ನಗರದಲ್ಲಿ ಹೆಚ್ಚಾಗುತ್ತಿದೆ ನಿಷೇಧಿತ ಪ್ಲಾಸ್ಟಿಕ್ ಬಳಕೆ
Team Udayavani, Aug 25, 2018, 11:18 AM IST
ಮಹಾನಗರ: ಪ್ಲಾಸ್ಟಿಕ್ ನಿಷೇಧ ಕಾನೂನು ರಾಜ್ಯಾದ್ಯಂತ ಜಾರಿಯಲ್ಲಿದ್ದರೂ, ನಗರದಲ್ಲಿ ಬಹಳಷ್ಟು ಅಂಗಡಿಗಳಲ್ಲಿ ಎಗ್ಗಿಲ್ಲದೆ ಪ್ಲಾಸ್ಟಿಕ್ ಚೀಲಗಳ ಮಾರಾಟ-ಬಳಕೆ ನಡೆಯುತ್ತಿದೆ. ಅಂಗಡಿಗಳಿಗೆ ತೆರಳಿ ದಂಡ ಹಾಕಬೇಕಿದ್ದ ಪಾಲಿಕೆ ಅಧಿಕಾರಿಗಳಿಗೆ ಈ ವಿಚಾರ ತಿಳಿದರೂ, ಮೌನವಾಗಿದ್ದಾರೆ. ಇದೀಗ ಎಚ್ಚೆತ್ತುಕೊಂಡಿರುವ ಪಾಲಿಕೆಯು ಮೂರು ತಂಡ ರಚನೆ ಮಾಡಿ ಅನಧಿಕೃತವಾಗಿ ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಮುಂದಾಗಿದೆ.
ರಾಜ್ಯದಲ್ಲಿ 4 ರಿಂದ 5 ಮೈಕ್ರಾನ್ ಪ್ಲಾಸ್ಟಿಕ್ ಚೀಲಗಳ ಮಾರಾಟ ನಿಷೇಧವಿದೆ. ಈ ಪ್ರಮಾಣದ ಪ್ಲಾಸ್ಟಿಕ್‌ಗಳನ್ನು ಮಾರಾಟ ಮಾಡಿದರೆ ಅಂಗಡಿ ಮಾಲಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬ ನಿಯಮ 2015- 16ರಲ್ಲಿ ಜಾರಿಗೆ ಬಂದಿದೆ. ಅಲ್ಲದೆ, ಅಂಗಡಿಗಳಿಗೆ ಪರವಾನಗಿ ನೀಡುವ ವೇಳೆ ಪ್ಲಾಸ್ಟಿಕ್ ಬಳಸಬಾರದೆಂಬ ಸ್ಪಷ್ಟ ನಿಯಮ ಮತ್ತು ಎಚ್ಚರಿಕೆಯನ್ನೂ ಪಾಲಿಕೆ ನೀಡುತ್ತದೆ. ಆದರೆ ಮಂಗಳೂರಿನ ಹೆಚ್ಚಿನ ಅಂಗಡಿ ಮಾಲಕರು ಈ ನಿಯಮಗಳಿಗೆ ಕ್ಯಾರೇ ಅನ್ನುತ್ತಿಲ್ಲ.
ಮೂರು ತಂಡ ರಚನೆ
ಅನಧಿಕೃತವಾಗಿ ಪ್ಲಾಸ್ಟಿಕ್ ಚೀಲ ಮಾರಾಟ ಮಾಡುವ ಅಂಗಡಿಗಳ ಬಗ್ಗೆ ನಿಗಾ ಇಡಲು ಪಾಲಿಕೆಯು ಇದೀಗ ಮೂರು ತಂಡಗಳನ್ನು ರಚನೆ ಮಾಡಿದೆ. ಈ ತಂಡದಲ್ಲಿ ಆರೋಗ್ಯ ಅಭಿಯಂತರ, ಆರೋಗ್ಯ ನಿರೀಕ್ಷಕರು, ಪರಿಸರ ಅಭಿಯಂತರರು ಇರುತ್ತಾರೆ. ಮುಂದಿನ ವಾರದಲ್ಲಿಯೇ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಜತೆ ಮೂರೂ ತಂಡದ ಸದಸ್ಯರು ನಗರದ ನಾನಾ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಲು ತೀರ್ಮಾನಿಸಿದ್ದಾರೆ.
