Israel-Hamas War ಸೈರನ್ ಮೊಳಗಿದರೆ ಎಲ್ಲೆಡೆ ನಿರ್ಜನ, ಆತಂಕ…
Team Udayavani, Oct 11, 2023, 1:02 AM IST
ಯುದ್ಧಗ್ರಸ್ತ ಇಸ್ರೇಲ್‌ನ ಪರಿಸ್ಥಿತಿ ಇನ್ನೂ ಆತಂಕದಿಂದಲೇ ಕೂಡಿದೆ. ಪ್ರಸ್ತುತ ಕರಾವಳಿಯ ಎಲ್ಲರೂ ಸುರಕ್ಷಿತವಾಗಿದ್ದರೂ ಆಗಾಗ ಮೊಳಗುವ ಸೈರನ್ ಎಲ್ಲರ ಹೃದಯ ಬಡಿತವನ್ನು ಹೆಚ್ಚಿಸುತ್ತಿದೆ.
ಮೊಳಗಿದ ಸೈರನ್: ಫೋನ್ ಕಟ್…
ಬಂಟ್ವಾಳ: ಮೆಲ್ಕಾರಿನ ಸಂತೋಷ್ ಅವರು ಉದಯವಾಣಿ ಜತೆ ಮಾತನಾಡುತ್ತಿದ್ದಾಗಲೇ ಸೈರನ್ ಮೊಳಗಿತು. ಫೋನ್ ಕೂಡ ಕಟ್ ಆಯಿತು. ಅನಂತರ ಏನಾಯಿತೆಂದು ಕೆಲವು ಸಮಯ ಗೊತ್ತಾಗಲಿಲ್ಲ. ಬೇರೆಯವರನ್ನು ಸಂಪರ್ಕಿಸಲು ಯತ್ನಿಸುತ್ತಿದ್ದಾಗ ಮತ್ತೆ ಕರೆ ಬಂತು. ಕ್ಷೇಮವಾಗಿರುವುದಾಗಿ ತಿಳಿಸಿದರು. ಮಂಗಳವಾರ ಸಂಜೆಯ ವೇಳೆಗೆ ಮಾತನಾಡುತ್ತಿದ್ದಾಗಲೇ ಸೈರನ್ ಆಗಿದ್ದರಿಂದ ಅವರು ಕೂಡಲೇ ಬಂಕರ್‌ಗೆ ಧಾವಿಸಿದ್ದರಿಂದ ಫೋನ್ ಕಟ್ ಆಗಿತ್ತು.
ಸೈರನ್ ಆದರೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಇಸ್ರೇಲ್‌ನ ಹರ್ಜಿಲಿಯಾದಲ್ಲಿ ನೆಲೆಸಿರುವ ಸಂತೋಷ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಯುದ್ಧ ಪ್ರದೇಶಕ್ಕಿಂತ ನಾವು ಸಾಕಷ್ಟು ದೂರದಲ್ಲಿದ್ದೇವೆ. ಇಲ್ಲಿನ ಸೇನೆಯ ಬಗ್ಗೆ ಎಲ್ಲರಿಗೂ ವಿಶ್ವಾಸವಿದೆ. ನಾನು ಇಸ್ರೇಲ್‌ಗೆ ಬಂದು 8 ವರ್ಷವಾಗಿದ್ದು, ಇಲ್ಲಿ ಇಂತಹ ಆತಂಕದ ಸ್ಥಿತಿಯನ್ನು ಇದೇ ಮೊದಲ ಬಾರಿಗೆ ಕಂಡಿದ್ದೇವೆ ಎಂದರು.
ಕೇರಳದವರಿರುವಲ್ಲಿ ಆತಂಕ!
