ಕಳವು ಕೃತ್ಯ ಹೆಚ್ಚಳ: ಮೂರು ತಿಂಗಳುಗಳಲ್ಲಿ 94 ಪ್ರಕರಣ
Team Udayavani, Oct 30, 2020, 5:12 AM IST
ಸಾಂದರ್ಭಿಕ ಚಿತ್ರ
ಮಹಾನಗರ: ಕೊರೊನೋತ್ತರ ಅವಧಿಯಲ್ಲಿ ಮಂಗಳೂರು ನಗರ ಸಹಿತ ದ.ಕ., ಉಡುಪಿ ಜಿಲ್ಲೆಗಳಲ್ಲಿ ಕಳ್ಳತನ ಮತ್ತು ಸುಲಿಗೆ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ, ಬೆಳಗ್ಗೆ ಮತ್ತು ಸಂಜೆ ವೇಳೆ ವಾಕಿಂಗ್ ಹೋಗುವಾಗ, ಜನರ ಓಡಾಟ ಕಡಿಮೆ ಇರುವ ಪ್ರದೇಶಗಳಲ್ಲಿ, ಒಂಟಿಯಾಗಿ ಮಹಿಳೆ ಸಂಚರಿಸುವಾಗ ಸರ ಕಳ್ಳತನ, ಮೊಬೈಲ್ ಫೋನ್ ಕಳವು, ರಾತ್ರಿ ವೇಳೆ ಪೆಟ್ರೋಲ್ ಪಂಪ್ ಕಚೇರಿಗೆ ನುಗ್ಗಿ ಸುಲಿಗೆ, ಒಂಟಿ ಮಹಿಳೆ ಇರುವ ಮನೆಗೆ ನುಗ್ಗಿ ಸುಲಿಗೆ, ಕೊಲೆ ಇತ್ಯಾದಿ ಪ್ರಕರಣಗಳು ಅಲ್ಲಲ್ಲಿ ಆಗಿಂದಾಗ್ಗೆ ವರದಿಯಾಗುತ್ತಿವೆ.
2020ರ 10 ತಿಂಗಳುಗಳ ಅವಧಿಯಲ್ಲಿ (ಜನವರಿಯಿಂದ ಅಕ್ಟೋಬರ್ 14ರ ತನಕ) ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 234 ವಿವಿಧ ಕಳವು ಪ್ರಕರಣಗಳು ನಡೆದಿವೆ. ಈ ಪೈಕಿ ಕೊರೊ ನೋತ್ತರ ಅವಧಿಯ ಜುಲೈ, ಆಗಸ್ಟ್, ಸೆಪ್ಟಂಬರ್ ತಿಂಗಳುಗಳಲ್ಲಿ ಅಧಿಕ ಸಂಖ್ಯೆಯ ಕಳ್ಳತನಗಳು ವರದಿಯಾಗಿವೆ. ಜುಲೈನಲ್ಲಿ 24, ಆಗಸ್ಟ್‌ನಲ್ಲಿ 37, ಸೆಪ್ಟಂಬರ್‌ನಲ್ಲಿ 33 ಕಳವು ಪ್ರಕರಣ ಸಹಿತ ಕೇವಲ 3 ತಿಂಗಳುಗಳಲ್ಲಿ 94 ಪ್ರಕರಣಗಳು ನಡೆದ ಬಗ್ಗೆ ಪೊಲೀಸ್ ಕಮಿಷನರೆಟ್‌ನ ಅಂಕಿ ಅಂಶಗಳು ತಿಳಿಸಿವೆ. ಲಾಕ್‌ಡೌನ್ ಬಳಿಕ ಉಂಟಾದ ನಿರುದ್ಯೋಗ ಮತ್ತು ತತ್ಸಂಬಂಧಿತ ಅಂಶಗಳು ಕಳವು ಪ್ರಕರಣ ಹೆಚ್ಚಲು ಕಾರಣ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. “ಕೊರೊನಾದಿಂದಾಗಿ ಅನೇಕ ಮಂದಿ ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಾಗಾಗಿ ಕೆಲವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಸಾಧ್ಯತೆ ಇದೆ ಎಂದು ಓರ್ವ ಹಿರಿಯ ಪೊಲೀಸ್ ಅಧಿಕಾರಿ ಉದಯವಾಣಿಗೆ ತಿಳಿಸಿದ್ದಾರೆ. “ದೊಡ್ಡ ಮಟ್ಟದ ಕಳವು ಪ್ರಕರಣಗಳು ಇಲ್ಲದಿದ್ದರೂ ಸಣ್ಣ ಪುಟ್ಟ ಕಳ್ಳತನಗಳು ಅಲ್ಲಲ್ಲಿ ನಡೆಯುತ್ತಿವೆ. ಕಳ್ಳರಿಗೆ ಈಗ ಎಷ್ಟು ಸಿಕ್ಕಿದರೂ ಸಾಕು ಎಂಬಂತೆ ಕೈಗೆ ಸಿಕ್ಕಿದಷ್ಟನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಆದ್ದರಿಂದ ಜನರು ವಿಶೇಷ ಜಾಗೃತರಾಗಿ ಇರಬೇಕು’ ಎಂದವರು ಸಲಹೆ ಮಾಡಿದ್ದಾರೆ.
