ಮಹಾಮಳೆಗೆ ಪಾಲಿಕೆಗೆ ತಲೆನೋವಾಗಿ ಪರಿಣಮಿಸಿರುವ ಮ್ಯಾನ್‌ಹೋಲ್!
Team Udayavani, Jun 2, 2018, 10:16 AM IST
ಮಹಾನಗರ : ನಗರದಲ್ಲಿ ಮಂಗಳವಾರ ಸುರಿದ ಮಹಾಮಳೆಯ ಪರಿಣಾಮ ಇದೀಗ ಹಲವು ಕಡೆಗಳಲ್ಲಿ ಮ್ಯಾನ್‌ಹೋಲ್‌ಗಳು ಬ್ಲಾಕ್ ಆಗಿದ್ದು, ಅವುಗಳನ್ನು ದುರಸ್ತಿಗೊಳಿಸಿ ಒಳಚರಂಡಿ ವ್ಯವಸ್ಥೆಯನ್ನು ಸಹಜ ಸ್ಥಿತಿಗೆ ತರುವುದು ಕೂಡ ಈಗ ಮಹಾನಗರ ಪಾಲಿಕೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ಇದೀಗ ಮಹಾನಗರ ಪಾಲಿಕೆ ಎಂಜಿನಿಯರ್ ಹಾಗೂ ಸಿಬಂದಿ ಮ್ಯಾನ್ ಹೋಲ್‌ಗಳನ್ನು ಒಡೆಸಿ ಅವುಗಳಲ್ಲಿ ಗಲೀಜು ನೀರು ಹರಿಯುವುದಕ್ಕೆ ಅಡ್ಡಿಯಾಗಿರುವುದನ್ನು ಸರಿಪಡಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಏಕೆಂದರೆ, ನಗರದ ಹಲವು ಕಡೆಗಳಲ್ಲಿ ಮಹಾ ಮಳೆಗೆ ಚರಂಡಿಗಳಲ್ಲಿ ಹರಿಯಬೇಕಾಗಿದ್ದ ಮಳೆನೀರು ಒಳಚರಂಡಿ ಮಾರ್ಗಕ್ಕೆ ಸಂಪರ್ಕ ಪಡೆದುಕೊಂಡು ಮ್ಯಾನ್‌ಹೋಲ್‌ಗಳ ಮೂಲಕ ಹೊರಬರುತ್ತಿದೆ. ಇದರಿಂದ ಪ್ರಮುಖ ರಸ್ತೆಗಳ ಮಧ್ಯಭಾಗದಲ್ಲಿರುವ ಮ್ಯಾನ್‌ಹೋಲ್‌ಗಳು ಮಳೆ ನೀರಿನ ಒತ್ತಡಕ್ಕೆ ತೆರೆದುಕೊಂಡು ಆ ರಸ್ತೆಯಲ್ಲೇ ಗಲೀಜು ನೀರು ಹರಿಯುವುದಕ್ಕೆ ಕಾರಣವಾಗುತ್ತಿದೆ.
ಅರೆಬರೆ ಕಾಮಗಾರಿ
ನಗರದ ಅನೇಕ ಕಡೆಗಳಲ್ಲಿನ ಅರೆಬರೆ ಕಾಮಗಾರಿಯಿಂದಾಗಿ ಮ್ಯಾನ್‌ಹೋಲ್‌ಗಳು ಬಾಯಿ ತೆರೆದುಕೊಂಡು ಅಪಾಯದ ಸ್ಥಿತಿಯಲ್ಲಿವೆ. ಇಂತಹ ಮ್ಯಾನ್‌ಹೋಲ್‌ಗಳಿಂದ ಜನರ ಜೀವಕ್ಕೆ ಕುತ್ತು ಬಂದರೆ ಯಾರು ಹೊಣೆ? ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಏಕೆಂದರೆ, ಕಾಟಿಪಳ್ಳದ ಕೃಷ್ಣಾಪುರದಲ್ಲಿ ಫೆಬ್ರವರಿ 11ರಂದು ಕಾಮಗಾರಿ ನಡೆಯುತ್ತಿದ್ದ ಮ್ಯಾನ್‌ಹೋಲ್‌ಗೆ ಬಿದ್ದು ಮೋಹನ್ ಎಂಬವರು ಸಾವನ್ನಪ್ಪಿದ್ದರು. ಇದಾದ ಬಳಿಕ ಅನೇಕ ಸಂಘಟನೆಗಳು ತೆರೆದ ಮ್ಯಾನ್ ಹೋಲ್ ಮುಚ್ಚುವಂತೆ ನಗರದೆಲ್ಲೆಡೆ ಜಾಗೃತಿ ಮೂಡಿದ್ದವು.
