ಜಪ್ಪು ಸಿಎಸ್‌ಐ ಕಾಂತಿ ಚರ್ಚ್: ಮಳೆಕೊಯ್ಲು ವಿಶೇಷ ಮಾಹಿತಿ ,ಪ್ರಾತ್ಯಕ್ಷಿಕೆ
"ಮನೆ ಮನೆಗೆ ಮಳೆಕೊಯ್ಲು' ಉದಯವಾಣಿ ಅಭಿಯಾನದ ಯಶಸ್ಸು
Team Udayavani, Jul 29, 2019, 5:06 AM IST
ಮಹಾನಗರ: “ಉದಯವಾಣಿ’ಯ “ಮನೆ ಮನೆಗೆ ಮಳೆ ಕೊಯ್ಲು ಅಭಿಯಾನ ಯಶಸ್ವಿಯಾಗಿ ಮುಂದುವರಿಯುತ್ತಿದ್ದು, ಹಲವಾರು ಮಂದಿ ತಮ್ಮ ಮನೆಗಳಲ್ಲಿ ಮಳೆ ಕೊಯ್ಲು ವ್ಯವಸ್ಥೆಯನ್ನು ಅಳವಡಿಸುತ್ತಿದ್ದಾರೆ. ಇದರೊಂದಿಗೆ ಸಂಘ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳೂ ಈ ಬಗ್ಗೆ ಜಾಗೃತಿ ಅಭಿಯಾನವನ್ನು ನಡೆಸುತ್ತಿವೆ.
ರವಿವಾರ ಜಪ್ಪು ಸಿಎಸ್‌ಐ ಕಾಂತಿ ದೇವಾಲಯದಲ್ಲಿ ಉದಯವಾಣಿ ಸಹಯೋಗದಲ್ಲಿ “ಮಳೆ ಕೊಯ್ಲು’ ಕುರಿತಂತೆ ವಿಶೇಷ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನಡೆಯಿತು.
ಬೆಳಗ್ಗೆ ರವಿವಾರದ ಆರಾಧನಾ ಕಾರ್ಯಕ್ರಮ ಮುಗಿದ ಬಳಿಕ ಚರ್ಚ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲಾºವಿ ಅವರು ಮಳೆ ಕೊಯ್ಲು ಕುರಿತಂತೆ ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ನೀಡಿದರು. ವಿವಿಧ ಮಳೆ ಕೊಯ್ಲು ವಿಧಾನಗಳ ವಿವರ ನೀಡಿದರು.
ಸಿಎಸ್‌ಐ ಕಾಂತಿ ಚರ್ಚ್‌ನ ಸಭಾ ಪಾಲಕರಾದ ರೆ| ಎಬನೇಝರ್ ಜತ್ತನ್ನ ಅವರು ಸ್ವಾಗತಿಸಿ ಪ್ರಸ್ತಾವನೆಗೈದರು. ಸಭಾ ಪರಿಪಾಲನಾ ಸಮಿತಿಯ ಸದಸ್ಯರಾದ ಶೈಲಾ ಜೇಮ್ಸ್ ಕಾರ್ಯಕ್ರಮ ನಿರ್ವಹಿಸಿ ಶೀಲಾ ಮಾರ್ಗರೆಟ್ ವಂದಿಸಿದರು.
ಮೊದಲು ಮಾಹಿತಿ; ಬಳಿಕ ಮಳೆ ಕೊಯ್ಲು ಅಳವಡಿಕೆ
ಮಳೆಕೊಯ್ಲು ಬಗ್ಗೆ ನಮಗೆ ಹೆಚ್ಚು ಮಾಹಿತಿ ಇರಲಿಲ್ಲ. ಹಾಗಾಗಿ ಇವತ್ತು ಚರ್ಚ್‌ನಲ್ಲಿ ಮಾಹಿತಿ ಕಾರ್ಯಕ್ರಮ ಏರ್ಪಡಿಸಿ ಚರ್ಚ್‌ನ ಸದಸ್ಯರಿಗೆ ಮತ್ತು ಪರಿಸರದ ಜನರಿಗೆ ಮಳೆ ಕೊಯ್ಲು ಕುರಿತಾಗಿ ತಿಳಿವಳಿಕೆ ನೀಡುವ ಪ್ರಯತ್ನವನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಚರ್ಚ್ ಕಟ್ಟಡಕ್ಕೆ ಸಂಬಂಧಿಸಿ ಮಳೆ ಕೊಯ್ಲು ಮಾಡಲಾಗುವುದು. ಚರ್ಚ್ ಆವರಣದಲ್ಲಿ ಬಾವಿ ಇದ್ದು, ಚರ್ಚ್ ಛಾವಣಿಯ ನೀರನ್ನು ಬಾವಿಗೆ ಬಿಡಲು ವ್ಯವಸ್ಥೆ ಮಾಡಲಾಗುವುದು ಎಂದು ಸಭಾ ಪಾಲಕರಾದ ವಂ| ಎಬನೇಝರ್ ಜತ್ತನ್ನ ಅವರು ತಿಳಿಸಿದರು.
