ಸ್ಮಾರ್ಟ್‌ಸಿಟಿ ಯೋಜನೆ 6-7 ವಾರ್ಡ್‌ಗೆ ಮಾತ್ರ ಸೀಮಿತವಲ್ಲ:ನಾರಾಯಣಪ್ಪ
Team Udayavani, Dec 5, 2018, 11:37 AM IST
ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆ ಆರಂಭವಾಗಿ ಎರಡು ವರ್ಷ ಸಂದರೂ ನಗರದಲ್ಲಿ ಆಮೂಲಾಗ್ರವಾದ ಯೋಜನೆಗಳು ಅನುಷ್ಠಾನವಾಗಿಲ್ಲ ಎಂಬ ಆರೋಪ ಸಾರ್ವತ್ರಿಕವಾಗಿ ಕೇಳಿಬರುತ್ತಿದೆ. ಜತೆಗೆ ಸ್ಮಾರ್ಟ್ ಸಿಟಿ ಯೋಜನೆಯು ನಗರದ 60 ವಾರ್ಡ್‌ಗಳ ಪೈಕಿ ಸ್ಟೇಟ್‌ಬ್ಯಾಂಕ್ ಪರಿಸರದ ಕೇವಲ 6-7 ವಾರ್ಡ್‌ಗಳಿಗಷ್ಟೇ ಸೀಮಿತವಾಗಿದೆ ಎಂಬ ಆಕ್ಷೇಪವೂ ಇದೆ. ಇದೆಲ್ಲದರ ಮಧ್ಯೆ ಸ್ಮಾರ್ಟ್‌ಸಿಟಿ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯದ ಇತರ ನಗರದಲ್ಲಿರುವಂತೆ ಪೂರ್ಣಾವಧಿ ಆಡಳಿತ ನಿರ್ದೇಶಕರೂ ಇಲ್ಲ ಎಂಬ ಆರೋಪ ಬಂದಿರಬೇಕಾದರೆ, ಇದೀಗ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಗೆ ನೂತನ ಆಡಳಿತ ನಿರ್ದೇಶಕರಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ನಾರಾಯಣಪ್ಪ ಅವರು ದಿನೇಶ್ ಇರಾ ಅವರಿಗೆ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ.
ಮಂಗಳೂರು ಸ್ಮಾರ್ಟ್‌ಸಿಟಿಯಾಗಿ ಘೋಷಣೆಯಾಗಿ 2 ವರ್ಷ ಕಳೆದರೂ ಆಮೂಲಾಗ್ರ ಪ್ರಗತಿ ಕಾಣಿಸುತ್ತಿಲ್ಲ ಏಕೆ?
ಸಾಮಾನ್ಯವಾಗಿ ಒಂದು ಯೋಜನೆ ಅನುಷ್ಠಾನ ಆಗುವಾಗ ಸ್ಥಳೀಯ ಮನಸ್ಸುಗಳಲ್ಲಿ ಬೇರೆ ಬೇರೆ ರೀತಿಯ ಅನುಮಾನ-ಪ್ರಶ್ನೆಗಳು ವ್ಯಕ್ತವಾಗುತ್ತವೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಅದೆಲ್ಲವೂ ಒಮ್ಮಿಂದೊಮ್ಮೆಲೇ ಆಗುವಂತದ್ದಲ್ಲ. ಹೊಸತನದ ಮೂಲಕ ಸರಕಾರಿ ಇಲಾಖೆಗಳನ್ನು ಜೋಡಿಸಿಕೊಳ್ಳುವುದು ಕೂಡ ಪ್ರಾರಂಭಿಕ ಹಂತದಲ್ಲಿ ಸವಾಲಿನ ಕೆಲಸ. ಹೀಗಾಗಿ ಈ ಎಲ್ಲ ಲೆಕ್ಕಾಚಾರಗಳನ್ನು ಗಮನದಲ್ಲಿಟ್ಟು ನಗರದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಎಚ್ಚರಿಕೆ ವಹಿಸಿಕೊಂಡು ಸ್ಮಾರ್ಟ್‌ಸಿಟಿ ಯೋಜನೆ ಇಲ್ಲಿ ಆರಂಭವಾಗಿದೆ. ಈಗಾಗಲೇ ಸುಮಾರು 10 ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಮುಂದೆ ಅತ್ಯಂತ ಪರಿಪೂರ್ಣ ನೆಲೆಯಲ್ಲಿ ಹಾಗೂ ನಿಗದಿತ ಸಮಯದಲ್ಲಿ ಯೋಜನೆಗಳು ಅನುಷ್ಠಾನವಾಗಲಿದೆ.