ದ.ಕ., ಉಡುಪಿ ಭಾಗದವರು ನೆಲೆಸಿರುವ ಪ್ರದೇಶಗಳು ಸುರಕ್ಷಿತವಾಗಿದ್ದು, ಹರ್ಜಿಲಿಯಾ ಪ್ರದೇಶದಲ್ಲೇ ಬೆಳ್ತಂಗಡಿ, ಬಂಟ್ವಾಳದವರು ಸಾಕಷ್ಟು ಮಂದಿ ಇದ್ದೇವೆ. ಆದರೆ ಕೇರಳದ ಮಂದಿ ಗಡಿಯಲ್ಲಿದ್ದಾರೆ ಎನ್ನಲಾಗುತ್ತಿದೆ ಎಂದರು.
ತಾಯ್ನಾಡಲ್ಲಿ ಆತಂಕ ಅನಗತ್ಯ: ಪ್ರದೀಪ್
ಉಪ್ಪಿನಂಗಡಿ: ಯುದ್ಧ ಪೀಡಿತ ಇಸ್ರೇಲ್‌ನಲ್ಲಿ ದ.ಕ. ಜಿಲ್ಲೆಯವರು ಸಾಕಷ್ಟು ಮಂದಿ ಉದ್ಯೋಗದಲ್ಲಿದ್ದಾರೆ. ಯುದ್ಧದ ನಡುವೆಯೂ ಎಲ್ಲರೂ ಇಲ್ಲಿ ಸುರಕ್ಷಿತವಾಗಿದ್ದಾರೆ. ಆದ್ದರಿಂದ ತಾಯ್ನಾಡಲ್ಲಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಇಸ್ರೇಲ್‌ನ ರೆಹೋವೊತ್ ಪ್ರದೇಶದಲ್ಲಿರುವ ಪುತ್ತೂರು ತಾ|ನ ಕೆಮ್ಮಾರ ನಿವಾಸಿ ಪ್ರದೀಪ್ ಕೊçಲ “ಉದಯವಾಣಿಗೆ’ ತಿಳಿಸಿದ್ದಾರೆ.
ಗಾಜಾ ಪಟ್ಟಿಯಿಂದ ನಾನಿರುವ ಪ್ರದೇಶ 55 ಕಿ.ಮೀ. ದೂರವಿದೆ. ಇಲ್ಲಿ ಯಾವುದೇ ಯುದ್ಧದ ವಾತಾವರಣ ಇಲ್ಲ ಎಂದರು.ನಾನು ತಿಳಿದಂತೆ ಉಗ್ರರ ಬಳಿ ಸುಧಾರಿತ ತಂತ್ರಜ್ಞಾನದ ರಾಕೆಟ್‌ಗಳಿಲ್ಲ. ಇಸ್ರೇಲ್ ಬಳಿ ಅವರ ರಾಕೆಟ್‌ಗಳ ದಾಳಿಯನ್ನು ತಡೆಯುವ ತಂತ್ರಜ್ಞಾನವಿದೆ ಎಂದರು.
ಇಲ್ಲಿ ದ.ಕ. ಜಿಲ್ಲೆಯ ಹಲವರು ಇದ್ದರೂ ನನ್ನ ಸಂಪರ್ಕದಲ್ಲಿ ಗಣೇಶ್ ಮತ್ತು ಕಡಬ ತಾಲೂಕಿನ ದಿನೇಶ್, ಉಮೇಶ್ ಮಾತ್ರ ಇದ್ದಾರೆ. ಅವರು ಸೇರಿದಂತೆ ದ.ಕ. ಜಿಲ್ಲೆಯವರಿಗೆ ಇಲ್ಲಿ ಯಾವುದೇ ತೊಂದರೆ ಆಗಿಲ್ಲ. ಯಹೂದಿಗಳಿಗೆ ಭಾರತೀಯರೆಂದರೆ ಬಹಳ ಅಭಿಮಾನ. ಇವತ್ತು ಕೂಡ ನಾನು ನಿರ್ಭೀತಿಯಿಂದ ಮಾರುಕಟ್ಟೆ ಪ್ರದೇಶಕ್ಕೆ ಹೋಗಿ ಬಂದಿದ್ದೇನೆ. ಆದ್ದರಿಂದ ತಾಯ್ನಾಡಿನವರು ಆತಂಕ ಪಡುವುದು ಬೇಡ ಎಂದು ಪ್ರದೀಪ್ ತಿಳಿಸಿದರು.
