ಭಾರತದ ಪ್ರಥಮ ತ್ರೀಡಿ ಪ್ಲಾನೆಟೋರಿಯಂ
Team Udayavani, Feb 25, 2018, 10:10 AM IST
ಮಂಗಳೂರು: ಪುಟ್ಟ ಕಟ್ಟಡದೊಳಗೆ ಅನಂತ ಸೌರಮಂಡಲದ ಅನಾವರಣ, ನಳನಳಿಸುವ ನಕ್ಷತ್ರ ಲೋಕದ ನೈಜ ಅನುಭವ, ಗ್ರಹ, ಜೀವ ಸಂಕುಲದ ಹುಟ್ಟಿನ ರಹಸ್ಯದ ಗುಟ್ಟನ್ನು ಕಣ್ಣ ಮುಂದೆ ಕಟ್ಟಿಕೊಡುವ ತ್ರಿಡಿ ಚಮತ್ಕಾರ, ಉಕ್ಕೇರಿ ಬರುವ ಸಾಗರ, ಮುನ್ನುಗ್ಗಿ ಬರುವ ಜಲಚರ, ಆಕಾಶ ಕಾಯಗಳು… ನಗರದ ಪಿಲಿಕುಳದ ಡಾ| ಶಿವರಾಮ ಕಾರಂತ ಬಯೋಲಾಜಿಕಲ್ ಪಾರ್ಕ್‌ನಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿರುವ ಭಾರತದ ಪ್ರಥಮ, ವಿಶ್ವದ 21ನೇ ಅತ್ಯಾಧುನಿಕ ಹೈಬ್ರಿಡ್ ತ್ರಿಡಿ “ಸ್ವಾಮಿ ವಿವೇಕಾನಂದ ತಾರಾಲಯ’ ಕಟ್ಟಿಕೊಡುವ ಕೌತುಕಮಯ ಅನುಭವ ಇದು. ದೇಶದ ಅಪರೂಪದ ಈ ತಾರಾಲಯ ಮಾ. 1ರಂದು ಲೋಕಾರ್ಪಣೆಗೊಳ್ಳಲಿದೆ.
ಮಕ್ಕಳಿಗೆ ಶಿಕ್ಷಣ, ಖಗೋಳ ಶಾಸ್ತ್ರಜ್ಞರಿಗೆ ಸಂಪನ್ಮೂಲ ಕೇಂದ್ರ, ವಯಸ್ಕರಿಗೆ ಸೌರಮಂಡಲದ ರಹಸ್ಯಗಳನ್ನು ತಿಳಿಸುವ ಕೇಂದ್ರವಾಗಿ ಮೂಡಿ ಬಂದಿರುವ ತ್ರೀಡಿ ತಾರಾಲಯ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯ ಮತ್ತು ರಾಜ್ಯ ಸರಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಅನುದಾನದೊಂದಿಗೆ ಸ್ಥಾಪನೆಗೊಂಡಿದೆ. ಅಪ್ಟೋ-ಮೆಕ್ಯಾನಿಕಲ್ ಮತ್ತು 8ಕೆ ಡಿಜಿಟಲ್ ಪ್ರೊಜೆಕ್ಷನ್ ಸಿಸ್ಟಮ್ ಅಳವಡಿಸಿರುವ ಹೈಬ್ರಿಡ್ ತಾರಾಲಯ ಆ್ಯಕ್ಟಿವ್ ತ್ರೀಡಿ ವ್ಯವಸ್ಥೆಯ ಮೂಲಕ ವೀಕ್ಷಕರಿಗೆ ಹೊಸ ಅನುಭವ ನೀಡುತ್ತದೆ.
