ಸುಲ್ತಾನ್ ಬತ್ತೇರಿ “ಐತಿಹಾಸಿಕ ಕೋಟೆ’ಗೆ ಕಬ್ಬಿಣದ ಬೇಲಿ ಭದ್ರತೆ!
Team Udayavani, Jun 4, 2019, 6:00 AM IST
ಸುಲ್ತಾನ್‌ಬತ್ತೇರಿ ಐತಿಹಾಸಿಕ ಕೋಟೆಗೆ ಭದ್ರತೆ ಒದಗಿಸುವ ಕಾಮಗಾರಿಗೆ ಸಿದ್ಧತೆ ನಡೆಸಲಾಗುತ್ತಿದೆ.
ಮಹಾನಗರ: ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆಯ ಸುಪರ್ದಿಯಲ್ಲಿರುವ ನಗರದ ಸುಲ್ತಾನ್‌ಬತ್ತೇರಿಯ ಐತಿಹಾಸಿಕ ಕೋಟೆಗೆ ಈಗ ಸೂಕ್ತ ಭದ್ರತೆ ಒದಗಿಸಲು ಇಲಾಖೆ ಮುಂದಾಗಿದೆ. ಐತಿಹಾಸಿಕ ತಾಣವಾಗಿರುವ ಸುಲ್ತಾನ್‌ಬತ್ತೇರಿ ಕೋಟೆಗೆ ಕಿಡಿಗೇಡಿಗಳಿಂದ ಹಾನಿಯಾಗದಿರಲು, ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಸುತ್ತ ಬೇಲಿ ಹಾಕಲು ನಿರ್ಧರಿಸಲಾಗಿದೆ. ಇದಕ್ಕಾಗಿ ಕಬ್ಬಿಣದ ರಾಡ್, ಗೇಟ್‌ಗಳನ್ನು ತರಲಾಗಿದೆ. ಕೋಟೆಯ ಸುತ್ತ ಮಣ್ಣು ತೆಗೆದು ರಾಡ್ ಅಳವಡಿಸಿ ಬೇಲಿ ಹಾಕುವ ಕಾಮಗಾರಿಗೆ ಚಾಲನೆ ಕೂಡ ನೀಡಲಾಗಿದೆ. ಆದರೆ ಐತಿಹಾಸಿಕ ಕೋಟೆಗೆ ಕಬ್ಬಿಣದ ಬೇಲಿ ಹಾಕುವುದರಿಂದ ಪಾರಂಪರಿಕ ಸೌಂದರ್ಯಕ್ಕೆ ಧಕ್ಕೆ ಆಗಬಹುದೇ? ಎಂಬ ಪ್ರಶ್ನೆಯೂ ಎದುರಾಗಿದೆ.
ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆಯ ಅಧೀನದಲ್ಲಿರುವ ಎಲ್ಲ ಮಹತ್ವದ ಸ್ಥಳಗಳ ಸುತ್ತ ರಕ್ಷಣೆ, ಭದ್ರತೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹೊಸದಿಲ್ಲಿಯ ಕೇಂದ್ರ ಕಚೇರಿಯಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಾಗಿದೆ.
ಅದರಂತೆ ಬೆಂಗಳೂರಿನಲ್ಲಿರುವ ರಾಜ್ಯ ಪ್ರಾಚ್ಯವಸ್ತು ಇಲಾಖೆಯ ವತಿಯಿಂದ ಸುಲ್ತಾನ್‌ಬತ್ತೇರಿ ಐತಿಹಾಸಿಕ ಕೋಟೆಗೆ ರಕ್ಷಣೆ ಒದಗಿಸುವ ಕಾಮಗಾರಿಗೆ ಇತ್ತೀಚೆಗೆ ಟೆಂಡರ್ ಕರೆಯಲಾಗಿತ್ತು. ಇದರಂತೆ ಟೆಂಡರ್ ಪಡೆದ ಸಂಸ್ಥೆಯೊಂದು ಈಗ ಕಾಮಗಾರಿ ಆರಂಭಿಸಿದೆ.