ಸದ್ಯ ಸಂಪೂರ್ಣ ಸುರಕ್ಷಿತ: ಅಕ್ಷಯ್
ಉಪ್ಪಿನಂಗಡಿ: ಇಸ್ರೇಲ್‌ನಲ್ಲಿ ನಾವೆಲ್ಲ ಕಟ್ಟೆಚ್ಚರ ದಿಂದ ಇದ್ದೇವೆ. ಸದ್ಯ ಭಾರತೀಯರೆಲ್ಲರೂ ಸುರಕ್ಷಿತರಾಗಿದ್ದೇವೆ. ಕ್ಷಿಪಣಿಗಳು ಅಪ್ಪಳಿಸುವ ಶಬ್ದ ದಿನ ನಿತ್ಯ ಕೇಳಿಸುತ್ತಿದೆಯಾದರೂ ಇಸ್ರೇಲ್ ಒಳಭಾಗ ಸಂಪೂರ್ಣ ಸುರಕ್ಷಿತವಾಗಿದೆ. ಸೈರನ್ ಮೊಳಗಿದ ಕೂಡಲೇ ಸುರಕ್ಷಾ ಕೊಠಡಿಗೆ ಧಾವಿಸುತ್ತೇವೆ ಎಂದು 8 ವರ್ಷಗಳಿಂದ ಅಲ್ಲಿರುವ ಮಡಂತ್ಯಾರು ಬಳಿಯ ಪಾರೆಂಕಿ ನಿವಾಸಿ ಅಕ್ಷಯ್ ಪತ್ರಿಕೆಗೆ ತಿಳಿಸಿದ್ದಾರೆ.
ಸೈರನ್ ಮೊಳಗಿದ ಕೂಡಲೇ ನಾವೆಲ್ಲಾ ಸುರಕ್ಷಾ ಕೊಠಡಿಗಳಿಗೆ ಧಾವಿಸುತ್ತೇವೆ. ಯುದ್ಧ ಘೋಷಿಸಿರುವುದರಿಂದ ರಸ್ತೆಗಳಲ್ಲಿ ಜನ ಸಂಚಾರ ಕಡಿಮೆಯಾಗಿದೆ. ಸಂಭಾವ್ಯ ಅಪಾಯವನ್ನು ಎದುರಿಸುವ ಸಲುವಾಗಿ ಕನಿಷ್ಠ 2, 3 ದಿನಗಳಿಗೆ ಆಗುವಷ್ಟು ಆಹಾರ ಧಾನ್ಯಗಳನ್ನು ಮನೆಯಲ್ಲಿ ದಾಸ್ತಾನು ಇರಿಸಲು ಇಲ್ಲಿನ ಆಡಳಿತದಿಂದ ನಿರ್ದೇಶನ ನೀಡಲಾಗಿದೆ. ಯುದ್ಧದ ಸ್ವರೂಪ ಯಾವ ಮಟ್ಟಕ್ಕೆ ಹೋಗುತ್ತದೆ ಎನ್ನುವುದು ಊಹಿಸಲು ಯಾರಿಗೂ ಸಾಧ್ಯವಿಲ್ಲದ ಕಾರಣ ಏನಾಗುವುದೋ ಎನ್ನುವ ಭೀತಿ ಸಹಜವಾಗಿ ಕಾಡುತ್ತಿದೆ ಎಂದರು.
ನಮ್ಮಲ್ಲಿಲ್ಲ ಆತಂಕ: ಫ್ರಾನ್ಸಿಸ್ ಡಿ’ಸೋಜಾ
ಪುಂಜಾಲಕಟ್ಟೆ: ನಾವಿರುವ ಸ್ಥಳದಲ್ಲಿ ಯುದ್ಧದ ಯಾವುದೇ ಆತಂಕವಿಲ್ಲ, ನಾವು ಎಂದಿನಂತೆ ಉದ್ಯೋಗದಲ್ಲಿ ನಿರತರಾಗಿದ್ದೇವೆ ಎಂದು ಇಸ್ರೇಲ್‌ನಲ್ಲಿರುವ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆ ಮೂಲದ ಫ್ರಾನ್ಸಿಸ್ ಡಿ’ಸೋಜಾ (ಪಿಂಕಿ) ತಿಳಿಸಿದ್ದಾರೆ.
