ನೆರೆ ಬಳಿಕ ಗುಡ್ಡ ಕುಸಿತದ ಭೀತಿಯಲ್ಲಿ ಕಲ್ಮಕಾರು ಜನತೆ
Team Udayavani, Aug 22, 2018, 3:35 AM IST
ಮಂಗಳೂರು: ಬಾಯ್ದೆರೆದು ನಿಂತ ಬೃಹತ್ ಗುಡ್ಡ. ತುಂಡಾಗಿರುವ ಸೇತುವೆಗಳು, ಹರಿಯುವ ಹಳ್ಳಕೊಳ್ಳ ದಾಟುವುದಕ್ಕೆ ಪರದಾಟ. ಇದು ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡಿರುವ ಸುಳ್ಯ ತಾ. ಕಲ್ಮಕಾರಿನ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳ ಅರಣ್ಯ ರೋದನ! ಪ್ರವಾಹದಿಂದ ತತ್ತರಿಸಿರುವ ಗ್ರಾಮದ ಅವಲೋಕನಕ್ಕೆ ಪತ್ರಕರ್ತರು ತೆರಳಿದಾಗ ಕಂಡ ಚಿತ್ರಣವಿದು. ಗಾಳಿಬೀಡು ಕಡಕಮಲೆ ಎಸ್ಟೇಟ್ ವ್ಯಾಪ್ತಿಯಲ್ಲಿರುವ ಬೆಟ್ಟ ಕುಸಿತಗೊಂಡು ಟನ್‌ಗಟ್ಟಲೆ ಮರಗಳು ಕಲ್ಮಕಾರಿನಲ್ಲಿರುವ ತೋಡುಗಳಲ್ಲಿ ನೀರಿನೊಂದಿಗೆ ನುಗ್ಗಿವೆ. ಇದರಿಂದ ಸೇತುವೆಗಳು ಕೊಚ್ಚಿ ಹೋಗಿವೆ.
ರಾತ್ರಿ ಮನೆ ತೊರೆಯುತ್ತೇವೆ
ಕಲ್ಮಕಾರಿಗೆ ಹೊಂದಿಕೊಂಡಿರುವ ಬೆಟ್ಟ ಬಾಯ್ದೆರೆದು ನಿಂತಿದೆ. ಯಾವಾಗ ಕುಸಿತಕ್ಕೊಳಗಾಗುವುದೋ ಹೇಳಲಾಗದು. ಭೀತಿಯಿಂದ 14 ಮಲೆಕುಡಿಯ ಕುಟುಂಬಗಳು ಊರನ್ನೇ ಬಿಟ್ಟು ಹೋಗಿವೆ. ಮೆಂಟೆಕಜೆ, ಕೊಪ್ಪಡ್ಕ, ಅಂಜನಕಜೆ, ಕಾಜಿಮಡ್ಕ, ಗುಳಿಕಾನ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಮನೆಯವರು ರಾತ್ರಿ ಹೊತ್ತಲ್ಲಿ ತಮ್ಮ ಮನೆಗಳನ್ನೇ ತೊರೆಯುತ್ತಾರೆ. ಸಂಬಂಧಿಕರ ಮನೆಗಳಲ್ಲಿ ಉಳಿದುಕೊಂಡು ಬೆಳಗ್ಗೆ ಮನೆಗಳಿಗೆ ವಾಪಸಾಗುತ್ತಾರೆ.