ಸುಲ್ತಾನ್ ಬತ್ತೇರಿ ಕೋಟೆಯ ಹೊರಭಾಗದಲ್ಲಿ ಸ್ವತ್ಛಗೆ ಆದ್ಯತೆ ನೀಡಿರಲಿಲ್ಲ. ಕಸ ಕಡ್ಡಿ, ತ್ಯಾಜ್ಯಗಳು ತುಂಬಿ ಐತಿಹಾಸಿಕ ಕೋಟೆಯ ಚೆಲುವಿಗೆ ಧಕ್ಕೆ ಎದುರಾಗಿತ್ತು. ಜತೆಗೆ, ಕೆಲವರು ಲಾರಿ ಮುಖೇನ ಮಣ್ಣನ್ನು ಸುರಿದು ಇಲ್ಲಿ ಡಂಪಿಂಗ್ ಯಾರ್ಡ್ ರೀತಿ ಮಾಡಿದ್ದರು. ಇದೀಗ ಕೋಟೆಯ ಹೊರಭಾಗದಲ್ಲಿ ಕಬ್ಬಿಣದ ಬೇಲಿ ಅಳವಡಿಸಲು ಉದ್ದೇಶಿಸಲಾಗಿದೆ. ಈ ಮೂಲಕ ಕೋಟೆಯ ಸುತ್ತ ಯಾವುದೇ ಧಕ್ಕೆ ಆಗದಂತೆ ನೋಡಿಕೊಳ್ಳುವುದು ಈ ಯೋಜನೆಯ ಉದ್ದೇಶ.
ಪುರಾತತ್ವ ಇಲಾಖೆಗೆ ಸಂಬಂಧಿಸಿ ಮಂಗಳೂರಿನಲ್ಲಿ ಕಚೇರಿ ಇಲ್ಲದ ಹಿನ್ನೆಲೆಯಲ್ಲಿ ಸುಲ್ತಾನ್‌ಬತ್ತೇರಿಯಲ್ಲಿ ನಡೆಸಲು ಉದ್ದೇಶಿಸಿರುವ ಕಾಮಗಾರಿಯ ಬಗ್ಗೆ ದ.ಕ. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ. ಜತೆಗೆ ಸ್ಥಳೀಯರಿಗೂ ಇದರ ಬಗ್ಗೆ ಮಾಹಿತಿ ಇರಲಿಲ್ಲ. ಪರಿಣಾಮವಾಗಿ ಐತಿಹಾಸಿಕ ಕೋಟೆಯ ಸುತ್ತ ಯಾವ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿತ್ತು.
ಸಾಂಪ್ರದಾಯಿಕ ಶೈಲಿಯ ಕಾಮಗಾರಿ ಅಗತ್ಯ
ಸುಲ್ತಾನ್‌ಬತ್ತೇರಿಯ ಕೋಟೆಗೆ ಭದ್ರತೆ ಒದಗಿಸುವುದು ಉತ್ತಮ. ಆದರೆ, ಕೋಟೆಯ ಸುತ್ತ ಕಬ್ಬಿಣದ ಬೇಲಿಯ ಅಳವಡಿಕೆಯಿಂದ ಮೂಲ ಸ್ವರೂಪಕ್ಕೆ ಧಕ್ಕೆ ಆಗಬಾರದು. ಹಾಗೂ ಕೋಟೆಗೆ ಇನ್ನಷ್ಟು ರೂಪು ಬರುವಂತಾಗಲು ಸಾಂಪ್ರದಾಯಿಕ ಶೈಲಿಯ ಭದ್ರತೆ ನಿರ್ಮಿಸುವುದು ಅಗತ್ಯ.
