಜನೆಗೆ ಈಗ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿರುವುದು ಭವಿಷ್ಯದಲ್ಲಿ ನಗರದಲ್ಲಿ ತಲೆದೋರಬಹುದಾದ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬಹುದು. ಅಷ್ಟೇ ಅಲ್ಲ, ಮಂಗಳೂರಿನಿಂದ ಸಮುದ್ರದ ನೀರನ್ನು ಸಂಸ್ಕರಣೆಗೊಳಿಸಿ ಬೆಂಗಳೂರು ನಗರ ಸಹಿತ ಬಯಲು ಸೀಮೆ ಜಿಲ್ಲೆಗಳ ನೀರಿನ ಕೊರತೆ ನೀಗಿಸುವುದಕ್ಕೂ ಇದು ಅನುಕೂಲವಾಗಲಿದೆ.
ಮಂಗಳೂರು ನಗರದಲ್ಲಿ ಉಪ್ಪು ನೀರು ಶುದ್ಧೀಕರಿಸುವ ಘಟಕ ಸ್ಥಾಪನೆಯಾದರೆ ನಗರದ ಮಾತ್ರವಲ್ಲ ರಾಜ್ಯದ ವಿವಿಧ ಭಾಗಗಳ ಕುಡಿಯುವ ನೀರಿನ ಕೊರತೆಯನ್ನು ನೀಗಿಸಬಹುದು. ಅಲ್ಲದೇ ಕುಡಿಯುವ ನೀರಿನ ಹೆಸರಿನಲ್ಲಿ ಕರಾವಳಿಯ ಜೀವನಾಡಿಯಾಗಿರುವ ನೇತ್ರಾವತಿ ಹಾಗೂ ಪಶ್ಚಿಮ ಘಟ್ಟದ ನೈಸರ್ಗಿಕ ಸಂಪತ್ತಿನ ಮೇಲಾಗುತ್ತಿರುವ ಶೋಷಣೆ ತಪ್ಪಿಸಬಹುದು. ಯೋಜನ ವರದಿ ಸಿದ್ಧಗೊಂಡ ಬಳಿಕ ಅನುಷ್ಠಾನದ ನಿಟ್ಟಿನಲ್ಲಿ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ.
ಪ್ರಸ್ತಾವನೆ
ಸಮುದ್ರದ ನೀರನ್ನು ಸಂಸ್ಕರಿಸಿ ಅದನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಸುಮಾರು 806 ಕೋ.ರೂ. ವೆಚ್ಚದ ಈ ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ನೀಡಿದೆ.
ಮಂಗಳೂರಿನಲ್ಲಿ ಸಮುದ್ರ ನೀರು ಸಂಸ್ಕರಿಸಿ ಕುಡಿಯುವ ಹಾಗೂ ಕೈಗಾರಿಕೆಗಳಿಗೆ ನೀಡುವ ಪ್ರಸ್ತಾವನೆ ಕೆಲವು ವರ್ಷಗಳಿಂದ ಕೇಳಿಬಂದಿತ್ತು. ಜಿಲ್ಲಾಧಿಕಾರಿಯಾಗಿದ್ದ ಎ.ಬಿ. ಇಬ್ರಾಹಿಂ ಅವರು 2016ರ ಮೇ 25ರಂದು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಮಂಗಳೂರಿನಲ್ಲಿರುವ ಕೈಗಾರಿಕೆಗಳ ಸಭೆ ಕರೆದು ಸಮುದ್ರದ ನೀರು ಸಂಸ್ಕರಿಸಿ ನೀರು ಪಡೆಯುವ ಬಗ್ಗೆ ಕಾರ್ಯಯೋಜನೆ ರೂಪಿಸಲು ಚರ್ಚೆ ನಡೆಸಿದ್ದರು. ಸುಮಾರು 20 ಮಿಲಿಯನ್ ಲೀಟರ್ ಸಂಸ್ಕರಣ ಘಟಕ ಸ್ಥಾಪನೆಗೆ 95 ರಿಂದ 100 ಕೋ.ರೂ. ಆವಶ್ಯವಿದೆ. ಈ ಯೋಜನೆಗೆ 1ರಿಂದ 2 ಎಕ್ರೆ ಜಾಗ ಸಾಕಾಗುತ್ತದೆ ಎಂದು ಅಂದಾಜಿಸಲಾಗಿತ್ತು.
