![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Sep 8, 2022, 8:30 PM IST
ಉಳ್ಳಾಲ: ಕಣಜದ ಹುಳ ಕಡಿದು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ನಿಧನ ಹೊಂದಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಹಿತ ಇಬ್ಬರು ಚೇತರಿಸಿಕೊಂಡಿದ್ದಾರೆ.
ಉಳ್ಳಾಲಬೈಲ್ ನಿವಾಸಿ ಜಿತನ್ ರೆಸ್ಕಿನಾ (38) ಮೃತಪಟ್ಟವರಾಗಿದ್ದು, ರಿಕ್ಷಾ ಚಾಲಕ ಪ್ರವೀಣ್ ಪೂಜಾರಿ ಮತ್ತು ಅವರ ಪುತ್ರಿ ಧೃತಿ ಚೇರಿಸಿಕೊಳ್ಳುತ್ತಿದ್ದಾರೆ.
ಘಟನೆಯ ವಿವರ:
ಉಳ್ಳಾಲ ಬೈಲಿನ ಭವಾನಿ ಅವರ ಮನೆಯಲ್ಲಿ ಮಂಗಳವಾರ ಮರವೇರುವ ಯಂತ್ರದ ಮೂಲಕ ಕಾಯಿ ಕೀಳಲು ಸ್ಥಳೀಯ ನಿವಾಸಿಯಾಗಿದ್ದ ಜಿತನ್ ರೆಸ್ಕಿನಾ ಆಗಮಿಸಿದ್ದು, ಅವರು ಮರವೇರಿ ಕಾಯಿ ಕೊಯ್ಯುತ್ತಿದ್ದಾಗ ಅದೇ ಮರದಲ್ಲಿ ಗೂಡು ಕಟ್ಟಿದ್ದ ಕಣಜದ ಹುಳಗಳು ದಾಳಿ ನಡೆಸಿದ್ದವು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿ ಪ್ರವೀಣ್ ಪೂಜಾರಿ ತನ್ನ ಮಗಳು ಧೃತಿಯನ್ನು ರಿಕ್ಷಾದಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಗ ಅವರ ಮೇಲೂ ದಾಳಿ ನಡೆಸಿತ್ತು.
ತಂದೆ-ಮಗಳು ಚೇತರಿಕೆ :
ಗಂಭೀರ ಸ್ಥಿತಿಯಲ್ಲಿದ್ದ ರೆಸ್ಕಿನಾ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರವೀಣ್ ಪೂಜಾರಿ ಮತ್ತು ಅವರ ಮಗಳು ಧೃತಿಗೆ ತೊಕ್ಕೊಟ್ಟಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸಂಜೆಯಾಗುತ್ತಿದ್ದಂತೆ ಪ್ರವೀಣ್ ಪೂಜಾರಿ ಅವರ ಸ್ಥಿತಿ ಗಂಭೀರವಾಗಿತ್ತು. ಅನಂತರ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಅಲ್ಲಲ್ಲಿ ಹೆಚ್ಚುತ್ತಿವೆ ದಾಳಿ
ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಕಣಜದ ಹುಳಗಳ ದಾಳಿ ಸಾಮಾನ್ಯವಾಗಿ ಬಿಟ್ಟಿವೆ. ಪ್ರಾಣ ಕಳೆದವರೂ ಹೆಚ್ಚಿದ್ದಾರೆ. ಮೊನ್ನೆ ಬಂಟ್ವಾಳದಲ್ಲೂ ಕಣಜದ ಹುಳ ದಾಳಿ ನಡೆಸಿತ್ತು. ಅದಕ್ಕೂ ಮೊದಲು ಕೋಟ, ಉಪ್ಪಿನಂಗಡಿ, ಸುಳ್ಯ ಮೊದಲಾದೆಡೆಗಳಲ್ಲೂ ದಾಳಿಯಾಗಿತ್ತು.
You seem to have an Ad Blocker on.
To continue reading, please turn it off or whitelist Udayavani.