ಉದಯವಾಣಿ ಅಭಿಯಾನ: ಮಂಗಳೂರು ಭಾಗ ನೈಋತ್ಯ ರೈಲ್ವೇಗೆ ಸೇರ್ಪಡೆ; ಇನ್ನೆಷ್ಟು ಸಮಯ ಕಾಯಬೇಕು ?
Team Udayavani, Nov 23, 2020, 6:25 AM IST
ಸಾಂದರ್ಭಿಕ ಚಿತ್ರ
ಕರಾವಳಿ ವ್ಯಾಪ್ತಿಯ ರೈಲು ಜಾಲ ಮೂರು ವಿಭಾಗಗಳಲ್ಲಿ ಹಂಚಿಹೋಗಿರುವುದರಿಂದ ಸಂಕಟಗಳು ಒಂದೆರಡಲ್ಲ. ರೈಲು ಸಂಚಾರ ಹೆಚ್ಚಳ, ಹೊಸ ರೈಲು ಆರಂಭ, ಅಭಿವೃದ್ಧಿ ಕಾರ್ಯಗಳಿಗೆ ಸಮನ್ವಯದ ಕೊರತೆ – ಹೀಗೆ ಹಲವಾರು. ಇವೆಲ್ಲದಕ್ಕೆ ಒಂದೇ ಪರಿಹಾರ – ಮಂಗಳೂರು ರೈಲ್ವೇ ಸಂಕೀರ್ಣವನ್ನು ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವುದು. ಮೊದಲಿಗೆ ಇದು ನಡೆದರೆ ಆ ಬಳಿಕ ಮುಂದೆ ಮಂಗಳೂರನ್ನು ಪ್ರತ್ಯೇಕ ವಿಭಾಗವಾಗಿ ರೂಪಿಸುವುದು ಸಾಧ್ಯವಾಗಬಲ್ಲುದು.
ಮಂಗಳೂರು: ಈಗ ಸದ್ಯಕ್ಕೆ ಪ್ರಮುಖವಾಗಿ ಕೇಳಿಬರುತ್ತಿರುವ ಬೇಡಿಕೆ ಎಂದರೆ ಮಂಗಳೂರು ವ್ಯಾಪ್ತಿ ಕೊನೇ ಪಕ್ಷ ನೈಋತ್ಯ ವಿಭಾಗಕ್ಕಾದರೂ ಸೇರಲಿ ಎಂಬುದು. ಮೂರು ವಿಭಾಗ ಗಳಲ್ಲಿ ಹರಿದು ಹಂಚಿ ಹೋಗಿ ಸಂಕಷ್ಟ ಅನುಭವಿಸುವುದಕ್ಕಿಂತ, ಒಂದೇ ವಿಭಾಗ ದಲ್ಲಾದರೂ ಇದ್ದರೆ ಸೌಲಭ್ಯಗಳು ಸಿಗ ಬಹುದೆಂಬ ಆಲೋಚನೆ ಕರಾವಳಿಗ ರದ್ದು. ಆಡಳಿತಾತ್ಮಕವಾಗಿಯೂ ಒಂದು ವಿಭಾಗದಲ್ಲಿ ಇರುವುದರಿಂದ ಮತ್ತಷ್ಟು ರೈಲು ಸೇವೆ ಲಭ್ಯವಾಗುವ ಸಾಧ್ಯತೆ ಹೆಚ್ಚು.
ಪ್ರಸ್ತುತ ದಕ್ಷಿಣ ರೈಲ್ವೇ ವಲಯದ ಪಾಲ್ಗಾಟ್ ವಿಭಾಗದಡಿ ಬರುವ ಮಂಗಳೂರು ರೈಲ್ವೇ ವ್ಯಾಪ್ತಿ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೇವಲ ಆದಾಯ ಗಳಿಕೆಗಷ್ಟೇ ಒತ್ತು ನೀಡಲಾಗಿದೆ. ಆದರೆ ಕರಾವಳಿಗರು ರೈಲ್ವೇ ಸೌಲಭ್ಯ ಕೇಳಿದಾಗಲೆಲ್ಲ ರೈಲ್ವೇ ಇಲಾಖೆಯಿಂದ ಸಿಗುತ್ತಿರುವುದು ಜಾಣ ಮೌನದ ಉತ್ತರ. ಪ್ರಸ್ತುತ ಮಂಗಳೂರು ಸೆಂಟ್ರಲ್ (ಹಂಪನಕಟ್ಟೆ) ಮತ್ತು ಮಂಗಳೂರು ಜಂಕ್ಷನ್ (ಪಡೀಲ್-ಕಂಕನಾಡಿ) ನಿಲ್ದಾಣ ಗಳು ದಕ್ಷಿಣ ರೈಲ್ವೇಯ ಪಾಲಾ^ಟ್ ವಿಭಾಗ ದಲ್ಲಿ ಹಾಗೂ ತೋಕೂರು ಕೊಂಕಣ ರೈಲ್ವೇಯ ಅಧೀನದಲ್ಲಿವೆ.
