ನೇತ್ರಾವತಿ ಒಡಲಿನಲ್ಲಿ ನಿಲ್ಲದ ಅಕ್ರಮ ಮರಳುಗಾರಿಕೆ
Team Udayavani, Feb 16, 2018, 10:30 AM IST
ಉಪ್ಪಿನಂಗಡಿ: ಮೊಗ್ರು ಗ್ರಾಮದ ಮುಗೇರಡ್ಕ ಹಾಗೂ ಉಪ್ಪಿನಂಗಡಿ ಗ್ರಾಮದ ಬೆದ್ರೋಡಿ ಬಳಿ ರಾಜಾರೋಷವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಸಮರ್ಪಕ ಮರಳು ನೀತಿ ಜಾರಿಯಾಗದಿರುವುದು ಮರಳು ಮಾಫಿಯಾಕ್ಕೆ ವರದಾನವಾಗಿ ಪರಿಣಮಿಸಿದೆ.
ಮರಳಿನ ಕೊರತೆ ಇರುವುದರಿಂದ ಚಿನ್ನದ ಬೆಲೆ ಬಂದಿದೆ. ಹಾಗಾಗಿ ಮರಳು ಮಾಫಿಯಾ ಮುಗೇರಡ್ಕ ಮತ್ತು ಬೆದ್ರೋಡಿ ಪರಿಸರದಲ್ಲಿ ರಾತ್ರಿ-ಹಗಲೆನ್ನದೆ ಅಕ್ರಮ ಮರಳು ಗಣಿಗಾರಿಕೆಯಲ್ಲಿ ನಿರತವಾಗಿದೆ. ಇದು ನೇತ್ರಾವತಿ ನದಿಯ ಒಡಲನ್ನೇ ಬರಿದು ಮಾಡುತ್ತಿದೆ.
ರಾಷ್ಟ್ರೀಯ ಹೆದ್ದಾರಿಯಿಂದ ನೇರ ಸಂಪರ್ಕ ಹೊಂದಿರುವ ಬೆದ್ರೋಡಿಯಲ್ಲಿ ಎರಡು ಕಡೆ ಮತ್ತು ನದಿಯ ಆ ಬದಿಯ ಮೊಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿಯೂ ಎರಡು ಕಡೆ ಸುಮಾರು ಎರಡು ತಿಂಗಳಿಂದ ಸತತವಾಗಿ ಮರಳು
ತೆಗೆಯಲಾಗುತ್ತಿದೆ. ನದಿಯ ಆ ಬದಿಯಿಂದಲೂ ಹೆದ್ದಾರಿಗೆ ನೇರ ಸಂಪರ್ಕ ಇರುವುದು ಮರಳು ದಂಧೆಕೋರರಿಗೆ
ಸಾಗಿಸಲು ಅನುಕೂಲವಾಗಿದೆ.
ಪಿಕ್‌ಅಪ್‌ನಲ್ಲಿ ಸಾಗಾಟ
ದಂಧೆಕೋರರು ನದಿಯಿಂದ ತೆಗೆದ ಮರಳನ್ನು ಪಿಕ್-ಅಪ್ ವಾಹನಗಳಲ್ಲಿ ನಿರ್ದಿಷ್ಟ ಜಾಗಕ್ಕೆ ಸಾಗಿಸಲಾಗುತ್ತಿದೆ. ಅಲ್ಲಿಂದ ಲಾರಿಗಳಿಗೆ ತುಂಬಿ ಕಳಿಸಲಾಗುತ್ತಿದೆ. ನಸುಕಿನ ಜಾವ 4 ಗಂಟೆಯಷ್ಟು ಹೊತ್ತಿಗೆ ನೆಲ್ಯಾಡಿ ಮತ್ತಿತರ ಕಡೆಯಿಂದ ಬರುವ ಪಿಕ್‌ಅಪ್ ವಾಹನಗಳು, ಪೂರ್ಣ ಬೆಳಕಾಗುವ ಮೊದಲೇ ಮರಳನ್ನು ಸಾಗಿಸುತ್ತವೆ. ಬಳಿಕ ನಿಲ್ಲಿಸಿ, ಸಂಜೆ ಹೊತ್ತಿನಲ್ಲಿ ಕಾರ್ಯ ನಿರತವಾಗುತ್ತವೆ ಎಂಬುದು ಸ್ಥಳೀಯರ ಆರೋಪ.
ಪೊಲೀಸರ ಹೆಸರು ಬಳಕೆ!
ಮರಳು ತೆಗೆಯುತ್ತಿರುವವರನ್ನು ಈ ಬಗ್ಗೆ ಪ್ರಶ್ನಿಸಿದರೆ, ಇದು ಸ್ವಂತಕ್ಕೆ, ಮನೆ ನಿರ್ಮಾಣಕ್ಕೆ ಎನ್ನುತ್ತಾರೆ. ಕೆಲವೊಮ್ಮೆ
ಪೊಲೀಸರೊಬ್ಬರು ಕಟ್ಟಿಸುತ್ತಿರುವ ಮನೆಗೆ ಎಂದೂ ಹೇಳುವ ಮೂಲಕ ಪೊಲೀಸರ ಹೆಸರನ್ನೂ ದುರ್ಬಳಕೆ ಮಾಡಲಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.
ಇವರಾರೂ ಸಳೀಯರಲ್ಲ
ಈ ದಂಧೆಯಲ್ಲಿ ತೊಡಗಿರುವ ಯಾರೂ ಸ್ಥಳೀಯರಲ್ಲ.ನೆಲ್ಯಾಡಿ ಕಡೆಯಿಂದ ಬರುತ್ತಿದ್ದು, ಒಮ್ಮೆ ಬಂದ ಪಿಕ್‌ಅಪ್ ವಾಹನಗಳೇ ಮತ್ತೆ ಮತ್ತೆ ಬರುತ್ತಿದ್ದು, ಇದರ ಹಿಂದೆ ವ್ಯವಸ್ಥಿತ ಜಾಲವೇ ಕಾರ್ಯ ನಿರ್ವಹಿಸುತ್ತಿದೆ ಎಂಬುದು ಸ್ಥಳೀಯರ ದೂರು.
ಅರ್ಧ ಗಂಟೆ: 4 ಸಾವಿರ ರೂ.
ಇಲ್ಲಿ ಒಂದು ಪಿಕ್‌ಅಪ್ ವಾಹನದ ಪ್ರಮಾಣ ಮರಳು ಬೇಕಿದ್ದರೆ ಕನಿಷ್ಠ 4 ಸಾವಿರ ರೂ. ಕೊಡಬೇಕು. ಒಂದು
ಟಿಪ್ಪರ್ ಮರಳು ಪಡೆಯಲು 12 ಸಾವಿರ ರೂ. ಹಾಗಾಗಿ ಜನಸಾಮಾನ್ಯ ರಿಗೆ ಕೈಗೆಟುಕುವ ದರದಲ್ಲಿ ಮರಳು
ಸಿಗದಾಗಿದೆ.
ಮೌನದ ಹಿಂದಿನ ಮರ್ಮವೇನು?
ಅಕ್ರಮ ಗಣಿಗಾರಿಕೆಯನ್ನು ತಡೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿದ್ದು, ಪೊಲೀಸ್ ಇಲಾಖೆಯೂ ಅಕ್ರಮಕ್ಕೆ ಕಡಿವಾಣ ಹಾಕುತ್ತಿಲ್ಲ. ಇಲಾಖೆಗಳು ಹಾಗೂ ಜಿಲ್ಲಾಡಳಿತದ ಮೌನವೇ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.