ಚರಂಡಿ ದುರಸ್ತಿಗೆ ಆಗ್ರಹ: ಅಧಿಕಾರಿಗಳಿಗೆ ಸೂಚನೆ
Team Udayavani, Jun 21, 2018, 12:13 PM IST
ಸುರತ್ಕಲ್: ಸುರತ್ಕಲ್ ಪಾಲಿಕೆ ಉಪ ಕಚೇರಿಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ| ವೈ.ಭರತ್ ಶೆಟ್ಟಿ ಅವರು ಬುಧವಾರ ಜರಗಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಕ್ಷೇತ್ರದ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಮೂಲಸೌಕರ್ಯ ನಿರ್ವಹಣೆ, ರಸ್ತೆ ಸಮಸ್ಯೆ ನಿವಾರಣೆ ಹಾಗೂ ಉದ್ಯೋಗಾವಕಾಶಗಳ ಸಹಿತ ಮನವಿಗಳ ಮಹಾಪೂರ ಸಾರ್ವಜನಿಕರಿಂದ ಹರಿದುಬಂತು. ರಾ.ಹೆ. 66ರ ಹೊಟೇಲ್ ಸೂರಜ್ ಇಂಟರ್‌ನ್ಯಾಶನಲ್‌ನ ವಸತಿ ಸಮುಚ್ಚಯದ ಬಳಿ ತೋಡಿನ ಮೇಲೆ ಕಾಂಕ್ರೀಟ್ ಹಾಕಿ ಮುಚ್ಚಲಾಗಿದ್ದು, ನೀರು ಸರಾಗವಾಗಿ ಹರಿಯದೆ ಕಾಶಿ ಮಠ ಸುತ್ತಮುತ್ತ ಮುಳುಗಡೆಯಾಗುತ್ತದೆ ಎಂಬ ದೂರಿನ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿ ಹೆದ್ದಾರಿ ಅಧಿಕಾರಿಗಳಿಗೆ ಸರಿಪಡಿಸುವಂತೆ ಸೂಚಿಸಿದರು.
ಕಟ್ಲ ಬಳಿ ತೋಡು ಕಿರಿದಾಗಿದ್ದು ಅಂಗಳದಲ್ಲಿ ನೀರು ನಿಲ್ಲುತ್ತಿದೆ ಎಂದು ಸಾರ್ವಜನಿಕರು ದೂರು ನೀಡಿ, ಪರಿಹಾರಕ್ಕೆ ಆಗ್ರಹಿಸಿದರು. ಅಲ್ಲದೇ ಕ್ಷೇತ್ರದಲ್ಲಿ ಹಲವು ಕಂಪೆನಿಗಳಿದ್ದು ಉದ್ಯೋಗದಲ್ಲಿ ಸ್ಥಳೀಯರಿಗೆ ಅವಕಾಶ ನೀಡಬೇಕೆಂಬ ಪದವೀಧರ ಯುವತಿಯರ ಮನವಿಗೆ ಶಾಸಕರು ಸ್ಪಂದಿಸಿ ಗುತ್ತಿಗೆ ಆಧಾರಿತ ಅವಕಾಶಗಳಿದ್ದಲ್ಲಿ ಶಿಫಾರಸ್ಸು ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಪೊರೇಟರ್‌ಗಳಾದ ಗಣೇಶ್ ಹೊಸಬೆಟ್ಟು, ಗುಣಶೇಖರ ಶೆಟ್ಟಿ, ಸುಮಿತ್ರಾ ಕರಿಯಾ, ಉಪವಿಭಾಗದ ಆಯುಕ್ತ
ರವಿಶಂಕರ್, ಜೆಇ ಖಾದರ್, ಕೃಷ್ಣಮೂರ್ತಿ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.
ಕೆರೆಯಂತಾದ ಕಾನ ಬಾಳ ರಸ್ತೆ!
ಸುರತ್ಕಲ್‌ನಿಂದ ಗಣೇಶಪುರಕ್ಕೆ ಹೋಗುವ ರಸ್ತೆ ಭಾಗಶಃ ಕೆರೆಯಂತಾಗಿದ್ದು ವಾಹನಗಳು ಚಲಿಸಲಾರದೆ ಬ್ಲಾಕ್ ಆಗು
ತ್ತಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾನ ಬಾಳ ಪೆಟ್ರೋಲ್ ಪಂಪ್ ಬಳಿ ಘನ ಟ್ಯಾಂಕರ್, ಟ್ರಕ್ ಓಡಾಟದಿಂದ ಬಹುತೇಕ ರಸ್ತೆ ಕೆಟ್ಟು ಹೋಗಿದೆ. ಎರಡೂ ಕಡೆಗಳಲ್ಲಿ ನೀರು ಹರಿವಿಗೆ ಚರಂಡಿ ಸಮರ್ಪಕವಾಗಿಲ್ಲದ ಕಾರಣ ನೀರು ರಸ್ತೆಯಲ್ಲಿಯೇ ನಿಂತು ಡಾಮರು ಎದ್ದು ಹೋಗಿ ಕೆರೆಯಂತಾಗಿದೆ. ಈಗ ಈ ರಸ್ತೆ ಲೋಕೋಪಯೋಗಿ ಇಲಾಖೆ ಅಧೀನಕ್ಕೆ ಬಂದಿರುವುದರಿಂದ ಪಾಲಿಕೆ ಏನೂ ಮಾಡುವಂತಿಲ್ಲ. ವಿಶೇಷ ಅನುದಾನದಿಂದ ತುರ್ತು ದುರಸ್ತಿ ಕಾರ್ಯ ಆಗಬೇಕಿದೆ ಎಂದು ಸ್ಥಳೀಯ ಕಾರ್ಪೊರೇಟರ್ ಗುಣಶೇಖರ ಶೆಟ್ಟಿ ಶಾಸಕರಲ್ಲಿ ಮನವಿ ಮಾಡಿಕೊಂಡರು.
58 ಕೋ. ರೂ. ವೆಚ್ಚದ ಚತುಷಥ ರಸ್ತೆ ನಿರ್ಮಾಣ
ಕಾನಾ ಬಾಳ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು ತುರ್ತು ದುರಸ್ತಿಯ ಅಗತ್ಯವಿದೆ. ತತ್‌ಕ್ಷಣ ಪಾಟ್ ಹೋಲ್ ಮುಚ್ಚಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಭಾಗದಲ್ಲಿ 58 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ. ಇದಕ್ಕೆ ಸಮಯ ತಗುಲಲಿರುವುದರಿಂದ ತತ್‌ಕ್ಷಣ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಹೆದ್ದಾರಿ ಬದಿ ಚರಂಡಿ ಸಮರ್ಪಕವಾಗಿ ಮಾಡುವಂತೆ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.