ಉದಯವಾಣಿ ವಿಶೇಷ : ಮಂಗಳೂರು ವಿಮಾನ ನಿಲ್ದಾಣ ಆದಾಯಕ್ಕೆ ಕುತ್ತು?
Team Udayavani, Jul 2, 2018, 5:00 AM IST
ಮಂಗಳೂರು: ಕೇರಳದ ಕಣ್ಣೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಜ್ಜುಗೊಂಡಿದ್ದು, ಮಂಗಳೂರು ವಿಮಾನ ನಿಲ್ದಾಣದ ಆದಾಯಕ್ಕೆ ಕುತ್ತು ಬರುವ ಆತಂಕ ಎದುರಾಗಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಹಾರಾಟ ನಡೆಸುವವರಲ್ಲಿ ಹೆಚ್ಚಿನವರು ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳವರೇ ಆಗಿದ್ದಾರೆ. ಆ ಜಿಲ್ಲೆಗಳ ಪ್ರಯಾಣಿಕರು ಕಣ್ಣೂರು ವಿಮಾನ ನಿಲ್ದಾಣವನ್ನೇ ಬಳಸತೊಡಗಿದರೆ ಮಂಗಳೂರು ವಿಮಾನ ನಿಲ್ದಾಣದ ಆದಾಯ ಕುಸಿಯಲಿದೆ. ಕೇರಳದ ನಾಲ್ಕನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮಂಗಳೂರಿನಿಂದ ಸುಮಾರು 150 ಕಿ.ಮೀ. ದೂರದ ಕಣ್ಣೂರು ಜಿಲ್ಲೆಯಲ್ಲಿ ಸೆಪ್ಟಂಬರ್ ನಲ್ಲಿ ಕಾರ್ಯಾರಂಭಿಸಲಿದೆ.
ಸಾಮಾನ್ಯವಾಗಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ, ಅದರಲ್ಲೂ ಕೊಲ್ಲಿ ರಾಷ್ಟ್ರಗಳಿಗೆ ತೆರಳುವ ಪ್ರಯಾಣಿಕರ ಪೈಕಿ ಬಹುಪಾಲು ಮಂದಿ ಕಾಸರಗೋಡು, ಕಾಂಞಂಗಾಡ್, ಪಯ್ಯನೂರು, ಕಣ್ಣೂರು ಹಾಗೂ ಉತ್ತರ ಕನ್ನಡದ ಭಟ್ಕಳದವರು. ಮಂಗಳೂರು ವಿಮಾನ ನಿಲ್ದಾಣದವರ ಮಾಹಿತಿ ಪ್ರಕಾರ ಕಳೆದ ವರ್ಷ ಒಟ್ಟು 23.4 ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಇವರಲ್ಲಿ 15.02 ಲಕ್ಷ ಮಂದಿ ದೇಶೀ ಸ್ಥಳಗಳಿಗೆ ಪ್ರಯಾಣಿಸಿದ್ದರೆ, 7.59 ಲಕ್ಷ ಮಂದಿ ವಿದೇಶಗಳಿಗೆ ಪ್ರಯಾಣಿಸಿದ್ದಾರೆ. ಉಳಿದಂತೆ ನಾನ್ ಸಿವಿಲಿಯನ್ ಪ್ರಯಾಣಿಕರು. ಈ ಅಂಕಿಅಂಶಗಳ ಆಧಾರದಲ್ಲಿ ವಿದೇಶ ಪ್ರಯಾಣಿಕರಲ್ಲಿ ವಾರ್ಷಿಕ ಸುಮಾರು 3 ಲಕ್ಷ ಮಂದಿ ಕೇರಳ ಭಾಗದಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುತ್ತಾರೆ ಎಂದು ಅಂದಾಜಿಸಲಾಗಿದೆ.