ಉದಯವಾಣಿ ಜತೆ ಮಾತನಾಡಿದ ಅವರು, ನಾವಿರುವ ಹರ್ಜಿಲಿಯಾ ಪಿತುವಾ ಪ್ರದೇಶ ಸುರಕ್ಷಿತವಾಗಿದೆ ಎಂದರು. ಪುಂಜಾಲಕಟ್ಟೆ ಮೂಲದ ಕಿರಣ್ ಹೆಗ್ಡೆ ಕೂಡ ಮಾತನಾಡಿ, ನಾವು ನಿರಾತಂಕವಾಗಿದ್ದೇವೆ ಎಂದಿದ್ದಾರೆ. ಫ್ರಾನ್ಸಿಸ್ ಜತೆ ಅವರ ಸೋದರ ವಿನ್ಸೆಂಟ್ ಡಿ’ಸೋಜಾ, ಪತ್ನಿ ಜೆಸಿಂತಾ ಪಿರೇರಾ, ಗೆಳೆಯರಾದ ದಯಾನಂದ, ಅನಿಲ್ ಡಿ’ಸೋಜಾ, ವಿಜೇತ್ ಹೆಗ್ಡೆ, ವಿಲ್ಸನ್, ನೆಲ್ಸನ್, ಕುಕ್ಕಳ ಗ್ರಾಮದ ಹರೀಶ್ಚಂದ್ರ ಕೂಡ ಕ್ಷೇಮವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ದಕ್ಷಿಣ ಇಸ್ರೇಲ್‌ನಲ್ಲಿ ಹೆಚ್ಚಿನ ಆತಂಕ
ಮಂಗಳೂರು: ಇಸ್ರೇಲ್‌ನಲ್ಲಿರುವ ಕರ್ನಾಟಕದ ಕರಾವಳಿ ಮೂಲದವರು ಸದ್ಯ ಸಮಸ್ಯೆ ಇಲ್ಲದಿದ್ದರೂ ಮುಂದೇನಾಗಬಹುದೋ ಎನ್ನುವ ಕಳವಳದಲ್ಲಿ ಇದ್ದಾರೆ.ಮುಖ್ಯವಾಗಿ ದಕ್ಷಿಣ ಇಸ್ರೇಲ್‌ನ ಪಟ್ಟಣಗಳಲ್ಲಿ ಕೊಂಚ ಹೆಚ್ಚು ಭೀತಿ ಇದೆ, ಮಧ್ಯಭಾಗ ಪರವಾಗಿಲ್ಲ ಎನ್ನುವ ಸನ್ನಿವೇಶವಿದೆ. ದಕ್ಷಿಣ ಭಾಗದಲ್ಲಿನ ನಗರಗಳಲ್ಲಿ ಆಗಿಂದಾಗ್ಗೆ ಬಾಂಬ್, ಕ್ಷಿಪಣಿ ದಾಳಿ ನಡೆಯುತ್ತಿದೆ. ಅದರ ಮುನ್ನೆಚ್ಚರಿಕೆಯಾಗಿ ಆಗಾಗ ಸೈರನ್ ಮೊಳಗುತ್ತಿರುತ್ತದೆ. ನಾವು ಆಗ ಬಂಕರ್‌ಗೆ ಹೋಗಿ ಕುಳಿತುಬಿಡುತ್ತೇವೆ ಎಂದು ಮಂಗಳೂರು ಮೂಲದ ನಿವಾಸಿಗಳು ತಿಳಿಸಿದ್ದಾರೆ.