ಪಡೀಲ್‌ನಿಂದ ಹಾಸನ ಭಾಗ ನೈಋತ್ಯ ರೈಲ್ವೇಯ ಮೈಸೂರು ವಿಭಾಗದ ಅಧೀನದಲ್ಲಿ ಬರುತ್ತದೆ. ಇದರಿಂದಾಗಿ ಇಲ್ಲಿ ರೈಲ್ವೇ ಇಲಾಖೆಗೆ ಸಂಬಂಧಪಟ್ಟಂತೆ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಬೇಕಾದರೆ ದಕ್ಷಿಣ ರೈಲ್ವೇ, ನೈಋತ್ಯ ರೈಲ್ವೇ ಮತ್ತು ಕೊಂಕಣ ರೈಲ್ವೇಯ ನಡುವೆ ಸಮನ್ವಯ ಅಗತ್ಯವಿರುತ್ತದೆ. ಆದರೆ ಪ್ರತೀ ವಿಭಾಗವೂ ತನ್ನ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಕಾರಣ ಕರಾವಳಿಗರಿಗೆ ನಷ್ಟವಾಗುತ್ತಿದೆ.
ಮಂಗಳೂರಿನಿಂದ ಹೊಸ ರೈಲುಗಳ ಪ್ರಾರಂಭ, ಇತರ ಕಡೆಗಳಿಂದ ಮಂಗಳೂರಿಗೆ ಹೊಸ ರೈಲುಗಳ ಆರಂಭದ ವಿಚಾರ ಬಂದಾಗೆಲ್ಲ ಮೂರೂ ವಿಭಾಗಗಳ ಅನುಮತಿ ಬೇಕಾಗುತ್ತದೆ. ರೈಲುಗಳ ವೇಳಾಪಟ್ಟಿಯ ಸಮಸ್ಯೆಯೂ ಇದೆ. ವಿಭಾಗಗಳ ನಡುವಣ ಸಮನ್ವಯದ ಕೊರತೆಯಿಂದ ಕರಾವಳಿಗರ ಸಂಚಾರಕ್ಕೆ ಅನುಕೂಲಕರವಾದ ವೇಳಾಪಟ್ಟಿ ದೊರೆಯುತ್ತಿಲ್ಲ. ಸಣ್ಣಪುಟ್ಟ ತಾಂತ್ರಿಕ ಕಾರಣಗಳ ಸಬೂಬುಗಳಿಂದಾಗಿಯೇ ಕರಾವಳಿ ಭಾಗದ ಜನರು ಹೊಸ ರೈಲು ಸೇವೆಯಿಂದ ಪದೇ ಪದೆ ವಂಚಿತರಾಗುತ್ತಿದ್ದಾರೆ.
ಮಂಗಳೂರು ಭಾಗವು ಮೂರು ರೈಲ್ವೇ ವಿಭಾಗಗಳಿಗೆ ಹಂಚಿ ಹೋಗಿರುವುದರಿಂದ ರೈಲು ಪ್ರಯಾಣಿಕರೇ ಅಲ್ಲದ ಜನಸಾಮಾನ್ಯರಿಗೂ ತೊಂದರೆಗಳಿವೆ. ಮಂಗಳೂರು ನಗರ ಮಾತ್ರವಲ್ಲದೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೈಲು ಪಟ್ಟಿ ಹಾದುಹೋಗಿರುವಲ್ಲೆಲ್ಲ ನಡೆಯುವ ರಸ್ತೆ, ಅಂಡರ್‌ಪಾಸ್, ಓವರ್‌ಬ್ರಿಡ್ಜ್ ಮುಂತಾದ ಅಭಿವೃದ್ಧಿ ಕಾಮಗಾರಿಗಳಿಗೆ ರೈಲ್ವೇಯ ಅನುಮತಿ ಅಥವಾ ನಿರಾಕ್ಷೇಪಣ ಪತ್ರ ಪಡೆಯುವಲ್ಲಿ ಸಮಸ್ಯೆ ಅಥವಾ ವಿಳಂಬ ಎದುರಾಗುತ್ತಿದೆ. ಕಣ್ಣಿಗೆ ರಾಚುವ ಉದಾಹರಣೆ ಎಂದರೆ, ಉಡುಪಿಯಿಂದ ಶಿವಮೊಗ್ಗ ಸಂಪರ್ಕಿಸುವ ರಸ್ತೆ ಹೆದ್ದಾರಿಯಾಗಿ ಚತುಷ್ಪಥ ಕಾಮಗಾರಿ ಪೂರ್ಣಗೊಂಡು ವರ್ಷವಾದರೂ ಇಂದ್ರಾಳಿಯ ರೈಲು ಸೇತುವೆ ಈಗಲೂ ಅಗಲ ಕಿರಿದಾಗಿಯೇ ಇದೆ.
ನೈಋತ್ಯ ವಲಯಕ್ಕೆ ಸೇರ್ಪಡೆಯಿಂದಾಗುವ ಅನುಕೂಲಗಳು
1. ಮಂಗಳೂರು ಭಾಗ ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗುವುದರಿಂದ ಆಡಳಿತಾತ್ಮಕವಾಗಿ ಕರ್ನಾಟಕದ ಬಹುತೇಕ ರೈಲ್ವೇ ಜಾಲ ಹೊಂದಿರುವ ನೈಋತ್ಯ ವಲಯಕ್ಕೆ ಸೇರಿಕೊಂಡು ಒಂದೇ ವ್ಯವಸ್ಥೆಯಡಿ ಬರುತ್ತದೆ. ಇದರಿಂದ ರೈಲ್ವೇ ಸೌಲಭ್ಯಗಳಿಗೆ ಸಂಬಂಧಪಟ್ಟಂತೆ ಇತರ ವಿಭಾಗಗಳ ಜತೆ ಸಮನ್ವಯದ ಸಮಸ್ಯೆ ನಿವಾರಣೆಯಾಗುತ್ತದೆ.
2. ಮಂಗಳೂರು ನೈಋತ್ಯ ರೈಲ್ವೇಗೆ ಸೇರಿದರೆ ಅದು ನೈಋತ್ಯ ರೈಲ್ವೇಯ ಆರಂಭಿಕ ನಿಲ್ದಾಣವಾಗಿ ಕರಾವಳಿಗರ ಉಪಯೋಗಕ್ಕೆ ಬರುವಂತೆ ರೈಲುಗಳನ್ನು ವಿವಿಧೆಡೆಗೆ ಆರಂಭಿಸಲು ಅನುಕೂಲವಾಗುತ್ತದೆ. ಪ್ರಸ್ತುತ ಯಾವುದೇ ಆಡಳಿತಾತ್ಮಕ ಸಮಸ್ಯೆಗಳಾದಲ್ಲಿ ಚೆನ್ನೈಯಲ್ಲಿರುವ ದಕ್ಷಿಣ ರೈಲ್ವೇ ವಲಯದ ಆಡಳಿತ ಕಚೇರಿಗೆ ಹೋಗಬೇಕು. ನೈಋತ್ಯ ರೈಲ್ವೇಯ ಮುಖ್ಯ ಕಚೇರಿ ಹುಬ್ಬಳ್ಳಿಯಲ್ಲಿದ್ದು, ಸಂಪರ್ಕ ಸಾಧಿಸಲು ಸುಲಭ.
3. ಇನ್ನೊಂದು ಪ್ರಮುಖ ಅಂಶವೆಂದರೆ ಮಂಗಳೂರಿನಲ್ಲಿ ಇಂಟರ್ ಸಿಟಿ, ಮೆಟ್ರೋ ರೈಲು ಸಂಚಾರದ ಪ್ರಸ್ತಾವಗಳಿವೆ. ಈ ದಿಶೆಯಲ್ಲೂ ಮಂಗಳೂರು ಪ್ರದೇಶ ಒಂದು ರೈಲ್ವೇ ವ್ಯವಸ್ಥೆಯಡಿ ಒಟ್ಟುಗೂಡುವುದು ಅವಶ್ಯ. ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗುವುದರಿಂದ ರೈಲ್ವೇ ಸಂಪರ್ಕದಲ್ಲಿ ಮಂಗಳೂರು ಇನ್ನೂ ಹೆಚ್ಚು ವೈಶಾಲ್ಯ ಹೊಂದಲು ಅವಕಾಶ ಸಿಗುವುದು.
