ಜಿ.ಪಂ. ಸಭೆಯಲ್ಲಿ ಕಲ್ಲಡ್ಕ ಶಾಲೆ ಬಿಸಿಯೂಟ ಪ್ರತಿಧ್ವನಿ
Team Udayavani, Jan 19, 2018, 10:59 AM IST
ಮಂಗಳೂರು: ಕಲ್ಲಡ್ಕ ಶ್ರೀರಾಮ ಶಿಕ್ಷಣ ಸಂಸ್ಥೆ ಹಾಗೂ ಪುಣಚದ ಶ್ರೀದೇವಿ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ಸ್ಥಗಿತ ವಿವಾದ ಗುರುವಾರ ನಡೆದ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಪ್ರತಿಧ್ವನಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಸದಸ್ಯರ ನಡುವಣ ವಾಗ್ವಾದ ತಾರಕಕ್ಕೇರಿದಾಗ ಎರಡು ಬಾರಿ ಅಧ್ಯಕ್ಷರು ಸದನವನ್ನು ಮುಂದೂಡಿದ ಘಟನೆಯೂ ನಡೆಯಿತು.
ದ.ಕ. ಜಿಲ್ಲೆಯಲ್ಲಿ ಎಷ್ಟು ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸರಕಾರದ ಮಧ್ಯಾಹ್ನ ಬಿಸಿಯೂಟ ನೀಡಲಾಗುತ್ತಿದೆ ಹಾಗೂ ಎಷ್ಟು ಶಾಲೆಗಳನ್ನು ಕೈಬಿಡಲಾಗಿದೆ ಎಂಬ ಬಗ್ಗೆ ಕಾಂಗ್ರೆಸ್ ಸದಸ್ಯೆ ಮಮತಾ ಗಟ್ಟಿ ಅವರು ಶಿಕ್ಷಣ ಇಲಾಖೆಯಿಂದ ವಿವರ ಕೋರಿದರು. ಇದಕ್ಕೆ ಉತ್ತರಿಸಿದ ಶಿಕ್ಷಣಾಧಿಕಾರಿಯವರು ಜಿಲ್ಲೆಯಲ್ಲಿ 1,098 ಸರಕಾರಿ ಹಾಗೂ 333 ಅನುದಾನಿತ ಸೇರಿದಂತೆ 1,423 ಶಾಲೆಗಳಿವೆ. ಇದರಲ್ಲಿ ಕಲ್ಲಡ್ಕದ ಶ್ರೀರಾಮ ಶಾಲೆ ಹಾಗೂ ಪುಣಚದ ಶ್ರೀದೇವಿ ಶಾಲೆ ಸರಕಾರದ ಅಕ್ಷರ ದಾಸೋಹ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟ ಪಡೆಯುತ್ತಿಲ್ಲ. ಸುಬ್ರಹ್ಮಣ್ಯದ ಎರಡು ಸರಕಾರಿ ಶಾಲೆಗಳಿಗೆ ಶ್ರೀಕ್ಷೇತ್ರ ಸುಬ್ರಹ್ಮಣ್ಯದಿಂದ ಊಟ ಸರಬರಾಜಾಗುತ್ತಿದೆ ಎಂದು ಉತ್ತರಿಸಿದರು.
ಕಲ್ಲಡ್ಕ ಹಾಗೂ ಪುಣಚದ ಎರಡು ಶಾಲೆಗಳು ಯಾಕೆ ಅಕ್ಷರ ದಾಸೋಹ ಯೋಜನೆಯಡಿ ಒಳಗೊಂಡಿಲ್ಲ ಎಂದು ಕಾಂಗ್ರೆಸ್ ಸದಸ್ಯರಾದ ಚಂದ್ರ ಪ್ರಕಾಶ್ ಶೆಟ್ಟಿ, ಎಂ.ಎಸ್. ಮಹಮ್ಮದ್, ಧರಣೇಂದ್ರ ಕುಮಾರ್ ಅವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಯವರು ನಾವು ಈಗಾಗಲೇ ಶಾಲೆಯ ಆಡಳಿತ ಮಂದಿಗೆ ಸೂಚನೆ ನೀಡಿದ್ದು ಅವರು ಅಕ್ಷರ ದಾಸೋಹಕ್ಕೆ ಕೋರಿಕೆ ಸಲ್ಲಿಸಿಲ್ಲ. ಅದುದರಿಂದ ಈ ಎರಡು ಶಾಲೆಗಳು ಸರಕಾರದ ಮಧ್ಯಾಹ್ನದ ಬಿಸಿಯೂಟ ಯೋಜನೆಯಿಂದ ಹೊರಗುಳಿದಿವೆ ಎಂದರು.