ಮಂಗಳೂರೇ ಹತ್ತಿರ
ಕಾಸರಗೋಡಿನಿಂದ ಮಂಗಳೂರಿಗೆ ಕೇವಲ 50 ಕಿ.ಮೀ. ದೂರವಾದರೆ, ಕಣ್ಣೂರಿಗೆ 92 ಕಿ.ಮೀ. ದೂರ. ಕಾಂಞಂಗಾಡ್ ನಿಂದಲೂ ಮಂಗಳೂರಿಗೆ 60 ಕಿ.ಮೀ. ಇದ್ದರೆ, ಕಣ್ಣೂರಿಗೆ 82 ಕಿ.ಮೀ. ಹೀಗಾಗಿ ಈ ಭಾಗದ ಯಾನಿಗಳು ಮುಂದೆಯೂ ಮಂಗಳೂರನ್ನೇ ನೆಚ್ಚಿಕೊಳ್ಳಬಹುದು ಎಂಬುದು ಪರಿಣಿತರ ಅಭಿಪ್ರಾಯ. ಅಲ್ಲದೆ, ಕಣ್ಣೂರಿಗೆ ಹೋಲಿಸಿದರೆ ಮಂಗಳೂರು ಕಡೆಗಿನ ರಸ್ತೆಯೂ ಚೆನ್ನಾಗಿದೆ. ತಲಪಾಡಿಯಿಂದ ಮಂಗಳೂರು ವಿಮಾನ ನಿಲ್ದಾಣದವರೆಗೂ ಚತುಷ್ಪಥವಿರುವುದು ಅನುಕೂಲ. ಇದು ಕಾಸರಗೋಡು ಹಾಗೂ ಕಾಂಞಂಗಾಡ್ ಪ್ರಯಾಣಿಕರಿಗೆ ಅನುಕೂಲವೆನಿಸಿದರೆ, ಪಯ್ಯನ್ನೂರು, ಕಣ್ಣೂರು ಭಾಗದ ಪ್ರಯಾಣಿಕರಿಗೆ ಕಣ್ಣೂರು ವಿಮಾನ ನಿಲ್ದಾಣವೇ ಹತ್ತಿರವಾಗಲಿದೆ. ಈ ಮಧ್ಯೆ ಕೊಡಗು ಜಿಲ್ಲೆಯ ಪ್ರಯಾಣಿಕರಿಗೆ ಕಣ್ಣೂರು ಹತ್ತಿರವಾಗುವುದರಿಂದ ಅವರೂ ಅತ್ತ ವಾಲುವ ಸಾಧ್ಯತೆ ಹೆಚ್ಚಿದೆ. ಕಣ್ಣೂರು ವಿಮಾನ ನಿಲ್ದಾಣ ಆರಂಭವಾದರೆ ಮಂಗಳೂರು ನಿಲ್ದಾಣಕ್ಕೆ ಆ ಭಾಗದಿಂದ ಆಗಮಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಬಹುದು. ಅಲ್ಲಿಂದ ಯಾವೆಲ್ಲ ವಿಮಾನಗಳು ಹಾರಾಟ ನಡೆಸುತ್ತವೆ ಎಂದೂ ಕಾದು ನೋಡಬೇಕಿದೆ ಎನ್ನುತ್ತಾರೆ ಮಂಗಳೂರು ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್. ವಾಸುದೇವ.
ರನ್ ವೇ ವಿಸ್ತರಣೆ ಸಾಧ್ಯತೆ ಕ್ಷೀಣ
ಮಂಗಳೂರು ನಿಲ್ದಾಣದಲ್ಲಿ ಬೋಯಿಂಗ್ 737-800 ವಿಮಾನ ಇಳಿಯಲು ಸಾಧ್ಯವಾಗುವಂತೆ ರನ್ ವೇಯನ್ನು 3,050 ಮೀ. ವಿಸ್ತರಿಸಲು ಪ್ರಕ್ರಿಯೆ ನಡೆದಿದ್ದರೂ ಕಾರ್ಯ ಸಾಧ್ಯತೆ ಕ್ಷೀಣಿಸಿದೆ. ಪ್ರಸ್ತುತ ವಿಮಾನ ಯಾನ ಸಂಸ್ಥೆಗಳು ದೊಡ್ಡ ಗಾತ್ರದ ಬದಲಿಗೆ ಮಧ್ಯಮ ಗಾತ್ರದ ವಿಮಾನಗಳಿಗೇ ಆದ್ಯತೆ ನೀಡುತ್ತಿವೆ. ರನ್ ವೇ ವಿಸ್ತರಣೆಗೆ ಸುಮಾರು 4 ಸಾವಿರ ಕೋ.ರೂ.ನಷ್ಟು ಹಣ ವ್ಯಯವಾಗಲಿದೆ. ಈ ಹಣದಲ್ಲಿ ಜಿಲ್ಲೆಯ ಬೇರೆ ಕಡೆ ಹೊಸ ನಿಲ್ದಾಣ ನಿರ್ಮಿಸಬಹುದು. ಆದ್ದರಿಂದ ರನ್ ವೇ ವಿಸ್ತರಣೆ ಯೋಜನೆ ಸಾಧುವಲ್ಲ ಎಂಬುದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಭಿಪ್ರಾಯ.
