ರಾಜ್ಯೋತ್ಸವ ಸಂಭ್ರಮ ಹೆಚ್ಚಿಸುತ್ತಿರುವ ಕನ್ನಡ ಶಾಲೆಗಳು
Team Udayavani, Nov 1, 2017, 11:36 AM IST
ಬೆಳ್ತಂಗಡಿ: ಕನ್ನಡ ಉಳಿಸುವಲ್ಲಿ ಸರಕಾರಿ ಶಾಲೆಗಳ ಕೊಡುಗೆ ಗಣನೀಯ. ಸರಕಾರಿ ಶಾಲೆಗಳು ಆಂಗ್ಲ ಮಾಧ್ಯಮ ಶಾಲೆಗಳ ಎದುರು ಕೊಂಚ ಪ್ರಭಾವ ಕಳೆದುಕೊಂಡಂತೆ ಎನಿಸಿದರೂ ಅವುಗಳು ಹಾಕಿದ ಭದ್ರ ಬುನಾದಿ ಮರೆಯುವಂತಿಲ್ಲ. ಹಾಗಾಗಿಯೇ ಇಂದಿಗೂ ಇವು ಕನ್ನಡ ರಾಜ್ಯೋತ್ಸವಕ್ಕೆ ಸಂಭ್ರಮವನ್ನು ತುಂಬುತ್ತಿದೆ.
ತಾಲೂಕಿನಲ್ಲಿ 6 ಸರಕಾರಿ ಶಾಲೆಗಳು ಶತಮಾನದ ಗಡಿ ದಾಟಿದ್ದರೆ 1 ಅನುದಾನಿತ ಶಾಲೆ ಶತಮಾನ ದಾಟಿದ
ಸಂಭ್ರಮದಲ್ಲಿದೆ. ನಾರಾವಿ ಮಾದರಿ ಹಿ.ಪ್ರಾ. ಶಾಲೆ, ಬೆಳ್ತಂಗಡಿ ಮಾದರಿ ಹಿ. ಪ್ರಾ. ಶಾಲೆ, ಗುರುವಾಯನಕೆರೆ ಸರಕಾರಿ ಶಾಲೆ, ಮಚ್ಚಿನ ಸರಕಾರಿ ಹಿ.ಪ್ರಾ. ಶಾಲೆ, ಗೇರುಕಟ್ಟೆಯ ಕೊರಂಜ ಸರಕಾರಿ ಹಿ. ಪ್ರಾ. ಶಾಲೆ, ಬಂಗಾಡಿ ಹಿ. ಪ್ರಾ. ಶಾಲೆ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿ.ಪ್ರಾ. ಶಾಲೆಗೆ ಶತಮಾನೋತ್ಸವ ಕಳೆದು ದಶಕಗಳಾಗಿವೆ.
ಮಾದರಿ ಶಾಲೆ ಬೆಳ್ತಂಗಡಿ
ಬೆಳ್ತಂಗಡಿ ನಗರದಲ್ಲಿರುವ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಈಗ ಗತ ಇತಿಹಾಸವನ್ನು ಸಾರುತ್ತಿದೆ. ವಿದ್ಯಾರ್ಥಿಗಳ
ಸಂಖ್ಯೆ ಕಡಿಮೆಯಿದ್ದರೂ ಉತ್ತಮ ಶಿಕ್ಷಣ ನೀಡಿಕೆಯಿಂದ ಗಣ್ಯರನ್ನು ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ಇದರದ್ದು. ಶಾಸಕ ಕೆ.ವಸಂತ ಬಂಗೇರ ಮೊದಲಾದವರು ಇಲ್ಲೇ ಕಲಿತವರು. ಮಹಾತ್ಮಾ ಗಾಂಧಿ ಹಾಗೂ ನೇತಾಜಿ ಸಭಾಂಗಣವನ್ನು ಅಂದಿನ ಕಾಲದಲ್ಲಿ ಹೊಂದಿದ್ದ ಏಕೈಕ ಶಾಲೆ ಇದು. ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರತಿಮೆ ಮೂಲಕ ನೆನೆಯದೇ ಮಕ್ಕಳಿಗೆ ನಿತ್ಯಪ್ರೇರಣೆಯಾಗುವಂತೆ ಇಲ್ಲಿ ಮಹಿಳೆ ಯರು ಹಾಗೂ ಪುರುಷರು ಡಾ| ಬಿ. ನಾರಾಯಣ ರಾವ್ ಅವರ ನೇತೃತ್ವದಲ್ಲಿ ಶ್ರಮದಾನದ ಮೂಲಕ ಸಭಾಂಗಣ ಕಟ್ಟಿಸಿದ್ದರು. ವಸತಿ ಶಾಲೆಯೊಂದಕ್ಕೆ
ಮಕ್ಕಳ ಸಂಖ್ಯೆ ಕೊರತೆಯಾದಾಗ ಇದರ ಇನ್ನೊಂದು ಕಟ್ಟಡದಲ್ಲೇ ಶಾಲೆ ಆರಂಭಕ್ಕೆ ಆಶ್ರಯ ನೀಡಲಾಗಿತ್ತು.
