ತುಂಬಿ ತುಳುಕುತ್ತಿದೆ ಕಸದ ತೊಟ್ಟಿ, ದುರ್ವಾಸನೆ
Team Udayavani, Aug 29, 2018, 11:15 AM IST
ಜಾಲ್ಸೂರು: ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ರಸ್ತೆಗಳ ಬದಿಯಲ್ಲಿ ಇಟ್ಟಿರುವ ತೊಟ್ಟಿಗಳಲ್ಲಿ ತ್ಯಾಜ್ಯಗಳು ಸುಮಾರು ಆರು ತಿಂಗಳಿಂದ ತುಂಬಿ ತುಳುಕುತ್ತಿದ್ದರೂ ವಿಲೇವಾರಿ ಮಾಡದಿರುವ ಕಾರಣ ಈ ಪರಿಸರದಲ್ಲಿ ದುರ್ವಾಸನೆ ಬರಲು ಆರಂಭಿಸಿದೆ. ಜಾಲ್ಸೂರಿಂದ ಕಾಸರಗೋಡು ಹೋಗುವ ಮಾರ್ಗದಲ್ಲಿ ಚೆಕ್ಕಿಂಗ್ ಗೇಟಿನಿಂದ 50 ಮೀ. ಅಂತರದಲ್ಲಿ ಕಸ ಹಾಕುವ ತೊಟ್ಟಿ ಇದೆ. ಅದು ತುಂಬಿ ಹೋಗಿರುವುದರಿಂದ ಮಳೆ ಬರುವಾಗ ಹೊಲಸು ನೀರು ಹೊರಗಡೆ ಬರುತ್ತದೆ. ಮಳೆ ಹೆಚ್ಚಾದಾಗ ತೊಟ್ಟಿಯ ಸಮೀಪವಿರುವ ಚರಂಡಿಯಲ್ಲಿ ನೀರು ತುಂಬಿ ರಸ್ತೆಗೆ ಹರಿಯುತ್ತದೆ. ಮಲಿನವಾದ ಪ್ರದೇಶಗಳಲ್ಲಿ ಗ್ರಾಮಸ್ಥರು ಹಾಗೂ ಮಕ್ಕಳು ಓಡಾಡುವುದರಿಂದ ಕಾಯಿಲೆಗೆ ತುತ್ತಾಗುವ ಅಪಾಯವಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸೊಳ್ಳೆಗಳ ಕಾಟವಿದೆ
ತ್ಯಾಜಗಳನ್ನು ವಿಲೇವಾರಿ ಮಾಡದ ಕಾರಣ ರಾತ್ರಿ ವೇಳೆ ಸೊಳ್ಳೆಗಳ ಕಾಟ ಅತಿಯಾಗಿದೆ. ಗ್ರಾಮಸ್ಥರ ಸುಖನಿದ್ರೆಗೆ ಅಡ್ಡಿಯಾಗುತ್ತಿದ್ದು, ಸೊಳ್ಳೆಗಳಿಂದ ಕಚ್ಚಿಸಿಕೊಂಡರೆ ಡೆಂಗ್ಯೂ, ಮಲೇರಿಯಾ ಮುಂತಾದ ಕಾಯಿಲೆಗಳೆಲ್ಲಿ ಬರುತ್ತವೋ ಎಂಬ ಆತಂಕವೂ ಕಾಡುತ್ತಿದೆ.
ಶೀಘ್ರ ವಿಲೇವಾರಿಗೆ ಆಗ್ರಹ
ಪಂಚಾಯತ್ ವ್ಯಾಪ್ತಿಯಲ್ಲಿ ಮೊದಲು ಒಂದಕ್ಕಿಂತ ಹೆಚ್ಚು ತೊಟ್ಟಿಗಳಿದ್ದವು. ಬಳಿಕ ಪೇಟೆಯಲ್ಲಿದ್ದ ತೊಟ್ಟಿಗಳನ್ನು ತೆರವುಗೊಳಿಸಿ ಒಂದನ್ನು ಮಾತ್ರ ಉಳಿಸಿತ್ತು. ತ್ಯಾಜ್ಯ ವಿಲೇವಾರಿಗೆ ಸರಿಯಾದ ವ್ಯವಸ್ಥೆಗಳಿಲ್ಲದೆ ಕಸವು ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದೆ. ತೊಟ್ಟಿಗಳು ತುಂಬಿದ್ದು, ಕಸವನ್ನು ಜನ ಮರಗಳ ಬುಡದಲ್ಲಿ ಎಸೆಯುತ್ತಿದ್ದಾರೆ. ಅಧಿಕಾರಿಗಳು ತತ್‌ಕ್ಷಣ ಕ್ರಮ ಕೈಗೊಂಡು, ತ್ಯಾಜ್ಯ ವಿಲೇವಾರಿ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಖಾಲಿ ಮಾಡುತ್ತೇವೆ
ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದೇವೆ; ತುಂಬಿ ಹೋಗಿರುವ ತೊಟ್ಟಿಯನ್ನು ಖಾಲಿ ಮಾಡಲಾಗುವುದು.
– ಶಶಿಕಲಾ
ಅಧ್ಯಕ್ಷೆ, ಜಾಲ್ಸೂರು ಗ್ರಾ.ಪಂ
ತೊಟ್ಟಿಗಳೆಲ್ಲ ತುಂಬಿದೆ
ಆರು ತಿಂಗಳಿಂದ ತ್ಯಾಜ್ಯ ವಿಲೇವಾರಿ ಮಾಡಿಲ್ಲ. ತೊಟ್ಟಿ ತುಂಬಿ ಹೋಗಿದೆ. ಆದಷ್ಟು ಬೇಗ ಇದನ್ನು ಖಾಲಿ ಮಾಡಬೇಕು.
- ಮಂಜುನಾಥ ಪ್ರಭು
ಸ್ಥಳೀಯರು
ಶಿವಪ್ರಸಾದ್ ಮಣಿಯೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.