ಸರಕಾರದ ಕ್ಷೀರಭಾಗ್ಯ, ಸೈಕಲ್ ಯೋಜನೆ, ಶಿಕ್ಷಕರಿಗೆ ವೇತನ ಮುಂತಾದ ಸರಕಾರದ ಯೋಜನೆಗಳನ್ನು ಪಡೆಯುತ್ತಿರುವ ಈ ಎರಡು ಅನುದಾನಿತ ಶಾಲೆಗಳು ಮಧ್ಯಾಹ್ನದ ಬಿಸಿಯೂಟ ನಿರಾಕರಿಸಿ ಮಕ್ಕಳಿಗೆ ಅನ್ಯಾಯವೆಸಗುತ್ತಿದೆ. ಅದುದರಿಂದ ಈ ಎರಡೂ ಶಾಲೆಗಳಿಗೂ ಅಕ್ಷರ ದಾಸೋಹ ಯೋಜನೆಯಡಿ ತತ್‌ಕ್ಷಣ ಮಧ್ಯಾಹ್ನ ಬಿಸಿಯೂಟವನ್ನು ಶಿಕ್ಷಣ ಇಲಾಖೆಯಿಂದ ಪೂರೈಸಬೇಕು. ನಿರಾಕರಿಸಿದರೆ ಅವರ ಮೇಲೆ ಕ್ರಮಗಳಾಗಬೇಕು ಮತ್ತು ಈ ಬಗ್ಗೆ ಜಿಲ್ಲಾ ಪಂಚಾಯತ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇತರ ಕಾಂಗ್ರೆಸ್ ಸದಸ್ಯರು ಇದನ್ನು ಬೆಂಬಲಿಸಿದರು. ವೇದಿಕೆಯಲ್ಲಿದ್ದ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ಅವರು ಕೂಡ ಇಲಾಖೆ ಕೂಡಲೇ ಈ ಶಾಲೆಗಳಿಗೆ ಅಕ್ಷರ ದಾಸೋಹ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟ ಒದಗಿಸಲು ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.
ಕಾಂಗ್ರೆಸ್ ಸದಸ್ಯರ ವಾದವನ್ನು ತೀವ್ರವಾಗಿ ವಿರೋಧಿಸಿದ ಬಿಜೆಪಿ ಸದಸ್ಯರಾದ ರವೀಂದ್ರ ಕಂಬಳಿ, ಹರೀಶ್ ಕಂಜಿಪಿಲಿ, ಸುಚರಿತ ಶೆಟ್ಟಿ, ಎಸ್.ಎನ್. ಮನ್ಮಥ, ಕಮಲಾಕ್ಷಿ ಕೆ.ಪೂಜಾರಿ, ಕೊರಗಪ್ಪ ನಾೖಕ್, ಜನಾರ್ದನ ಗೌಡ, ತುಂಗಪ್ಪ ಬಂಗೇರ ಅವರು ಶ್ರೀ ಕ್ಷೇತ್ರ ಕೊಲ್ಲೂರಿನಿಂದ ಈ ಎರಡೂ ಶಾಲೆಗಳಿಗೆ ನೀಡಲಾಗುತ್ತಿದ್ದ ಮಧ್ಯಾಹ್ನದ ಬಿಸಿಯೂಟವನ್ನು ಸರಕಾರ ಕಸಿದುಕೊಂಡಿದೆ. 2007ರಿಂದ 2017ರ ವರೆಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಮುಂದುವರಿದಿತ್ತು. ಇದರಿಂದ ವಿದ್ಯಾಸಂಸ್ಥೆಯ 3,250 ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿತ್ತು. ಸರಕಾರ ಇದನ್ನು ನಿಲ್ಲಿಸಿರುವುದರಿಂದ ಇದೀಗ ಶಾಲೆಯವರೇ ಇದೀಗ ಮಧ್ಯಾಹ್ನ ಬಿಸಿಯೂಟ ವ್ಯವಸ್ಥೆಗೊಳಿಸಿದ್ದಾರೆ. ಸರಕಾರ ಕೇವಲ ಪ್ರಾಥಮಿಕ ಮತ್ತು ಪ್ರೌಢಶಾಲೆಯ 900 ಮಕ್ಕಳಿಗೆ ಮಾತ್ರ ಸರಕಾರ ಬಿಸಿಯೂಟ ನೀಡಿದರೆ ಇತರ ಮಕ್ಕಳಿಗೆ ತಾರತಮ್ಯ ಮಾಡಿದಂತಾಗುತ್ತದೆ. ಅದುದರಿಂದ ಸರಕಾರ ಬಿಸಿಯೂಟ ನೀಡುವುದಾದರೆ ವಿದ್ಯಾಸಂಸ್ಥೆಯ ಎಲ್ಲ 3,250 ಮಕ್ಕಳಿಗೂ ನೀಡಬೇಕು ಮತ್ತು ಈ ರೀತಿಯಾಗಿ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಒಂದು ವಿಷಯದ ಮೇಲೆ ಎರಡು ನಿರ್ಣಯಗಳನ್ನು ಮಾಡಲು ಜಿಲ್ಲಾ ಪಂಚಾಯತ್ ನಿಯಮದಲ್ಲಿ ಅವಕಾಶವಿಲ್ಲ. ನಿರ್ಣಯಕ್ಕೆ ಪರ-ವಿರೋಧಗಳನ್ನು ದಾಖಲಿಸಿಕೊಳ್ಳಬಹುದಾಗಿದೆ ಎಂದು ಜಿ.ಪಂ. ಸಿಇಒ ಡಾ| ಎಂ.ಆರ್. ರವಿ ವಿವರಿಸಿದರು.