ತುಂಡಾದ ಆರು ಸೇತುವೆಗಳು
ತೋಡು ನೀರಿನೊಂದಿಗೆ ಟನ್‌ಗಟ್ಟಲೆ ಮರ ನುಗ್ಗಿದ ಪರಿಣಾಮ ಕಾಜಿಮಡ್ಕ, ಯಾಳದಾಳು, ಪಡ್ಪು, ಕಲ್ಮಕಾರು, ಬಾಳೆಬೈಲು, ಕಡಕಮಲ್ ಎಸ್ಟೇಟ್ ಸಂಪರ್ಕ ಕಲ್ಪಿಸುವ ಸೇತುವೆಗಳು ತುಂಡಾಗಿವೆ. ಇಲ್ಲಿ ಅಡಿಕೆ ಮರ ಜೋಡಿಸಿ ಕಾಲು ಸಂಕ ನಿರ್ಮಿಸಿದ್ದಾರೆ. ಸಹಾಯಕ ಆಯಕ್ತರು ಸೇತುವೆ ನಿರ್ಮಿಸುವ ಭರವಸೆ ನೀಡಿದ್ದಾರೆ. ಆದರೆ ಮಳೆಗಾಲ ಮುಗಿವಲ್ಲಿವರೆಗೆ ಭೀತಿ ಇದ್ದಿದ್ದೇ ಎನ್ನುತ್ತಾರೆ ಸ್ಥಳೀಯರು.
ಕಲ್ಲುಕೋರೆಗಳಿಂದ ಸಮಸ್ಯೆ?
ಕೊಪ್ಪಡ್ಕ ಆಸುಪಾಸಿನ ಕೆಲವು ಮನೆಗಳಿಗೆ ಗುಡ್ಡ ಕುಸಿತದಿಂದ ಹಾನಿಯಾಗಿರುವುದಕ್ಕೆ ಮನೆಯ ಮೇಲ್ಭಾಗದ ಗುಡ್ಡದಲ್ಲಿ ಕಲ್ಲುಕೋರೆ ಮಾಡಿರುವುದೇ ಕಾರಣ ಎಂದು ಸ್ಥಳೀಯರು ಅನುಮಾನ ವ್ಯಕ್ತ ಪಡಿಸಿದ್ದಾರೆ. ಅಲ್ಲಿನ ಗುಂಡಿಗಳನ್ನು ಹಾಗೇ ಬಿಡಲಾಗಿದ್ದು ಅವುಗಳಲ್ಲಿ ನೀರು ತುಂಬಿ ರಭಸದಿಂದ ತಗ್ಗು ಪ್ರದೇಶಗಳಿಗೆ ನುಗ್ಗುತ್ತವೆ. ಇದರಿಂದ ಮಣ್ಣು ಮೆದುಗೊಂಡು ಕೆಳಭಾಗದಲ್ಲಿರುವ ಮನೆಯ ಮೇಲೆ ಕುಸಿತ ಉಂಟಾಗುತ್ತದೆ ಎಂಬ ಅನುಮಾನ ಸ್ಥಳೀಯ ನಿವಾಸಿಗಳದ್ದಾಗಿದೆ.
27 ಕಿ.ಮೀ. ದೂರಕ್ಕೆ 80 ಕಿ.ಮೀ. ಕ್ರಮಿಸಬೇಕು!
ಕಲ್ಮಕಾರು ದಕ್ಷಿಣ ಕನ್ನಡ ಮತ್ತು ಕೊಡಗಿನ ಗಡಿಭಾಗವಾಗಿದೆ. ಇಲ್ಲಿಂದ ಮಡಿಕೇರಿಗೆ ಕೇವಲ ಸುಮಾರು ಇಪ್ಪತ್ತೇಳು ಕಿ.ಮೀ. ದೂರ. ಆದರೆ ಅವರು ಮಡಿಕೇರಿಗೆ ಸುಳ್ಯ – ಸಂಪಾಜೆಯಾಗಿಯೇ 80 ಕಿ.ಮೀ. ಕ್ರಮಿಸಿ ಹೋಗಬೇಕು. ಕಲ್ಮಕಾರು ಮೂಲಕ ಮಡಿಕೇರಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹಿಸುತ್ತಲೇ ಇದ್ದರೂ ಅರಣ್ಯ ಇಲಾಖೆ ಅಪಸ್ವರದಿಂದ ಬೇಡಿಕೆ ಈಡೇರಿಲ್ಲ ಎನ್ನುತ್ತಾರೆ ಸ್ಥಳೀಯರು.
— ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.