ಹಾಗಾದರೆ, ಮುಂದೆ ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನದ ವೇಗ ಹೇಗೆ ಹೆಚ್ಚುಸುವಿರಿ?
ರಾಜ್ಯದ ಉಳಿದ ಸ್ಮಾರ್ಟ್‌ಸಿಟಿ ಯೋಜನೆಯನ್ನು ಪರಿಶೀಲಿಸಿದಾಗ ಮಂಗಳೂರು ಸ್ಮಾರ್ಟ್‌ಸಿಟಿ ಪರಿಕಲ್ಪನೆ ಅತ್ಯಂತ ಬ್ಯೂಟಿಫುಲ್. ನಗರದ ಅಭಿವೃದ್ಧಿಯ ಈಗಿನ ಸ್ಥಿತಿಗತಿಯನ್ನು ಹೋಲಿಸಿಕೊಂಡು ಮಾಡಿದ ಶೈಲಿ ಅದ್ಭುತವಾಗಿದೆ. ಹೀಗಾಗಿ ಪ್ರಸ್ತಾವಿತ ಯೋಜನೆಗಳನ್ನು ಪೂರ್ಣ ರೀತಿಯಲ್ಲಿ ಅನುಷ್ಠಾನಿಸುವುದು ಹಾಗೂ ಎಲ್ಲ ಇಲಾಖೆಗಳ ಸಹಕಾರ, ಜನರ ವಿಶ್ವಾಸ ಪಡೆದುಕೊಂಡು ಯೋಜನೆ ಜಾರಿಗೆ ಕ್ರಮವಹಿಸಲಾಗುವುದು. ಪೂರಕವಾಗಿ ಇನ್ನಿತರ ಹೊಸ ಪರಿಕಲ್ಪನೆ ಜಾರಿಗೆ ಆವಶ್ಯಕತೆ ಇದ್ದರೆ ಅದನ್ನು ಈಡೇರಿಸಲು ಆದ್ಯತೆ ನೀಡಲಾಗುವುದು.
ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಗಾಗಿ ಇಲ್ಲಿಯವರೆಗೆ ಬಂದ ಒಟ್ಟು ಅನುದಾನ ಎಷ್ಟು ?
ಒಟ್ಟು 214 ಕೋ.ರೂ. ಅನುದಾನ ಸ್ಮಾರ್ಟ್‌ಸಿಟಿ ಮಂಗಳೂರು ಯೋಜನೆಗೆ ಬಂದಿದೆ. ಇದರಲ್ಲಿ ಅರ್ಧ ಕೇಂದ್ರ ಹಾಗೂ ಇನ್ನರ್ಧ ರಾಜ್ಯ ಸರಕಾರ ನೀಡಿದೆ. ಕೇಂದ್ರದ ಅನುದಾನ ಬಿಡುಗಡೆ ಯಾದ ಒಂದು ವಾರದೊಳಗೆ ರಾಜ್ಯದ ಅನುದಾನವೂ ಬಿಡುಗಡೆಯಾಗುತ್ತದೆ.
60 ವಾರ್ಡ್‌ಗಳಿರುವಾಗ, ಕೇವಲ 6-7 ವಾರ್ಡ್‌ಗಳಲ್ಲಿ ಮಾತ್ರ ಸ್ಮಾರ್ಟ್‌ಸಿಟಿಯ ಏರಿಯಾ ಬೇಸ್‌ಡ್ ಡೆವೆಲೆಪ್‌ಮೆಂಟ್ ನಡೆದರೆ ಅದು ನ್ಯಾಯವೇ?
ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಈಗ ಕೈಗೆತ್ತಿಕೊಂಡಿರುವ 6-7 ವಾರ್ಡ್‌ಗಳನ್ನು ಪೈಲೆಟ್ ಪ್ರೊಜೆಕ್ಟ್ ಮಾದರಿಯಲ್ಲಿ ಪರಿಗಣಿಸಲಾಗಿದೆ. ಅಂದರೆ, ಪಾಲಿಕೆ ಒಂದು ಭಾಗವನ್ನು ಮಾತ್ರ ಪರಿಗಣಿಸಲಾಗಿದೆ. ಕೆಲವೇ ವರ್ಷದಲ್ಲಿ ಈ ವಾರ್ಡ್‌ನಲ್ಲಿ ನಮ್ಮ ನಿರೀಕ್ಷೆಯ ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನವಾದ ಬಳಿಕ, ಬಾಕಿ ಉಳಿದ ಪ್ರದೇಶವನ್ನು ಸ್ಮಾರ್ಟ್‌ಸಿಟಿ ಯೋಜನೆಗೆ ಪರಿಗಣಿಸಲಾಗುತ್ತದೆ. ಹೀಗಾಗಿ 6-7 ವಾರ್ಡ್‌ಗೆ ಮಾತ್ರ ಇದು ಸೀಮಿತವಲ್ಲ.
