ಕರಾವಳಿ ಭಾಗದ ಅಪರಾಧ ಸುದ್ದಿಗಳು
Team Udayavani, Jul 31, 2018, 6:40 AM IST
ಮಲ್ಲಾರು: ಶಾಲಾ ವಾಹನಕ್ಕೆ ಟಿಪ್ಪರ್ ಢಿಕ್ಕಿ; ವಿದ್ಯಾರ್ಥಿಗಳು ಪಾರು
ಕಾಪು: ಶಾಲಾ ವಾಹನ ಮತ್ತು ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಘಟನೆ ಮಜೂರು ಸಮೀಪದ ಮಲ್ಲಾರಿನಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಕಳತ್ತೂರು ಕ್ರೆಸೆಂಟ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಟೆಂಪೋಗೆ ಮಲ್ಲಾರು ಹಳೆ ಕಾಲೇಜಿನ ತಿರುವಿನ ಬಳಿ ಟಿಪ್ಪರ್ ಢಿಕ್ಕಿ ಹೊಡೆದಿದೆ. ಶಾಲಾ ವಾಹನ ರಸ್ತೆ ಪಕ್ಕದ ಚರಂಡಿಗೆ ಜಾರಿದೆ. ಟೆಂಪೋದಲ್ಲಿದ್ದ ಶಿಕ್ಷಕಿಯರು ಮತ್ತು ಚಾಲಕ – ಕಂಡಕ್ಟರ್ ಸೇರಿ ವಿದ್ಯಾರ್ಥಿಗಳನ್ನು ಬೇರೆ ವಾಹನದಲ್ಲಿ ಮನೆಗೆ ಕಳುಹಿಸಿದರು. ಕಾಪು ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವೇಗ ನಿಯಂತ್ರಣಕ್ಕೆ ಒತ್ತಾಯ
ಶಿರ್ವ- ಕಾಪು ರಸ್ತೆಯಲ್ಲಿ ಟಿಪ್ಪರ್‌ಗಳ ಓಡಾಟ ನಿರಂತರವಾಗಿದ್ದು, ಚಾಲಕರ ನಿರ್ಲಕ್ಷ್ಯವೂ ಹೆಚ್ಚಿದೆ. ಬೆಳಗ್ಗೆ ಮತ್ತು ಸಂಜೆ ಶಾಲಾ ವಾಹನಗಳ ಓಡಾಟವೂ ಜೋರಾಗಿದೆ. ಆಗಾಗ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿರುತ್ತವೆ. ಆದ್ದರಿಂದ ಇದಕ್ಕೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಎಲೆಕ್ಟ್ರಿಕಲ್ಸ್ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ : ಲಕ್ಷಾಂತರ ರೂ. ನಷ್ಟ
ಉಪ್ಪುಂದ: ಇಲ್ಲಿನ ಪೇಟೆ ಸಮೀಪದ ಎಲೆಕ್ಟ್ರಿಕಲ್ಸ್ ಅಂಗಡಿಯಲ್ಲಿ ಸೋಮವಾರ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ದುರಂತ ಸಂಭವಿಸಿ ಅಪಾರ ಹಾನಿ ಉಂಟಾಗಿದೆ. ಉಪ್ಪುಂದ ಆನೆಗಣಪತಿ ದೇವಸ್ಥಾನ ಸಮೀಪದ ಸುರೇಶ ಪೂಜಾರಿ ಮಾಲಕತ್ವದ ಅಂಗಡಿಯಲ್ಲಿ ಮುಂಜಾನೆ ದುರಂತ ಸಂಭವಿಸಿದೆ. ಅಂಗಡಿಗೆ ಮೂರು ಕಡೆಯಿಂದ ಶಟರ್ ಅಳವಡಿಸಲಾಗಿದ್ದು, ಬೆಂಕಿಯ ತೀವ್ರತೆಗೆ ಅದನ್ನು ತೆಗೆಯಲು ಸಾಧ್ಯವಾಗಲಿಲ್ಲ. ಸಾರ್ವಜನಿಕರ ಸಹಾಯದಿಂದ ಶೆಟರ್ ತೆಗೆಯುವಾಗ ಬೆಂಕಿಯ ಜ್ವಾಲೆ ಇಡೀ ಅಂಗಡಿಯನ್ನು ಆವರಿಸಿತು. ಅಂಗಡಿಯಲ್ಲಿ ಇತ್ತೀಚೆಗೆ ಖರೀದಿಸಿರುವ ಹೊಸ ಸಾಮಗ್ರಿಗಳು ಸಹಿತ ಅಪಾರ ಪ್ರಮಾಣದ ವಿದ್ಯುತ್ ಉಪಕರಣಗಳು, ರಿಪೇರಿಗೆ ಬಂದ ಫ್ಯಾನ್, ಮೋಟರ್ ಸಹಿತ ಲಕ್ಷಾಂತರ ಮೌಲ್ಯದ ವಸ್ತುಗಳಿದ್ದು, ಅವೆಲ್ಲ ಸುಟ್ಟುಹೋಗಿವೆ. ಕಟ್ಟಡಕ್ಕೂ ಹಾನಿಯಾಗಿದೆ. ಸುಮಾರು 50 ಲ.ರೂ. ಮಿಕ್ಕಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಅಕ್ಕಪಕ್ಕದ ಅಂಗಡಿಗೂ ಬೆಂಕಿ
ಬೆಂಕಿ ತೀವ್ರತೆಗೆ ಅಂಗಡಿಯ ಅಕ್ಕ ಪಕ್ಕದ ಲಕ್ಷ್ಮೀ ಆನೆಗಣಪತಿ ಬೇಕರಿ, ಓಂಕಾರ್ ಮೆಟಲ್ಸ್, ಟ್ರಿಮ್ ಸೆಲೂನ್ಸ್‌ಗಳಿಗೂ ಹಾನಿಯಾಗಿದೆ.
