ನಡುಗಲ್ಲಿನ ಯೋಧನಿಗೆ ದೇಶ ಕಾಯುವುದೇ ಸಂಭ್ರಮ
Team Udayavani, Feb 2, 2018, 9:53 AM IST
ಹುಟ್ಟಿದ್ದು ಗ್ರಾಮೀಣ ಭಾಗದಲ್ಲಿ, ಕಾಯಕ ದೇಶದ ಗಡಿಯಲ್ಲಿ. ಕೃಷಿ ಕುಟುಂಬವಾದರೂ ಹೊನ್ನಪ್ಪ ಪಾಲ್ತಾಡಿ ಅವರನ್ನು ಸೆಳೆದಿದ್ದು ದೇಶ ಸೇವೆ. ಒಂದು ಬಾರಿಯಲ್ಲ ಮೂರು ಬಾರಿ ಸೋತರೂ ಛಲ ಬಿಡದೆ ಸೇನೆ ಸೇರಿದರು. ಕಾರ್ಗಿಲ್ ಯುದ್ಧದಲ್ಲೂ ಭಾಗಿಯಾದರು. ಕೂದಲೆಳೆಯ ಅಂತರದಿಂದ ಸಾವನ್ನು ಗೆದ್ದು ಬಂದರು.
ಸುಳ್ಯ : ದೇಶ ಕಾಯುವುದೆಂದರೆ ಒಂದು ದೊಡ್ಡ ಅವಕಾಶ. ಆದರೆ ನಮ್ಮ ಮೈಯೆಲ್ಲ ಕಣ್ಣಾಗಿದ್ದರೂ ಸಾಲದು ಎನ್ನುತ್ತಾರೆ ಯೋಧ ಹೊನ್ನಪ್ಪ ಪಾಲ್ತಾಡಿ.
ಪ್ರಸಂಗ ಒಂದು- 2004ನೇ ಇಸವಿ. ಶ್ರೀನಗರದ ಬಾಂಧಿಪುರ ಸೆಕ್ಟರ್‌ನಲ್ಲಿ ನಮ್ಮ ತಂಡ ಕಾರ್ಯ ನಿರತವಾಗಿತ್ತು. ಉಗ್ರರೂಪಿಗಳನ್ನು ಪತ್ತೆ ಹಚ್ಚುವುದೂ ನಮ್ಮ ಕೆಲಸವಾಗಿತ್ತು. ಇದೇ ಸಂದರ್ಭ ನಮ್ಮ ತಂಡ ಇದ್ದ ಬಳಿಯೇ ದಿಢೀರನೆ ಆತ್ಮಹತ್ಯಾ ಬಾಂಬ್ ದಾಳಿ ನಡೆಯಿತು. ದುರದೃಷ್ಟವಶಾತ್ ನನ್ನ ಜತೆ ಇದ್ದ ನಾಲ್ವರಿಗೆ ಗಾಯಗಳಾದವು. ನಾವೆಲ್ಲರೂ ಪ್ರಾಣಾಪಾಯದಿಂದ ಕೂದಲೆಳೆಯ ಅಂತರದಿಂದ ಪಾರಾಗಿದ್ದೆವು.
ಹೊನ್ನಪ್ಪ ಪಾಲ್ತಾಡಿ ತಮ್ಮ ಕುಟುಂಬದೊಂದಿಗೆ.
ತತ್‌ಕ್ಷಣವೇ ನಮ್ಮ ಮೆದುಳು ಜೋರಾಗಿ ಓಡತೊಡಗಿತು.ಮನಸ್ಸು ಈ ದಾಳಿಗೆ ಕಾರಣನಾದವ ಇಲ್ಲೇ ಎಲ್ಲೋ ಇದ್ದಾನೆ ಎಂದು ಹೇಳತೊಡಗಿತು. ಕಣ್ಣುಗಳು ಅವನನ್ನು ಹುಡುಕತೊಡಗಿದವು. ಕೆಲವೇ ಕ್ಷಣಗಳಲ್ಲಿ ದಾಳಿ ನಡೆಸಿದವ ಯಾರು ಎಂಬುದು ತಿಳಿಯಿತು. ಭಿಕ್ಷುಕನ ವೇಷದಲ್ಲಿ ಬಂದವ ಈ ಆತ್ಮಹತ್ಯಾದಾಳಿ ನಡೆಸಿದ್ದ. ಹೀಗೆ ಹೊನ್ನಪ್ಪ ಅವರು ಹಲವು ಪ್ರಸಂಗಗಳನ್ನು ವಿವರಿಸುತ್ತಾರೆ. ಇವು ಸೇನಾ ಸಿಬಂದಿಯ ಹೊಣೆಗಾರಿಕೆಯನ್ನಷ್ಟೇ ಹೇಳುವುದಿಲ್ಲ. ಜತೆಗೆ ಅವರ ತ್ಯಾಗವನ್ನೂ ಸಹ.