ಎಲ್ಲ ಪೂರ್ವಭಾವಿ ಪ್ರಕ್ರಿಯೆಗಳು ಮುಗಿದ ಬಳಿಕ ಕಾಮಗಾರಿ ಪ್ರಾರಂಭಗೊಂಡ 18ರಿಂದ 20 ತಿಂಗಳೊಳಗೆ ಘಟಕ ನಿರ್ಮಾಣ ಮುಗಿದು ಕಾರ್ಯಾಚರಣೆ ಪ್ರಾರಂಭಿಸಬಹುದು ಎಂಬುದು ಲೆಕ್ಕಚಾರ.
ರಾಜ್ಯ ನಗರಾಭಿವೃದ್ಧಿ ಸಚಿವರ ಆಸಕ್ತಿ
ಮಂಗಳೂರಿನಲ್ಲಿ ಸಮುದ್ರದ ಉಪ್ಪು ನೀರು ಸಂಸ್ಕರಣೆ ಪ್ರಸ್ತಾವನೆಗೆ ರಾಜ್ಯ ನಗರಾಭಿವೃದ್ಧಿ ಸಚಿವ ಆರ್. ರೋಶನ್ ಬೇಗ್ ಆಸಕ್ತಿ ತೋರ್ಪಡಿಸಿದ್ದರು. ಕುಡಿಯುವ ನೀರು ಹಾಗೂ ಕೈಗಾರಿಕಾ ಉದ್ದೇಶಗಳಿಗೆ ಸಮುದ್ರ ನೀರು ಬಳಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ ಉಪ್ಪು ನೀರು ಸಂಸ್ಕರಣ ಸ್ಥಾವರ ಸ್ಥಾಪಿಸುವ ಕುರಿತು ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳ ತಂಡ ಚೆನ್ನೈಗೆ ಭೇಟಿ ನೀಡಿ ಪರಿಶೀಲಿಸುವಂತೆ ಸಲಹೆ ಮಾಡಿದ್ದರು.
ಮೇಯರ್ ಆಗಿದ್ದ ಕವಿತಾ ಸನಿಲ್ ಅವರ ನೇತೃತ್ವದಲ್ಲಿ ಕಾರ್ಪೊರೇಟರ್‌ಗಳು ಹಾಗೂ ಅಧಿಕಾರಿಗಳ ತಂಡ ಇತ್ತೀಚೆಗೆ ಚೆನ್ನೈಗೆ ಭೇಟಿ ನೀಡಿ ಅಲ್ಲಿನ ಉಪ್ಪು ನೀರು ಸಂಸ್ಕರಣೆ ಘಟಕಗಳನ್ನು ವೀಕ್ಷಿಸಿ ಮಾಹಿತಿಗಳನ್ನು ಪಡೆದುಕೊಂಡಿದ್ದು, ಮಂಗಳೂರಿನಲ್ಲೂ ಇದು ಕಾರ್ಯಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.
ಚೆನ್ನೈ, ಗುಜರಾತ್‌ಗಳಲ್ಲಿ ಘಟಕ
ಕುಡಿಯುವ ನೀರಿಗೆ ಪರ್ಯಾಯವಾಗಿ ಸಮುದ್ರದ ಸಂಸ್ಕರಿತ ನೀರು ಬಳಕೆ ನಮ್ಮ ದೇಶದಲ್ಲಿ ಈಗ ಹೆಚ್ಚು ಪ್ರಚಲಿತಕ್ಕೆ ಬರುತ್ತಿದೆ. ಚೆನ್ನೈ ನಗರದಲ್ಲಿ ಸಮುದ್ರದ ಉಪ್ಪುನೀರು ಸಂಸ್ಕರಿಸಿ ಕುಡಿಯುವ ಉದ್ದೇಶ ಹಾಗೂ ಕೈಗಾರಿಕೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಅಲ್ಲಿ ಯೋಜನೆ ಪಿಪಿಪಿ ಮಾದರಿಯಲ್ಲೇ ಕಾರ್ಯನಿರ್ವಹಿಸುವುದರಿಂದ ಚೆನ್ನೈ ಮಹಾನಗರ ಪಾಲಿಕೆ ಅಥವಾ ಸರಕಾರಕ್ಕೆ ಆರ್ಥಿಕ ಹೊರೆ ಬಿದ್ದಿಲ್ಲ.
