ರಸ್ತೆ ಬದಿಗೆ ಇಳಿದರೆ ಪ್ರಾಣಕ್ಕೆ ಆಪತ್ತು
Team Udayavani, Mar 11, 2018, 12:17 PM IST
ಸುಳ್ಯ : ಬೆಳ್ಳಾರೆ-ಸವಣೂರು ಸಂಪರ್ಕ ರಸ್ತೆಯ ಕುಂಡಡ್ಕದಲ್ಲಿ ರಸ್ತೆ ಬದಿ ಕುಸಿದಿದ್ದು, ವಾಹನ ಸೈಡ್‌ಗೆ ಇಳಿದರೆ, ಪ್ರಾಣಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ. ಮಡಿಕೇರಿ, ಸುಳ್ಯ ಭಾಗದಿಂದ ಈ ರಸ್ತೆಯಿಂದ ಶಾಂತಿಮೊಗರು ಹೊಸ ಸೇತುವೆ ಮೂಲಕ ಧರ್ಮಸ್ಥಳಕ್ಕೆ ತೆರಳಬಹುದಾದ ಕಾರಣ, ವಾಹನ ಸಂಚಾರವು ಹೆಚ್ಚಾಗಿದೆ.
ಸವಣೂರು-ಬೆಳ್ಳಾರೆ ರಸ್ತೆಯ ಕನ್ನಡ ಕುಮೇರು ತನಕ ರಸ್ತೆ ಅಗಲ ಕಾಮಗಾರಿ ಆಗಿದ್ದು, ಉಳಿದ ಭಾಗ ವಿಸ್ತರಣೆ ಆಗಿಲ್ಲ. ಪರಣೆ-ಮುಕ್ಕೂರು-ಕುಂಡಡ್ಕ-ಪೆರುವಾಜೆ-ಬೆಳ್ಳಾರೆ ರಸ್ತೆ ಏಕ ಪಥ ರಸ್ತೆಯಾಗಿದ್ದು, ಎದುರಿನಿಂದ ವಾಹನ ಬಂದರೆ ಬದಿಗೆ ಇಳಿಸಬೇಕು. ಆಗ ಅಪಾಯ ಎದುರಾಗುತ್ತಿದ್ದು, ಹಲವು ವಾಹನಗಳು ಅಪಘಾತಕ್ಕೆ ಈಡಾಗಿವೆ. ಕೆಲವು ಕೂದಲಳೆಯ ಅಂತರದಿಂದ ಪಾರಾಗಿದೆ ಅನ್ನುತ್ತಾರೆ ವಾಹನ ಸವಾರ ಯೂಸುಫ್ ಮುಕ್ಕೂರು.
ಮನವಿಗೆ ಇಲ್ಲ ಸ್ಪಂದನೆ
ಕುಂಡಡ್ಕದ ರಸ್ತೆ ಕುಸಿತದ ಬಳಿ ವಾಹನ ಸೈಡ್‌ಗೆ ಇಳಿದರೆ ನೇರವಾಗಿ ಮಳೆನೀರು ಹರಿದು ಹೋಗುವ ದೊಡ್ಡ ಚರಂಡಿಗೆ ಬೀಳುವ ಅಪಾಯವಿದೆ. ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಈ ರಸ್ತೆ ಸೇರಿದೆ. ಕುಸಿತದ ಜಾಗದಲ್ಲಿ ತಡೆಗೋಡೆ ನಿರ್ಮಿಸುವಂತೆ ಜನರು ಒತ್ತಾಯಿಸಿದ್ದಾರೆ. ಆದರೆ ಅದಕ್ಕೆ ಸ್ಪಂದನೆ ಸಿಕ್ಕಿಲ್ಲ ಎಂದು ಪಾದಚಾರಿ ವೆಂಕಟರಮಣ ಕುಂಡಡ್ಕ ತಿಳಿಸಿದ್ದಾರೆ.
ಅಪಾಯಕಾರಿ ಮರ
ರಸ್ತೆ ಕುಸಿತದ ಬಳಿಯೇ ಅಪಾಯಕಾರಿ ಮರವಿದೆ. ಇಲ್ಲಿ ಎಚ್‌ಟಿ ಲೈನ್, ಟಿ.ಸಿ. ಇದೆ. ಕೆಲ ತಿಂಗಳ ಹಿಂದಷ್ಟೇ ಎಚ್‌ಟಿ ಲೈನ್ ಮೇಲೆ ಮರದ ಗೆಲ್ಲು ಬಿದ್ದು, ವಿದ್ಯುತ್ ಕಂಬಧರೆಗುರುಳಿತ್ತು. ಮನೆಯ ಎಲೆಕ್ಟ್ರಾನಿಕ್ ಪರಿಕರಗಳು ಹಾನಿಗೀಡಾಗಿದ್ದವು. ಇಲ್ಲಿ ರಸ್ತೆಗೆ ತಡಗೋಡೆ, ಅಪಾಯಕಾರಿ ಮರ ತೆರವು ಆಗಬೇಕು ಎನ್ನುತ್ತಾರೆ ಉಮ್ಮರ್ ಕುಂಡಡ್ಕ.
ಅಪಾಯದ ಎಚ್ಚರಿಕೆ
ಶನಿವಾರವೂ ಕಾರೊಂದು ಇಲ್ಲಿ ಅದೃಷ್ಟವಶಾತ್ ಪಾರಾಗಿದ್ದು, ಅಪಾಯದ ಬಗ್ಗೆ ಕುಸಿತದ ಸ್ಥಳದಲ್ಲಿ ಮರದ ತುಂಡು, ಹಗ್ಗ ಕಟ್ಟಲಾಗಿದೆ. ಮೂರು ರಸ್ತೆ ಸೇರುವ ತಿರುವು ರಸ್ತೆ ಇದಾಗಿದೆ. ಆದರೂ ಇಲ್ಲಿ ಲೋಕೋಪಯೋಗಿ ಇಲಾಖೆ ಎಚ್ಚರಿಕೆಯ ಫಲಕ ಅಳವಡಿಸಿಲ್ಲ. ತಿರುವಿನ ಪರಿವೆಯೇ ಇಲ್ಲದ ಕಾರಣ ಕೆಲ ವರ್ಷಗಳ ಹಿಂದೆ ಬೈಕ್ ಸವಾರರಿಬ್ಬರು ಆಳೆತ್ತರದ ಚರಂಡಿ ಬಿದ್ದ ಘಟನೆ ಸಂಭವಿಸಿತ್ತು. ಅದಾಗ್ಯೂ ಅಧಿಕಾರಿಗಳು ಸ್ಪಂದಿಸುವ ಮನಸ್ಸು ಮಾಡಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.