ನೀರಿನ ಅಭಾವ
ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲು ಮುಂದಾದರು. ಆದರೆ ಸಾಕಷ್ಟು ನೀರು ಇಲ್ಲದ ಕಾರಣ ಬೆಂಕಿ ಹತೋಟಿಗೆ ತರಲಾಗಲಿಲ್ಲ. ಅಗ್ನಿ ಶಾಮಕದವರು ಬರುವಷ್ಟರಲ್ಲಿ ದೊಡ್ಡ ಪ್ರಮಾಣದ ಸಾಮಗ್ರಿಗಳು ಸುಟ್ಟು ಹೋಗಿದ್ದವು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳಕ್ಕೆ ಬೈಂದೂರು ಸರ್ಕಲ್ ಇನ್‌ಸ್ಪೆಕ್ಟರ್ ಪರಮೇಶ ಗುನಗ್, ಠಾಣಾಧಿಕಾರಿ ತಿಮ್ಮೇಶ ಬಿ.ಎನ್. ಪರಿಶೀಲಿಸಿದರು.
ಮಡಿಕೇರಿಯಲ್ಲಿ ಮನೆಗೆ ಗುಂಡು: ಮನೆ ಮಂದಿ ಅಪಾಯದಿಂದ ಪಾರು
ಮಡಿಕೇರಿ: ನಗರದ ಫೀ| ಮಾ| ಕಾರ್ಯಪ್ಪ ಕಾಲೇಜು ಹಿಂಭಾಗದಲ್ಲಿರುವ ಜೀವ ವಿಮಾ ನಿಗಮದ ಉದ್ಯೋಗಿ ಜನಾರ್ದನ ಅವರ ಮನೆಯ ಮೇಲೆ ಗುಂಡಿನ ದಾಳಿ ನಡೆೆದಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಜು. 30ರ ಬೆಳಗಿನ ಜಾವ 3 ಗಂಟೆಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ನಾಡ ಬಂದೂಕಿನಿಂದ ಗಾಳಿಯಲ್ಲಿ 2 ಸುತ್ತು ಗುಂಡು ಹಾರಿಸಿದ್ದಾರೆ. ಮನೆಯ ಸಮೀಪ ಗುಂಡಿನ ಶಬ್ದ ಕೇಳಿ ಎಚ್ಚರಗೊಂಡ ಜನಾರ್ದನ ಹೊರ ಬಂದು ಬೆಳಕು ಹಾಯಿಸಿದಾಗ ದುಷ್ಕರ್ಮಿಗಳು ಮತ್ತೂಂದು ಗುಂಡನ್ನು ಮನೆಯತ್ತ ಹಾರಿಸಿ ಸ್ಥಳದಿಂದ ಪರಾರಿಯಾಗಿದರು. ಕಿಟಕಿಯ ಗಾಜುಗಳು ಪುಡಿಯಾಗಿವೆ ಹಾಗೂ ಫ್ರೆಮ್ ಗಳಿಗೆ ಗುಂಡಿನ ಚೂರುಗಳು ಹೊಕ್ಕಿವೆ. ಜನಾರ್ದನ ಅವರು ಪಾರಾಗಿದ್ದಾರೆ. ದುಷ್ಕರ್ಮಿಗಳು ಯಾರು, ಮೊದಲ ಎರಡು ಗುಂಡುಗಳನ್ನು ಯಾಕೆ ಹಾರಿಸಿದರು ಎಂಬ ಮಾಹಿತಿ ಲಭ್ಯವಾಗಿಲ್ಲ. ಜನಾರ್ದನ ಅವರು ಹೊರಬಂದ ಕಾರಣ ಅವರನ್ನು ಬೆದರಿಸಲು ಮೂರನೇ ಗುಂಡನ್ನು ಹಾರಿಸಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ಕುರಿತು ಜನಾರ್ದನ ಅವರು ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಡಿಕೇರಿ ಡಿವೈಎಸ್‌ಪಿ ಸುಂದರ್ ರಾಜ್, ವೃತ್ತ ನಿರೀಕ್ಷಕ ಮೇದಪ್ಪ ಠಾಣಾಧಿಕಾರಿ ಷಣ್ಮುಖ ಹಾಗೂ ಸಿಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಸ್ವಾಮೀಜಿಗೆ ಹಲ್ಲೆ: ದೂರು
