ಕಟ್ಟಪುಣಿ, ಎರಡು ತೋಡು ಈ ಮನೆಗೆ ದಾರಿ!
Team Udayavani, Jun 21, 2018, 10:36 AM IST
ಪುತ್ತೂರು: ಹಿಂಬದಿ ಬಲ್ಲೇರಿ ಮಲೆ, ಎಡ-ಬದಿ-ಮುಂಭಾಗ ಬೆಳೆದು ನಿಂತಿರುವ ಅಡಿಕೆ ತೋಟ. ನಡುವೆ ಮನೆ. ಈ ಮನೆ ತಲುಪಲು ಕಟ್ಟಪುಣಿ, ಎರಡು ತೋಡು ದಾಟಿ ಹೋಗಬೇಕು. ಮಳೆ ರಭಸಕ್ಕೆ ತೋಡಿನ ಕಾಲುಸೇತುವೆ ಮುರಿದು ಬಿದ್ದಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಇದು ಪುತ್ತೂರು ನಗರಸಭೆಗೆ ತಾಗಿಕೊಂಡೇ ಇರುವ, ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಆರ್ಯಾಪು ಬೈಲಿನಲ್ಲಿರುವ ಮನೆಯ ಕಥೆ. ಕೃಷಿ ಕಾರ್ಯಕ್ಕೆ, ಅಗತ್ಯ ಕೆಲಸಕ್ಕೆ ರಸ್ತೆ ನಿರ್ಮಿಸಿಕೊಡಿ ಎಂದು ಸಾಕಷ್ಟು ಬಾರಿ ಮನವಿ ನೀಡಲಾಗಿದೆ. ಜನಪ್ರತಿನಿಧಿಗಳಿಗೆ ದುಂಬಾಲು ಬೀಳಲಾಗಿದೆ. ಆದರೆ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಸ್ಥಳೀಯರು.
ತುರ್ತು ಸಂದರ್ಭ ಆಸ್ಪತ್ರೆಗೆ ಸಾಗಲು, ದಿನನಿತ್ಯದ ಕಾರ್ಯಕ್ಕೆ ಪೇಟೆಗೆ ಸಾಗಲು, ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು, ಮನೆಗೆ ದಿನಸಿ ಸಾಮಾನು ತರಲು, ಕೃಷಿ ಚಟುವಟಿಕೆಗೆ ರಸ್ತೆ ಬೇಕೇ ಬೇಕು. ಪ್ರತಿಯೊಬ್ಬರ ಮನೆಗೂ ರಸ್ತೆ ನಿರ್ಮಿಸಿ ಕೊಡಬೇಕೆನ್ನುವ ಈ ಕಾಲದಲ್ಲೂ ರಸ್ತೆಯಿಲ್ಲದ ಮನೆಗಳಿವೆ ಎನ್ನುವುದೇ ವಿಪರ್ಯಾಸ. ಅದೂ ಎರಡು ತೋಡು, ತೋಟ ನಡುವಿನ ಕಟ್ಟಪುಣಿಯಲ್ಲಿ ದಿನನಿತ್ಯ ಸಾಗಬೇಕು. ಕೆಲಸ ಕಾರ್ಯಕ್ಕೆ ಹೋಗುವವರು ಹೇಗಾದರೂ ಹೋಗಬಹುದು.
ಆದರೆ ವಿದ್ಯಾರ್ಥಿಗಳ ಪರಿಸ್ಥಿತಿ ಕೇಳುವವರಾರು? ಮನೆಗಳನ್ನು ಸಂಪರ್ಕಿಸಲು ಎರಡು ತೋಡು ದಾಟಿ ಸಾಗಬೇಕು. ಹಿಂದೆ ಮಳೆಗಾಲದ ಸಂದರ್ಭ ಈ ಎರಡು ತೋಡು ಒಂದಾಗಿತ್ತು. ಅಂದರೆ ಎರಡು ತೋಡುಗಳ ನೀರು ಅಪಾಯಕಾರಿ ಮಟ್ಟ ತಲುಪಿತ್ತು. ನಡುವಿನ ತೋಟ ಸಂಪೂರ್ಣ ಮುಳುಗಡೆಯಾಗುತ್ತಿತ್ತು ಎಂದು ನೆನೆದು ಕೊಳ್ಳುತ್ತಾರೆ ಸ್ಥಳೀಯರು. ಈಗ ಅಷ್ಟು ದೊಡ್ಡ ನೆರೆ ಬರುವುದಿಲ್ಲವಾದರೂ, ತೋಡಿನ ನೀರು ಅಪಾಯಕಾರಿ ಮಟ್ಟ ತಲುಪುತ್ತದೆ. ಸರಿಯಾದ ಸೇತುವೆ ಇಲ್ಲದೇ ಹೋದರೆ, ಇದರಲ್ಲಿ ನಡೆದಾಡುವವರ ಜೀವಕ್ಕೆ ಹೊಣೆ ಯಾರು? ಮಳೆಗಾಲದ ಪೂರ್ವ ಸಿದ್ಧತೆಯಲ್ಲಿ ಇದು ಬರುವುದಿಲ್ಲವೇ?