ಇದೀಗ ಪಾಲಿಕೆಯು ನಗರದ ಬಿಜೈ ಮಾರುಕಟ್ಟೆ, ಕೆ.ಎಸ್.ರಾವ್ ರಸ್ತೆ, ಪಿವಿಎಸ್ ಸರ್ಕಲ್, ಕದ್ರಿಯಿಂದ ಬಂಟ್ಸ್ ಹಾಸ್ಟೆಲ್‌ಗೆ ಬರುವ ರಸ್ತೆ ಸಹಿತ ನಗರದ ಇನ್ನಿತರ ರಸ್ತೆಗಳಲ್ಲಿ ಅರೆಬರೆ ಕಾಮಗಾರಿ ನಡೆಸಿದ್ದು, ಮ್ಯಾನ್‌ಹೋಲ್‌ಗಳನ್ನು ತೆರೆದಿಡಲಾಗಿದೆ. ಇನ್ನೇನು ಮಳೆಗಾಲ ಶುರುವಾಗುತ್ತಿರುವ ಕಾರಣ ಮಳೆ ಬಂದರೆ, ರಸ್ತೆಯಲ್ಲಿ ಮ್ಯಾನ್‌ಹೋಲ್ ತೆರೆದುಕೊಂಡಿರುವುದನ್ನು ಗುರುತಿಸುವುದು ರಾತ್ರಿ ಹೊತ್ತು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಕಷ್ಟವಾಗುತ್ತದೆ.
ಬಂಟ್ಸ್ ಹಾಸ್ಟೆಲ್ ರಸ್ತೆಯ ಪಕ್ಕದ ಅಭಿಮಾನ್ ರೆಸಿಡೆನ್ಸಿ ಪಕ್ಕದ ಒಂದೇ ರಸ್ತೆಯಲ್ಲಿ ನಾಲ್ಕಕ್ಕೂ ಹೆಚ್ಚು ಮ್ಯಾನ್‌ಹೋಲ್‌ಗಳ ಕಾಮಗಾರಿ ನಡೆಯುತ್ತಿದೆ. ಇದರಿಂದ ವಾಹನ ಚಾಲಕರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಜ್ಯೋತಿ ವೃತ್ತ ಕಡೆಯಿಂದ ಮಳೆ ನೀರು ಬರಲು ಯಾವುದೇ ತೋಡಿನ ವ್ಯವಸ್ಥೆ ಇಲ್ಲ. ಇಲ್ಲಿ ಮಳೆ ನೀರುಗಳು ಮ್ಯಾನ್‌ಹೋಲ್ ಸೇರುತ್ತಿದೆ. ಅಲ್ಲದೆ, ಅಕ್ಕ ಪಕ್ಕದ ಮನೆಗಳು, ಅಂಗಡಿಗಳು ಕೂಡ ನೀರನ್ನು ಇದೇ ಮ್ಯಾನ್‌ಹೋಲ್ ಗೆ ಹಾಕುತ್ತಿವೆ. ಇದರಿಂದಾಗಿ ಒಂದು ಮಳೆ ಬಂದರೆ ಮ್ಯಾನ್‌ಹೋಲ್‌ನಿಂದ ನೀರು ರಸ್ತೆಗೆ ಬರುತ್ತಿದೆ.
ಯಾವ ಕಾಮಗಾರಿ ನಡೆಯುತ್ತಿದೆ?
