ಮೊದಲ ಮತದಾನದ ಪುಳಕ
Team Udayavani, Apr 5, 2018, 3:08 PM IST
ಮೊದಲ ಮತದಾನವೆಂದರೆ ಸಾವಿರ ಪುಳಕಗಳ ಮೇಳ. ಬೆರಳ ಮೇಲೆ ತಿಂಗಳುಗಟ್ಟಲೆ ಕೂರುವ ಶಾಯಿಯ ಕಲೆ ಜತೆಗೆ ಸರತಿಯಲ್ಲಿ ನಿಂತು ಕೈಯಲ್ಲೊಂದು ಐಡಿ ಹಿಡಿದು ಇಷ್ಟಿಷ್ಟೇ ಭಯದಲ್ಲಿ ವೋಟು ಒತ್ತಿ ಬರುವವರನ್ನು ಕಂಡಾಗೆಲ್ಲ, ನಮ್ಮದು ಯಾವಾಗ ಹದಿನೆಂಟು ತುಂಬುತ್ತದೋ ಎಂದು ತಹತಹಿಸಿದರೇ ಹೆಚ್ಚು.
ಮತದಾನದ ಲಿಸ್ಟ್‌ನಲ್ಲಿ ಹೆಸರು ಬರೆಸುವಾಗಲೇ ಆರಂಭವಾಗುತ್ತದೆ ವೋಟಿನ ಪುಳಕದ ಮೊದಲ ಕಂತು. ಲಿಸ್ಟ್‌ನಲ್ಲಿ ಹೆಸರು, ಅದರ ಜತೆ ಜತೆಯಲ್ಲೇ ಸಿಗುವ ಕಪ್ಪು ಬಿಳುಪಿನ ಎಪಿಕ್ ಕಾರ್ಡ್. ಅದರಲ್ಲಿರುವುದು ನಾನೇನಾ ಅನ್ನುವಷ್ಟು ಗುಮಾನಿ ಬರುವ ನಮ್ಮದೇ ಚಿತ್ರ. ಸೆಲ್ಫಿಯಲ್ಲಿ ಕಂಡು ಬಂದ ಚಂದ ಯಾಕೋ ಇಲ್ಲಿ ಕೈಕೊಟ್ಟಿದೆ ಎಂದು ನಮ್ಮ ಮೇಲೆ ನಮಗೇ ಸಣ್ಣ ಅಸಹನೆ.
ಕುತೂಹಲಗಳ ಮೇಲೆ ಕುತೂಹಲ. ಹೀಗೆಯೇ ವೋಟ್ ಮಾಡಬೇಕು ಅಂತಕಾಲೇಜಿನಲ್ಲಿ, ಬಸ್ಟ್ ನಿಲ್ದಾಣಗಳಲ್ಲಿ ನೀಡುವ ಮಾಹಿತಿಗಳು ನಮ್ಮನ್ನು ಇನ್ನಷ್ಟು ಕೆರಳಿಸುತ್ತವೆ. ಯಾರಿಗೆ ವೋಟ್ ಮಾಡಬೇಕು ಎಂಬುದರ ಬಗ್ಗೆ ತೀರದ ಗೊಂದಲ. ಆಮಿಷಗಳು ನಮ್ಮನ್ನು ಕಾಡುವಾಗ ಮೊದಲ ಬಾರಿಗೆ ಆ ಕಡೆಗೊಂದು ಅಸಹ್ಯ ಮೂಡುತ್ತದೆ. ವೋಟು, ವಗೈರೆಯ ಒಳಗಿನ ಬದುಕು ಹೀಗೂ ಇದೆಯಾ ಅನಿಸುತ್ತದೆ. ಅವೆಲ್ಲವನ್ನೂ ಮೀರಿ ನಿಲ್ಲು ಅನ್ನುತ್ತದೆ ಒಳಗಿನ ಹರೆಯ. ಅದಕ್ಕೆ ವ್ಯವಸ್ಥೆ ಬಿಡುತ್ತದಾ? ಗೊತ್ತಿಲ್ಲ. ದ್ವಂದ್ವಗಳಿಗಿಂತ ಕ್ಲಿಯರ್ ಆಗಿ ಇರುವುದರ ಕಡೆ ಮನಸ್ಸು ನೆಡಬೇಕು ಅನಿಸುತ್ತದೆ. ಅದಕ್ಕಾದರೂ ಅವಕಾಶ ಕೊಟ್ಟರೆ ಅಷ್ಟು ಸಾಕು. ಮತದಾನದ ಒಳ್ಳೆ ಆರಂಭ ಮುಂದಿನ ಒಳ್ಳೆಯ ದಿನಗಳಿಗೆ ಸಾಕ್ಷಿಯಾಗಲಿ ಎಂಬುದು ನಮ್ಮ ಅಭಿಲಾಷೆ.