ಚೆನ್ನೈಯ ಮಿಂಜೂರು ಉಪ್ಪುನೀರು ಸಂಸ್ಕರಣ ಘಟಕ 2010ರಿಂದ ಕಾರ್ಯಾಚರಿಸುತ್ತಿದ್ದು, ದಿನವೊಂದಕ್ಕೆ 100 ಮಿಲಿಯನ್ ಲೀಟರ್ ಕುಡಿಯುವ ಸಂಸ್ಕರಿತ ನೀರು ಉತ್ಪಾದನೆ ಸಾಮರ್ಥ್ಯವನ್ನು ಹೊಂದಿದೆ. ಇದೇ ರೀತಿಯಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ಭಾರತದ ಅತೀ ದೊಡ್ಡ ಉಪ್ಪು ನೀರು ಸಂಸ್ಕರಣ ಘಟಕ ಕಾರ್ಯಾಚರಿಸುತ್ತಿದೆ. ಚೆನ್ನೈ ನಗರದಲ್ಲಿ ಕುಡಿಯುವ ನೀರು ಹಾಗೂ ಕೈಗಾರಿಕೆಗಳಿಗೆ ಸರಬರಾಜು ಮಾಡಲಾಗುತ್ತಿದೆ.
ಇತರ ಭಾಗಗಳಿಗೆ ಸರಬರಾಜು ಸಾಧ್ಯ
ಇಲ್ಲಿಯ ಸಮುದ್ರದ ಉಪ್ಪು ನೀರು ಸಂಸ್ಕರಣ ಯೋಜನೆ ಕೇವಲ ಮಂಗಳೂರಿಗೆ ಮಾತ್ರವಲ್ಲದೆ ರಾಜ್ಯದ ಇತರ ಜಿಲ್ಲೆಗಳ ಪಾಲಿಗೂ ವರದಾನವಾಗಲಿದೆ. ಕರ್ನಾಟಕದ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜ ನಗರ ಸಹಿತ ರಾಜ್ಯದಲ್ಲಿ ಕುಡಿಯುವ ನೀರಿನ ಬರ ಎದುರಿಸುತ್ತಿರುವ ಇತರ ಪ್ರದೇಶಗಳಿಗೂ ಇದರಿಂದ ನೀರು ಬಳಸಲು ಸಾಧ್ಯವಿದೆ.
ಈಗಾಗಲೇ ಮಂಗಳೂರಿನಿಂದ ಬೆಂಗಳೂರಿಗೆ ತೈಲ, ಗ್ಯಾಸ್ ಸರಬರಾಜು ಪೈಪ್‌ಲೈನ್‌ಗಳು ಅಳವಡಿಕೆಯಾಗಿದೆ. ಇದರ ಬದಿಯಲ್ಲೇ ನೀರು ಸರಬರಾಜು ಪೈಪ್ ಲೈನ್ ಅಳವಡಿಸುವ ಅವಕಾಶವಿದ್ದರೆ ಇದನ್ನು ಬಳಸಿಕೊಳ್ಳಬಹುದಾಗಿದೆ. ಇದೇ ರೀತಿಯಾಗಿ ಎತ್ತಿನ ಹೊಳೆ ಯೋಜನೆಯಲ್ಲಿ ನೀರು ಲಭ್ಯವಾಗಲಾರದು ಎಂಬುದಾ ಗಿ ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಮಂಗಳೂರಿನಿಂದ ಸಕಲೇಶಪುರದವರೆಗೆ ಪೈಪ್‌ಲೈನ್ ಅಳವಡಿಸಿ ಅಲ್ಲಿ ಎತ್ತಿನಹೊಳೆ ಯೋಜನೆಗೆ ಹಾಕಿರುವ ಪೈಪ್‌ಪೈನ್ ಗೆ ಜೋಡಿಸಬಹುದಾಗಿದೆ.
