ಸುಳ್ಯ: ಇಂದಿರಾ ಕ್ಯಾಂಟೀನ್ ಶೀಘ್ರ ಆರಂಭ
Team Udayavani, Jun 17, 2019, 5:05 AM IST
ಸುಳ್ಯ: ಹಲವು ತಿಂಗಳಿನಿಂದ ಉದ್ಘಾಟನೆಗೆ ಕಾಯುತ್ತಿರುವ ಇಂದಿರಾ ಕ್ಯಾಂಟೀನ್ ಕಾರ್ಯಾರಂಭಕ್ಕೆ ಮುಂದಿನ 15 ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲು ತಾಲೂಕು ಆಡಳಿತ ನಿರ್ಧರಿಸಿದೆ.
ದ.ಕ. ಜಿಲ್ಲೆ ಸಹಿತ ರಾಜ್ಯದ ವಿವಿಧ ತಾಲೂಕಿನಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆಗೊಂಡು ಕಡಿಮೆ ದರದಲ್ಲಿ ಊಟ-ಉಪಾಹಾರ ವಿತರಣೆ ಆರಂಭಗೊಂಡಿತ್ತು. ಆದರೆ ಸುಳ್ಯದಲ್ಲಿ ಕಟ್ಟಡ ಸಿದ್ಧಗೊಂಡಿದ್ದರೂ ಪ್ರಾರಂಭಕ್ಕೆ ಕಾಲ ಕೂಡಿ ಬಂದಿಲ್ಲ.
15 ದಿನಗಳ ಗಡುವು
ಇಂದಿರಾ ಕ್ಯಾಂಟಿನ್ ಆರಂಭಕ್ಕೆ ಬೇಕಿರುವ ಅಗತ್ಯಗಳ ಬಗ್ಗೆ ತಹಶೀಲ್ದಾರ್ ನೇತೃತ್ವದಲ್ಲಿ ಸಂಬಂಧಪಟ್ಟವರ ಉಪಸ್ಥಿತಿಯಲ್ಲಿ ಸಭೆ ಆಯೋಜಿಸಲು ತೀರ್ಮಾನಿಸಲಾಗಿದೆ. ಅದಾದ 15 ದಿನಗಳಲ್ಲಿ ಉದ್ಘಾಟನೆ ಬಗ್ಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಸ್ಥಳೀಯ ಯಾವುದೇ ಇಲಾಖೆಗಳು ಕ್ಯಾಂಟೀನ್ ಬಗ್ಗೆ ಜವಾಬ್ದಾರಿ ಹೊಂದಿರದ ಕಾರಣ ರಾಜ್ಯಮಟ್ಟದಲ್ಲೇ ಇದರ ಪ್ರಕ್ರಿಯೆ ನಡೆಬೇಕಿದೆ. ತಾಲೂಕು ಆಡಳಿತ ಸರಕಾರದ ಮೂಲಕ ಗುತ್ತಿಗೆ ಸಂಸ್ಥೆ ಶೀಘ್ರ ಕ್ಯಾಂಟಿನ್ ಆರಂಭಿಸುವಲ್ಲಿ ಒತ್ತಡ ಹೇರಲು ಪೂರ್ವಭಾವಿ ಸಭೆ ಸಹಕಾರಿ ಆಗಬಹುದು.
ಹಲವು ಅಡ್ಡಿ
ನಗರದ ಮಿನಿ ವಿಧಾನಸೌಧದ ಹಿಂಭಾಗದಲ್ಲಿ 5 ಸೆಂಟ್ಸ್ ಸ್ಥಳದಲ್ಲಿ 2018 ಎಪ್ರಿಲ್ ತಿಂಗಳಿನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.
ನೆಲ ಸಮತಟ್ಟು ಆಗಿ, ಅಡಿಪಾಯ ಕಾಮಗಾರಿ ಪೂರ್ಣಗೊಂಡ ವೇಳೆ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಯಾಯಿತು. ಅದಾದ ಬಳಿಕ ನಾಲ್ಕು ತಿಂಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು. ಹೊಸ ಸರಕಾರ ಅಧಿಕಾರಕ್ಕೆ ಬಂದು ಈ ಹಿಂದಿನ ಯೋಜನೆ ಮುಂದುವರಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾವಿಸಿತ್ತು.
ನಾಲ್ಕು ತಿಂಗಳ ಬಳಿಕ ಕಾಮಗಾರಿ ಮರು ಆರಂಭಗೊಂಡು ಮೂರು ತಿಂಗಳ ಹಿಂದೆ ಕಾಮಗಾರಿ ಅಂತಿಮಗೊಂಡಿತ್ತು.
ಇಂದಿರಾ ಕ್ಯಾಂಟಿನ್‌ನಲ್ಲಿ 10 ರೂ.ಗೆ ಊಟ, 5 ರೂ.ಗೆ ತಿಂಡಿ ನೀಡಲಾಗುತ್ತದೆ. ಸುತ್ತೋಲೆಯಲ್ಲಿ ಇರುವ ಮೆನು ಪ್ರಕಾರ, ಬೆಳಗ್ಗೆ ಉಪಾಹಾರ, ಇಡ್ಲಿ- ಸಾಂಬಾರ್, ರೈಸ್‌ಬಾತ್, ಅವಲಕ್ಕಿ, ಉಪ್ಪಿಟ್ಟು, ಖಾರಾ ಪೊಂಗಲ್ (ವಾರದಲ್ಲಿ ಒಂದರಂತೆ) ಮಧ್ಯಾಹ್ನ, ರಾತ್ರಿ ಅನ್ನ- ಸಾರು, ಉಪ್ಪಿನಕಾಯಿ, ಹಪ್ಪಳ, ರವಿ ವಾರ ಬಿಸಿಬೇಳೆ ಬಾತ್, ತರಕಾರಿ, ಅನ್ನ, ಪುಳಿಯೊಗರೆ(ವಾರದಲ್ಲಿ ಒಂದು ದಿನ) ನೀಡಬೇಕು. ಕೇಂದ್ರೀಕೃತ ಅಡುಗೆ ಮನೆ ಮೂಲಕ ಆಹಾರ ಪೂರೈಸಬೇಕು.
ಆಹಾರ ಪೂರೈಕೆ ವಿತರಣೆಗೆ ರಾಜ್ಯ ಮಟ್ಟದಲ್ಲೇ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಪಡೆದ ಸಂಸ್ಥೆ ಅದರ ಜವಾಬ್ದಾರಿ ವಹಿಸಲಿದೆ. ಪ್ರತಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ 32 ಲಕ್ಷ ರೂ. ವೆಚ್ಚ ತಗಲುತ್ತದೆ ಎನ್ನುವುದು ಸರಕಾರದ ಅಂದಾಜು.
– ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.