ಪುತ್ತೂರು: ಇಲ್ಲಿನ ಬಲ್ನಾಡು ರಸ್ತೆಯಲ್ಲಿ ನೇರಳಕಟ್ಟೆಯ ಡಿ.ಕೆ. ಸ್ವಾಮೀಜಿ ಅವರಿಗೆ ಜು. 29ರಂದು ರಾತ್ರಿ ತಂಡವೊಂದು ಹಲ್ಲೆ ನಡೆಸಿದೆ. ಅನಾರೋಗ್ಯ ಪೀಡಿತರಿಗೆ ಸ್ವಾಮೀಜಿ ಮದ್ದು ನೀಡುತ್ತಿದ್ದರು. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಗುಂಪು ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸ್ವಾಮೀಜಿ ಜತೆಗಿದ್ದ ಮರೋಳಿಯ ಅಭಿಷೇಕ್ ಅವರಿಗೂ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ಎರ್ಟಿಗಾ ಕಾರಿಗೆ ಹಾನಿಯಾಗಿದ್ದು, ಸುಮಾರು 1.25 ಲಕ್ಷ ರೂ. ಹಾನಿ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರವಿವಾರ ರಾತ್ರಿ ಬಲ್ನಾಡು ರಸ್ತೆಯಲ್ಲಿ ಸ್ವಾಮೀಜಿ ತೆರಳುತ್ತಿದ್ದ ಸಂದರ್ಭ, 3 ಬೈಕ್ ಹಾಗೂ 2 ಕಾರಿನಲ್ಲಿ ಆಗಮಿಸಿದ ತಂಡ ಕಾರನ್ನು ತಡೆದು ಇಬ್ಬರನ್ನು ಎಳೆದು ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಮರದ ತುಂಡಿನಲ್ಲಿ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಗಾಯಾಳುಗಳು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಡಿಬಾಗಿಲು: ಸೋದರಿಯರ ಮೇಲೆ ಅತ್ಯಾಚಾರ ಯತ್ನ
ಬೆಳ್ತಂಗಡಿ: ನೆರಿಯ ಗ್ರಾಮದ ಹನಿಯೂರಿನಲ್ಲಿ ಗಂಡಿಬಾಗಿಲಿನ ಸಹೋದರಿಯರಿಬ್ಬರು ಕೆಲಸ ಮುಗಿಸಿ ಆಟೋದಲ್ಲಿ ಮನೆಗೆ ಬರುತ್ತಿದ್ದಾಗ ಪಿಕ್ ಅಪ್ ನಲ್ಲಿ ಹಿಂಬಾಲಿಸಿ ಬಂದ ಕಿಡಿಗೇಡಿಯೊಬ್ಬ ಅವರ ಆಟೋಗೆ ಢಿಕ್ಕಿ ಹೊಡೆದು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ. ಕೆಲಸ ಮುಗಿಸಿ ಉಜಿರೆಯಿಂದ ಹನಿಯೂರುವರೆಗೆ ಬಸ್ಸಿನಲ್ಲಿ ಬಂದು ಬಳಿಕ ಆಟೋದಲ್ಲಿ ಮನೆಗೆ ಹೊರಟಿದ್ದಾಗ ಗಂಡಿಬಾಗಿಲು ನಿವಾಸಿ ಬಿ.ಜೆ.ಥಾಮಸ್ ಆಟೋಗೆ ಪಿಕ್ ಅಪ್ ಅನ್ನು ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ ರಿಕ್ಷಾ ಪಕ್ಕದ ಚರಂಡಿಗೆ ಉರುಳಿದ್ದು, ಬಳಿಕ ಯುವತಿಯರನ್ನು ಎಳೆದು, ಕಚ್ಚಿದ್ದಾನೆ. ಬಿಡಿಸಲು ಬಂದ ರಿಕ್ಷಾ ಚಾಲಕ ನೆರಿಯಾದ ಸತೀಶ್ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾನೆ ಎಂದು ಯುವತಿಯರು ಹಾಗೂ ಸತೀಶ್ ಆರೋಪಿಸಿದ್ದಾರೆ.