ಸಮುದ್ರದಿಂದ 45 ಲೀಟರ್ ನೀರು
ಈಗಿನ ಲೆಕ್ಕಾಚಾರದಂತೆ ಸಮುದ್ರದ ಉಪ್ಪು ನೀರು ಸಂಸ್ಕರಿತ 1,000 ಲೀಟರ್ ಶುದ್ಧ ನೀರಿಗೆ 52ರಿಂದ 60 ರೂ. ವೆಚ್ಚ ಬೀಳುತ್ತದೆ. ಚೆನ್ನೈ ಸಹಿತ ಈಗ ಇರುವ ಸಮುದ್ರದ ಉಪ್ಪು ನೀರು ಸಂಸ್ಕರಣ ಘಟಕಗಳು 1,000 ಕಿಲೋ ಲೀಟರ್‌ಗೆ 75ರಿಂದ 80 ರೂ. ಗೆ ಮಾರಾಟ ಮಾಡುತ್ತವೆ. ಸಮುದ್ರದಿಂದ ತೆಗೆಯುವ ಪ್ರತಿ 100 ಲೀಟರ್ ಉಪ್ಪು ನೀರಿನಲ್ಲಿ 45 ಲೀಟರ್ ಶುದ್ಧ ನೀರು ಲಭಿಸುತ್ತದೆ. ಉಳಿದ 55 ಲೀಟರ್ ಮರಳಿ ಸಮುದ್ರಕ್ಕೆ ಬಿಡಲಾಗುತ್ತದೆ.
ತುಂಬೆಯಿಂದ 18 ಎಂಜಿಡಿ ನೀರು
.ಮಂಗಳೂರು ಮಹಾನಗರಕ್ಕೆ ತುಂಬೆ ವೆಂಟೆಡ್‌ಡ್ಯಾಂನಿಂದ ಪ್ರತಿದಿನ ನೀರು ಸರಬರಾಜು- 18 ಎಂಜಿಡಿ.
. ಉದ್ದಿಮೆಗಳಿಗೆ ದಿನವೊಂದಕ್ಕೆ ನೀರು ಸರಬರಾಜು- 20 ಮಿ.ಲೀ. ( ಎಂಎಲ್‌ಡಿ)
.ಉದ್ದಿಮೆಗಳಿಗೆ ಪಾಲಿಕೆ ವಿಧಿಸುವ ನೀರಿನ ದರ- 1,000 ಲೀಟರ್‌ಗೆ 70 ರೂ.
. ಗೃಹಬಳಕೆಗೆ ಕುಡಿಯುವ ನೀರು ಸರಬರಾಜು- 70 ಎಂಎಲ್‌ಡಿ
. ವಾಣಿಜ್ಯ ಬಳಕೆಗೆ ಸರಬರಾಜಾಗುತ್ತಿರುವ ನೀರು- ಸುಮಾರು 15 ರಿಂದ 20 ಎಂಎಲ್‌ಡಿ
. ಮನೆ ಬಳಕೆಗೆ ಕುಡಿಯವ ನೀರಿನ ದರ- 24,000 ಲೀಟರ್‌ಗೆ 66 ರೂ.
