ಡಿಜಿಟಲ್ ಆರ್ಥಿಕ ಸೇವೆಯಲ್ಲಿ ಇರಾ ಅಂಚೆ ಕಚೇರಿ ಗರಿಷ್ಠ ಸಾಧನೆ
ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಕ್ಕಾಗಿ ಪೋಸ್ಟ್ ಮಾಸ್ಟರ್‌ಗೆ ವಿಶೇಷ ಗೌರವ
Team Udayavani, May 31, 2022, 9:33 AM IST
ಬಂಟ್ವಾಳ: ಗ್ರಾಮೀಣ ಅಂಚೆ ಕಚೇರಿಗಳು ಕೂಡ ಡಿಜಿಟಲ್ ಆರ್ಥಿಕ ಸೇವೆಗಳನ್ನು ನೀಡುತ್ತಿದ್ದು, ಅಂಚೆ ಇಲಾಖೆಯು ಪರಿಚಯಿಸಿದ ಆಧಾರ್ ಎನೇಬುಲ್ಡ್ ಪೇಮೆಂಟ್ ಸಿಸ್ಟಂ(ಎಇಪಿಎಸ್) ನಲ್ಲಿ ಬಂಟ್ವಾಳದ ಇರಾ ಶಾಖಾ ಅಂಚೆ ಕಚೇರಿಯು ಪುತ್ತೂರು ಹಾಗೂ ಮಂಗಳೂರು ಅಂಚೆ ವಿಭಾಗ ಸೇರಿ ದ.ಕ.ಜಿಲ್ಲೆಯಲ್ಲೇ ಗರಿಷ್ಠ ಸಾಧನೆ ಮಾಡಿದೆ.
2021-22ನೇ ಸಾಲಿನಲ್ಲಿ ಬರೋಬ್ಬರಿ 3,006 ಖಾತೆಗಳ 65.11 ಲಕ್ಷ ರೂ.ಗಳ ವ್ಯವಹಾರ ಗ್ರಾಮೀಣ ಭಾಗದಲ್ಲಿ ನಡೆದಿರುವುದು ಅಂಚೆ ಇಲಾಖೆಯ ಹೊಸ ಸೇವೆಯ ಸಾರ್ಥಕತೆಯಾಗಿದೆ. ಪುತ್ತೂರು ವಿಭಾಗದ 321 ಶಾಖಾ ಅಂಚೆ ಕಚೇರಿ, 70 ಉಪ ಅಂಚೆ ಕಚೇರಿ, 2 ಪ್ರಧಾನ ಅಂಚೆ ಕಚೇರಿಗಳು ಸೇರಿ 393 ಅಂಚೆ ಕಚೇರಿಗಳಲ್ಲಿ ಇದು ಗರಿಷ್ಠ ಸಾಧನೆ ಎನಿಸಿಕೊಂಡಿದ್ದು, ಅದಕ್ಕಾಗಿ ಇರಾ ಅಂಚೆ ಕಚೇರಿಯ ಶಾಖಾ ಪೋಸ್ಟ್ ಮಾಸ್ಟರ್ ಡಿ.ಸುರೇಶ್ ರೈ ವಿಶೇಷ ಗೌರವಕ್ಕೂ ಪಾತ್ರರಾಗಿದ್ದಾರೆ.
ಬ್ಯಾಂಕ್ ಶಾಖೆಗಳು ಇಲ್ಲದ ಹಳ್ಳಿಗಳಲ್ಲಿ ಬ್ಯಾಂಕಿಂಗ್ ಸೇವೆ ನೀಡುವ ನಿಟ್ಟಿನಲ್ಲಿ 2018ರಿಂದ ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್(ಐಪಿಪಿಬಿ)ಡಿಜಿಟಲ್ ವ್ಯವಹಾರ ಸೇವೆ ನೀಡುತ್ತಿದ್ದು, ಆ್ಯಪ್ ಮೂಲಕ ಎಇಪಿಎಸ್ ಸೇವೆಯನ್ನೂ ನೀಡಲಾಗುತ್ತಿದೆ. ಇಂತಹ ಸೇವೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಲಾಖೆಗೆ ಗ್ರಾಮೀಣ ಅಂಚೆ ಕಚೇರಿಗೆ ಟಾರ್ಗೆಟ್ ಗಳನ್ನು ನೀಡುತ್ತಿದ್ದು, ಇರಾ ಅಂಚೆ ಕಚೇರಿಯ ಶಾಖಾ ಪೋಸ್ಟ್ ಮಾಸ್ಟರ್ ಪರಿಣಾಮಕಾರಿಯಾಗಿ ಯೋಜನೆಯನ್ನು ಜನರಿಗೆ ತಲುಪಿಸಿದ್ದಾರೆ.
