ಕಡಬ ಪಟ್ಟಣ್ಣ ಪಂಚಾಯತ್‌ಗೆ ಪ್ರಸ್ತಾವನೆ
Team Udayavani, Feb 17, 2018, 10:54 AM IST
ಕಡಬ : ಗ್ರಾಮ ಪಂಚಾಯತ್ ಆಗಿರುವ ಕಡಬವನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಬೇಕೆಂಬ ಬೇಡಿಕೆಗೆ ಇದೀಗ ಮತ್ತಷ್ಟು ಬಲ ಬಂದಂತಾಗಿದೆ. ಹೊಸ ತಾಲೂಕುಗಳ ಕೇಂದ್ರ ಸ್ಥಾನದಲ್ಲಿರುವ ಪಂಚಾಯತ್ ಗಳನ್ನು ಪಟ್ಟಣ ಪಂಚಾಯತ್ ಆಗಿ ಉನ್ನತೀಕರಿಸಲು ಸರಕಾರ ಮುಂದಾಗಿದೆ.
ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಸೂಚನೆಯಂತೆ ಈ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಸರಕಾರದ ಗ್ರೀನ್ ಸಿಗ್ನಲ್ ಸಿಕ್ಕಿ, ಕಡಬಕ್ಕೆ ಪಟ್ಟಣ ಪಂಚಾಯತ್ ಸ್ಥಾನಮಾನ ಲಭಿಸಿದರೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮೂಲಭೂತ ಸೌಕರ್ಯಗಳ ಒದಗಣೆಗೆ ಹೆಚ್ಚಿನ ಅನುದಾನಗಳು ಲಭಿಸಲಿವೆ.
ಪ್ರಸ್ತಾವನೆ ಸಲ್ಲಿಕೆ
ಕಡಬ ಮತ್ತು ಕೋಡಿಂಬಾಳ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ 18.70 ಚದರ ಕಿ.ಮೀ. (5629.67 ಎಕರೆ) ಭೌಗೋಳಿಕ ವಿಸ್ತೀರ್ಣ, 2011ರ ಜನಗಣತಿಯಲ್ಲಿ 9,546 ಜನಸಂಖ್ಯೆ ಹೊಂದಿರುವ ಕಡಬ ಗ್ರಾ.ಪಂ.ನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಬೇಕೆಂದು ಈ ಹಿಂದೆ ವಿನಯಕುಮಾರ್ ಸೊರಕೆ ಅವರು ರಾಜ್ಯದ ನಗರಾಭಿವೃದ್ಧಿ ಸಚಿವರಾಗಿದ್ದ ವೇಳೆ ಅವರನ್ನು ಭೇಟಿಯಾಗಿದ್ದ ಸ್ಥಳೀಯ ಕಾಂಗ್ರೆಸ್ ಮುಖಂಡರ ನಿಯೋಗವು ಮನವಿ ಸಲ್ಲಿಸಿತ್ತು.
ಇದೀಗ ಸರಕಾರವೇ ಕಡಬ ಗ್ರಾ.ಪಂ. ಅನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲು ಪಂಚಾಯತ್ ನಿಂದ ಪೂರಕ ಅಂಶಗಳ ವರದಿ ಕೇಳಿದೆ. ಗ್ರಾ.ಪಂ. ವ್ಯವಸ್ಥೆಯಿಂದ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಲು 10 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಅಗತ್ಯ. ಪ್ರಸ್ತುತ ಜನಗಣತಿಯಾಗಿ 7 ವರ್ಷಗಳು ಕಳೆದಿರುವುದರಿಂದ ಜನಸಂಖ್ಯೆ ಶೇ. 11 ರಷ್ಟು ಹೆಚ್ಚಿರಬಹುದೆಂದು ಅಂದಾಜಿಸಿ, 1,050 ಹೆಚ್ಚುವರಿ ಜನಸಾಂದ್ರತೆಯನ್ನು ನಮೂದಿಸಿ ಈಗಿನ ಜನಸಂಖ್ಯೆ 10,596 ಎಂದು ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ.