ಯುವತಿಯರು ಹಾಗೂ ರಿಕ್ಷಾ ಚಾಲಕ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದು, ಆಸ್ಪತ್ರೆಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿದ್ದಾರೆ. ಅಪಘಾತಕ್ಕೆ ಸಂಬಂಧಿಸಿ ಸಂಚಾರ ಪೊಲೀಸರು ಹಾಗೂ ಧರ್ಮಸ್ಥಳ ಪೊಲೀಸರು ಅತ್ಯಾಚಾರಕ್ಕೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ತಮ್ಮ ಮಕ್ಕಳಿಗೆ ಹಿಂದಿನಿಂದಲೂ ಕಿರುಕುಳ ನೀಡುತ್ತಿದ್ದಾನೆ. ಮೊಬೈಲ್ ಗೆ ಕರೆ ಮಾಡಿ ತೊಂದರೆ ನೀಡುತ್ತಿದ್ದಾನೆ ಎಂದು ಯುವತಿಯರ ತಾಯಿ ಆರೋಪಿಸಿದ್ದಾರೆ.
ಜಾಲತಾಣಗಳಲ್ಲಿ ಜಾತಿನಿಂದನೆ: ದೂರು
ಉಡುಪಿ: ಸಾಮಾಜಿಕ ಜಾಲತಾಣಗಳಲ್ಲಿ ಖಾಸಗಿ ವಾಹಿನಿಯಲ್ಲಿ ಬರುತ್ತಿರುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಪೋಸ್ಟರ್ ಅನ್ನು ತಿರುಚಿ ವಿಶ್ವಕರ್ಮ ಬ್ರಾಹ್ಮಣರ ಜಾತಿ ನಿಂದನೆ ನಡೆಸಿದ ಆರೋಪದಲ್ಲಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ಪೋಸ್ಟರ್ ನಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಸಂಬಂಧಿಸಿದ ಅವಹೇಳನಕಾರಿ ಪ್ರಶ್ನೆಯೊಂದನ್ನು ಕೇಳಲಾಗಿದ್ದು, ಈ ಸಂಬಂಧ ನವೀನ್ ಆಚಾರ್ಯ ಅವರು ದೂರು ದಾಖಲಿಸಿದ್ದಾರೆ.
ಅವಹೇಳನಕಾರಿ ಲೇಖನ : ಬಿಳಿದಲೆ ಈಶಗೆ ಜಾಮೀನು
ಪುತ್ತೂರು: ಹೊಸನಗರ ರಾಮಚಂದ್ರಾಪುರ ಮಠದ ಬಗ್ಗೆ ಅವಹೇಳನಕಾರಿ ಲೇಖನ ಪ್ರಕಟಿಸಿದ್ದ ವಿಚಾರವಾದಿ ಈಶ ಬಿಳಿದಲೆ ಅವರಿಗೆ ಪುತ್ತೂರು ನ್ಯಾಯಾಲಯ ಜಾಮೀನು ನೀಡಿದೆ. ಗೌರಿ ಲಂಕೇಶ್ ಪತ್ರಿಕೆಯಲ್ಲಿ 2015ರಲ್ಲಿ ರಾಮಚಂದ್ರ ಮಠದ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸಲಾಗಿದೆ ಎಂದು ಆರೋಪಿಸಿ ಕೇಶವ ಕೃಷ್ಣ ಅವರು ಪುತ್ತೂರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಇದರಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಮೊದಲ ಆರೋಪಿ ಹಾಗೂ ಈಶ ಬಿಳಿದಲೆ ಎರಡನೇ ಆರೋಪಿ. ಹತ್ಯೆಯಾಗುವ ಮೊದಲು ಗೌರಿ ಲಂಕೇಶ್ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದಿದ್ದರು. ಆದರೆ ಈಶ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಸಮನ್ಸ್ ಜಾರಿಯಲ್ಲಿತ್ತು. ಅವರು ಶನಿವಾರ ಪುತ್ತೂರು ಪ್ರಧಾನ ಹಿರಿಯ ನ್ಯಾಯಾಲಯಕ್ಕೆ ಹಾಜರಾಗಿದ್ದು, ಜಾಮೀನು ಮಂಜೂರಾಗಿದೆ. ಇವರ ಪರವಾಗಿ ಅಶ್ರಫ್ ಕೆ. ಅಗ್ನಾಡಿ, ಅಬ್ದುಲ್ ಮಜೀದ್ ಖಾನ್, ಮುಸ್ತಫಾ ಕಡಬ ವಾದಿಸಿದ್ದರು.