ಅಂಚೆ ಇಲಾಖೆಯಲ್ಲಿ ಪುತ್ತೂರು ವಿಭಾಗವೆಂದರೆ ಪುತ್ತೂರು, ಬಂಟ್ವಾಳ, ಸುಳ್ಯ, ಬೆಳ್ತಂಗಡಿ ಹಾಗೂ ಕಾರ್ಕಳ ಉಪವಿಭಾಗವನ್ನು ಒಳಗೊಂಡಿದೆ.
ಪುತ್ತೂರು ವಿಭಾಗದ ಜತೆಗೆ ಮಂಗಳೂರು ವಿಭಾಗವನ್ನೂ ಸೇರಿಸಿದರೂ ಎಇಪಿಎಸ್‌ನಲ್ಲಿ ಇರಾ ಅಂಚೆ ಕಚೇರಿಯದ್ದೇ ಗರಿಷ್ಠ ಸಾಧನೆ ಎನಿಸಿಕೊಳ್ಳುತ್ತದೆ. 2022-23ನೇ ಸಾಲಿನ ಎಪ್ರಿಲ್‌ನಲ್ಲಿ ಇರಾದಲ್ಲಿ 25 ಲಕ್ಷ ರೂ.ಗಳಿಗೂ ಅಧಿಕ ವ್ಯವಹಾರ ನಡೆದಿರುವುದು ವಿಶೇಷ.
ಇತರ ಸೇವೆಗಳಲ್ಲೂ ಮುಂದು
ಆರ್ಥಿಕ ವ್ಯವಹಾರದ ಜತೆಗೆ ಇತರ ಸೇವೆಗಳಲ್ಲೂ ಇರಾ ಅಂಚೆ ಕಚೇರಿಯ ಡಿ.ಸುರೇಶ್ ರೈ ವಿಶೇಷ ಸಾಧನೆ ಮಾಡಿದ್ದಾರೆ. ಅಂಚೆ ಕಚೇರಿಗಳಲ್ಲಿ ಚೈಲ್ಡ್ ಎನ್‌ರೋಲ್ ಮೆಂಟ್ ಲೈಟ್ ಕ್ಲೈಂಟ್(ಸಿಇಎಲ್‌ಸಿ) ಮೂಲಕ ಆಧಾರ್ ಕಾರ್ಡ್‌ಗೆ ಮೊಬೈಲ್ ಲಿಂಕ್ ಮಾಡುವ ಸೇವೆ ನೀಡುತ್ತಿದ್ದು, ಕಳೆದ ಸಾಲಿನಲ್ಲಿ 726 ಆಧಾರ್ ಮೊಬೈಲ್ ಲಿಂಕ್ ಮಾಡಿದ್ದಾರೆ. ಆದರೆ ಇದು ದ್ವಿತೀಯ ಗರಿಷ್ಠ ಸಾಧನೆಯಾಗಿದೆ. ಮಾಸಾಶನ ಪಡೆಯುವವರು ಪ್ರತೀ ವರ್ಷ ಪ್ರಮಾಣ ಪತ್ರ ನೀಡಬೇಕಿದ್ದು, ಅಂಚೆ ಇಲಾಖೆಯು ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಡಿಎಲ್‌ಸಿ)-ಜೀವನ್ ಪ್ರಮಾಣ್ ಮಾಸಾಶನ ಪಡೆಯುವವರ ಮನೆಗೆ ತೆರಳಿ ಸೇವೆ ನೀಡುತ್ತಿದೆ. ಅದರಲ್ಲಿ ಇಡೀ ಜಿಲ್ಲೆಯಲ್ಲೇ 176 ಮಂದಿಗೆ ಸೇವೆ ನೀಡುವ ಮೂಲಕ ಇರಾ ಶಾಖಾ ಪೋಸ್ಟ್ ಮಾಸ್ಟರ್ ಜಿಲ್ಲೆಯಲ್ಲೇ ಗರಿಷ್ಠ ಸಾಧನೆ ಮಾಡಿದ್ದಾರೆ.
ಏನಿದು ಎಇಪಿಎಸ್?