ಸದ್ಯ ಅಂಗಡಿಗಳು ತೆರೆದುಕೊಂಡಿವೆ. ಆದರೂ ಜನದಟ್ಟಣೆ ಇಲ್ಲ, ಬೀದಿಗಳು ಬಿಕೋ ಎನ್ನುತ್ತಿವೆ. ಕಳೆದ 14 ವರ್ಷದಲ್ಲೇ ಇಷ್ಟು ಭೀಕರ ದಾಳಿಯನ್ನು ನಾನು ಇಸ್ರೇಲ್‌ನಲ್ಲಿ ನೋಡಿಲ್ಲ. ಇಸ್ರೇಲ್ ಸರಕಾರದ ನಿರ್ದೇಶನವನ್ನು ನಾವು ಪಾಲಿಸುತ್ತಿದ್ದೇವೆ ಎಂದು ವಾಮಂಜೂರು ಮೂಲದ ಲೆನಾರ್ಡ್ ಫೆರ್ನಾಂಡಿಸ್ ಹೇಳುತ್ತಾರೆ.
ಮೂರು ದಿನ ಕಷ್ಟಕರ?
ಸದ್ಯ ಇಸ್ರೇಲ್‌ನಲ್ಲಿ ಕೇಳಿ ಬರುವ ಮಾಹಿತಿಗಳ ಪ್ರಕಾರ ಮುಂದಿನ ಮೂರು ದಿನಗಳು ತುಂಬಾ ಕಷ್ಟಕರ ಪರಿಸ್ಥಿತಿ ಇದೆ. ಅಂದರೆ ಅಮೆರಿಕ ಸೈನ್ಯವೂ ಇಸ್ರೇಲ್ ಪ್ರವೇಶಿಸಿದ್ದು ಹಮಾಸ್ ಹಾಗೂ ಇಸ್ರೇಲ್ ಮಧ್ಯೆ ಸಂಘರ್ಷ ಹೆಚ್ಚುವ ಸಾಧ್ಯತೆ ಇದೆ. ಅಲ್ಲದೆ ಕಳೆದೊಂದು ದಿನದಿಂದ ಸೈರನ್ ಸದ್ದು ಹೆಚ್ಚಾಗಿದೆ ಎಂದು ಬಂಟ್ವಾಳ ಮೂಲದ ಝೀನಾ ಪಿಂಟೊ ತಿಳಿಸಿದ್ದಾರೆ.
ದ.ಕ.: ಜಿಲ್ಲಾಡಳಿತಕ್ಕೆ 58 ಮಂದಿಯ ಮಾಹಿತಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಿಂದ ಇಸ್ರೇಲ್‌ಗೆ ತೆರಳಿರುವವರ ಕುಟುಂಬದವರು ಮಾಹಿತಿ ನೀಡುವಂತೆ ಸಹಾಯವಾಣಿ ಸಂಖ್ಯೆ ಕೊಡಲಾಗಿತ್ತು. ಇದುವರೆಗೆ ಅದಕ್ಕೆ 58 ಮಂದಿ ಸಂಪರ್ಕ ಮಾಡಿದ್ದಾರೆ, ಅವರ ಆತಂಕವನ್ನು ತೋಡಿಕೊಂಡಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ (ಪ್ರಭಾರ) ಡಾ| ಆನಂದ್ ಕೆ “ಉದಯವಾಣಿ’ಗೆ ತಿಳಿಸಿದ್ದಾರೆ.
ಬಹುತೇಕ ಕುಟುಂಬದವರು ಅವರ ಅಳಲು ತೋಡಿ ಕೊಂಡಿದ್ದಾರೆ, ಆದಷ್ಟು ಬೇಗನೆ ಇಸ್ರೇಲ್‌ನಿಂದ ತಮ್ಮ ವರನ್ನು ಕರೆದು ತರುವಂತೆ ಹೇಳುತ್ತಿದ್ದಾರೆ. ನಾವು ಇಲ್ಲಿ ಸಂಗ್ರಹವಾದ ಮಾಹಿತಿಯನ್ನು ರಾಜ್ಯ ಸರಕಾರಕ್ಕೆ ಕಳುಹಿಸು ತ್ತಿದ್ದೇವೆ. ಅಲ್ಲಿಂದ ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ.¬ ಮುಂದಿನ ಕ್ರಮವನ್ನು ಸರಕಾರಗಳು ಕೈಗೊಳ್ಳುತ್ತವೆ ಎಂದು ಅವರು ತಿಳಿಸಿದ್ದಾರೆ.