ಶ್ರೀ ಕ್ಷೇತ್ರ ಕೊಲ್ಲೂರಿನಿಂದ ಕಲ್ಲಡ್ಕ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ನೀಡಿದ ಮೊತ್ತದಲ್ಲಿ ದೊಡ್ಡ ಹಗರಣ ನಡೆದಿದೆ ಎಂದು ಚಂದ್ರಪ್ರಕಾಶ್ ಶೆಟ್ಟಿ ಅವರು ಆರೋಪಿಸಿದಾಗ ಇದನ್ನು ದಾಖಲೆ ಸಮೇತ ಸಾಬೀತುಪಡಿಸುವಂತೆ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹಾಗೂ ಸ್ಥಾಯಿಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅವರು ಸವಾಲೆಸೆದರು.
ವಾದ ವಿವಾದಗಳು ತೀವ್ರಗೊಂಡಾಗ ಅಧ್ಯಕ್ಷರು ಸಭೆಯನ್ನು ಅರ್ಧ ತಾಸು ಮುಂದೂಡಿ ದರು. ಮತ್ತೆ ಕಲಾಪ ಆರಂಭಗೊಂಡಾಗಲೂ ವಾಗ್ವಾದಗಳು ಮುಂದುವರಿದಾಗ ಸಭೆಯನ್ನು ಮತ್ತೆ ಭೋಜನ ವಿರಾಮಕ್ಕೆ ಮುಂದೂಡಿದರು. ಭೋಜನ ಬಳಿಕ ವಾದ ವಿವಾದಗಳು ಮುಂದುವರಿದು ಬಳಿಕ ಅಂತಿಮವಾಗಿ ವಿಷಯಕ್ಕೆ ಸಂಬಂಧಪಟ್ಟು ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ನಿರ್ಧರಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಾಹುಲ್ ಹಮೀದ್, ಸರ್ವೋತ್ತಮ ಗೌಡ ಅವರು ಉಪಸ್ಥಿತರಿದ್ದರು.
ಸಂಪ್ಯ ಠಾಣಾ ಪೊಲೀಸ್ ಅಧಿಕಾರಿ ವಿರುದ್ಧ ಖಂಡನಾ ನಿರ್ಣಯ
ಇತ್ತೀಚೆಗೆ ನಡೆದ ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುತ್ತೂರಿನಲ್ಲಿ ಬಿಜೆಪಿ ವತಿಯಿಂದ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಹಾಗೂ ತಾ.ಪಂ. ಅಧ್ಯಕ್ಷರು ಸೇರಿದಂತೆ ಮಹಿಳಾ ಜನಪ್ರತಿನಿಧಿಗಳು ಹಾಗೂ ಮಹಿಳೆಯರ ಬಗ್ಗೆ ಸಂಪ್ಯ ಪೊಲೀಸ್ ಠಾಣಾ ಎಸ್‌ಐ ಅವಮಾನಕಾರಿ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಎಸ್‌ಪಿ, ಜಿಲ್ಲಾಧಿಕಾರಿ, ರಾಜ್ಯ ಎಡಿಜಿಪಿ ಅವರಿಗೆ ದೂರು ನೀಡಿದರೂ ಯಾವುದೇ ಕ್ರಮ ಆಗಿಲ್ಲ. ಎಸ್‌ಐ ನಡವಳಿಕೆಗೆ ಖಂಡನೆ ಹಾಗೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿ.ಪಂ.ನಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯರಾದ ಶಯನ ಜಯಾನಂದ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸ್ಥಾಯೀ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಕೋರಿದರು. ಇದರಂತೆ ನಿರ್ಣಯ ಕೈಗೊಳ್ಳಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rey Mysterio Sr: ಖ್ಯಾತ ರೆಸ್ಲರ್ ರೇ ಮಿಸ್ಟೀರಿಯೊ ಸೀನಿಯರ್ ಇನ್ನಿಲ್ಲ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
ಜೋಡೋ ಯಾತ್ರೆಯಲ್ಲಿ”ನಗರ ನಕ್ಸಲರು’: ಮಹಾರಾಷ್ಟ್ರ ಸಿಎಂ ಫಡ್ನವೀಸ್
WPL 2025: ವನಿತಾ ಪ್ರೀಮಿಯರ್ ಲೀಗ್ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.