![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Jul 1, 2019, 12:11 PM IST
ಮಂಗಳೂರು: ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು ರವಿವಾರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಆಗಮಿಸಿ ಲೋಕಸಭಾ ಚುನಾವಣೆ ಸಂದರ್ಭ ತನ್ನಿಂದ ಆದ ತಪ್ಪಿಗೆ ಕ್ಷಮಿಸುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೊದಲು ಪುರಭವನದಲ್ಲಿ ಮಾ. 25ರಂದು ನಡೆದಿದ್ದ ಕಾಂಗ್ರೆಸ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ಜನಾರ್ದನ ಪೂಜಾರಿ ಅವರು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಜಯ ಗಳಿಸದಿದ್ದರೆ ಗೋಕರ್ಣನಾಥ ಕ್ಷೇತ್ರಕ್ಕೆ ಹೋಗುವುದನ್ನು ನಿಲ್ಲಿಸುತ್ತೇನೆ. ಚರ್ಚ್, ಮಸೀದಿಗೂ ಹೋಗುವುದಿಲ್ಲ ಎಂದು ಹೇಳಿದ್ದರು. ಪೂಜಾರಿ ಅವರ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿ ಭಾರೀ ಸಂಚಲನ ಸೃಷ್ಟಿಸಿತ್ತು.
ರವಿವಾರ ಸಂಜೆ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರಕ್ಕೆ ದಿಢೀರ್ ಆಗಮಿಸಿದ ಪೂಜಾರಿಯವರು ಕ್ಷೇತ್ರಕ್ಕೆ ಪ್ರದಕ್ಷಿಣೆಗೈದು ಶ್ರೀ ಗೋಕರ್ಣನಾಥ ಹಾಗೂ ಪರಿವಾರ ದೇವರಿಗೆ ಪ್ರಾರ್ಥನೆ ಸಲ್ಲಿಸಿ ತನ್ನಿಂದ ತಪ್ಪು ಆಗಿದೆ. ನೀವು ನನ್ನನ್ನು ಕ್ಷಮಿಸಬೇಕು ಎಂದು ಬೇಡಿಕೊಂಡರು. ಈ ಮೂಲಕ ಸುಮಾರು ಮೂರು ತಿಂಗಳ ಬಳಿಕ ಪೂಜಾರಿಯವರು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದಾರೆ.
ಈ ಸಂದರ್ಭದಲ್ಲಿ ತನ್ನನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಪೂಜಾರಿಯವರು, ನಾನು ಜೀವನದಲ್ಲಿ ಮಾಡಿದ ದೊಡ್ಡ ತಪ್ಪು ಇದಾಗಿದೆ. ನಾನು ಹಾಗೆ ಹೇಳಬಾರದಿತ್ತು.ಇದಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇನೆ. ಯಾರೂ ಕೂಡ ಇಂತಹ ತಪ್ಪು ಮಾಡಬಾರದು. ನನ್ನ ತಪ್ಪಿಗೆ ಕ್ಷಮೆ ನೀಡುವಂತೆ ಬೇಡಿಕೊಳ್ಳಲು ದೇವರ ಬಳಿ ಬಂದಿದ್ದೇನೆ. ಹೀಗೆ ಮಾಡುವಂತೆ ಆದೇಶ ಬಂದ ಅನುಭವ ನನಗೆ ಆಯಿತು. ಆದರಂತೆ ಮಧ್ಯಾಹ್ನ ದಿಢೀರ್ ಈ ನಿರ್ಧಾರ ತೆಗೆದುಕೊಂಡು ಕೂಡಲೇ ಹೊರಟು ಬಂದಿದ್ದೇನೆ. ನನ್ನನ್ನು ಕ್ಷಮಿಸುವಂತೆ ಶ್ರೀ ಗೋಕರ್ಣನಾಥ ಹಾಗೂ ಪರಿವಾರ ದೇವರಲ್ಲಿ ಬೇಡಿಕೊಂಡಿದ್ದೇನೆ. ಆದೇ ರೀತಿ ಚರ್ಚ್, ಮಸೀದಿಯ ದೇವರಲ್ಲೂ ಕ್ಷಮೆ ಯಾಚಿಸುತ್ತೇನೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಕೂಡ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಜನಾರ್ದನ ಪೂಜಾರಿಯವರನ್ನು ಭೇಟಿಯಾದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ , ವಿಜಯ ಕುಮಾರ ಶೆಟ್ಟಿ, ಕಮಲಾಕ್ಷ ಸಾಲಿಯಾನ್, ಪುರುಷೋತ್ತಮ ಚಿತ್ರಾಪುರ, ಡಾ| ಬಿ.ಜಿ. ಸುವರ್ಣ, ಮೋಹನ ಶೆಟ್ಟಿ, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.