ಈ ನೆಲದ ರಕ್ಷಣೆ ನನಗೆ ಸಿಕ್ಕ ಅತ್ಯದ್ಭುತ ಅವಕಾಶ. ಅದನ್ನು ನೆರವೇರಿಸಲು ಮಳೆ, ಚಳಿ, ಬಿಸಿಲು ಯಾವುದೂ ಅಡ್ಡಿಯಾಗುವುದಿಲ್ಲ. ಇಡೀ ದೇಹಕ್ಕೆ ಭಾರತವೇ ಉಸಿರು ಎನ್ನುತ್ತಾರೆ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ನಡುಗಲ್ಲಿನ ಹೊನ್ನಪ್ಪ ಪಾಲ್ತಾಡು. 22 ವರ್ಷಗಳಿಂದ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಸಂಗ 2- ಆರ್‌ಎಸ್ ಪುರದಲ್ಲೂ ಗಸ್ತಿನಲ್ಲಿದ್ದಾಗ ಫೈರಿಂಗ್ ನಡೆಯಿತು. ಆಗಲೂ ಹೊನ್ನಪ್ಪ ಅವರನ್ನೊಳಗೊಂಡ ತಂಡ ಗಡಿಯಿಂದ ಹಿಂದಕ್ಕಿತ್ತು. ಗಡಿ ಬಳಿಯಿದ್ದ ಬಿಎಸ್‌ಎಫ್ ಯೋಧರು ಸಮರ್ಥ ಉತ್ತರ ನೀಡಿದರು. ಉಗ್ರರ ವಿರುದ್ಧ ಸೆಣಸಾಡುವಾಗ, ದೇಶವನ್ನು ಕಾಯುವಾಗ ಇಂಥ ಪ್ರಸಂಗಗಳು ಸಾಮಾನ್ಯ ಎನ್ನುತ್ತಾರೆ ಅವರು.
1996 ಜೂ. 26ರಂದು ಸೇನೆಗೆ ಸೇರಿದರು. ಕೃಷಿಕ ಕುಟುಂಬ. ಎಳವೆಯಲ್ಲೇ ಮೈದಳೆದಿದ್ದ ದೇಶ ಭಕ್ತಿ ಸೇನೆಯತ್ತ ಮನಸ್ಸು ಚಲಿಸುವಂತೆ ಮಾಡಿತು. ತನ್ನ ಅಣ್ಣ ಕೃಷ್ಣಪ್ಪ ಸೈನಿಕನಾದದ್ದು ಮತ್ತಷ್ಟು ಹುರುಪು ತುಂಬಿತು. ಸೇನೆಗೆ ಸೇರಲು ಮೂರು ಬಾರಿ ಪ್ರಯತ್ನಿಸಿ ವಿಫಲರಾದರೂ ನಿರಾಶಗೊಳ್ಳಲಿಲ್ಲ. ನಾಲ್ಕನೇ ಬಾರಿ ಪ್ರಯತ್ನಿಸಿ ಯಶಸ್ವಿಯಾದರು. ಆರಂಭದ ಒಂದು ವರ್ಷ ಬೆಂಗಳೂರಿನಲ್ಲಿ ತರಬೇತಿ ಮುಗಿಸಿ, ಅನಂತರ ದೇಶ ಸೇವೆಗೆ ನಿಯೋಜಿತರಾದರು.
ಕಾರ್ಗಿಲ್ ಕದನದಲ್ಲಿ ಭಾಗಿ
ಆರಂಭದಲ್ಲಿ ಅರುಣಾಚಲದ ಸಿಕ್ಕಿಂ ಸೇನಾ ಗಡಿಯಲ್ಲಿ ಸೇವೆ ಆರಂಭಿಸಿದ ಅವರು, ಅನಂತರ ಅಸ್ಸಾಂಗೆ ಈ ಪಯಣ. ಪಾಕಿಸ್ತಾನ ಮತ್ತು ಭಾರತದ ಗಡಿಭಾಗವಿರುವ ಜೈಪುರದಲ್ಲಿ ಕರ್ತವ್ಯ ನಿರ್ವಹಿಸಿದರು. ಈ ವೇಳೆ 1999 ರಲ್ಲಿ ಕಾರ್ಗಿಲ್ ಯುದ್ಧಕ್ಕೆ ನಿಯೋಜನೆಗೊಂಡರು. ಆ ಸಂದರ್ಭ ಸ್ಮರಣೀಯವಂತೆ. ಯುದ್ಧಭೂಮಿಯ ಸ್ಫೂರ್ತಿಯೇ ವಿಚಿತ್ರವಾದದ್ದು ಎನ್ನುತ್ತಾರೆ ಹೊನ್ನಪ್ಪ. ಅಲ್ಲಿಂದ ಮತ್ತೆ ಜಮ್ಮು ಕಾಶ್ಮೀರದ ಶ್ರೀನಗರ, ಮಧ್ಯಪ್ರದೇಶದ ಭೋಪಾಲ್, ಪಶ್ಚಿಮ
ಬಂಗಾಲ ಹೀಗೆ ವಿವಿಧ ಗಡಿಗಳಲ್ಲಿ ಕಾರ್ಯ ನಿರ್ವಹಿಸಿ ಈಗ ಪುಣೆಯಲ್ಲಿ ಕಾರ್ಯ ನಿರತರಾಗಿದ್ದಾರೆ.
