ಕಡಬ: ರೈತ ಸಂಘದಿಂದ ಜನಜಾಗೃತಿ ಸಮಾವೇಶ
Team Udayavani, Nov 1, 2017, 5:01 PM IST
ಕಡಬ: ರೈತ ತಾನು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾನೆ. ರೈತರ ಕೃಷಿ ಉತ್ಪನ್ನಗಳ ಉತ್ಪಾದನೆ ವೆಚ್ಚದ ಒಂದೂವರೆ ಪಟ್ಟು ಹೆಚ್ಚು ದರ ಸಿಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಅವರು ಆಗ್ರಹಿಸಿದ್ದಾರೆ.
ಅವರು ಕಡಬದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ರೈತರ ಕುಮ್ಕಿ ಜಮೀನಿನ ವಿಚಾರ, ರೈತರ ಸಾಲ ಮನ್ನಾ, ಕಸ್ತೂರಿ ರಂಗನ್ ವರದಿ ಇತ್ಯಾದಿ ವಿಚಾರಗಳನ್ನು ಮುಂದಿಟ್ಟುಕೊಂಡು ಜರಗಿದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.
ಯಾವ ಸರಕಾರಗಳು ಅಧಿಕಾರಕ್ಕೆ ಬಂದರೂ ರೈತರ ಸಮಸ್ಯೆಗಳು ಕಡಿಮೆಯಾಗಿಲ್ಲ . ಸಂಘಟನೆ, ಹೋರಾಟ
ಜೀವಂತವಾಗಿ ಇಲ್ಲದಿದ್ದರೆ ರೈತರು ಜೀವಂತ ಇರುವುದಿಲ್ಲ. ಇಂದು ಕೃಷಿ ಚಟುವಟಿಕೆಗೆ ಮಾಡಿದ ಸಾಲವನ್ನು ಅದರಲ್ಲಿಯೇ ತೀರಿಸಲು ಸಾಧ್ಯವಿಲ್ಲ . ಈ ವಿಚಾರ ಸರಕಾರಗಳಿಗೆ ಅರ್ಥವಾಗಿದ್ದರೂ ಪರಿಹರಿಸಲು ಮಾತ್ರ ಯಾವ ಸರಕಾರಗಳೂ ಮುಂದೆ ಬರುತ್ತಿಲ್ಲ. ರೈತರ ಉತ್ಪಾದನೆ ವೆಚ್ಚದ ಒಂದೂವರೆ ಪಟ್ಟು ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್ ಮಾತನಾಡಿ, ಸರಕಾರ ರೈತರ ಕುಮ್ಕಿ ಹಕ್ಕನ್ನು ಕಸಿದುಕೊಳ್ಳಬಾರದು. ಜನವಿರೋಧಿಯಾಗಿರುವ ಕಸ್ತೂರಿ ರಂಗನ್ ವರದಿ ಜಾರಿಯಾಗಬಾರದು. ಈ ಬಗ್ಗೆ ನಾವು ಸಂಘಟಿತರಾಗಿ ಹೋರಾಟ ಮಾಡಬೇಕು ಆಗ ಮಾತ್ರ ನಮ್ಮ ಬೇಡಿಕೆ ಈಡೇರಲು ಸಾಧ್ಯ. ನಾವು ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದಾಗ ತುಂಬಾ ಭರವಸೆ ಇಟ್ಟುಕೊಂಡಿದ್ದೆವು. ಆದರೆ ಅವರು ಶ್ರೀಮಂತ ಉದ್ಯಮಿಗಳ
ಪರವಾಗಿದ್ದಾರೆಯೇ ಹೊರತು ಬಡ ರೈತರ ಪರವಾಗಿ ಇಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ. ರೈತರ ಸಂಕಷ್ಟ ನಿವಾರಿಸುವ ಬದಲು ದೊಡ್ಡ ದೊಡ್ಡ ಉದ್ಯಮಿಗಳ ಸಾಲಗಳನ್ನು ಮಾಡುವ ಮೂಲಕ ಜನರ ವಿಶ್ವಾಸಕ್ಕೆ ದ್ರೋಹ ಎಸಗಿದ್ದಾರೆ ಎಂದರು.
ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಈಶ್ವರ ಭಟ್ ಬಡಿಲ, ಉದ್ಯಮಿ ಕೆ.ಟಿ. ಥಾಮ್ಸನ್ ಪ್ರಮುಖರಾದ ಶಶಿಧರ್,
ಸಜಿತ್ ಅಬ್ರಹಾಂ, ಜೋಕಿಂ ರೋಡ್ರಿಗಸ್, ಚಂದ್ರಶೇಖರ ಗೌಡ ಕೋಡಿಬೈಲು , ಜನಾರ್ದನ ಗೌಡ ಪಣೆಮಜಲು
ಮೊದಲಾದವರು ಉಪಸ್ಥಿತರಿದ್ದರು.
ಸಮಿತಿ ರಚನೆ
ಕಡಬ ತಾಲೂಕು ರೈತ ಸಂಘದ ಹಸಿರು ಸೇನೆಯ ಸಮಿತಿಯನ್ನು ರಚಿಸಿ ಅಧ್ಯಕ್ಷರಾಗಿ ವಿಕ್ಟರ್ ಮಾರ್ಟಿಸ್ ಹಳ್ಳಂಗೇರಿ, ಉಪಾಧ್ಯಕ್ಷರಾಗಿ ಸಜಿತ್ ಅಬ್ರಹಾಂ, ಪ್ರಧಾನ ಕಾರ್ಯದರ್ಶಿಯಾಗಿ ಜೋಕಿಂ ರೋಡ್ರಿಗಸ್, ಜತೆ ಕಾರ್ಯದರ್ಶಿಯಾಗಿ ಪದ್ಮನಾಭ ಗೌಡ ಅವರನ್ನು ಆಯ್ಕೆ ಮಾಡಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.