ಸಾಮಾನ್ಯವಾಗಿ ಮ್ಯಾನ್‌ಹೋಲ್‌ಗಳು ರಸ್ತೆಗೆ ಸಮಾನಾಂತರವಾಗಿ ಇರಬೇಕು. ನಗರದಲ್ಲಿನ ಅನೇಕ ಮ್ಯಾನ್‌ಹೋಲ್‌ಗಳು ಸುಮಾರು 50 ವರ್ಷ ಹಳೆಯದಾಗಿದ್ದು, ಅವುಗಳ ಪೈಕಿ ರಸ್ತೆಗಳ ಮೇಲಿರುವ ಹಲವು ಮ್ಯಾನ್‌ಹೋಲ್‌ಗಳು ಕೆಳಕ್ಕೆ ಕುಸಿದುಕೊಂಡು ಅಪಾಯದ ಸ್ಥಿತಿಯಲ್ಲಿವೆ. ಇದರಿಂದಾಗಿ ಮ್ಯಾನ್ ಹೋಲ್‌ಗಳು ರಸ್ತೆ ಮಟ್ಟದಿಂದ ಸುಮಾರು ಅರ್ಧ ಅಡಿ ಕೆಳಕ್ಕೆ ಜಾರಿಗೊಂಡಿವೆ.
ಈ ಕಾರಣದಿಂದಾಗಿ ಮಳೆ ಬಂದಾಗ ನೀರು ಚರಂಡಿ ಬದಲಿಗೆ ಈ ಮ್ಯಾನ್‌ಹೋಲ್‌ಗೆ ನುಗ್ಗಿ ನಾನಾ ರೀತಿಯ ಸಮಸ್ಯೆಗೆ ಕಾರಣವಾಗುತಿದೆ. ಮ್ಯಾನ್‌ಹೋಲ್ ಇರುವುದು ತ್ಯಾಜ್ಯ ನೀರು ಹೋಗುವುದಕ್ಕೇ ಹೊರತಾಗಿ ಮಳೆ ನೀರು ಹೋಗುವುದಕ್ಕಲ್ಲ. ಇದರಿಂದಾಗಿ ಮಳೆಗಾಲ ಸಮಯದಲ್ಲಿ ಒಳ ಚರಂಡಿಯಲ್ಲಿ ನೀರಿನ ಹರಿವು ಹಾಗೂ ಒತ್ತಡ ಹೆಚ್ಚಾಗಿ ಅಲ್ಲಲ್ಲಿ ಮ್ಯಾನ್‌ಹೋಲ್ ತೆರೆದುಕೊಂಡು ಅವಾಂತರ ಸೃಷ್ಟಿಸುತ್ತಿದೆ ಎನ್ನುವುದು ಕೆಲವು ಕಾರ್ಪೊರೇಟರ್‌ಗಳ ಆರೋಪ.
ರಸ್ತೆ ತುಂಬಾ ಗಲೀಜು ನೀರು
ನಗರದ ಬಿಜೈ ಮಾರುಕಟ್ಟೆ ಬಳಿ ಇರುವಂತಹ ಮ್ಯಾನ್‌ಹೋಲ್ ಒಂದರಲ್ಲಿ ಕಳೆದ ಕೆಲ ದಿನಗಳಿಂದ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪ್ರಯುಕ್ತ ಕಳೆದೆರಡು ದಿನಗಳಿಂದ ಮ್ಯಾನ್‌ಹೋಲ್‌ನ ಮುಚ್ಚಳವನ್ನು ತೆರೆದಿಡಲಾಗಿದೆ. ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮ್ಯಾನ್‌ಹೋಲ್‌ನಲ್ಲಿ ನೀರು ತುಂಬಿ ಗಲೀಜು ನೀರು ರಸ್ತೆಗೆ ಹರಿಯುತ್ತಿತ್ತು. ಅಕ್ಕಪಕ್ಕದಲ್ಲಿ ಓಡಾಡುತ್ತಿದ್ದ ಮಂದಿ ಮೂಗುಮುಚ್ಚಿಕೊಂಡು ಓಡಾಡುತ್ತಿದ್ದರು. ಇದಕ್ಕೆ ಉತ್ತರಿಸಬೇಕಾದ ಪಾಲಿಕೆ ಮಾತ್ರ ಮೌನತಳೆದಿದೆ.
ಮ್ಯಾನ್‌ಹೋಲ್ ಕಬ್ಬಿಣದ ತುಂಡು!