ಹನಿ ನೀರು ಅಮೂಲ್ಯ
ನಮ್ಮಲ್ಲಿ ನೀರಿನ ಬಗ್ಗೆ ತಾತ್ಸಾರ ಮನೋಭಾವ ಇದೆ. ಅದು ಸಲ್ಲದು. ಪ್ರತಿ ಹನಿ ಹನಿ ನೀರು ಅಮೂಲ್ಯ. ಮಳೆ ನೀರನ್ನು ಹಿಡಿದಿಟ್ಟು ಅದನ್ನು ಬಾವಿ, ಕೊಳವೆ ಬಾವಿ, ಇಂಗು ಗುಂಡಿಗಳಿಗೆ ಹೋಗುವಂತೆ ಮಾಡುವುದಲ್ಲದೆ ಇರುವ ನೀರನ್ನು ಮಿತವಾಗಿ ಬಳಸುವುದನ್ನು ನಾವು ಕಲಿಯ ಬೇಕು. ಈ ದಿಶೆಯಲ್ಲಿ ನಾವು ಇದುವರೆಗೆ ಹೊಂದಿದ್ದ ಮನಸ್ಥಿತಿಯನ್ನು ಬದಲಾಯಿಸ ಬೇಕಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಕಲಾºವಿ ಹೇಳಿದರು.
ನಿರ್ಮಿತಿ ಕೇಂದ್ರದ ಮೂಲಕ 2004ರಿಂದ ಮಳೆ ಕೊಯ್ಲು ಬಗ್ಗೆ ತರಬೇತಿ ನೀಡುತ್ತಾ ಬಂದಿದ್ದೇವೆ. ಈ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಉದಯವಾಣಿ ಆರಂಭಿಸಿದ ಮಳೆ ಕೊಯ್ಲು ಅಭಿಯಾನದಿಂದ ವ್ಯಾಪಕ ಜಾಗೃತಿ ಮೂಡಿದೆ. ಹಾಗಾಗಿ ಈಗ ಜನರು ಎಚ್ಚತ್ತುಕೊಂಡಿದ್ದಾರೆ ಎಂದು ವಿವರಿಸಿದರು.
ಬಾಟಲಿ ನೀರು ಅರ್ಧ ಕುಡಿದು ಎಸೆಯದಿರಿ
ಸಭೆ ಸಮಾರಂಭಗಳಲ್ಲಿ ಬಾಟಲಿ ನೀರು ಕೊಡುವುದು ಈಗೀಗ ಸಾಮಾನ್ಯ. ಆದರೆ ಬಹುತೇಕ ಜನರು ಈ ಬಾಟಲಿಗಳಲ್ಲಿನ ನೀರನ್ನು ಪೂರ್ತಿ ಕುಡಿಯುವುದಿಲ್ಲ. ಅರ್ಧ ಕುಡಿದು ಎಸೆಯುತ್ತಾರೆ. ಇದರಿಂದ ಬಹಳಷ್ಟು ನೀರು ವ್ಯರ್ಥವಾಗುತ್ತದೆ. ಹಾಗಾಗಿ ಬಾಟಲಿ ನೀರನ್ನು ಅರ್ಧ ಕುಡಿದು ಎಸೆಯುವ ಬದಲು ಆ ಉಳಿದ ಬಾಟಲಿ ನೀರನ್ನು ಮನೆಗೆ ಕೊಂಡೊಯ್ಯ ಬೇಕು. ಸಂಪೂರ್ಣ ನೀರನ್ನು ಕುಡಿದು ಮುಗಿಸಿದ ಬಳಿಕವೇ ಬಾಟಲಿ ಎಸೆಯ ಬೇಕು ಎಂದು ರಾಜೇಂದ್ರ ಕಲಾºವಿ ಅವರು ಸಲಹೆ ಮಾಡಿದರು.
ಮಳೆಕೊಯ್ಲು ಅಭಿಯಾನಕ್ಕೆ ಓದುಗರ ಸ್ಪಂದನೆ
ಸಾಮಾಜಿಕ ಜವಾಬ್ದಾರಿ “ಉದಯ ವಾಣಿ’ ಮಳೆ ಕೊಯ್ಲು ಅಭಿಯಾನವನ್ನು ಪರಿಚಯಿ ಸುತ್ತಿದ್ದಂತೆ, ಈಗ ಜಾಗೃತಿಯು ಅನುಷ್ಠಾನ ಹಂತವಾಗಿ ಮಾರ್ಪಟ್ಟಿದೆ. ಸಾಮಾಜಿಕ ಜವಾಬ್ದಾರಿಯಾಗಿ, “ಉದಯವಾಣಿ’ ನೀರನ್ನು ಸಂರಕ್ಷಿಸುವ ಅದ್ಭುತ ಕಾರ್ಯವನ್ನು ಮಾಡಿದೆ.
-ರಾಜೇಶ್ ಕೋಟ್ಯಾನ್,ಎಚ್.ಆರ್. ಹೆಡ್, ಎನ್ವಾಯ್ ಮಾರ್ಟ್‌ಗೇಜ್ ಇಂಡಿಯಾ
“ಉದಯವಾಣಿ’ಗೆ ಧನ್ಯವಾದ
ನೀರು ಪೋಲು ಮಾಡದಂತೆ ಮತ್ತು ಮಳೆ ನೀರನ್ನು ಹೇಗೆ ಸಂರಕ್ಷಣೆ ಮಾಡಬೇಕೆಂದು “ಮನೆಮನೆಗೆ ಮಳೆಕೊಯ್ಲು’ ಅಭಿಯಾನದ ಮೂಲಕ ತಿಳಿಸಿಕೊಟ್ಟ “ಉದಯವಾಣಿ’ಗೆ ಧನ್ಯವಾದಗಳು.
-ತೇಜಾಕ್ಷಿ ಕೆ., ಉರ್ವಸ್ಟೋರ್
ನೀವೂ ಅಳವಡಿಸಿ, ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ
ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ. “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.