4. ನಿರ್ಧಾರಾತ್ಮಕ ಪ್ರಕ್ರಿಯೆಗಳು ಕೂಡ ವೇಗವನ್ನು ಪಡೆಯುತ್ತವೆ. ಅಂದರೆ ಚಾಲನೆಯಲ್ಲಿರುವ ರೈಲುಗಳ ಸಂಚಾರದಲ್ಲಿ ಆವಶ್ಯಕ ಬದಲಾವಣೆ, ಮಂಗಳೂರಿನಿಂದ ಬೆಂಗಳೂರು ಸಹಿತ ರಾಜ್ಯ ಮತ್ತು ದೇಶದ ಇತರ ಭಾಗಗಳಿಗೆ ಹೊಸ ರೈಲುಗಳನ್ನು ಆರಂಭಿಸಲು ಸುಲಭವಾಗುತ್ತದೆ.
5. ರೈಲು ನಿಲ್ದಾಣಗಳಲ್ಲಿ ವಿವಿಧ ಸೌಲಭ್ಯಗಳಿಗಾಗಿ ಗುತ್ತಿಗೆ ನೀಡುವಿಕೆ ಮಂಗಳೂರಿನಲ್ಲಿ ನಿರ್ಧಾರವಾಗುತ್ತದೆ. ಇದರಿಂದ ಸ್ಥಳೀಯರಿಗೆ ಹೆಚ್ಚು ಉದ್ಯೋಗಾವಕಾಶ ಸಾಧ್ಯ.
6. ರಸ್ತೆ, ಅಂಡರ್‌ಪಾಸ್, ಓವರ್‌ಬ್ರಿಡ್ಜ್ ಮುಂತಾದ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮತಿಗಾಗಿ ದೂರದ ಪಾಲಾ^ಟನ್ನು ಆಶ್ರಯಿಸುವ ಪ್ರಸಂಗ ಉದ್ಭವಿಸುವುದಿಲ್ಲ.
7. ಮಂಗಳೂರು ಭಾಗದ ಪ್ರಮುಖ ರೈಲು ನಿಲ್ದಾಣಗಳ ಸಮಗ್ರ ಅಭಿವೃದ್ಧಿ, ಆಧುನಿಕ ಸೌಲಭ್ಯಗಳ ಅಳವಡಿಕೆ ಮತ್ತಿತರ ವಿಚಾರಗಳಲ್ಲಿಯೂ ಈ ಬದಲಾವಣೆಯು ಪೂರಕ.
ಈ ಎಲ್ಲ ಅಂಶಗಳನ್ನು ಪರಿಗಣಿಸಿ ಮಂಗಳೂರು ರೈಲ್ವೇ ಪ್ರದೇಶ ಪ್ರಸ್ತುತ ಎದುರಿಸುತ್ತಿರುವ ತ್ರಿಶಂಕು ಸ್ಥಿತಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಬಲ ಕಾರ್ಯಯೋಜನೆ ಆಗಬೇಕಾಗಿದೆ. ಇದು ನೈಋತ್ಯ ರೈಲ್ವೇಗೆ ಸೇರ್ಪಡೆ ಅಥವಾ ಪ್ರತ್ಯೇಕ ವಿಭಾಗ ರಚನೆಯ ರೂಪದಲ್ಲಾದರೂ ಆಗ
ಬಹುದು. ಒಟ್ಟು ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕು ಎಂಬುದು ಈ ಭಾಗದ ಜನರ ಆಗ್ರಹ.
ಭವಿಷ್ಯದ ವಿಭಾಗ ರಚನೆಗೂ ಪೂರಕ
ಮಂಗಳೂರು ಭಾಗದ ತೋಕೂರು ಮತ್ತು ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣವನ್ನು ಒಳಗೊಂಡ ಮಂಗಳೂರು ಸಂಕೀರ್ಣವನ್ನು ನೈಋತ್ಯ ರೈಲ್ವೇಯ ಮೈಸೂರು ವಿಭಾಗಕ್ಕೆ ಜೋಡಿಸುವುದು ಭವಿಷ್ಯದಲ್ಲಿ ಮಂಗಳೂರು ರೈಲ್ವೇ ವಿಭಾಗದ ರಚನೆಗೂ ಪೂರಕ. ಪ್ರಥಮವಾಗಿ ಈ ಭಾಗ ಮೈಸೂರು ವಿಭಾಗಕ್ಕೆ ಹಸ್ತಾಂತರವಾಗಬೇಕು. ನೈಋತ್ಯ ರೈಲ್ವೇ ವ್ಯಾಪ್ತಿಗೆ ಸೇರಿದ ಬಳಿಕ ಮೈಸೂರಿನಂತೆ ಮಂಗಳೂರನ್ನು ಕೂಡ ಪ್ರತ್ಯೇಕ ರೈಲ್ವೇ ವಿಭಾಗವಾಗಿ ರಚಿಸುವ ಪ್ರಕ್ರಿಯೆ ಸುಲಭವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.