ಅಂಚೆ ಕಚೇರಿಯ ಎಇಪಿಎಸ್ ಸೇವೆಯು ಆ್ಯಪ್ ಮೂಲಕ ನಡೆ ಯುತ್ತಿದ್ದು, ಆಧಾರ್ ಲಿಂಕ್ ಆಗಿರುವ ಯಾವುದೇ ಬ್ಯಾಂಕ್ ಶಾಖೆಯಲ್ಲಿ ಮೊತ್ತವನ್ನು ಯಾವುದೇ ಊರಿನ ಗ್ರಾಹಕನು ಹಳ್ಳಿಯ ಅಂಚೆ ಕಚೇರಿಯಲ್ಲಿ ತೆಗೆಯಬಹುದಾಗಿದೆ. ಜತೆಗೆ ಹಣ ವರ್ಗಾವಣೆ, ಬ್ಯಾಲೆನ್ಸ್ ಚೆಕ್ ಮೊದಲಾದ ಸೇವೆಯನ್ನು ಇದರ ಮೂಲಕ ಪಡೆಯ ಬಹುದಾಗಿದೆ. ಎಇಪಿಎಸ್‌ನಲ್ಲಿ ಪುತ್ತೂರು ವಿಭಾಗದ 5 ಉಪವಿಭಾಗಗಳಲ್ಲಿ ಬಂಟ್ವಾಳ ಉತ್ತಮ ಸಾಧನೆ ಮಾಡಿದ್ದು, ಕಳೆದ ಸಾಲಿನ ದ್ವಿತೀಯ ಅಧಿಕ ವ್ಯವಹಾರವೂ ಇಲ್ಲೇ ನಡೆದಿದ್ದು, ಮೂಡುಬಿದಿರೆ ತಾಲೂಕು ವ್ಯಾಪ್ತಿಯ ಮರೋಡಿ ಅಂಚೆ ಕಚೇರಿಯ ಶಾಖಾ ಪೋಸ್ಟ್ ಮಾಸ್ಟರ್ ಹರೀಶ್ 2,445 ಖಾತೆಗಳ 58.56 ಲಕ್ಷ ರೂ. ವ್ಯವಹಾರ ನಡೆಸಿದ್ದಾರೆ.
ವಿಶೇಷ ಗೌರವ
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಿಂದ ಅಂಚೆ ಸೇವೆಗಳನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುತ್ತಿದ್ದು, ಎಇಪಿಎಸ್, ಡಿಎಲ್‌ಸಿ, ಸಿಇಎಲ್‌ಸಿ ಮೊದಲಾದ ಸೇವೆ ಉತ್ತಮ ಸಾಧನೆಗಾಗಿ ಅಂಚೆ ಇಲಾಖೆಯು ವಿಶೇಷ ಗೌರವವನ್ನೂ ನೀಡಿದೆ. –ಡಿ.ಸುರೇಶ್ ರೈ ಶಾಖಾ ಪೋಸ್ಟ್ ಮಾಸ್ಟರ್, ಇರಾ
ಗರಿಷ್ಠ ಸಾಧನೆ
ಎಇಪಿಎಸ್ ಸೇರಿ ಅಂಚೆ ಇಲಾಖೆಯ ಎಲ್ಲ ಸೇವೆಗಳಲ್ಲೂ ಪರಿಣಾಮಕಾರಿಯಾಗಿ ಜನತೆಗೆ ತಿಳಿಸುವ ನಿಟ್ಟಿನಲ್ಲಿ ಶಾಖಾ ಪೋಸ್ಟ್ ಮಾಸ್ಟರ್‌ಗಳಿಗೆ ಗುರಿಯನ್ನು ನೀಡಲಾಗುತ್ತಿದ್ದು, ಇರಾದವರು ಬಹುತೇಕ ಎಲ್ಲ ಸೇವೆಗಳಲ್ಲೂ ಗರಿಷ್ಠ ಸಾಧನೆ ಮಾಡುತ್ತಿದ್ದಾರೆ. ಎಇಪಿಎಸ್‌ನಲ್ಲಿ ಇಡೀ ಬಂಟ್ವಾಳ ಉಪವಿಭಾಗವೇ ಉತ್ತಮ ಸಾಧನೆ ಮಾಡುತ್ತಿದೆ. –ಲೋಕನಾಥ್ ಎಂ. ಅಂಚೆ ಸಹಾಯಕ ಅಧೀಕ್ಷಕರು, ಬಂಟ್ವಾಳ ಉಪವಿಭಾಗ
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.