ಕೊರಂಜ ಶಾಲೆ
ಗೇರುಕಟ್ಟೆ ಸಮೀಪದ ಕೊರಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 110 ವರ್ಷಗಳನ್ನು ಪೂರೈಸಿದೆ. ಖ್ಯಾತ ಯಕ್ಷಿಣಿಗಾರ ಪ್ರೊ| ಶಂಕರ್ ಮೊದಲಾದವರು ಇಲ್ಲಿ ಕಲಿತಿದ್ದಾರೆ. ಗ್ರಾಮೀಣ ಪ್ರದೇಶದವರಿಗೂ ವಿದ್ಯೆ ಸಿಗಬೇಕೆಂಬ ದೃಷ್ಟಿಯಿಂದ ಆರಂಭವಾದ ಈ ಶಾಲೆ ಈಗ ವಿದ್ಯಾರ್ಥಿಗಳ ಕೊರತೆ, ಮೂಲ ಸೌಕರ್ಯ, ಕಟ್ಟಡ ದುರಸ್ತಿಯ ಅನಿವಾರ್ಯಗಳನ್ನು ಹೊಂದಿದ್ದರೂ ಸಾವಿರಾರು ಮಕ್ಕಳಿಗೆ ಪಾಠ ಕಲಿಯಲು ಅನುವು ಮಾಡಿದೆ.
ಮಚ್ಚಿನ ಸರಕಾರಿ ಶಾಲೆ
ಮಚ್ಚಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 1906ರಲ್ಲಿ ಸ್ಥಾಪನೆಯಾದ ಈ ಭಾಗದ ಅತ್ಯಂತ ಪುರಾತನ ಶಾಲೆ. ಆಗ ಈ ಭಾಗದಲ್ಲಿ ಶಾಲೆಗಳೇ ಇಲ್ಲದೇ ಕಲಿಕೆಗೆ ಕಷ್ಟವಿದ್ದಾಗ ಊರ ಹಿರಿಯರೆಲ್ಲ ಒಟ್ಟಾಗಿ ಶಾಲೆ ಆರಂಭಿಸಿದ್ದರು. ಈಗಲೂ ಉತ್ತಮ ಶಿಕ್ಷಣ ನೀಡುತ್ತಿದ್ದು ಶಿಕ್ಷಕರ ಕೊರತೆಯಿಲ್ಲ. ಪಕ್ಕದಲ್ಲಿ ಶಾಲೆಗಳಿಲ್ಲದ ಕಾರಣ ಮಕ್ಕಳ ಕೊರತೆಯೂ ಕಡಿಮೆ. ಶಾಲಾಭಿವೃದ್ಧಿ ಸಮಿತಿಯೂ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಕ್ರೀಡಾ ಚಟುಚಟಿಕೆಗೆ ಪ್ರೋತ್ಸಾಹ ನೀಡುವ
ಕ್ರೀಡಾಂಗಣ ಇದ್ದು ಆವರಣ ಗೋಡೆ ಇದೆ. ಹೊಸ ಕಟ್ಟಡವನ್ನು ರಚಿಸಲಾಗಿದ್ದು , ಹಳೆಯ ಕಟ್ಟಡವನ್ನು ಸ್ಮಾರಕದಂತೆ
ಕಾಪಿಡಲಾಗಿದೆ.
ಬಂಗಾಡಿ ಶಾಲೆ
ಪ್ರಸಿದ್ಧ ತುಳುನಾಡಿನ ಅರಸರಾದ ಬಂಗವಾಡಿಯ ಅರಸರ ಅರಮನೆ ಹಾಗೂ ಬಂಗಾಡಿಯ ಶ್ರೀ ಶಾಂತಿನಾಥ ಸ್ವಾಮಿ ಬಸದಿ, ಚತುರ್ವಿಂಶತಿ ತೀರ್ಥಂಕರ ಬಸದಿ, ರತ್ನತ್ರಯ ಬಸದಿಯ ಸಮೀಪವೇ ಇದೆ ಬಂಗಾಡಿ ಸ.ಹಿ.ಪ್ರಾ. ಶಾಲೆ. 103 ವರ್ಷಗಳ ಇತಿಹಾಸ ಹೊಂದಿದ ಈ ಶಾಲೆ ಲಾೖಲ, ಕಿಲ್ಲೂರು, ನಾವೂರು, ನಡ ಪ್ರಾಂತ್ಯದಲ್ಲಿ ಮೊದಲು ಶತಮಾನೋತ್ಸವ ಆಚರಿಸಿದ ಶಾಲೆ. ನಾವೂರಿನಲ್ಲಿ ಕೂಡಾ 4ನೇ ತರಗತಿವರೆಗೆ ಮಾತ್ರ ಇದ್ದಾಗ ಬಂಗಾಡಿ ಶಾಲೆಯೇ ಅನಿವಾರ್ಯವಾಗಿತ್ತು. ಇಲ್ಲಿ ಕಲಿತ ಸಾವಿರಾರು ಮಂದಿ ಇಂದಿಗೂ ಅನೇಕ ದೊಡ್ಡ ಹುದ್ದೆಗಳಲ್ಲಿದ್ದಾರೆ. ಸುಭದ್ರ ಕಟ್ಟಡವಿದೆ. ಶಾಲಾ ಆವರಣ ಗೋಡೆ ಇದ್ದು ಶಾಲಾ ಕ್ರೀಡಾಂಗಣ ಕೂಡಾ ಮಕ್ಕಳಿಗೆ ಅನುಕೂಲವಾಗಿದೆ.