ನಿವೃತ್ತ ಸೈನಿಕರ ಬದುಕಿಗೆ ಜಮೀನು ನೀಡಿದರೆ ಅನುಕೂಲ
ಮೂಲತಃ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ನಿವಾಸಿ ಆಗಿರುವ ಹೊನ್ನಪ್ಪ, ಪ್ರಸ್ತುತ ನಾಲ್ಕೂರು ಗ್ರಾಮದ ನಡುಗಲ್ಲಿನಲ್ಲಿ ವಾಸವಾಗಿದ್ದಾರೆ. ತಂದೆ, ಪತ್ನಿ, ಇಬ್ಬರು ಪುಟ್ಟ ಮಕ್ಕಳೊಂದಿಗೆ ಸಂಸಾರ ಸಾಗಿಸುತ್ತಿದ್ದಾರೆ.
ಸ್ವಲ್ಪ ಕೃಷಿ ಭೂಮಿ ಇದೆ. ಅಣ್ಣ ನಿವೃತ್ತ ಸೈನಿಕ ಕೃಷ್ಣಪ್ಪ. ಅವರು ಸುಳ್ಯದಲ್ಲಿ ವಾಸವಾಗಿದ್ದಾರೆ. ಸರಕಾರ ನಿಯಮ ಪ್ರಕಾರ ನಿವೃತ್ತ ಸೈನಿಕರಿಗೆ ನೀಡುವ ಜಮೀನು ಒದಗಿಸಿದರೆ, ನಮ್ಮಂತವರಿಗೆ ಅನುಕೂಲ. ಇದರಿಂದ ನಿವೃತ್ತಿ ಅನಂತರ ಬದುಕು ಸಾಗಿಸಲು ಸಹಾಯ ಆಗುತ್ತದೆ ಎನ್ನುವ ಅಭಿಪ್ರಾಯ ಹೊನ್ನಪ್ಪ ಅವರದ್ದು.
ಸುದಿನಕ್ಕೆ ಸಲಾಂ
ರಜೆ ಹಿನ್ನೆಲೆಯಲ್ಲಿ ಊರಿಗೆ ಬಂದಿರುವ ಹೊನ್ನಪ್ಪ ಗೌಡರು, ಸುದಿನ ಸೈನಿಕರ ಸಲಾಂ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಲೇಖನ ಓದುತ್ತಿದ್ದೇನೆ. ಇದೊಂದು ಉತ್ತಮ ಪ್ರಯತ್ನ. ಜಿಲ್ಲೆಯ ಯುವ ಸಮುದಾಯದಲ್ಲಿ ಸೈನಿಕರ ಬಗ್ಗೆ ಸ್ಫೂರ್ತಿ ತುಂಬಿಸುವ, ಜಾಗೃತಿ ಮೂಡಿಸುವುದು ಅಗತ್ಯವಿತ್ತು ಎಂದು ಹೇಳಿದರು.
ಮನೆಯಲ್ಲಿ ಒಬ್ಬರಾದರೂ ಸೈನಿಕರಿರಲಿ
ಉತ್ತರ ಪ್ರದೇಶ, ರಾಜಸ್ತಾನದ ಬಹುತೇಕ ಮನೆಗಳಲ್ಲಿ ಒಬ್ಬರಾದರೂ ಸೈನಿಕರಿರುತ್ತಾರೆ. ಕರ್ನಾಟಕದ ಕೊಡಗಿನಲ್ಲಿಯು ಅಂಥ ಸ್ಥಿತಿ ಇತ್ತು. ಈಗ ಅಲ್ಲಿಯು ಕಡಿಮೆ ಆಗಿದೆ. ದ.ಕ. ಜಿಲ್ಲೆಯಲ್ಲಿ ಸೇನೆ ಸೇರುವ ಬಗ್ಗೆ ಹೆಚ್ಚಿನ ಆಸಕ್ತರು ಕಾಣಿ ಸಿಗುತ್ತಿಲ್ಲ. ಇನ್ನಾದರೂ ಈ ಸ್ಥಿತಿ ಬದಲಾಗಬೇಕು.
– ಹೊನ್ನಪ್ಪ ಪಾಲ್ತಾಡು
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.