ಕಡಲಲ್ಲಿ ಗಾಳ ಹಾಕಿ ಮೀನು ಹಿಡಿದರೆ 50 ಸಾ.ರೂ. ಬಹುಮಾನ!
Team Udayavani, Nov 22, 2017, 1:36 PM IST
ಮಹಾನಗರ: ಗಾಳ ಹಾಕಿ ಮೀನು ಹಿಡಿಯುವ ಪರಿಪಾಠ ಕೆಲವು ಕಡೆಗಳಲ್ಲಿದೆ. ಹಳ್ಳಿಯಲ್ಲಾದರೆ ತೋಡು, ಹಳ್ಳ, ಬಾವಿಗೆ ಗಾಳುತ್ತಾರೆ. ಗಾಳ ಹಾಕಿ ಮೀನು ಹಿಡಿಯುವ ‘ಟೇಸ್ಟ್’ ನಗರ ಪ್ರದೇಶದ ಜನರಿಗೂ ಕರಗತವಾಗುತ್ತಿದೆ. ಕೆರೆಗಳಲ್ಲಿ ಗಾಳ ಹಾಕುವ ಆಸಕ್ತರು ಹಲವರಿದ್ದಾರೆ. ಕಡಲಿನಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯನ್ನು ಆಯೋಜಿಸಿರುವುದು ಈ ಸಲದ ವಿಶೇಷ.
ಮೀನು ತಿನ್ನುವುದಕ್ಕಿಂತ ಮೀನು ಹಿಡಿಯುವುದೇ ಒಂದು ರೋಮಾಂಚಕ ಅನುಭವ ಎಂಬ ಮಾತಿದೆ. ತೋಡು, ಕೆರೆ,
ನದಿಗಳಲ್ಲಿ ಇದು ಸಹಜವಾದರೆ, ಕಡಲಿನ ಅಲೆಗಳ ಜತೆಗೆ ಗಾಳದ ಸಹಾಯದಿಂದ ಮೀನು ಹಿಡಿಯುವುದು ಇನ್ನಷ್ಟು ಕುತೂಹಲದ ಸಂಗತಿ. ಅದರಲ್ಲೂ ಕಡಲಿನ ನೀರಿನಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಆಯೋಜಿಸಿರುವುದು ರೋಮಾಂಚನ ಮೂಡಿಸಿದೆ!
ಎನ್‌ಎಂಪಿಟಿ ಹಾಗೂ ಪಣಂಬೂರು ಬೀಚ್ ಪ್ರಾಜೆಕ್ಟ್ ನೇತೃತ್ವದಲ್ಲಿ ಇಂತಹ ಅಪರೂಪದ ಸ್ಪರ್ಧೆಗೆ ವೇದಿಕೆ ಸಿದ್ಧವಾಗಿದೆ. ಪಣಂಬೂರಿನ ಎನ್‌ಎಂಪಿಟಿ ಬ್ರೇಕ್ ವಾಟರ್ ವ್ಯಾಪ್ತಿಯಲ್ಲಿ ಡಿ. 24 ಹಾಗೂ 25ರಂದು ಸ್ಪರ್ಧೆ ಜರಗಲಿದೆ. ಅಧಿಕ ತೂಕದ ಮೀನು ಸಿಕ್ಕಿದವರಿಗೆ ಪ್ರಶಸ್ತಿ ನೀಡಲಾಗುತ್ತದೆ.
ಬೀಚ್ ಪ್ರವಾಸೋದ್ಯಮ ಅಭಿವೃದ್ಧಿಯ ನೆಲೆಯಲ್ಲಿ ಗಾಳದಲ್ಲಿ ಮೀನು ಹಿಡಿಯುವ ಸ್ಪರ್ಧೆ ಮಹತ್ವ ಪಡೆದಿದೆ. 2 ವರ್ಷಗಳ ಹಿಂದೆಯೇ ಇಂಥ ಯೋಜನೆ ಇತ್ತಾದರೂ ಜಿಲ್ಲಾಡಳಿತದ ಅನುಮತಿ ಲಭಿಸಿರಲಿಲ್ಲ. ಬಳಿಕ ಮಲ್ಪೆ ಬೀಚ್‌ನಲ್ಲಿ ಈ ಸ್ಪರ್ಧೆ ನಡೆಸಲಾಗಿತ್ತು. ಸ್ಪರ್ಧಿಗಳಿಗೆ ಸೂಕ್ತ ರಕ್ಷಣೆ ಹಾಗೂ ಭದ್ರತೆ ಕಲ್ಪಿಸುವುದಾಗಿ ಮನವರಿಕೆ ಮಾಡಿದ ಮೇಲೆ ಈ ಬಾರಿ ಜಿಲ್ಲಾಡಳಿತ ಸ್ಪರ್ಧೆಗೆ ಒಪ್ಪಿಗೆ ನೀಡಿದೆ.
ಗಾಳಕ್ಕೆ ಸಿಕ್ಕ ಮೀನು ಮತ್ತೆ ನೀರಿಗೆ!
ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಆಯೋಜಿಸಿದಾಗ ಗಾಳಕ್ಕೆ ಸಿಕ್ಕ ಮೀನನ್ನು ಹಿಡಿದವರೇ ಕೊಂಡೊಯ್ಯುತ್ತಾರೆ. ಆದರೆ, ಪಣಂಬೂರಿನ ಸ್ಪರ್ಧೆಯಲ್ಲಿ ಮೀನು ಒಯ್ಯಲು ಅವಕಾಶವಿಲ್ಲ. ಗಾಳಕ್ಕೆ ಸಿಕ್ಕ ಮೀನನ್ನು ತತ್‌ಕ್ಷಣವೇ ತೂಕ ಅಂದಾಜಿಸಿ ಮತ್ತೆ ನೀರಿಗೆ ಬಿಡಲಾಗುತ್ತದೆ. ಗಾಳದಲ್ಲಿ ಮೀನು ಹಿಡಿಯುವವರಿಗೆ ಸಂಘಟಕರೇ ಬೋಟ್ ವ್ಯವಸ್ಥೆ ಕಲ್ಪಿಸಲಿದ್ದಾರೆ. ಒಂದಿಬ್ಬರು ಮಾತ್ರ ಲೈಫ್ ಜಾಕೆಟ್ ಹಾಕಿ ಬೋಟ್‌ನಲ್ಲಿ ಹೋಗಬಹುದು.
ಕಡಲ ಬದಿಯಲ್ಲಿ ಲೂಡೊ ಸ್ಪರ್ಧೆ!
ಒಂದೆಡೆ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ನಡೆದಾಗ ಇನ್ನೊಂದೆಡೆ ‘ಲೂಡೊ ಸ್ಪರ್ಧೆ’ ಆಯೋಜಿಸಲಾಗಿದೆ. ಮನೆ ಮಂದಿ, ಗೆಳೆಯರು ಸೇರಿ ಆಡುವ ‘ಲೂಡೊ’ ಕಡಲ ಬದಿಯಲ್ಲಿ ಸ್ಪರ್ಧಾತ್ಮಕವಾಗಿ ಆಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಪರ್ಧಿಗಳ ಸಂಖ್ಯೆ ಆಧರಿಸಿ ಲೂಡೋ ಜೋಡಿಸಲಾಗುತ್ತದೆ. ಕರಾವಳಿಯಲ್ಲಿ ಇಂತಹ ಅಪೂರ್ವ ಸ್ಪರ್ಧೆ ಇದೇ ಮೊದಲ ಬಾರಿಗೆ ಕಡಲ ಕಿನಾರೆಯಲ್ಲಿ ನಡೆಯಲಿದೆ. ಜತೆಗೆ ಕಡಲ ತೀರದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳ ಸ್ಪರ್ಧೆ ಹಾಗೂ ‘ಫುಡ್ ಫೆಸ್ಟಿವಲ್’ ಆಯೋಜಿಸಲಾಗುತ್ತದೆ.
ಒಂದು ಗಂಟೆ ಅವಧಿಗೆ 20 ಜನರ ತಂಡ
ಎನ್‌ಎಂಪಿಟಿ ಬ್ರೇಕ್ ವಾಟರ್‌ನ 1 ಕಿ.ಮೀ. ವ್ಯಾಪ್ತಿಯ ಬಂಡೆ ಕಲ್ಲಿನಲ್ಲಿ ಕುಳಿತು ಗಾಳ ಹಾಕಲು ಅವಕಾಶವಿದೆ. 20 ಜನರ ತಲಾ ಒಂದೊಂದು ತಂಡ ರಚಿಸಿ ತಲಾ 1 ಗಂಟೆಯ ಕಾಲಾವಕಾಶ ನೀಡಲಾಗುತ್ತದೆ. ಈ ಸಮಯದಲ್ಲಿ ಅತ್ಯಧಿಕ ತೂಕದ ಮೀನು ಹಿಡಿದವರಿಗೆ ಮೊದಲ ಬಹುಮಾನವಾಗಿ 50,000 ರೂ., ದ್ವಿತೀಯ ಪ್ರಶಸ್ತಿ 25,000 ರೂ. ನೀಡಲಾಗುತ್ತದೆ. ಹೆಚ್ಚು ಮೀನು ಹಿಡಿದವರ ಪೈಕಿ ಪ್ರಥಮ ಬಹುಮಾನ 10,000 ರೂ. ಹಾಗೂ ದ್ವಿತೀಯ ಬಹುಮಾನ 5,000 ರೂ. ನೀಡಲಾಗುತ್ತದೆ. ಎರಡು ದಿನಗಳ ಅವಧಿಯಲ್ಲಿ ಒಟ್ಟು 200 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ. www.anglingcarnival.com ನಲ್ಲಿ ನೋಂದಣಿ ಮಾಡಬೇಕಿದೆ.
‘ಪ್ರವಾಸೋದ್ಯಮ ಅಭಿವೃದ್ದಿಯ ಉದ್ದೇಶ’
ಮಂಗಳೂರು ವ್ಯಾಪ್ತಿಯಲ್ಲಿರುವ ಬೀಚ್‌ಗಳ ಮುಖೇನ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವ ಇರಾದೆಯಿಂದ ಎನ್‌ಎಂಪಿಟಿ ಬ್ರೇಕ್ ವಾಟರ್ ವ್ಯಾಪ್ತಿಯಲ್ಲಿ ಗಾಳದ ಮೂಲಕ ಮೀನು ಹಿಡಿಯುವ ಸ್ಪರ್ಧೆಗೆ ಉದ್ದೇಶಿಸಲಾಗಿದೆ. ಡಿ. 24 ಹಾಗೂ 25ರಂದು ಈ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ದೇಶದ ಬೇರೆ ಬೇರೆ ಕಡೆಗಳಿಂದ ಮತ್ಸ್ಯಪ್ರೇಮಿಗಳು ಭಾಗವಹಿಸುವ ನಿರೀಕ್ಷೆ ಇದೆ.
– ಯತೀಶ್ ಬೈಕಂಪಾಡಿ,
ಸಿಇಒ, ಬೀಚ್ ಟೂರಿಸಂ ಡೆವೆಲಪ್‌ಮೆಂಟ್ ಪ್ರೊಜೆಕ್ಟ್
ದಿನೇಶ್ ಇರಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.