ಉಡುಪಿ ಮೂಲದ 40 ಮಂದಿಯ ಮಾಹಿತಿ ಲಭ್ಯ: ಜಿಲ್ಲಾಧಿಕಾರಿ
ಉಡುಪಿ: ಇಸ್ರೇಲ್‌ಲ್ಲಿರುವ ಉಡುಪಿಯ ನಾಗರಿಕರ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾಡಳಿತ ಕಂಟ್ರೋಲ್ ರೂಂ ಆರಂಭಿಸಿದ್ದು, ಈಗಾಗಲೇ ವಿವಿಧ ಭಾಗಗಳಿಂದ 40 ಮಂದಿ ಮಾಹಿತಿ ನೀಡಿದ್ದಾರೆ. ಅವರ ಪೋಷಕರು ನಿರಂತರ ಸಂಪರ್ಕದಲ್ಲಿದ್ದಾರೆ. ಇದುವರೆಗೂ ಜಿಲ್ಲೆಯ ಯಾರು ಕೂಡ ಸಂಕಷ್ಟದಲ್ಲಿಲ್ಲ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿರುವವರ ವಿವರಗಳನ್ನು ರಾಜ್ಯ ಸರಕಾರಕ್ಕೆ ದಿನಂಪ್ರತಿ ಸಲ್ಲಿಸಲಾಗುತ್ತಿದೆ. ಸದ್ಯಕ್ಕೆ ಜಿಲ್ಲೆಯಲ್ಲಿರುವ ಎಲ್ಲರೂ ಕ್ಷೇಮವಾಗಿದ್ದಾರೆ. ಜಿಲ್ಲೆಯ ಯಾರಾದರೂ ಇಸ್ರೇಲ್‌ನಲ್ಲಿದ್ದರೆ ಅವರ ಮಾಹಿತಿಯನ್ನು ಕಂಟ್ರೋಲ್ ರೂಂ ಸಂಖ್ಯೆ: 1077 ಹಾಗೂ 0820-2574802 ಅಥವಾ ಸರಕಾರದ ತುರ್ತು ಸಂಖ್ಯೆ: 080-22340676, 080- 22253707ಗೆ ಮಾಹಿತಿ ನೀಡಬಹುದು ಎಂದಿದ್ದಾರೆ.
ಈಗಾಗಲೇ ನೂರಾರು ಮಂದಿ ಉಡುಪಿಯವರು ಇಸ್ರೇಲ್‌ನಲ್ಲಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗುತ್ತಿದ್ದು, ಸದ್ಯಕ್ಕೆ 40 ಮಂದಿಯಷ್ಟೇ ಮಾಹಿತಿ ನೀಡಿದ್ದಾರೆ ಎಂದರು.
ಸಂಘರ್ಷ ಕೊನೆಯಾಗಲಿ: ಉಡುಪಿ ಬಿಷಪ್
ಉಡುಪಿ: ಇಸ್ರೇಲ್ -ಪ್ಯಾಲೆಸ್ತಿನ್ ಸಂಘರ್ಷ ಉಲ್ಬಣದ ಬಗ್ಗೆ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ ಕಳವಳ ವ್ಯಕ್ತ ಪಡಿಸಿದ್ದಾರೆ.
ಶೀಘ್ರ ಕದನ ವಿರಾಮ ಏರ್ಪಟ್ಟು ಯುದ್ಧದ ನಿಲುಗಡೆ ಮತ್ತು ಶಾಂತಿಯ ಮರು ಸ್ಥಾಪನೆಯಾಗಲಿ ಎಂದು ಹಾರೈಸಿದ್ದಾರೆ. ಜಿಲ್ಲೆ ಯ ಸುಮಾರು 5 ಸಾವಿರ ಮಂದಿ ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದು ಅವರು ಮತ್ತು ಅವರ ಕುಟುಂಬದ ಸದಸ್ಯರು ಭಯಭೀತರಾಗಿದ್ದಾರೆ. ಅವರ ಸುರಕ್ಷೆ ಮತ್ತು ಶಾಂತಿ ಸ್ಥಾಪನೆಗಾಗಿ ಎಲ್ಲರೂ ಪ್ರಾರ್ಥಿಸೋಣ ಎಂದು ತಿಳಿಸಿದ್ದಾರೆ.