ಇತರ ಪೂರಕ ಅಂಶಗಳು
ಸರಕಾರದಿಂದ ತಾಲೂಕು ಕೇಂದ್ರವಾಗಿ ಗುರುತಿಸಲ್ಪಟ್ಟಿರುವ ಪ್ರಸ್ತಾವಿತ ಪಟ್ಟಣ ಪಂಚಾಯತ್ ವ್ಯಾಪ್ತಿಯ ಭೌಗೋಳಿಕ ವಿಸ್ತೀರ್ಣದ ಶೇ. 55 (3060.57 ಎಕರೆ) ಭಾಗ ಕೃಷಿಯೇತರ ಚಟುವಟಿಕೆಯ ಭೂಮಿಯಾಗಿದ್ದು, ಶೇ. 45 (2569.10 ಎಕರೆ) ಭಾಗ ಕೃಷಿ ಚಟುವಟಿಕೆಯ ಭೂಮಿಯಾಗಿದೆ.
ಪಂಚಾಯತ್ ಸ್ವಾಮ್ಯದ ವಾಣಿಜ್ಯ ಸಂಕೀರ್ಣಗಳು, ಖಾಸಗಿ ಸ್ವಾಮ್ಯದ ವಾಣಿಜ್ಯ ಸಂಕೀರ್ಣ ಗಳು, 5 ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳು, ವಾರದ ಸಂತೆ, 2 ಪೆಟ್ರೋಲ್ ಪಂಪ್ ಗಳು, ಸಭಾಭವನಗಳು, ವಿವಿಧ ಸಹಕಾರಿ ಸಂಘಗಳು, ಕೃಷಿ ಪತ್ತಿನ ಸಹಕಾರಿ ಸಂಘ, ಭೂ ಅಭಿವೃದ್ಧಿ ಬ್ಯಾಂಕ್ ಶಾಖೆ, ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು, ರೈಲು ನಿಲ್ದಾಣ, ಮೊಬೈಲ್ ಟವರ್ ಗಳು, ಸಮುದಾಯ ಆರೋಗ್ಯ ಕೇಂದ್ರ ತಹಶೀಲ್ದಾರರ ಕಚೇರಿ, ಸುಸಜ್ಜಿತ ರಸ್ತೆ ಸಂಪರ್ಕ ಇತ್ಯಾದಿಗಳನ್ನು ಪಟ್ಟಣ ಪಂಚಾಯತ್‌ಗೆ ಪೂರಕ ಅಂಶಗಳಾಗಿ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.
ಮಾಹಿತಿ ಒದಗಿಸಲಾಗಿದೆ
ಪ್ರಸ್ತಾವನೆ ಸಲ್ಲಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು, ಗಡಿ ಗುರುತು ಹಾಗೂ ಭೂಮಾಪನ ಇಲಾಖೆಯ ವರದಿಗಳನ್ನು ಸೇರಿಸಿ ಪಂಚಾಯತ್‌ಗೆ ಒದಗಿಸಲಾಗಿದೆ. ಪ್ರಸ್ತಾವನೆಯನ್ನು ಪರಿಶೀಲಿಸಿ ಸರಕಾರ ಕ್ರಮ ಕೈಗೊಳ್ಳಲಿದೆ.
-ಜಾನ್‌ಪ್ರಕಾಶ್ ರೋಡ್ರಿಗಸ್,
ಕಡಬ ತಹಶೀಲ್ದಾರ್
ಪ್ರಸ್ತಾವನೆ ಕಳುಹಿಸಲಾಗಿದೆ
ಕಡಬವನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲು ಪೂರಕವಾಗಿರುವ ಅಂಶಗಳನ್ನು ದಾಖಲಿಸಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಪ್ರಸ್ತಾವನೆಯನ್ನು ಕಳುಹಿಸಿಕೊಡಲಾಗಿದೆ. ಮುಂದಿನ ಪ್ರಕ್ರಿಯೆಗಳು ಸರಕಾರದ ಮಟ್ಟದಲ್ಲಿ ನಡೆಯಬೇಕಿದೆ.
– ಚೆನ್ನಪ್ಪ ಗೌಡ ಕಜೆಮೂಲೆ,
ಪಿಡಿಒ, ಕಡಬ ಗ್ರಾ.ಪಂ.
ನಾಗರಾಜ್ ಎನ್. ಕೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.