ಸಾಧನೆಗೆ ಸಂಗೀತದ ತಳ ಹದಿಯ ಬಗ್ಗೆ ತಿಳಿಯುವುದೂ ಬಹುಮುಖ್ಯ
Team Udayavani, Mar 15, 2018, 5:33 PM IST
ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಸ್ವರ ಮಾತ್ರ ಇದ್ದರೆ ಸಾಲದು. ಇದರ ಜತೆಗೆ ಸಂಗೀತದ ತಳಹದಿ ಕೂಡ ಮುಖ್ಯ ಎಂದು ಮಾತಿಗಿಳಿದ ಬಸ್ತಿಕಾರ್ ಕವಿತಾ ವಿಜಯ್ ಶೆಣೈ ಇವರು ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ, ಭಜನೆ ಕ್ಷೇತ್ರದಲ್ಲಿ ಗುರುತಿಸಿಕೊಂಡು ಅನೇಕರಿಗೆ ಕಲಿತ ವಿದ್ಯೆಯನ್ನು ಧಾರೆ ಎರೆಯುತ್ತಿದ್ದಾರೆ.
ಕೋಟೆಕಾರ್ ಶ್ರೀಧರ ಕಾಮತ್ ಮತ್ತು ವೇದಾವತಿ ಕಾಮತ್ ದಂಪತಿ ಪುತ್ರಿಯಾದ ಇವರಿಗೆ ಸಂಗೀತ ಕ್ಷೇತ್ರಕ್ಕೆ ಮನೆಯೇ ಮೊದಲ ಪಾಠ ಶಾಲೆ. ಬಾಲ್ಯದಿಂದಲೇ ಸಂಗೀತ ಕ್ಷೇತ್ರದಲ್ಲಿ ಕೃಷಿ ಮಾಡಿರುವ ಇವರು ಕಳೆದ 8 ವರ್ಷಗಳಿಂದ ಮಂಗಳೂರಿನ ಗಾಂಧೀನಗರದಲ್ಲಿ ಸ್ವರ ಸೇವಾ ಎಂಬ ಭಜನೆ, ಹಿಂದೂಸ್ತಾನಿ ಸಂಗೀತ ಮತ್ತು ಸ್ತೋತ್ರ ತರಗತಿಯನ್ನು ಕಲಿಸುತ್ತಿದ್ದಾರೆ. ನನ್ನ ಸಾಧನೆಯ ಹಿಂದೆ ಪತಿ ಬಸ್ತಿ ವಿಜಯ್ ಶೆಣೈ ಅವರು ಬೆಂಬಲವಾಗಿದ್ದಾರೆ ಎನ್ನುತ್ತಾರೆ ಕವಿತಾ.
ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹುಟ್ಟಿದ್ದು ಹೇಗೆ?
ಚಿಕ್ಕಂದಿನಿಂದಲೇ ನಾನು ಸಂಗೀತ ಕ್ಷೇತ್ರದ ಹಿನ್ನೆಲೆಯುಳ್ಳ ಕುಟುಂಬದಲ್ಲಿ ಬೆಳೆದಳು. ನನ್ನ ತಂದೆ ಕೋಟೇಶ್ವರದ ದೇವಸ್ಥಾನದಲ್ಲಿನ ಹಾಡುತ್ತಿದ್ದರು. ನಾನು ಕೂಡ ದೇವಸ್ಥಾನಕ್ಕೆ ತೆರಳುವ ವೇಳೆ ಸಂಗೀತ, ವಾದ್ಯಗಳನ್ನು ಕೇಳುತ್ತಿದ್ದೆ. ತನ್ನಿಂತಾನೆ ಹಾಡಲು ಆಸಕ್ತಿ ಹುಟ್ಟಿತು. ನನ್ನ ಸ್ವರ ಚೆನ್ನಾಗಿದ್ದರಿಂದ ಹೆತ್ತ ವರು ಸಂಗೀತ ಕಲಿಯಲು ಸೇರಿಸಿದರು.
ಇಂದಿನ ಕೆಲವು ಚಲನಚಿತ್ರ ಹಾಡುಗಳಿಂದ ಮೂಲ ಸಂಗೀತಕ್ಕೆ ಧಕ್ಕೆಯಾಗುತ್ತಿವೆಯೇ?