ಆರ್ಯಾಪು ಬೈಲಿನ ಮನೆಗಳಲ್ಲದೇ ಬಲ್ಲೇರಿ ಮಲೆಯ ತಪ್ಪಲಿನಲ್ಲಿ ಹಲವು ಮನೆಗಳಿವೆ. ಅವರಿಗೂ ಕಾಲು ದಾರಿಯೇ ಗತಿ. ಇತೀ¤ಚೆಗೆ ಸಂಪ್ಯ ಭಾಗದಿಂದ ರಸ್ತೆಯನ್ನು ಮಾಡಿಕೊಂಡಿದ್ದಾರಾದರೂ, ಕೆಲವು ಮನೆಗಳಿಗೆ ಇನ್ನೂ ರಸ್ತೆ ತಲುಪಿಲ್ಲ. ಗ್ರಾಮ ಪಂಚಾಯತ್ ಹಾಗೂ ಕಂದಾಯ ಅಧಿಕಾರಿಗಳು ಈ ಮನೆಗಳಿಗೆ ರಸ್ತೆ ಸಂಪರ್ಕ ಕಲ್ಪಿಸಿ, ಪೇಟೆಗೆ ಸಂಪರ್ಕ ಕೊಂಡಿ ಆಗಬೇಕಿದೆ.
ತಾತ್ಕಾಲಿಕ ಸೇತುವೆಗೆ ಹಣ
ತಾತ್ಕಾಲಿಕವಾಗಿ ಅಡಿಕೆ ಸೇತುವೆ ಹಾಕಲು ಹಣ ನೀಡಲಾಗುವುದು. ಮಳೆ ಬಿಟ್ಟ ಅನಂತರ ಸಮರ್ಪಕ ಸೇತುವೆ ನಿರ್ಮಿಸಲಾಗುವುದು. ಇದಕ್ಕೆ ಪ್ರಾಕೃತಿಕ ವಿಕೋಪ ನಿಧಿಯಿಂದ ಅನುದಾನ ಸಿಗುತ್ತದೆಯೇ ಎಂದು ಪ್ರಯತ್ನಿಸಲಾಗುವುದು. ರಸ್ತೆ ವ್ಯವಸ್ಥೆ ಹಿನ್ನೆಲೆಯಲ್ಲಿ ಸರಕಾರ ಜಾಗ ಇದೆಯೇ ಎಂದು ನೋಡಲಾಗುವುದು.
– ವಸಂತ, ಗ್ರಾ.ಪಂ.
ಉಪಾಧ್ಯಕ್ಷ, ಆರ್ಯಾಪು
ಕಡಿದ ಸಂಪರ್ಕ
ಮಳೆ ರಭಸ ವೇಗ ಪಡೆದುಕೊಂಡಂತೆ, ದೊಡ್ಡ ತೋಡಿನ ಕಾಲು ಸೇತುವೆ ಮುರಿದು ಬಿದ್ದಿತು. ಗ್ರಾಮ ಪಂಚಾಯತ್ ವತಿಯಿಂದ ಕೆಲವು ವರ್ಷಗಳ ಹಿಂದೆ ನಿರ್ಮಿಸಿದ ಕಾಲು ಸೇತುವೆ ಇದಾಗಿತ್ತು. ಈ ಮನೆಗಳಿಗೆ ಪರ್ಯಾಯ ದಾರಿ ಇಲ್ಲದೆ, ಬೇರೆಯವರ ಮನೆ ಅಂಗಳದಿಂದ ಹೋಗಬೇಕಾದ ಪರಿಸ್ಥಿತಿ ಎದುರಾಯಿತು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಅನ್ನು ಸಂಪರ್ಕಿಸಿದಾಗ, ಅಡಿಕೆ ಮರದ ಸೇತುವೆ ನಿರ್ಮಿಸುವಂತೆ ಸಲಹೆ ಸಿಕ್ಕಿದೆ. ಇದಕ್ಕೆ ಬೇಕಾದ ಅನುದಾನ ನೀಡಲಾಗುತ್ತದೆ. ಬೇಸಿಗೆಯಲ್ಲಿ ಸೇತುವೆ ನಿರ್ಮಿಸಿ ಕೊಡುವ ಎಂದಿದ್ದಾರಂತೆ.
ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru Crime: ಕತ್ತು ಬಿಗಿದು ಇಬ್ಬರು ಮಕ್ಕಳನ್ನು ಕೊಂದ ಅಮ್ಮ!
IRACON:ಸಂಧಿವಾತ ಸಮಸ್ಯೆ ಬಗ್ಗೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು: ಡಾ.ಶರಣಪ್ರಕಾಶ ಪಾಟೀಲ
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.