ಮೇ 1ರಿಂದ ಇಂಡಿಗೋ ವಿಮಾನ ಯಾನ ಆರಂಭ
Team Udayavani, Apr 13, 2017, 12:45 PM IST
ಮಂಗಳೂರು: ಅತಿ ಕಡಿಮೆ ದರದಲ್ಲಿ ಮಂಗಳೂರು-ಬೆಂಗಳೂರು ಹಾಗೂ ಮಂಗಳೂರು- ಮುಂಬಯಿ ಮಧ್ಯೆ ಇಂಡಿಗೊ ವಿಮಾನ ಸೇವೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇ 1ರಿಂದ ಆರಂಭವಾಗಲಿದೆ.
ಬುಧವಾರ ಮಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಇಂಡಿಗೋ ಸಂಸ್ಥೆಯ ಮುಖ್ಯ ವಾಣಿಜ್ಯ ಅಧಿಕಾರಿ ಸಂಜಯ್ ಕುಮಾರ್ ಅವರು, ಮೇ 1ರಿಂದ ಮಂಗಳೂರು-ಬೆಂಗಳೂರು ಮಧ್ಯೆ 2 ವಿಮಾನಗಳು ಹಾಗೂ ಮಂಗಳೂರು-ಮುಂಬಯಿ ಮಧ್ಯೆ 1 ವಿಮಾನ ಪ್ರತೀ ದಿನ ಸಂಚರಿಸಲಿದೆ. ಕೆಲವು ದಿನಗಳ ಅನಂತರ ಮಂಗಳೂರು- ಬೆಂಗಳೂರು ಮಧ್ಯೆ ಇನ್ನೊಂದು ವಿಮಾನ ಸೇವೆ ಹಾಗೂ ಮಂಗಳೂರು-ಹೈದರಾಬಾದ್- ಹೊಸದಿಲ್ಲಿಗೆ ನೇರ ವಿಮಾನ ಸೇವೆಯೂ ಆರಂಭಗೊಳ್ಳಲಿದೆ ಎಂದು ಹೇಳಿದರು.
ಬೆಂಗಳೂರಿಗೆ 1,499 ರೂ!
ಭಾರತದ ಅತಿದೊಡ್ಡ ಹಾಗೂ ಕ್ಷಿಪ್ರ ಪ್ರಗತಿಪಥದಲ್ಲಿರುವ ಕಡಿಮೆ ವೆಚ್ಚದ ವಿಮಾನ ಯಾನ ಸೌಲಭ್ಯ ಕಲ್ಪಿಸುವ ವಿಮಾನ ಸೇವೆಯನ್ನು ಇಂಡಿಗೊ ನೀಡುತ್ತಿದೆ. ಈ ನಿಟ್ಟಿನಲ್ಲಿ ಕರಾವಳಿ ಭಾಗದ ಪ್ರಯಾಣಿಕರಿಗೂ ಈ ಸೌಲಭ್ಯ ನೀಡುವ ಉದ್ದೇಶದಿಂದ ಹೊಸ ವಿಮಾನ ಸೇವೆ ಆರಂಭವಾಗಲಿದೆ. ಇದರಂತೆ ಮಂಗಳೂರು-ಬೆಂಗಳೂರಿಗೆ ಕನಿಷ್ಠ ದರ 1,499 ರೂ. ಇರಲಿದ್ದು, ಮಂಗಳೂರು-ಮುಂಬಯಿಗೆ 1,799 ಕನಿಷ್ಠ ದರ ನಿಗದಿಪಡಿಸಲಾಗಿದೆ ಎಂದರು.
ಮಂಗಳೂರು-ಚೆನ್ನೈಗೂ ವಿಮಾನ ಸೇವೆ
ಮಂಗಳೂರಿನಿಂದ ಚೆನ್ನೈ, ಹೈದರಾಬಾದ್, ಹೊಸದಿಲ್ಲಿಗೆ ನೇರ ವಿಮಾನ ಸೇವೆಯನ್ನು ಆರಂಭಿಸಲು ಇಂಡಿಗೊ ಉತ್ಸುಕವಾಗಿದ್ದು, ಈ ಬಗ್ಗೆಯೂ ಮುಂದಿನ ದಿನಗಳಲ್ಲಿ ಪೂರಕ ಕ್ರಮಗಳನ್ನು ಕೈಗೊಳ್ಳಲಿದೆ. ಜತೆಗೆ ಗಲ್ಫ್ ರಾಷ್ಟ್ರಗಳಿಗೆ ನೇರ ವಿಮಾನ ಯಾನ ಸೇವೆಯನ್ನು ಕನಿಷ್ಠ ದರದಲ್ಲಿ ನೀಡುವ ಹೊಸ ಯೋಚನೆಗಳಿವೆ ಎಂದರು.
ಇಂಡಿಗೋ ಸಂಸ್ಥೆಯ ಕಾರ್ಪೊರೇಟ್ ಕಮ್ಯುನಿಕೇಶನ್‌ನ ನಿರ್ದೇಶಕ ಅಜಯ್ ಎಸ್. ಜಸ್ರ ಮಾತನಾಡಿ, ಪ್ರಸ್ತುತ ದಿನಕ್ಕೆ 907 ಇಂಡಿಗೊ ವಿಮಾನಗಳು ದೇಶದಲ್ಲಿ ಕಾರ್ಯಾಚರಿಸುತ್ತಿದ್ದು, ದೇಶದ 45 ಪ್ರಮುಖ ಸ್ಥಾನಗಳಿಗೆ ಸೇವೆ ನೀಡುತ್ತಿದೆ. ಮಂಗಳೂರು ದೇಶದಲ್ಲೇ ಅತ್ಯಂತ ಪ್ರಮುಖ ಬಂದರು ನಗರವಾಗಿದ್ದು, ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಬೆಂಗಳೂರು ಹೊರತುಪಡಿಸಿದರೆ ಕರ್ನಾಟಕದ ಅತ್ಯಂತ ಸಂಚಾರ ದಟ್ಟಣೆಯ ವಿಮಾನ ನಿಲ್ದಾಣವಾಗಿದೆ. ಬಿಸಿನೆಸ್ ಹಬ್ ಮತ್ತು ಪ್ರವಾಸಿ ತಾಣವಾಗಿ ಪ್ರಾಮುಖ್ಯ ಪಡೆಯುತ್ತಿದೆ. ಹಲವು ವರ್ಷಗಳಿಂದ ಮಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವಂತೆ ಮನವಿಗಳು ಪದೇ ಪದೇ ನಮಗೆ ಬರುತ್ತಿದ್ದವು. ಹೀಗಾಗಿ ಮಂಗಳೂರಿನಿಂದ ಇಂಡಿಗೊ ವಿಮಾನ ಸೇವೆಯನ್ನು ಆರಂಭಿಸುವ ಘೋಷಣೆ ಮಾಡಲು ಸಂತಸವಾಗುತ್ತಿದೆ. ಆರಂಭಿಕ ವಿಮಾನದ ಪ್ರಯಾಣದರವನ್ನು ಕನಿಷ್ಠ ದರದಿಂದ ಆರಂಭಿಸಲಾಗುತ್ತಿದೆ ಎಂದರು.
ಇಂಡಿಗೊ ಭಾರತದ ಅತಿದೊಡ್ಡ ಏರ್‌ಲೈನ್ ಆಗಿದ್ದು, 2017ರ ಫೆಬ್ರವರಿ ವೇಳೆಗೆ ದೇಶದ ಮಾರುಕಟ್ಟೆಯಲ್ಲಿ ಶೇ. 39.5 ಪಾಲು ಹೊಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.