18 ಮೀ. ವ್ಯಾಸದ ಗುಮ್ಮಟದೊಳಗೆ ಅತ್ಯಂತ ಪರಿಣಾಮಕಾರಿಯಾದ ನ್ಯಾನೋಸಿಮ್ ಫ್ಯಾಬ್ರಿಕೇಶನ್ ಅಳವಡಿಕೆ ಮಾಡಲಾಗಿದೆ. ಅಮೆರಿಕದಿಂದ ಬಂದಿರುವ ಪರಿಣತರೊಂದಿಗೆ ದೇಶದ ಹಲವಾರು ತಜ್ಞರು ಇದರ ಅಳವಡಿಕೆಯನ್ನು ನಿರ್ವಹಿಸಿದ್ದಾರೆ. ನ್ಯಾನೋಸಿಮ್ ಅಳವಡಿಕೆಯಿಂದ ಖಗೋಳ ವಿಜ್ಞಾನದ ಪ್ರದರ್ಶನ ಉತ್ಕೃಷ್ಟ ಮಟ್ಟದಲ್ಲಿ ನಡೆಯಲಿದೆ.
ನಭೋಮಂಡಲದ ನೈಜ ಅನುಭವ
ಪಿಲಿಕುಳದಲ್ಲಿ ಸ್ಥಾಪಿಸಲಾಗಿರುವ ತಾರಾಲಯ ಹಲವಾರು ವೈಶಿಷ್ಟéಗಳನ್ನು ಹಾಗೂ ವಿಶೇಷ ತಂತ್ರ ಜ್ಞಾನಗಳನ್ನು ಹೊಂದಿದೆ. ಇಲ್ಲಿ ಅಳವಡಿಸಿರುವ 8ಕೆ ಯುಎಚ್‌ಡಿಯಿಂದ ವೀಕ್ಷಕರಿಗೆ ನಭೋಮಂಡಲದ ನೈಜ ಅನುಭವ ಸಿಗಲಿದೆ. ಹಿಂದೆ ಇದ್ದ ಅಪ್ಟೊ ಮೆಕಾನಿ
ಕಲ್ ಮತ್ತು ಈಗಿನ ಡಿಜಿಟಲ್ ತಂತ್ರಜ್ಞಾನ ಎರಡೂ ಸಂಯೋಜಿತವಾಗಿ ಹೈಬ್ರಿಡ್ ತಂತ್ರಜ್ಞಾನ ಕಾರ್ಯ ನಿರ್ವಹಿಸಲಿದ್ದು, ಗ್ಯಾಲಕ್ಸಿ, ನಕ್ಷತ್ರಗಳು, ಗ್ರಹಗಳ ಸಹಿತ ಎಲ್ಲ ಆಕಾಶಕಾಯಗಳ ಚಿತ್ರಣಗಳನ್ನು ಅತ್ಯಂತ ಸ್ಪಷ್ಟವಾಗಿ ನೋಡಬಹುದಾಗಿದೆ. 4ಕೆ ಅಲ್ಟ್ರಾ ಎಚ್‌ಡಿ ಪರದೆ ಚಿತ್ರಗಳನ್ನು 1080 ಪಿ ಫುಲ್ ಎಚ್‌ಡಿಗಿಂತ ನಾಲ್ಕು ಪಟ್ಟು ಉತ್ತಮವಾಗಿ ಮೂಡಿಸುತ್ತವೆ.
ಮಾ.1ರಂದು ಉದ್ಘಾಟನೆ
ತ್ರೀಡಿ ತಾರಾಲಯ ಮಾ. 1ರಂದು ಲೋಕಾರ್ಪಣೆಗೊಳ್ಳಲಿದೆ. ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಂ, ಸಚಿವರಾದ ಬಿ.ರಮಾನಾಥ ರೈ, ಯು.ಟಿ. ಖಾದರ್ ಅವರ ಉಪಸ್ಥಿತಿಯಲ್ಲಿ, ಶಾಸಕ ಅಭಯಚಂದ್ರ ಅವರ ಅಧ್ಯಕ್ಷತೆಯಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿ ಅಧ್ಯಕ್ಷ, ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಇದೇ ಸಂದರ್ಭ ವಾಟರ್ ರಾಕೆಟ್ ಪ್ರಾತ್ಯಕ್ಷಿಕೆ, ಡ್ರೋನ್ ಪ್ರದರ್ಶನವಿದೆ ಎಂದರು.