– ಕಲ್ಲೂರು ನಾಗೇಶ್
ಕಾಮಗಾರಿ ಆರಂಭ
ಸುಲ್ತಾನ್‌ಬತ್ತೇರಿಯ ಐತಿಹಾಸಿಕ ಕೋಟೆಯ ಹೊರಭಾಗದಲ್ಲಿ ಭದ್ರತೆಯ ದೃಷ್ಟಿಯಿಂದ ಕಬ್ಬಿಣದ ಬೇಲಿ ಅಳವಡಿಸಲು ಉದ್ದೇಶಿಸಲಾಗಿದೆ. ಇದರ ಕಾಮಗಾರಿ ಈಗಾಗಲೇ ಆರಂಭಿಸಲಾಗಿದೆ.
– ಕೆ. ಮೂತೇಶ್ವರಿ, ಅಧೀಕ್ಷಕರು, ಪುರಾತತ್ವ ಇಲಾಖೆ, ಬೆಂಗಳೂರು
ಐತಿಹಾಸಿಕ ಕೋಟೆಗೆ ನಿರ್ವಹಣೆ ಕೊರತೆ
ಸುಲ್ತಾನ್ ಬತ್ತೇರಿ ಕೋಟೆಯ ಮಹತ್ವವನ್ನು ಸಾರುವ ಫಲಕವೊಂದು ಇಲ್ಲಿ ಎಡಬದಿಯಲ್ಲಿದ್ದರೆ, “ಹಾನಿಗೈದರೆ ಶಿಕ್ಷೆ’ ಎಂಬ ದಂಡದ ಎಚ್ಚರಿಕೆ ಫಲಕವು ಬಲಬದಿಯಲ್ಲಿದೆ. ಅದು ಬಿಟ್ಟರೆ ಇಲ್ಲಿ ಬೇರೇನೂ ಕಾಣಲು ಸಿಗುವುದಿಲ್ಲ. ಐತಿಹಾಸಿಕ ಸ್ಮಾರಕವಾಗಿ ಗುರುತಿಸಲ್ಪಟ್ಟಿರುವ ಈ ಕೋಟೆಗೆ ಅಗತ್ಯ ಸೌಲಭ್ಯಗಳೇ ಇಲ್ಲ. ಜತೆಗೆ, ಇಲ್ಲಿನ ಕೋಟೆಯ ರಕ್ಷಣೆಗೆ ಕಾವಲು ಗಾರರಿಲ್ಲ. ವಿದೇಶದಿಂದ ಬರುವ ಪ್ರವಾಸಿಗರಿಗೆ ಮಾಹಿತಿ ನೀಡಲು ಮಾರ್ಗದರ್ಶಕರೂ ಇಲ್ಲ. ಕೋಟೆಯ ಗೇಟು ಸದಾ ತೆರೆದಿರುತ್ತದೆ. ಹಾಗಾಗಿ ಯಾರು, ಯಾವ ಹೊತ್ತಿಗೆ ಬೇಕಾದರೂ ಈ ಕೋಟೆಗೆ ಹೋಗಬಹುದಾಗಿದೆ. ಕೋಟೆಯ ಸುತ್ತ ಗಿಡಗಂಟಿಗಳು ಬೆಳೆದಿವೆ. ಸುಲ್ತಾನ್ ಬತ್ತೇರಿ ಕೋಟೆಯ ಮೇಲ್ಭಾಗಕ್ಕೆ ಕೆಲವು ವರ್ಷಗಳ ಹಿಂದೆ ಸಿಮೆಂಟ್ ಹಾಕಲಾಗಿತ್ತು. ಇದೀಗ ಈ ಗೋಡೆಯು ಅಲ್ಲಲ್ಲಿ ಕಿತ್ತು ಹೋಗಿದ್ದು, ಪಾಳು ಬಿದ್ದಂತಿದೆ. ಜತೆಗೆ, ಕೋಟೆ ಬಳಿ ಕಸ, ಮದ್ಯದ ಬಾಟಲಿ ಎಸೆದು ಅಕ್ರಮ ಚಟುವಟಿಕೆಗಳ ತಾಣವಾಗಿರುವ ಬಗ್ಗೆ “ಸುದಿನ’ ಕೂಡ ಕೆಲವು ತಿಂಗಳ ಹಿಂದೆ ವಿಶೇಷ ವರದಿ ಪ್ರಕಟಿಸಿತ್ತು.
- ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.