ತಾತ್ಕಾಲಿಕ ಮಳಿಗೆ ಕಾಮಗಾರಿ ಶುರು
Team Udayavani, Oct 17, 2018, 10:36 AM IST
ಮಹಾನಗರ: ನಗರದ ಕದ್ರಿಯಲ್ಲಿರುವ ಸುಮಾರು 40 ವರ್ಷಗಳ ಹಳೆಯ ಹಾಗೂ ಶಿಥಿಲಾವಸ್ಥೆಯಲ್ಲಿರುವ ಹಳೆ ಮಾರುಕಟ್ಟೆ ಕಟ್ಟಡವನ್ನು ಕೆಡವಿ, ಸುಮಾರು 14.71 ಕೋ.ರೂ. ವೆಚ್ಚದಲ್ಲಿ ಮೂರು ಅಂತಸ್ತಿನ ಸುಸಜ್ಜಿತ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಮಾಡಲು ಪಾಲಿಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿರುವ ಹಾಲಿ ವ್ಯಾಪಾರಸ್ಥರನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಬೇಕಾಗಿದ್ದು, ಅದಕ್ಕಾಗಿ ಈಗ ಮಾರುಕಟ್ಟೆ ಎದುರು ಭಾಗದಲ್ಲಿರುವ ಖಾಲಿ ಜಾಗದಲ್ಲಿ ತಾತ್ಕಾಲಿಕವಾಗಿ ಮಳಿಗೆ ನಿರ್ಮಿಸುವ ಕಾಮಗಾರಿ ಆರಂಭಗೊಂಡಿದೆ.
ಪಾಲಿಕೆ ಅಧೀನದಲ್ಲಿರುವ 25 ಸೆಂಟ್ಸ್ ಜಾಗದಲ್ಲಿ ಕದ್ರಿ ಮಾರುಕಟ್ಟೆ ಕಾರ್ಯಾಚರಿಸುತ್ತಿದ್ದು, ಈಗ ಕಿರಿದಾದ ಜಾಗದಲ್ಲಿ 45 ವಿವಿಧ ಮಳಿಗೆಗಳು ವ್ಯಾಪಾರ ನಡೆಸುತ್ತಿವೆ. ಈ ಕಟ್ಟಡವೂ ಶಿಥಿಲಾವಸ್ಥೆಯಲ್ಲಿದೆ. ಮೂಲ ಸೌಲಭ್ಯಗಳಿಂದ ವಂಚಿತಗೊಂಡಿದೆ. ಇದಕ್ಕಾಗಿ ನೂತನ ಮಾರುಕಟ್ಟೆ ಸಂಕೀರ್ಣ ನಿರ್ಮಾಣಕ್ಕೆ ಪಾಲಿಕೆ ಮುಂದಾಗಿತ್ತು. ನೂತನ ಕಟ್ಟಡ ಕಾಮಗಾರಿ ಆರಂಭಗೊಂಡು ಮುಗಿಯುವವರೆಗೆ ಮಾರುಕಟ್ಟೆ ವ್ಯಾಪಾರಿಗಳಿಗೆ ವ್ಯವಹಾರ ನಡೆಸಲು ಅನುಕೂಲವಾಗುವಂತೆ ತಾತ್ಕಾಲಿಕ ಮಳಿಗೆಗಳನ್ನು ಈಗಿನ ಮಾರುಕಟ್ಟೆ ಮುಂಭಾಗದಲ್ಲೇ ನಿರ್ಮಿಸಲಾಗುತ್ತಿದೆ.