ಮಂಗಳೂರಿನ ಹೆಗ್ಗುರುತು: ಲೋಬೊ
ಮಂಗಳೂರಿನಲ್ಲಿ ಸ್ಥಾಪನೆಯಾಗಿರುವ ತ್ರೀಡಿ ತಾರಾಲಯ ದೇಶ ವಿದೇಶಗಳಿಂದ ಸಂಶೋಧಕರು, ಪ್ರವಾಸಿಗರನ್ನು ಆಕರ್ಷಿಸಲಿದ್ದು, ಹೆಗ್ಗುರುತುಗಳಲ್ಲೊಂದಾಗಲಿದೆ ಎಂದು ಜೆ. ಆರ್. ಲೋಬೋ ವಿವರಿಸಿದರು. 2008ರಲ್ಲಿ ಯೋಜನೆ ರೂಪುಗೊಂಡಾಗ ಇದರ ಅಂದಾಜು ವೆಚ್ಚ 8 ಕೋ. ರೂ.ಆಗಿತ್ತು. ಆದರೆ ಬಳಿಕ ತಂತ್ರಜ್ಞಾನ ಹಾಗೂ ವಿನ್ಯಾಸಗಳಲ್ಲಿ ಆದ ಬದಲಾವಣೆಗಳಿಂದಾಗಿ ಇದರ ವೆಚ್ಚ 36 ಕೋ. ರೂ. ತಲುಪಿತು. ರಾಜ್ಯ ಸರಕಾರದ ತನ್ನ ಅನುದಾನದ ಜತೆಗೆ ಹೆಚ್ಚುವರಿಯಾಗಿ ಅವಶ್ಯವಿದ್ದ 12 ಕೋ. ರೂ. ಅನುದಾನವನ್ನು ನೀಡಿದೆ. ರಾಜ್ಯದ ಹಿಂದಿನ ಸರಕಾರ ಕೂಡ ಆರಂಭಿಕ ಹಂತದಲ್ಲಿ ಯೋಜನೆಗೆ ನೆರವು ನೀಡಿತ್ತು ಎಂದವರು ಹೇಳಿದರು.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ| ಕೆ.ವಿ. ರಾವ್, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿ ಸದಸ್ಯ ಕಾರ್ಯದರ್ಶಿ ವಿ. ಪ್ರಸನ್ನ, ಅಭಿಜಿತ್ ಉಪಸ್ಥಿತರಿದ್ದರು.
ಮಾ. 2ರಿಂದ ವೀಕ್ಷಣೆಗೆ ಅವಕಾಶ
ತಾರಾಲಯ ಒಟ್ಟು 170 ಆಸನಗಳನ್ನು ಹೊಂದಿದ್ದು, ದಿನವೊಂದಕ್ಕೆ ತಲಾ 25 ನಿಮಿಷಗಳಂತೆ 6 ಪ್ರದರ್ಶನಗಳಿರುತ್ತವೆ. ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ವಿವರಣೆ ನೀಡಲಾಗುತ್ತದೆ. ಪ್ರವೇಶ ದ್ವಾರದ ಬಲಬದಿಯಲ್ಲಿರುವ ಕೌಂಟರ್‌ನಲ್ಲಿ ಟಿಕೆಟ್ ನೀಡಲಾಗುವುದು. ವಯಸ್ಕರಿಗೆ 60 ರೂ. ಹಾಗೂ ಮಕ್ಕಳಿಗೆ 25 ರೂ. ಪ್ರವೇಶ ಶುಲ್ಕವಿರುತ್ತದೆ. ವಿಶೇಷ ಪ್ಯಾಕೇಜ್ ರೂಪಿಸಲಾಗಿದ್ದು, ಇದರ ಅನ್ವಯ 100 ರೂ. ಪಾವತಿಸಿ ತಾರಾಲಯ ಹಾಗೂ ಪಿಲಿಕುಳದ ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಬಹುದಾಗಿದೆ. ಮಾ. 7ರಿಂದ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಸೌಲಭ್ಯ ಆರಂಭಿಸಲಾಗುವುದು. ಉದ್ಘಾಟನೆಯ ದಿನದಂದು ಆಗಮಿಸುವ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಾರ್ವಜನಿಕರಿಗೆ ಮುಂದಿನ ಎರಡು ದಿನಗಳಿಗೆ ಉಚಿತ ಪ್ರದರ್ಶನ ಪಾಸ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.