ಸರಕಾರದ ರಕ್ಷಣೆ ಇದೆ: ಗೋಪಾಲಕೃಷ್ಣ
ಉಡುಪಿ: ಇಸ್ರೇಲ್‌ಗೆ ದಕ್ಷಿಣದಲ್ಲಿ ಹಮಾಸ್ ಮತ್ತು ಉತ್ತರದಲ್ಲಿ ಹಿಜ್ಜುಲ್ಲಾ ಉಗ್ರರಿಂದ ನಿರಂತರ ಬೆದರಿಕೆ ಇದೆ. ಆದರೆ ಇಸ್ರೇಲ್‌ನಲ್ಲಿರುವವರಿಗೆ ಸರಕಾರ ಎಲ್ಲ ರೀತಿಯ ರಕ್ಷಣೆ ನೀಡುತ್ತಿದೆ ಎನ್ನುತ್ತಾರೆ ಕಾಜರಗುತ್ತು ಗ್ರಾಮದ ಗೋಪಾಲಕೃಷ್ಣ. ಶನಿವಾರ ಇಲ್ಲಿ ದೊಡ್ಡ ಹಬ್ಬ ನಡೆಯುತ್ತಿತ್ತು. ಈ ವೇಳೆ ಉಗ್ರರು ದಾಳಿ ಮಾಡಿದ್ದಾರೆ. ಇಸ್ರೇಲ್‌ನ ಪ್ರತೀ ಮನೆಯ ಲ್ಲಿಯೂ ಐರನ್ ರೂಂ ಇದೆ. ಮೊಬೈಲ್ ಮೂಲಕವೂ ವಿವಿಧ ಪ್ರದೇಶಗಳ ಸ್ಥಿತಿಗತಿ ತಿಳಿಯಲು ಸಾಧ್ಯವಿದೆ ಎನ್ನುತ್ತಾರೆ ಗೋಪಾಲಕೃಷ್ಣ.
ಕಾಪುವಿನ 16 ಮಂದಿ ಸುರಕ್ಷಿತ
ಕಾಪು: ಇಸ್ರೇಲ್‌ನಲ್ಲಿ ಕಾಪು ತಾಲೂಕಿನ 16 ಆರು ಮಂದಿ ಇರುವ ಬಗ್ಗೆ ಮಾಹಿತಿ ದೊರಕಿದ್ದು ಸದ್ಯಕ್ಕೆ ಎಲ್ಲರೂ ಸುರಕ್ಷಿತವಾಗಿದ್ದಾರೆ.