ಕಾರ್ಯಾಚರಣೆ ಬಿಗಿ
ಇತ್ತೀಚೆಗೆ ಅಲ್ಲಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಹಾಗಾಗಿ ರಾತ್ರಿ ವೇಳೆ ಪೊಲೀಸ್ ಕಾರ್ಯಾಚರಣೆಯನ್ನು ಬಿಗಿಗೊಳಿಸಲಾಗಿದೆ. ಕೋವಿಡ್ ಸೋಂಕಿದ ಪೊಲೀಸರಲ್ಲಿ ಈಗ ಬಹುತೇಕ ಮಂದಿ ಗುಣಮುಖರಾಗಿ ಕರ್ತವ್ಯಕ್ಕೆ ಮರಳಿದ್ದಾರೆ. 253 ಮಂದಿ ಪೊಲೀಸರಿಗೆ ಕೊರೊನಾ ವೈರಸ್ ಸೋಂಕಿದ್ದು, ಸುಮಾರು 20 ಮಂದಿ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರೆಲ್ಲರೂ ಬಿಡುಗಡೆ ಆಗಿದ್ದಾರೆ. ಗಸ್ತು ಕಾರ್ಯಕ್ಕೆ ಯುವ ಪೊಲೀಸರನ್ನೇ ಅಧಿಕ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿದೆ. ಈಗಾಗಲೇ ಕೆಲವು ಕಳವು ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
– ವಿನಯ್ ಎ. ಗಾಂವ್‌ಕರ್, ಡಿಸಿಪಿ
ಕಳವು ಪ್ರಕರಣಗಳ ವಿವರ
ಜನವರಿ 35
ಫೆಬ್ರವರಿ 25
ಮಾರ್ಚ್ 20
ಎಪ್ರಿಲ್ 7
ಮೇ 19
ಜೂನ್ 23
ಜುಲೈ 24
ಆಗಸ್ಟ್ 37
ಸೆಪ್ಟಂಬರ್ 33
ಅಕ್ಟೋಬರ್11
(ಅ. 14 ರ ತನಕ)
ಒಟ್ಟು 234
ಜನರಿಗೆ ಪೊಲೀಸರ ಸಲಹೆ
– ಜನರು ಹಣ, ಚಿನ್ನಾಭರಣಗಳನ್ನು ಲಾಕರ್‌ನಲ್ಲಿ ಇರಿಸಬೇಕು.
– ಮನೆ ಬಿಟ್ಟು ಹೋಗುವಾಗ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸುವುದು.
– ಮನೆಯ ಬಾಗಿಲು, ಗ್ರಿಲ್ಸ್‌ಗಳನ್ನು ಭದ್ರ ಪಡಿಸುವುದು.
– ಮನೆಯಲ್ಲಿ ಅಗತ್ಯಕ್ಕೆ ಬೇಕಾದಷ್ಟು ನಗದನ್ನು ಮಾತ್ರ ಇರಿಸುವುದು.
– ಅಪರಿಚಿತರು ಮನೆ ಸುತ್ತ ಸುಳಿದಾಡುತ್ತಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ
– ಸ್ಥಿತಿವಂತರು ಮನೆಗೆ ಸೈರನ್/ಅಲರಾಂ/ ಸಿ.ಸಿ. ಕೆಮರಾ ಅಳವಡಿಸುವುದು.
– ವಾಕಿಂಗ್/ ಜಾಗಿಂಗ್ ಹೋಗುವಾಗ ಚಿನ್ನಾಭರಣ ಧರಿಸದಿರುವುದು.
– ಬೈಕ್/ ಸ್ಕೂಟರ್‌ಗಳನ್ನು ಲಾಕ್ ಮಾಡಿ ಇಡುವುದು.
– ಮನೆ ಕೆಲಸದವರು ಇದ್ದರೆ ಅವರ ವಿಳಾಸ, ಹಿನ್ನೆಲೆ ತಿಳಿದುಕೊಂಡಿರುವುದು.
– ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ಮುಂಚಿತವಾಗಿ ಮಾಹಿತಿ ನೀಡುವುದು.
– ಸಾಧ್ಯವಾದರೆ ಅಂಗಡಿ/ ವ್ಯಾಪಾರ ಮಳಿಗೆಗಳನ್ನು ರಾತ್ರಿ ವೇಳೆ ತೆರೆದಿಡುವುದನ್ನು ನಿಲ್ಲಿಸಿದರೆ ಒಳಿತು.
ಜಾಗೃತರಾಗಿ
ಖಾಲಿ ಇರುವ ಮನೆಗಳು, ಅಪಾರ್ಟ್ ಮೆಂಟ್, ಒಂಟಿ ಮನೆಗಳನ್ನು ಕೇಂದ್ರವಾಗಿರಿಸಿ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಿ. ಮುಖ್ಯವಾಗಿ ಮನೆ, ಅಪಾರ್ಟ್ ಮೆಂಟ್‌ನಿಂದ ಬಹಳಷ್ಟು ದಿನಗಳವರೆಗೆ ದೂರ ಪ್ರವಾಸ ಹೋಗುವ ಸಂದರ್ಭ ಸಂಬಂಧಪಟ್ಟ ಪೊಲೀಸ್ ಠಾಣೆ, ಬೀಟ್ ಪೊಲೀಸರಿಗೆ ಸೂಚನೆ ನೀಡಬೇಕು. ಆ ಮನೆಯ ಮೇಲೆ ಪೊಲೀಸರು ವಿಶೇಷ ನಿಗಾ ಇರಿಸಲಿದ್ದಾರೆ. ಮಾತ್ರವಲ್ಲದೆ ಅಪಾರ್ಟ್‌ಮೆಂಟ್ ವಾಚ್‌ಮೆನ್‌ಗೂ ಮಾಹಿತಿ ನೀಡಬೇಕು.
– ವಿಕಾಸ್ ಕುಮಾರ್, ಪೊಲೀಸ್ ಕಮಿಷನರ್
ಹಿಲರಿ ಕ್ರಾಸ್ತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.