ಕೆಲ ವರ್ಷಗಳ ಹಿಂದೆ ಜನರು ಪಾಪ್ ಸಂಗೀತದತ್ತ ವಾಲಿದ್ದರು. ಆದರೆ ಇತ್ತೀಚೆಗೆ ಆ ಸಂಗೀತಕ್ಕೆ ಭವಿಷ್ಯವಿಲ್ಲ ಎಂದು ತಿಳಿದಿದೆ. ಪುನಃ ಮೂಲ ಸಂಗೀತದ ಕಡೆಗೆ ಬರುತ್ತಿದ್ದಾರೆ. ಈಗ ಕಾಲ ಬದಲಾಗಿದೆ. ಪೋಷಕರು ಮಕ್ಕಳಿಗೆ ಶಾಸ್ತ್ರೀಯ ಸಂಗೀತ ಕಲಿಸಲು ಉತ್ಸುಕರಾಗಿದ್ದಾರೆ. ಅದರಂತೆಯೇ ಮಕ್ಕಳು ಕೂಡ ಆಸಕ್ತಿ ತೋರುತ್ತಿದ್ದಾರೆ.
ಸ್ಪರ್ಧೆಗೋಸ್ಕರ ಮಾತ್ರ ಸಂಗೀತದ ಮೊರೆ ಹೋಗುತ್ತಿದ್ದಾರಲ್ಲ?
ಹೌದು .. ನಿಜ ರಿಯಾಲಿಟಿ ಶೋದಲ್ಲಿ ಹಾಡಬೇಕು. ಸ್ಪರ್ಧೆಯಲ್ಲಿ ಬಹುಮಾನ ಪಡೆಯಬೇಕು ಎಂಬ ಉದ್ದೇಶಕ್ಕೋಸ್ಕರ ಒಂದು ವಾರದಲ್ಲಿ ಸಂಗೀತ ಹೇಳಿಕೊಡಿ ಎಂದು ಪೋಷಕರು ಕೇಳುತ್ತಾರೆ. ಇದು ತಪ್ಪು. ಸಂಗೀತ ಕಲಿಯುವುದು ಎಂದರೆ ತಪಸ್ಸು. ಗಾಯಕರಿಗೆ ಸಂಗೀತದ ತಳಹದಿ ತಿಳಿಯದಿದ್ದರೆ ಯಾವ ರೀತಿ ಹಾಡಲು ಸಾಧ್ಯ?.
ಎಲ್ಲೆಲ್ಲ ಹಿಂದೂಸ್ತಾನಿ ಸಂಗೀತ ಪ್ರದರ್ಶನ ನೀಡಿದ್ದೀರಿ?
ಇಲ್ಲಿಯವರೆಗೆ ಸುಮಾರು 200ಕ್ಕೂ ಹೆಚ್ಚು ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದೇನೆ. ಅದರಲ್ಲಿಯೂ, ಮುಂಬಯಿ, ದೆಹಲಿ, ಹರಿದ್ವಾರ, ಹೈದರಾಬಾದ್, ಕೊಚ್ಚಿನ್, ಎರ್ನಾಕುಲಂ ಕೇರಳ, ಹುಬ್ಬಳ್ಳಿ, ಮೈಸೂರು, ಬೆಂಗಳೂರು, ಮಂಗಳೂರು ಸಹಿತ ರಾಜ್ಯ ಮತ್ತು ವಿವಿಧ ಹೊರ ರಾಜ್ಯಗಳಲ್ಲಿ ಪ್ರದರ್ಶನ ನೀಡಿದ್ದೇನೆ.
ನಿಮ್ಮ ಹಾಡಿನ ಧ್ವನಿ ಸುರಳಿ ಬಿಡುಗಡೆಯಾಗಿದೆಯೇ?
ಕಳೆದ ಕೆಲ ಸಮಯಗಳ ಹಿಂದೆ ‘ಶ್ರೀ ಸುಧೀಂದ್ರವಂದನ’ ಎಂಬ ಭಜನೆ ಹಾಡುಗಳುಳ್ಳ ಸಿ.ಡಿ. ಬಿಡುಗಡೆಯಾಗಿದೆ. ಇದರಲ್ಲಿ 4 ಭಜನೆ ಹಾಡನ್ನು ಹಾಡಿದ್ದೇನೆ. ಇನ್ನೇನು ಸದ್ಯದಲ್ಲಿಯೇ ಮಗದೊಂದು ಸಿ.ಡಿ. ಬಿಡುಗಡೆ ಮಾಡುವ ತಯಾರಿಯಲ್ಲಿದ್ದೇನೆ.
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.