ಬಂಟ್ಸ್ ಹಾಸ್ಟೆಲ್ ಬಳಿಯ ಅಭಿಮಾನ್ ರೆಸಿಡೆನ್ಸಿ ಬಳಿ ಇರುವಂತಹ ಮ್ಯಾನ್ ಹೋಲ್ ಒಂದರಲ್ಲಿ ಕಬ್ಬಿಣದ ತುಂಡು ಸೇರಿಕೊಂಡಿದೆ. ಇದರಿಂದಾಗಿ ಒಂದು ಮಳೆ ಬಂದರೆ ಸಾಕು, ಮ್ಯಾನ್‌ಹೋಲ್ ಬ್ಲಾಕ್ ಆಗಿ ನೀರು ರಸ್ತೆಗೆ ಬರುತ್ತದೆ. ಸಂಬಂಧಪಟ್ಟವರ ಬೇಜವಾಬ್ದಾರಿತನಕ್ಕೆ ಇದಕ್ಕಿಂತ
ಉತ್ತಮ ಉದಾಹರಣೆ ಬೇರೊಂದಿಲ್ಲ.
ಪಾಲಿಕೆ ಎಚ್ಚರಿಕೆ ನೀಡಿದ್ದೆ
ಮಳೆ ಪ್ರಾರಂಭವಾಗುವುದಕ್ಕೂ ಮುನ್ನ ಮ್ಯಾನ್‌ಹೋಲ್ ಕಾಮಗಾರಿ ನಡೆಯಬೇಕಿತ್ತು. ನಾನು ಅನೇಕ ಬಾರಿ ಪಾಲಿಕೆಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದೆ, ತಡವಾಗಿ ಕಾಮಗಾರಿ ಪ್ರಾರಂಭಿಸಿದ್ದಕ್ಕೆ ಎಂಜಿನಿಯರ್ ಮತ್ತು ಕಮಿಷನರ್ ಹೊಣೆ. ಪ್ರತೀ ಬಾರಿ ಮಾಸಿಕ ಸಭೆಯಲ್ಲಿ ಈ ಬಗ್ಗೆ ಸಮಸ್ಯೆ ಹೇಳುತ್ತೇನೆ. ಆದರೆ ಮೂರು ತಿಂಗಳಿನಿಂದ ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಸಭೆ ನಡೆಯಲಿಲ್ಲ. ಆದರೂ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದೇನೆ.
- ಎ.ಸಿ. ವಿನಯರಾಜ್, ಕೋರ್ಟ್
ವಾರ್ಡ್ ಕಾರ್ಪೊರೇಟರ್
ಪಾಲಿಕೆ ಎಚ್ಚೆತ್ತುಕೊಳ್ಳಲಿ
ಕೆಲವೊಂದು ಕಡೆಗಳಲ್ಲಿ ರಸ್ತೆಯ ಮಧ್ಯದಲ್ಲೇ ಮ್ಯಾನ್‌ಹೋಲ್ ಕಾಮಗಾರಿ ನಡೆಯುತ್ತಿದ್ದು, ವಾಹನಗಳು ಸಂಚರಿಸಲು ಕಷ್ಟವಾಗುತ್ತದೆ. ಕಾರ್ಪೊರೇಷನ್ ಕಾಮಗಾರಿಯನ್ನು ಮಳೆ ಬರುವ ಮುಂಚಿತವಾಗಿಯೇ ಮಾಡಬೇಕಿತ್ತು. ಕೆಲವು ಕಡೆ ರಾತ್ರಿಯಿಡೀ ಮ್ಯಾನ್‌ಹೋಲ್ ಮುಚ್ಚಳ ತೆರೆದಿರುತ್ತದೆ. ಮಳೆ ಬಂದರೆ ಈ ಮ್ಯಾನ್‌ಹೋಲ್‌ಗಳಿಂದ ನೀರು ರಸ್ತೆಗೆ ಬರುವ ಸಂಭವ ಹೆಚ್ಚಿದ್ದು, ಪ್ರಾಣ ಹಾನಿ ಸಂಭವಿಸುವ ಮುನ್ನ ಪಾಲಿಕೆ ಎಚ್ಚೆತ್ತುಕೊಳ್ಳಲಿ.
- ಶ್ರವಣ್ ಕುಮಾರ್,
ವಾಹನ ಸವಾರ
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.