ಭವಿಷ್ಯದ ಆವಶ್ಯಕತೆ
ಮಂಗಳೂರು ಔದ್ಯೋಗಿಕ ನಗರವಾಗಿ ಬೆಳೆಯುತ್ತಿದೆ. 15 ಬೃಹತ್ ಉದ್ದಿಮೆಗಳು ಈಗಾಗಲೇ ಇವೆ. ಎಸ್‌ಇಝಡ್‌ನಲ್ಲಿ
ಹಾಗೂ ಎಂಆರ್‌ಪಿಎಲ್‌ನ ನಾಲ್ಕನೇ ಹಂತದ ವಿಸ್ತರಣೆಯಲ್ಲಿ ಇನ್ನಷ್ಟು ಉದ್ದಿಮೆ ಬರಲಿವೆ. ಸುಮಾರು 6ರಿಂದ 8 ಸಾವಿರದ ವರೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿವೆ. ಇವುಗಳಿಗೆ ಬಹುತೇಕ ನೀರಿನ ಮೂಲ ನೇತ್ರಾವತಿ ನದಿ, ಪಲ್ಗುಣಿ ನದಿ. ಮಂಗಳೂರು ನಗರಕ್ಕೆ ಏಕೈಕ ಕುಡಿಯುವ ನೀರಿನ ಮೂಲವಾಗಿರುವ ತುಂಬೆ ವೆಂಟೆಡ್ ಡ್ಯಾಂನಿಂದ ಉಳ್ಳಾಲ, ಮೂಲ್ಕಿವರೆಗೆ ನೀರು ಸರಬರಾಜಾಗುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯ, ಮುಡಿಪು ಇನ್ಫೋಸಿಸ್ ಗೆ ಪಾಣೆಮಂಗಳೂರು ಸಮೀಪ ಸಜೀಪ ಮುನ್ನೂರುನಿಂದ ನೇತ್ರಾವತಿ ನದಿಯಿಂದ ನೀರು ಸರಬರಾಜಾಗುತ್ತಿದೆ. ಮಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆಯ ನೀರಿನ ಆವಶ್ಯಕತೆ, ಮುಖ್ಯವಾಗಿ ನೇತ್ರಾವತಿ ನದಿಯ ಮೇಲಿರುವ ಒತ್ತಡ ಮತ್ತು ಮಳೆಚಕ್ರದಲ್ಲಾಗುತ್ತಿರುವ ವೈಪರೀತ್ಯ ಕುಡಿಯುವ ನೀರಿಗೆ ಪರ್ಯಾಯ ಮೂಲದ ವ್ಯವಸ್ಥೆಯ ಆವಶ್ಯಕತೆಯನ್ನು ಹೆಚ್ಚಿಸಿದೆ.
ಜಿಲ್ಲೆಯಲ್ಲಿ ಅಂತರ್ಜಲ ಕುಸಿದಿದ್ದು, 800 ಅಡಿವರೆಗೆ ಕೊರೆದರೂ ಕೊಳವೆಬಾವಿಯಲ್ಲಿ ನೀರು ಸಿಗುತ್ತಿಲ್ಲ. ಮೇಲಾಗಿ ಕೊಳವೆ ಬಾವಿ ತೆಗೆಯಲು ಸರಕಾರದ ನಿರ್ಬಂಧವಿದೆ. ಈ ಪರಿಸ್ಥಿತಿಯಲ್ಲಿ ಈಗಾಗಲೇ ಪರ್ಯಾಯ ನೀರಿನ ಮೂಲವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಸಮುದ್ರ ನೀರು ಸಂಸ್ಕರಣೆ ಮಂಗಳೂರಿಗೆ ಹೊಸ ಸಾಧ್ಯತೆಯಾಗಿ ಗೋಚರಿಸುತ್ತಿದೆ. ಮಂಗಳೂರಿನ ತಲಪಾಡಿಯಿಂದ ಮೂಲ್ಕಿವರೆಗೆ ಇರುವ 42 ಕಿ.ಮೀ. ಸಮುದ್ರ ತೀರ ಇದಕ್ಕೆ ಪೂರಕವಾಗಿದೆ.
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Khel Ratna Award: ನನ್ನಿಂದಲೇ ತಪ್ಪಾಗಿರಬಹುದು: ಮನು ಭಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.