ನಗರಕ್ಕೆ ಬರುತ್ತಿದೆ ಲೋಡ್‌ಗಟ್ಟಲೆ ಪ್ಲಾಸ್ಟಿಕ್
ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ಅವರು ‘ಸುದಿನ’ಕ್ಕೆ ಪ್ರತಿಕ್ರಿಯಿಸಿ ‘ಮಂಗಳೂರಿನಲ್ಲಿ ಪ್ಲಾಸ್ಟಿಕ್ ಉತ್ಪಾದನೆ ಮಾಡುವಂತಹ ಕೈಗಾರಿಕೆ ಇಲ್ಲದ ಕಾರಣ ಗುಜರಾತ್ ಮತ್ತು ಬೆಂಗಳೂರಿನಿಂದ ನಗರಕ್ಕೆ ಲೋಡ್‌ಗಟ್ಟಲೆ ಪ್ಲಾಸ್ಟಿಕ್‌ಗಳು ಅನಧಿಕೃತವಾಗಿ ಬರುತ್ತಿವೆ. ಪಾಲಿಕೆ ಅಧಿಕಾರಿಗಳಿಗೆ ಈ ವಿಚಾರ ತಿಳಿದಿದ್ದರೂ ಮೌನವಾಗಿದ್ದಾರೆ. ಟ್ರಾಫಿಕ್ ಪೊಲೀಸರು ನಡು ರಸ್ತೆಯಲ್ಲಿ ಯಾವ ರೀತಿ ವಾಹನ ತಪಾಸಣೆ ನಡೆಸುತ್ತಾರೆಯೋ, ಪಾಲಿಕೆ ಅಧಿಕಾರಿಗಳು ಅದೇ ರೀತಿ ಅಂಗಡಿಗಳಿಗೆ ತೆರಳಿ ತಪಾಸಣೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ತಿಳಿಸಿದ್ದಾರೆ.
ವರ್ಷಕ್ಕೆ 1,460 ಟನ್ ಪ್ಲಾಸ್ಟಿಕ್
ನಗರದಲ್ಲಿ ಮನೆ-ಮನೆಗೆ ತೆರಳಿ ಕಸ ವಿಲೇವಾರಿ ಮಾಡಲಾಗುತ್ತದೆ. ಆ ಸಮಯದಲ್ಲಿ ಸಿಗುವಂತಹ ಪ್ಲಾಸ್ಟಿಕ್‌ಗಳು ವರ್ಷಕ್ಕೆ ಸುಮಾರು 1,460 ಟನ್, ದಿನಕ್ಕೆ ಶೇ.3ರಷ್ಟು ಪ್ಲಾಸ್ಟಿಕ್ ನಗರದಲ್ಲಿಯೇ ಉತ್ಪಾದನೆಯಾಗುತ್ತದೆ. ಇವುಗಳನ್ನು ಪಚ್ಚನಾಡಿ ಬಳಿಕ ಲ್ಯಾಂಡ್ ಫಿಲ್ ಸೈಟ್‌ಗೆ ರವಾನಿಸಲಾಗುತ್ತದೆ.
ಹಲವೆಡೆ ಜಾಗೃತಿ
ರಾಜ್ಯ ಸರಕಾರ ಪ್ಲಾಸ್ಟಿಕ್ ಬಳಕೆಯನ್ನು ಈಗಾಗಲೇ ನಿಷೇಧ ಮಾಡಿದೆ. ಮಂಗಳೂರು ನಗರದಲ್ಲಿ ಪ್ಲಾಸ್ಟಿಕ್ ಉತ್ಪಾದನೆ ಮಾಡುವಂತಹ ಯಾವುದೇ ಕೈಗಾರಿಕೆಗಳಿಲ್ಲ. ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧಕ್ಕೆ ಸಂಬಂಧ ಪಟ್ಟಂತೆ ಈಗಾಗಲೇ ಅನೇಕ ಕಡೆಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
-ಜಯಪ್ರಕಾಶ್ ನಾಯಕ್,
ಹಿರಿಯ ವೈಜ್ಞಾನಿಕ ಅಧಿಕಾರಿ
ಮುಂದಿನ ವಾರವೇ ಕಾರ್ಯಾಚರಣೆ
ನಗರದಲ್ಲಿ ಅನಧಿಕೃತವಾಗಿ ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಪಾಲಿಕೆಯಿಂದ ಮೂರು ತಂಡಗಳನ್ನು ಗುರುತಿಸಲಾಗಿದೆ. ಮುಂದಿನ ವಾರದಿಂದಲೇ ಕಾರ್ಯಾಚರಣೆ ಪ್ರಾರಂಭವಾಗುತ್ತದೆ.
– ಮಧು,ಪಾಲಿಕೆ ಪರಿಸರ
ಅಭಿಯಂತರ