ಶಿಕ್ಷಣ ಸಂಸ್ಥೆ ಅಭಿವೃದ್ಧಿಯಾದರೆ ದೇಗುಲಗಳ ಅಭಿವೃದ್ಧಿ ಪುಣ್ಯ ಲಭ್ಯ
Team Udayavani, Nov 30, 2017, 10:36 AM IST
ಬೆಟ್ಟಂಪಾಡಿ: ಗ್ರಾಮದ ಜನರ ಸಹಕಾರದಿಂದ ಸರಕಾರದ ಅನುದಾನವನ್ನು ಸರಿಯಾಗಿ ಬಳಸಿದರೆ ಅಲ್ಲಿ ಅಭಿವೃದ್ಧಿ ನಡೆಯಲು ಸಾಧ್ಯ. ಹಾಗೆಯೇ ಶಾಲೆಯಲ್ಲಿ ವಿವಿಧ ಸಮುದಾಯದ ಮಕ್ಕಳು ಕಲಿಯುವುದರಿಂದ ಆ ಶಿಕ್ಷಣ ಸಂಸ್ಥೆ ಅಭಿವೃದ್ಧಿಯಾದರೆ ಊರಿನ ಹತ್ತು ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ನುಡಿದರು.
ನ. 29ರಂದು ಇರ್ದೆ ಉಪ್ಪಳಿಗೆ ಪ್ರೌಢಶಾಲೆಯಲ್ಲಿ ನಡೆದ ಉತ್ತುಂಗ ಸಭಾಭವನ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಶಿಕ್ಷಕರು ಯಾವುದೇ ರಾಜಕೀಯ ಮಾಡದೆ ತಮ್ಮ ಶಾಲೆಯಲ್ಲಿ ಕರ್ತವ್ಯ ಮಾಡಿದರೆ ಖಾಸಗಿ ಶಾಲೆಯನ್ನು ಮೀರಿಸುವಂತಹ ಸಾಧನೆ ಮಾಡಬಹುದು ಎಂಬುದಕ್ಕೆ ಮೂರು ಬಾರಿ ಶೇಕಡಾ ನೂರು ಫಲಿತಾಂಶ ಪಡೆದು ಈ ಶಾಲೆ ಮಾದರಿಯಾಗಿದೆ. ಸರಕಾರಿ ಶಾಲೆಯೆಂಬ ತಪ್ಪು ಕಲ್ಪನೆ ಮಾಡದೆ ಹಿರಿಯರು ಮಾನಸಿಕ ಪರಿವರ್ತನೆ ಮಾಡಿದರೆ ಸರಕಾರಿ ಶಾಲೆ ಅಭಿವೃದ್ಧಿಯಾಗುತ್ತದೆ. ಅಪಾರ ದಾನಿಗಳ ನೆರವಿನಿಂದ ಸುಸಜ್ಜಿತವಾದ ಈ ಸಭಾಭವನದಲ್ಲಿ ಮಕ್ಕಳು ಮಿಂಚುವ ಮೂಲಕ ಒಳ್ಳೆಯ ಪ್ರತಿಭೆಗಳು ಹೊರ ಹೊಮ್ಮಿ ಸಾಧನೆ ಉತ್ತುಂಗಕ್ಕೇರಲಿ. ಆದ್ಯತೆ ಮೇರೆಗೆ ಈ ಶಾಲೆಯ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಅಭಿವೃದ್ಧಿಗೆ ಸಹಕರಿಸುವೆ
ನೂತನ ಸಭಾಭವನವನ್ನು ಉದ್ಘಾಟಿಸಿದ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ ಶಿಕ್ಷಕರು ತಮ್ಮೊಳಗೆ ಯಾವುದೇ ರಾಜಕೀಯ ಮಾಡದೆ ಜತೆಗೂಡಿ ಕೆಲಸ ಮಾಡಿದರೆ ಸಂಸ್ಥೆ ಅಭಿವೃದ್ಧಿಯಾಗುತ್ತದೆ ಎಂಬುದಕ್ಕೆ ಈ ಶಾಲೆ ಉತ್ತಮ ಉದಾಹರಣೆ. ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಶಾಲೆ ಮುಚ್ಚುವ ಸ್ಥಿತಿ ಬರಬಾರದು. ಇಲ್ಲಿಯ ಮುಖ್ಯ ಗುರು ಹಾಗೂ ಅಭಿವೃದ್ಧಿ ಸಮಿತಿ ಮತ್ತು ಸಹಶಿಕ್ಷಕರು ಊರಿನವರೊಂದಿಗೆ ಸ್ನೇಹ ಸಂಬಂಧ ಇಟ್ಟು ಕೊಂಡ ಕಾರಣ ಇಂದು ಇಂತಹ ಒಂದು ಸಭಾಭವನ ಎದ್ದುನಿಂತಿದೆ. ಅಂತಹ ಮುಖ್ಯ ಶಿಕ್ಷಕರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕು. ಸಹಕಾರ ನೀಡಿದ ದಾನಿಗಳಿಗೆ ಅಭಿನಂದನೆ ಸಲ್ಲಿಸಿ ಶಾಲೆಯ ಅಭಿವೃದ್ಧಿಗೆ ಮುಂದೆಯೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕೈಕಾರ ಶಿವರಾಮ ರೈ ವೇದಿಕೆಯಲ್ಲಿ ಸಭಾಕಾರ್ಯ ಕ್ರಮ ಉದ್ಘಾಟಿಸಿದ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಊರಿನವರ ಮತ್ತು ಸರಕಾರದ ಸಹಕಾರದಿಂದ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಬೆಳಗಿಸಲು ಈ ಒಂದು ಸಭಾಭವನ ನಿರ್ಮಾಣವಾಗಿದೆ. ಇದು ನಮ್ಮ ಊರಿನ ಅಭಿವೃದ್ಧಿಗೆ ಕೈಗನ್ನಡಿ. ಸಹಕಾರ ನೀಡಿದ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.
ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಮಗೆ ಕರ್ತವ್ಯ ಮುಖ್ಯ ಎಂಬ ನೆಲೆಯಲ್ಲಿ ಈ ಶಾಲೆಯ ಶಿಕ್ಷಕರು ಮುಖ್ಯ ಗುರುಗಳ ಮುಂದಾಳತ್ವದಲ್ಲಿ ಶ್ರಮ ವಹಿಸಿ ಕೆಲಸ ಮಾಡಿದ ಫಲದಿಂದ ಇಂದು ಈ ಶಾಲೆ ಹೆಸರು ಗಳಿಸುವಂತಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ತಾ.ಪಂ. ಸದಸ್ಯೆ ಮೀನಾಕ್ಷಿ ಮಂಜುನಾಥ, ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷೆ ಉಮಾವತಿ ಸುಬ್ಬಪ್ಪ ಮಣಿಯಾಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ., ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಪೂರ್ಣ ಸುರಕ್ಷಾ ಅನುಷ್ಠಾನ ಅಧಿಕಾರಿ ಜಿ. ಗಣೇಶ್ ಭಟ್ ಮಾತನಾಡಿ ಶುಭ ಹಾರೈಸಿದರು. ಸಮ್ಮಾನಿತರಾದ ದಾನಿಗಳು ಶುಭ ಹಾರೈಸಿದರು.
ಬೆಟ್ಟಂಪಾಡಿ ಗ್ರಾ.ಪಂ. ಉಪಾಧ್ಯಕ್ಷೆ ಭವಾನಿ ಕಜೆ, ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ದಿನೇಶ್ ಕಲ್ಪಣೆ, ಪುಷ್ಪಾವತಿ, ಉಪ್ಪಳಿಗೆ ಪ್ರಾಥಮಿಕ ಶಾಲಾ ಮುಖ್ಯಗುರು ಲಲಿತಾ ಹೆಗಡೆ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಮುಖ್ಯ ಶಿಕ್ಷಕ ನಾರಾಯಣ ಕೆ. ಸ್ವಾಗತಿಸಿ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕಿ ಸವಿತಾ ದಾನಿಗಳ ಪಟ್ಟಿ ವಾಚಿಸಿದರು. ಶಾಲಾ ದೈಹಿಕ ಶಿಕ್ಷಕ ರಾಮಕೃಷ್ಣ ಪಡುಮಲೆ, ಸಹಶಿಕ್ಷಕಿ ಗೀತಾ ಕುಮಾರಿ ನಿರೂಪಿಸಿದರು. ಸಹಶಿಕ್ಷಕರಾದ ರಾಮಚಂದ್ರ, ವಿದ್ಯಾಲಕ್ಷ್ಮೀ, ವಿಷ್ಣು ಯುವಕ ಮಂಡಲದ ಅಧ್ಯಕ್ಷ ಪುತ್ತು ಚೆಲ್ಯಡ್ಕ ಹಾಗೂ ಹೆತ್ತವರು ಮತ್ತು ವಿದ್ಯಾರ್ಥಿಗಳು ಸಹಕರಿಸಿದರು. ತಾಲೂಕು ಪಂಚಾಯತ್ ಸದಸ್ಯ ರಾಧಾಕೃಷ್ಣ ಬೋರ್ಕರ್ ಕೆ., ಅಮ್ಮಣ್ಣ ರೈ ಪಾಪೆಮಜಲು, ಶಶಿಕುಮಾರ್ ರೈ ಬಾಲ್ಯೊಟ್ಟು, ಹಾಜಿ ಮಹಮ್ಮದ್ ಬಡಗನ್ನೂರು, ದಯಾನಂದ ರೈ ಕೋರ್ಮಂಡ, ಜೊಕಿಂ ಡಿ’ಸೋಜಾ, ಡಿ. ಶಂಭು ಭಟ್, ರಮೇಶ್ ರೈ ಕೊಮ್ಮಂಡ, ಬೆಥಣಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಎಮಿರಿಟಾ, ಶಿಕ್ಷಕ ಸುಂದರ ಗೌಡ, ಶಾಲಾ ಪೋಷಕರು, ಶಿಕ್ಷಣಾಭಿಮಾನಿಗಳು ಪಾಲ್ಗೊಂಡರು. ಸಭಾ ಕಾರ್ಯಕ್ರಮದ ಮೊದಲು ವಿದ್ಯಾರ್ಥಿನಿಯರು ಭರತನಾಟ್ಯ ಮೂಲಕ ಅತಿಥಿಗಳ ಗಮನ ಸೆಳೆದರು.
ಬೆಳಗ್ಗೆ ಎಂ.ಆರ್.ಪಿ. ಎಲ್.ನ ಸೀತಾರಾಮ ರೈ ಕೈಕಾರ ಶಾಲಾ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದ್ದರು. ಮಧ್ಯಾಹ್ನ ಅನಂತರ ಜಿಲ್ಲೆಯ ಹೆಸರಾಂತ ಕಲಾವಿದ ಜಬ್ಟಾರ್ ಸಮೋ ಅರ್ಥಗಾರಿಕೆ, ಅಮೃತಾ ಅಡಿಗರ ಭಾಗವತಿಕೆಯಲ್ಲಿ ಶರಸೇತು ಬಂಧನ ಯಕ್ಷಗಾನ ತಾಳಮದ್ದಳೆ ಹಾಗೂ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಮ್ಮಾನ
ಆಕರ್ಷಕ ಸಭಾಭವನ ನಿರ್ಮಾಣದ ಮಹಾ ಪೋಷಕರು ಎಂಆರ್‌ಪಿಎಲ್ ನ ಸೀತಾರಾಮ ರೈ ಕೈಕಾರ, ಬೆಂಗಳೂರಿನ ನ್ಯಾಯವಾದಿ ಬಿ.ಆರ್. ಶ್ರೀನೀವಾಸ ಗೌಡ, ಉದ್ಯಮಿ ಯತೀಶ್ ರೈ ಚೆಲ್ಯಡ್ಕ , ಧ.ಗ್ರಾ. ಯೋಜನೆಯ ಪರವಾಗಿ ಜಿ. ಗಣೇಶ್ ಭಟ್ , ಪ್ರಗತಿಪರ ಕೃಷಿಕ ಸುಧಾಮ ಕಕ್ಕಾಜೆ ಸುಳ್ಯ, ರತ್ನಾಕರ ಆಳ್ವ ಅಜಲಡ್ಕ, ದೇವಪ್ಪ ಗೌಡ ರಂಗಯ್ಯಕಟ್ಟೆ, ಮಹಮ್ಮದ್ ಹಾಜಿ ಪೇರಲ್ತಡ್ಕ, ಉದ್ಯಮಿ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಮಂಗಳೂರಿನ್ ಬ್ರೈಟ್ ವೇ ಇಂಡಿಯಾದ ಮನಮೋಹನ ರೈ ಚೆಲ್ಯಡ್ಕ, ಉದ್ಯಮಿ ವಾಮನ ಪೈ ಪುತ್ತೂರು, ಜತ್ತಪ್ಪ ಗೌಡ ದೇವಸ್ಯ ಅಜ್ಜಿಕಲ್ಲು ಇವರನ್ನು ಶಾಲು ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಲ್ಲದೆ ಹಲವಾರು ಮಂದಿ ದಾನಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.