ಉತ್ತಮ ಸಾಧನೆ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗುಣಮಟ್ಟದ ಸೇವೆ ಹಾಗೂ ಮೂಲ ಸೌಕರ್ಯಗಳಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಪ್ರಯಾಣಿಕರ ಸಂಖ್ಯೆ ಹಾಗೂ ವಿಮಾನ ಹಾರಾಟಗಳ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.30ರಷ್ಟು ಪ್ರಗತಿ ಸಾಧಿಸಲಾಗಿದೆ.
ಕೇರಳ ರಸ್ತೆ ಚತುಷ್ಪಥ
ಸದ್ಯ ಕೇರಳದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರಬೇಕಾದರೆ ತಲಪಾಡಿಯವರೆಗೆ ದ್ವಿಪಥ ರಸ್ತೆ ಇದೆ. ಈ ರಾ.ಹೆ. 66 ಅನ್ನು ಚತುಷ್ಪಥವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈಗ ಕರ್ನಾಟಕದ ಗಡಿ ತಲಪಾಡಿಯವರೆಗೆ ರಸ್ತೆ ಅಭಿವೃದ್ಧಿಯಾಗಿದ್ದು, ಕೇರಳದ ಮಂಜೇಶ್ವರ, ಕಾಸರಗೋಡು, ಕಾಂಞಂಗಾಡ್ ಮಾರ್ಗವನ್ನು ಚತುಷ್ಪಥವನ್ನಾಗಿ ಪರಿವರ್ತಿಸಲು ಭೂಸ್ವಾಧೀನ ಪ್ರಾರಂಭಿಸಲಾಗಿದೆ. ಈ ಮಾರ್ಗ ಅಭಿವೃದ್ಧಿಯಾದರೆ ಮಂಗಳೂರಿಗೆ ಬರುವ ಸಮಯ ಮತ್ತಷ್ಟು ಉಳಿಯಲಿದೆ. ಆದಕಾರಣ ಆದಷ್ಟು ಬೇಗ ಈ ಯೋಜನೆ ಪೂರ್ಣಗೊಳಿಸಬೇಕೆಂಬುದು ಜನಾಗ್ರಹ.
ಪ್ರಯಾಣಿಕರ ಸಂಖ್ಯೆ ಕಡಿಮೆಯಾಗದು
ಮಂಗಳೂರು ನಿಲ್ದಾಣ ಬಹಳಷ್ಟು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಇಲ್ಲಿ ಪ್ರಯಾಣಿಕರ ಸಂಖ್ಯೆ ಏರುತ್ತಿದೆ. ಆದ ಕಾರಣ ಕಣ್ಣೂರು ವಿಮಾನ ನಿಲ್ದಾಣದ ಕಾರ್ಯಾರಂಭದಿಂದ ನಮಗೆ ಹೆಚ್ಚಿನ ಪರಿಣಾಮವಾಗದು.
– ವಿ.ವಿ. ರಾವ್, ನಿರ್ದೇಶಕ, ಮಂಗಳೂರು ವಿಮಾನ ನಿಲ್ದಾಣ
— ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.