ಜವಾಬ್ದಾರಿಯನ್ನೂ ಮೀರಿದ ಕೂತೂಹಲ ಮೊದಲ ವೋಟಿಗಿದೆ. ಅವತ್ತಿನ ದಿನ ಸಿನೆಮಾಗೊ, ಪಾರ್ಟಿಗೊ ಹೋಗುವಂತೆ ತಯಾರಾಗಬೇಕು ಅನಿಸುತ್ತೆ. ಪರ್ಸ್‌ನಲ್ಲಿ ಐಡಿ ಕಾರ್ಡ್ ಬಂದು ಕೂರುತ್ತೆ. ಒಳಗೆ ಏನು ಕೇಳಬಹುದು? ಯಾರೆಲ್ಲ ಇರ್ತಾರೆ? ವೋಟ್ ಒತ್ತುವಾಗ ಏನಾದರೂ ಆಗಿಬಿಟ್ರೆ? ಹಾಕಿದ ಶಾಹಿಯನ್ನು ಜೋಪಾನವಾಗಿ ಉಳಿಸಿಕೊಳ್ಳಬೇಕು. ಶಾಯಿ ಮೆತ್ತಿದ ಬೆರಳಿನೊಂದಿಗೆ ಒಂದು ಸೆಲ್ಫಿ ತೆಗೆದುಕೊಂಡು ಅದನ್ನು ಫೇಸ್ ಬುಕ್ ನಲ್ಲಿ ಹಾಕಿ ಜಾಸ್ತಿ ಲೈಕ್ ಗಿಟ್ಟಿಸಬೇಕು. ನನ್ನ ಮೊದಲ ಮತದಾನವನ್ನು ಸಂಭ್ರಮಿಸಬೇಕು. ಶಾಯಿ ಮೆತ್ತಿದ ಬೆರಳನ್ನು ಕಿರಿಯರಿಗೆ ತೋರಿಸಿ ಅವರ ಕಣ್ಣುಗಳಲ್ಲಿ ಬೆರಗು ಮೂಡಿಸಬೇಕು.
ಇದನ್ನೊಂದು ಸಿಹಿ ನೆನಪಾಗಿ ಉಳಿಸಿಕೊಳ್ಳಬೇಕು. ನಾನು ದೊಡ್ಡವನಾಗಿ ಬಿಟ್ಟೆ ಅಂತ ಅಪ್ಪ- ಅಮ್ಮನಿಗೆ ಹೇಳಬೇಕು, ಇನ್ನಾದರೂ ಚುನಾವಣೆಯೆಂದರೆ ದುಡ್ಡಿನಿಂದ ಆಗುವುದಲ್ಲ, ಜಾತಿಯಿಂದ ಗೆಲ್ಲುವುದಲ್ಲ ಅದು ವ್ಯಕ್ತಿತ್ವದಿಂದ ಗೆಲ್ಲುವಂಥದ್ದು ಎಂಬುದನ್ನು ನವ ಮತದಾರನಾಗಿ ನಾನು ಸಾರಿ ಹೇಳಬೇಕು… ಎಂಬಿತ್ಯಾದಿ ಕನವರಿಕೆಗಳ ಒಟ್ಟು ಹೂರಣವೇ ಮೊದಲ ಮತದಾನ.
ಸದಾಶಿವ್ ಸೊರಟೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.