ನಾರಾವಿ ಮಾದರಿ ಶಾಲೆ
ನಾರಾವಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ 110 ವರ್ಷಗಳಾಗುತ್ತಿದ್ದು, ಈ ಪ್ರಾಂತ್ಯದ ಮೊದಲ ಶಾಲೆ ಎಂಬ
ಹೆಗ್ಗಳಿಕೆ ಇದೆ. ನಾರಾವಿ ಪೇಟೆಯಲ್ಲಿ ಬಸ್ ನಿಲ್ದಾಣದ ಬಳಿ ಇರುವ ಈ ಶಾಲೆ ಈಗ ಪ್ರೌಢಶಾಲೆಗೂ ಆಶ್ರಯ ನೀಡಿದೆ.
ಸುಭದ್ರ ಕಟ್ಟಡ, ಆವರಣ ಗೋಡೆ, ಕುಡಿಯುವ ನೀರಿನ ವ್ಯವಸ್ಥೆ ಹೀಗೆ ಎಲ್ಲವೂ ಸುಸಜ್ಜಿತವಾಗಿದ್ದು, ಮಕ್ಕಳಿಗೆ
ಚೆನ್ನಾದ ವಿದ್ಯಾಭ್ಯಾಸ ಕೊಡುತ್ತಿರುವ ಶಾಲೆಯಾಗಿದೆ.
ಗುರುವಾಯನಕೆರೆ ಶಾಲೆ
ಗುರುವಾಯನಕೆರೆ ಪಂಚಾಯತ್ ಕಟ್ಟಡ ಬಳಿಯಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 114 ವರ್ಷಗಳಾದವು.
ಕಟ್ಟಡ ವ್ಯವಸ್ಥೆ ಚೆನ್ನಾಗಿದ್ದು ಮೊದಲು 14 ಕೊಠಡಿಗಳಿದ್ದವು. ಆಗ ಓಡಿಲಾ°ಳ, ಮದ್ದಡ್ಕ ಮೊದಲಾದ ಪರಿಸರದಲ್ಲಿ ಶಾಲೆಗಳಿರಲಿಲ್ಲ. ಒಂದು ಕಾಲದಲ್ಲಿ 400ರಿಂದ 600 ಮಕ್ಕಳವರೆಗೂ ಕಲಿಯುತ್ತಿದ್ದರು. ಈಗ ಮಕ್ಕಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಶಿಥಿಲವಾದ ಹಳೆ ಕಟ್ಟಡವನ್ನು ಕೆಡವಿದ್ದು, ಸಭಾಂಗಣ ವ್ಯವಸ್ಥಿತ ಜರೂರಾಗಿ ಬೇಕಿದೆ. ಕ್ರೀಡಾಂಗಣ ಪುಟ್ಟದಾಗಿದೆ. ಶತಮಾನೋತ್ಸವ ಸ್ಮಾರಕವಾಗಿ ರಂಗ ಮಂದಿರ ನಿರ್ಮಿಸಲಾಗಿದೆ.
ಧರ್ಮಸ್ಥಳ ಅನುದಾನಿತ ಶಾಲೆ
ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣ ಸಮೀಪ ಇರುವ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ
ಪ್ರಾಥಮಿಕ ಶಾಲೆ 114 ವರ್ಷಗಳಷ್ಟು ಹಳೆಯದು. ಎಲ್ಲ ಖಾಸಗಿ ಆಂಗ್ಲಮಾಧ್ಯಮ ಶಾಲೆಯಲ್ಲಿರುವಷ್ಟು ಸೌಲಭ್ಯಗಳನ್ನು ಹೊಂದಿದೆ.
ಪ್ರಯೋಗಾಲಯ, ಲೈಬ್ರರಿ, ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ತಾಲೂಕಿನಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಕನ್ನಡ ಮಾಧ್ಯಮ ಶಾಲೆ ಎಂಬ ಹೆಚ್ಚುಗಾರಿಕೆಗೂ ಪ್ರಾಪ್ತವಾಗಿತ್ತು. ಶಾಲೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಆಡಳಿತ ಮಂಡಳಿ ಎಸ್‌ಡಿಎಂ ಶಿಕ್ಷಣ ಸಂಸ್ಥೆ ಒದಗಿಸುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆ ಅವರು ಹಾಗೂ ಸಹೋದರರು ಕಲಿತದ್ದು ಇದೇ ಶಾಲೆಯಲ್ಲಿ.
ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.