ಅಂದರೆ, ಸದ್ಯಕ್ಕೆ 6-7 ವಾರ್ಡ್ ವ್ಯಾಪ್ತಿಯಲ್ಲಿ ಮಾತ್ರ ಕಾಮಗಾರಿ ನಡೆಯುತ್ತದೆ?
ಹಾಗೇನಿಲ್ಲ. ನಗರದ ಇತರ ಭಾಗದಲ್ಲಿ ಅತ್ಯಂತ ಜರೂರಾಗಿ ಸ್ಮಾರ್ಟ್‌ರೂಪದಲ್ಲಿ ಬದಲಾವಣೆ ಆಗಬೇಕಾದ ಕಾಮಗಾರಿಯನ್ನು ಎಸ್‌ಪಿವಿ (ಸ್ಪೆಷಲ್ ಪರ್ಪಸ್ ವೆಹಿ ಕಲ್) ಮೀಟಿಂಗ್‌ನಲ್ಲಿ ಇಟ್ಟು ಮಂಜೂರಾತಿ ಪಡೆಯಲಾಗುತ್ತದೆ. ಪಂಪ್‌ವೆಲ್ ಬಸ್‌ನಿಲ್ದಾಣ, ಸ್ಮಾರ್ಟ್ ಬಸ್ ಶೆಲ್ಟರ್‌ಗಳು, ವೈಫೈ ವ್ಯವಸ್ಥೆ ಇತರ ಭಾಗದಲ್ಲಿಯೂ ನಡೆಯಲಿದೆ.
ತಾತ್ಕಾಲಿಕ ಮಾರುಕಟ್ಟೆ; ಪಾಲಿಕೆ ಪರಿಹಾರ
ಸ್ಮಾರ್ಟ್ ಸೆಂಟ್ರಲ್ ಮಾರುಕಟ್ಟೆ ನಿರ್ಮಾಣ ಸಂಬಂಧ ಈಗಿನ ವರ್ತಕರಿಗೆ ತಾತ್ಕಾಲಿಕ ಮಾರುಕಟ್ಟೆ ನಿರ್ಮಿಸುವ ವಿಚಾರ ಕಗ್ಗಂಟಾಗಿದೆ. ಇಂಥವುಗಳ ಪರಿಹಾರಕ್ಕೆ ನಿಮ್ಮ ಕ್ರಮವೇನು?
ಇಂತಹ ವಿಚಾರಗಳನ್ನು ಮುಖ್ಯವಾಗಿ ಪಾಲಿಕೆ ಇತ್ಯರ್ಥ ಮಾಡಲಿದೆ. ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಮಂಗಳೂರು ಪಾಲಿಕೆ ವಿಶೇಷ ಸ್ಥಾನಮಾನ ಹೊಂದಿರುವ ಹಿನ್ನೆಲೆಯಲ್ಲಿ ಹಾಗೂ ಜವಾಬ್ದಾರಿಯುತ ಸಂಸ್ಥೆಯಾಗಿ ಅವರು ಪರಿಹರಿಸಿಕೊಡಲಿದ್ದಾರೆ. ಸಮಗ್ರ ಅಭಿವೃದ್ಧಿಯ ವಿಚಾರದಲ್ಲಿ ಸಾರ್ವಜನಿಕರು ಆಡಳಿತ ವ್ಯವಸ್ಥೆಯೊಂದಿಗೆ ಕೈಜೋಡಿಸಬೇಕಾದ ಅಗತ್ಯ ಇದೆ.
ಸ್ಮಾರ್ಟ್‌ಸಿಟಿಯ ಪ್ರಸ್ತುತ ಕಾಮಗಾರಿಗಳು
ಆರಂಭವಾಗಿರುವುದು
1. ಕ್ಲಾಕ್ ಟವರ್
2. ಬಸ್ ಶೆಲ್ಟರ್-2
ಪ್ರಗತಿಯಲ್ಲಿರುವುದು
1. ಬಸ್ ಶೆಲ್ಟರ್-1
2. ಸ್ಮಾರ್ಟ್ ರೋಡ್ ಪ್ಯಾಕೇಜ್-1
ಯೋಜನ ಹಂತದಲ್ಲಿರುವುದು
1. ಯುಜಿಡಿ ಕಾಮಗಾರಿ -1, 2, 3 ಹಂತ
2. ಬಸ್ ಶೆಲ್ಟರ್
3. ರೂಫ್ ಟಾಫ್ ಸೋಲಾರ್
4. ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್
5. ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟ್ರಲ್.