ತೊಡಿಕಾನ: ಗಡಿ ಭಾಗದಲ್ಲಿ ಹೆಚ್ಚಿದ ಕಾಡಾನೆ ಸಂಚಾರ
Team Udayavani, May 27, 2018, 12:45 PM IST
ತೊಡಿಕಾನ: ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಗಡಿಭಾಗದಲ್ಲಿ ಕಾಡಾನೆಗಳ ಸಂಚಾರ ಹೆಚ್ಚಿದ್ದು, ಗಡಿಭಾಗದ ಜನರು ಆತಂಕಗೊಂಡಿದ್ದಾರೆ.
ಕಾಡಾನೆ ದಾಳಿಯಿಂದ ಸುಳ್ಯ ತಾಲೂಕಿನ ರೈತರು ಸಂಕಷ್ಟಗೊಳಗಾಗಿದ್ದಾರೆ. ಆನೆ ದಾಳಿಯಿಂದ ಹೈರಾಣಾಗಿರುವ ತಾಲೂಕಿನ ಅಜ್ಜಾವರ, ಮಂಡೆಕೋಲು, ತೊಡಿಕಾನ, ಕೊಲ್ಲಮೊಗ್ರ ಗ್ರಾಮದ ರೈತರಿಗೆ ಸಂಕಟದಿಂದ ಪಾರಾಗುವ ಯಾವುದೇ ದಾರಿ ಕಾಣುತ್ತಿಲ್ಲ. ಕಾಡಾನೆ ದಾಳಿ ರೈತರ ಬದುಕನ್ನೆ ಕಸಿದುಕೊಳ್ಳುತ್ತಿರುವ ಸಂದರ್ಭದಲ್ಲಿ ಇಲ್ಲಿಯವರೆಗೆ ಅರಣ್ಯ ಇಲಾಖೆ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂಬುದು ಕೃಷಿಕರ ಅಳಲು.
ಪ್ರತಿ ವರ್ಷ ಅಜ್ಜಾವರ, ಮಂಡೆಕೋಲು, ತೊಡಿಕಾನ ಗ್ರಾಮಗಳ ರೈತರ ಕೃಷಿ ತೋಟಗಳಿಗೆ ಕಾಡಾನೆಗಳು ನಿರಂತರ ದಾಳಿ ಇಡುತ್ತಿದ್ದು, ತೆಂಗಿನ ಮರ, ಅಡಿಕೆ ಮರ ಹಾಗೂ ಬಾಳೆ ಕೃಷಿಗಳನ್ನು ನಾಶ ಮಾಡುತ್ತಿವೆ.
ಓಡಿಸಲು ಪ್ರಯತ್ನ
ಮೂರು – ನಾಲ್ಕು ವರ್ಷಗಳಿಂದ ಈ ಭಾಗಗಳಲ್ಲಿ ಕಾಡಾನೆಗಳು ನಿರಂತರವಾಗಿ ದಾಳಿ ಇಡುತ್ತಿವೆ. ಪರಿಣಾಮವಾಗಿ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬಂದಿ ಆಗಮಿಸಿ, ಆನೆಗಳನ್ನು ಕಾಡಿಗೆ ಓಡಿಸಲು ಪ್ರಯತ್ನ ಮಾಡುತ್ತಾರೆ. ಅವರ ಸಾಂಪ್ರದಾಯಿಕ ವಿಧಾನಗಳಿಗೆ ಆನೆಗಳೂ ಸುಲಭವಾಗಿ ಜಗ್ಗುವುದಿಲ್ಲ. ಆನೆ ದಾಳಿ ಯಿಂದ ಬೆಳೆಹಾನಿ ಅನುಭವಿಸಿದ ರೈತರ ನಷ್ಟಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.
ಶಾಶ್ವತ ಪರಿಹಾರ ಸಿಗಲಿ
ಈ ಭಾಗದಲ್ಲಿ ನಿರಂತರ ಆನೆ ದಾಳಿಯಿಂದ ಕೃಷಿ ನಾಶಗೊಂಡಿದ್ದು, ಇಲ್ಲಿನ ಜನ ಬೇಸತ್ತಿದ್ದಾರೆ. ಆನೆಗಳನ್ನು ಓಡಿಸುವ ಯಾವ ಪ್ರಯತ್ನವೂ ಕೈಗೂಡುತ್ತಿಲ್ಲ. ಅರಣ್ಯ ಇಲಾಖೆಯೂ ಆನೆಗಳನ್ನು ಓಡಿಸಲು ಆಗದೆ ಅಸಹಾಯಕವಾಗಿದೆ. ಕೃಷಿ ತೋಟ ಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಿರುವುದು ಇಂದು ನಿನ್ನೆಯ ಸಮಸ್ಯೆ ಯಲ್ಲ. ಈ ಭಾಗದ ಗ್ರಾಮಗಳ ಜನರಿಗೆ ಇದು ಶಾಶ್ವತ ಸಮಸ್ಯೆಯಾಗಿ ಉಳಿದುಕೊಂಡಿದೆ. ರಾತ್ರಿ ಸಮಯದಲ್ಲಿ ಗ್ರಾಮಸ್ಥರು ನೆಮ್ಮದಿಯಿಂದ ನಿದ್ದೆ ಮಾಡಲೂ ಆಗದ ಸ್ಥಿತಿ.
ತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.