45 ಸೆಂಟ್ಸ್ ಜಾಗ
ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ, ಗ್ರಾಹಕರಿಗೆ, ಮಾರಾಟಗಾರರಿಗೆ ವ್ಯವಸ್ಥಿತವಾದ ಮೂಲ ಸೌಕರ್ಯ ಸೌಲಭ್ಯಗಳು ಇಲ್ಲ. ಆದ್ದರಿಂದ ಈ ಮಾರುಕಟ್ಟೆ ಭಾಗದಲ್ಲಿ ವ್ಯವಸ್ಥಿತವಾದ ಹೊಸ ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ ನಿಮಿಸುವುದು ಅಗತ್ಯ ಎಂದು ಮನಗಂಡ ಮಾಜಿ ಶಾಸಕ ಜೆ.ಆರ್. ಲೋಬೋ ಅವರು ಸಭೆ ನಡೆಸಿ, ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲು ವಹಿಸುವಂತೆ ಸೂಚಿಸಿದ್ದರು. ಇದರಂತೆ ಈಗಿನ ಮಾರುಕಟ್ಟೆ ಕಟ್ಟಡದ ಭಾಗದಲ್ಲಿ (25 ಸೆಂಟ್ಸ್), ಪಕ್ಕದಲ್ಲಿ ಲಭ್ಯವಿರುವ ಪಾಲಿಕೆಯ 45 ಸೆಂಟ್ಸ್ ಜಾಗವನ್ನು ಉಪಯೋಗಿಸಿ ಹೊಸ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲು ಅಂದಾಜು ಪಟ್ಟಿಯನ್ನು 14.71 ಕೋಟಿ ರೂ. ಮೊತ್ತಕ್ಕೆ ತಯಾರಿಸಲಾಗಿತ್ತು. ಈ ಅಂದಾಜು ಪಟ್ಟಿಯನ್ನು ತಾಂತ್ರಿಕ ಪರಿಶೀಲನೆಗೆಂದು ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ಸಂಪರ್ಕ ಹಾಗೂ ಕಟ್ಟಡಗಳು (ದಕ್ಷಿಣ)ವಿಭಾಗದ ಮುಖ್ಯ ಅಭಿಯಂತರರಿಗೆ ಸಲ್ಲಿಸಿ, ತಾಂತ್ರಿಕ ಪರಿಶೀಲನೆ ಕೂಡ ಪಡೆಯಲಾಗಿದೆ.
ಸದ್ಯ 17 ತಾತ್ಕಾಲಿಕ ಮಳಿಗೆ
ಇದೀಗ 17 ತಾತ್ಕಾಲಿಕ ಮಳಿಗೆಗಳ ಕಾಮಗಾರಿ ನಡೆಯುತ್ತಿದ್ದು, ಒಟ್ಟು 45 ಮಳಿಗೆಗಳನ್ನು ನಿರ್ಮಿಸಬೇಕಾಗಿದೆ. ತಾತ್ಕಾಲಿಕ ಮಳಿಗೆ ಕಾಮಗಾರಿ ಪೂರ್ಣಗೊಂಡ ಬಳಿಕವೇ ಹೊಸ ಮಾರುಕಟ್ಟೆ ಕಾಮಗಾರಿ ಆರಂಭಗೊಳ್ಳಲಿದೆ. ನೂತನ ಸಂಕೀರ್ಣದ ಕಾಮಗಾರಿ ಆರಂಭವಾಗಿ ವರ್ಷದೊಳಗಾಗಿ ಕಾಮಗಾರಿ ಪೂರ್ಣಗೊಳ್ಳಬೇಕು ಎಂಬುದು ಪಾಲಿಕೆ ಚಿಂತನೆ. ಆ ಹಿನ್ನೆಲೆಯಲ್ಲಿ ಕಾಮಗಾರಿ ವೇಗ ಪಡೆದುಕೊಳ್ಳುತ್ತಿದೆ.
ತಾತ್ಕಾಲಿಕ ಮಳಿಗೆ ನಿರ್ಮಾಣ
ಕದ್ರಿ ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ ಸ್ಥಳದಲ್ಲಿ ಹಾಲಿ ಇರುವ ಅಂಗಡಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಿ, ಗ್ರಾಹಕರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ತಾತ್ಕಾಲಿಕ ಮಳಿಗೆಗಳ ಕಾಮಗಾರಿ ಆರಂಭಿಸಲಾಗಿದೆ. ಈ ಕಾಮಗಾರಿ ಮುಗಿದ ಬಳಿಕ ಮಾರುಕಟ್ಟೆ ವಾಣಿಜ್ಯ ಸಂಕೀರ್ಣದ ಕಾಮಗಾರಿ ಆರಂಭವಾಗಲಿದೆ.
– ಲಿಂಗೇಗೌಡ,
ಪಾಲಿಕೆ ಎಂಜಿನಿಯರ್
ವಿಶೇಷ ವರದಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.