ಮಣಿಪುರ ಮರ್ಣೆಯ ಅನಿತಾ ಪ್ರಮೀಳ ಕ್ವಾಡ್ರಸ್, ಶಂಕರಪುರದ ಲೋರಾ ಶೈಲ್ ಮಾರ್ಟಿಸ್, ದೆಂದೂರುಕಟ್ಟೆಯ ರೆಡೊನಾ ಶಲೋಮ್ ಅಮ್ಮನ್ನ, ಕಟಪಾಡಿ ಚೊಕ್ಕಾಡಿಯ ತೆರಾಲ್ ಡಿ’ಸೋಜಾ, ಮಣಿಪುರದ ಆ್ಯಂಟನಿ ರುಡಾಲ್ಫ್ ಸೊರಾಸ್, ಕಟಪಾಡಿಯ ವಿಲ್ಮಾ ಮಚಾದೋ, ಉಳಿಯಾರಗೋಳಿಯ ವಲಿಂದಾ ಮೇರಿ ಸೋನ್ಸ್, ಶಂಕರಪುರದ ದೇವದಾಸ ಶ್ರೀಧರ ಪ್ರಭು, ಮೂಡುಬೆಳ್ಳೆಯ ಶಾಲೆಟ್ ಪ್ರವೀಣ್ ಡಿ’ಸೋಜಾ, ಪಿಲಾರು ಹಲಸಿನಕಟ್ಟೆ ರೇಣುಕಾ, ಶಿರ್ವದ ಡೊರೊತಾ ಸುನೀತಾ ಡಿ’ಕುನ್ಹ, ಪಲಿಮಾರಿನ ಐರಿನ್ ಸಬಿತಾ, ಡಾಲ್ಪಿನ್ ಡಿ’ಸೋಜಾ, ವಿಕ್ಟರ್ ಡಿ’ಸೋಜಾ, ಮುದರಂಗಡಿಯ ಜೀವನ್ ಅಂದ್ರಾದೆ, ಮೂಡುಬೆಳ್ಳೆಯ ಲೀನಾ ಕ್ವಾಡ್ರಸ್ ಇಸ್ರೇಲ್‌ನಲ್ಲಿ ಉದ್ಯೋಗಿಗಳಾಗಿದ್ದಾರೆ.
ಇಸ್ರೇಲ್‌ನಲ್ಲಿ ಉದ್ಯೋಗಿಗಳಾಗಿರುವವರ ಮನೆಯವರ ಜತೆಗೆ ಪೊಲೀಸರು ಸಂಪರ್ಕ ಸಾಧಿಸಿ ಅವರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಪ್ರಸ್ತುತ ಎಲ್ಲರೂ ಕ್ಷೇಮವಾಗಿದ್ದಾರೆ ಎಂಬ ಮಾಹಿತಿ ದೊರಕಿದೆ.
ಶಿರ್ವ ಪರಿಸರದವರು ಸುರಕ್ಷಿತ
ಶಿರ್ವ: ಮಧ್ಯ ಇಸ್ರೇಲ್‌ನ ಹರ್ಜಿಲಿಯಾ ಪ್ರದೇಶದಲ್ಲಿ ಪಿಲಾರು, ಶಿರ್ವ, ಮೂಡುಬೆಳ್ಳೆ, ಶಂಕರಪುರ ಸಹಿತ ಕರಾವಳಿಯ 50ಕ್ಕೂ ಹೆಚ್ಚು ಮಂದಿ ಇದ್ದು ಸದ್ಯ ಎಲ್ಲರೂ ಸುರಕ್ಷಿತವಾಗಿದ್ದಾರೆ.
8 ವರ್ಷಗಳಿಂದ ಹರ್ಜಿಲಿಯಾದಲ್ಲಿ ಕೇರ್ ಟೇಕರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶಿರ್ವ ಸಮೀಪದ ಸೂಡದ ಆರಿÌನ್ ಲೋಬೋ ಉದಯವಾಣಿ ಜತೆ ಮಾತನಾಡಿ, ಗಡಿಭಾಗ ಗಾಜಾದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಮಧ್ಯ ಇಸ್ರೇಲ್‌ನಲ್ಲಿ ಮಧ್ಯಾಹ್ನ ಸೈರನ್ ಮೊಳಗಿದ್ದು, ಯಾವುದೇ ಅನಾಹುತ ಸಂಭವಿಸಲಿಲ್ಲ. ಅಪಾಯದ ಸಂದರ್ಭದಲ್ಲಿ ಸೈರನ್‌ಮೊಳಗುತ್ತದೆ ಆಗ ನಾವು ಜಾಗೃತರಾಗುತ್ತೇವೆ. ಇಲ್ಲಿರುವ ಹೆಚ್ಚಿನವರಿಗೆ ಊರಿನ ಪೊಲೀಸ್ ಇಲಾಖೆಯಿಂದ ಕರೆ ಬಂದಿದ್ದು, ಸುರಕ್ಷೆಯ ಬಗ್ಗೆ ವಿಚಾರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.