ವಿವರ
ರಾಮಚಂದ್ರಾಪುರ ಮಠದ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸಿದ್ದ ದಾವೆ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡ ಪುತ್ತೂರು ನ್ಯಾಯಾಲಯ, ತನಿಖೆ ನಡೆಸುವಂತೆ ನಗರ ಠಾಣೆಗೆ ಆದೇಶಿಸಿತ್ತು. ತನಿಖೆ ನಡೆಸಿದ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ, ಫಿರ್ಯಾದಿದಾರರು ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 295(ಎ), 153, 505ರಡಿ ಪ್ರಕರಣ ದಾಖಲಿಸಿ, ಸಮನ್ಸ್ ಜಾರಿ ಮಾಡಿತ್ತು.
ಮಸಾಜ್ ಪಾರ್ಲರ್ ಗೆ ದಾಳಿ ಮಹಿಳಾ ಪಿಂಪ್ ಸೆರೆ; ಐವರು ಯುವತಿಯರ ಸೆರೆ
ಮಂಗಳೂರು: ಕೊಟ್ಟಾರ ಚೌಕಿ ಬಳಿಯಿರುವ ‘ಲೋಟಸ್ ಸೆಲೂನ್ ಆ್ಯಂಡ್ ವೆಲ್‌ನೆಸ್’ ಮಸಾಜ್ ಸೆಂಟರ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಮತ್ತು ಕಾವೂರು ಠಾಣೆಯ ಪೊಲೀಸರು ದಾಳಿ ನಡೆಸಿ ಮಹಿಳೆಯನ್ನು ಬಂಧಿಸಿ, ಐವರು ಯುವತಿಯರನ್ನು ರಕ್ಷಿಸಿದ್ದಾರೆ.
ಕೊಟ್ಟಾರ ಚೌಕಿ ಬಳಿಯ ರಾಮಾನುಗ್ರಹ ಕಟ್ಟಡದಲ್ಲಿರುವ ಮಸಾಜ್ ಸೆಂಟರ್‌ನಲ್ಲಿ ಯುವತಿಯರು ಹಾಗೂ ಮಹಿಳೆಯರನ್ನು ಇಟ್ಟುಕೊಂಡು ಬಾಡಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆಗೆ ಪ್ರೇರೇಪಣೆ ನೀಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಮತ್ತು ಕಾವೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಹಿಳಾ ಪಿಂಪ್ ಅನ್ನು ಬಂಧಿಸಿ 14,700 ರೂ. ಹಾಗೂ 2 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸೆಂಟರ್ ಅನ್ನು ನಡೆಸುತ್ತಿದ್ದ ರಾಜೇಶ್, ಸತೀಶ್ ಮತ್ತು ಜಯರಾಜ್ ಅವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಬಿ ಇನ್‌ಸ್ಪೆಕ್ಟರ್ ಶಾಂತಾರಾಮ, ಕಾವೂರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೆ.ಆರ್. ನಾಯ್ಕ್, ಸಿಸಿಬಿ ಘಟಕದ ಪಿಎಸ್‌ಐಗಳಾದ ಶ್ಯಾಮ್ ಸುಂದರ್ ಮತ್ತು ಎಚ್.ಡಿ. ಕಬ್ಟಾಳ್ ರಾಜ್ ಹಾಗೂ ಸಿಸಿಬಿ ಮತ್ತು ಕಾವೂರು ಪೊಲೀಸ್ ಠಾಣೆಯ ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಭಿನ್ನ ಕೋಮಿನ ಪ್ರಕರಣ: ನಾಲ್ವರ ಬಂಧನ
ಬಂಟ್ವಾಳ: ಫರಂಗಿಪೇಟೆಯಲ್ಲಿ ಅನ್ಯ ಕೋಮಿನ ಮಹಿಳೆ ಜತೆ ಮಾತನಾಡಿದ ಕಾರು ಚಾಲಕನಿಗೆ ಹಲ್ಲೆ ನಡೆಸಿ ನೈತಿಕ ಪೊಲೀಸ್‌ಗಿರಿ ಪ್ರದರ್ಶಿಸಿದ ಆರೋಪದಲ್ಲಿ ನಾಲ್ವರನ್ನು ಬಂಧಿಸಿದ್ದು ಉಳಿದವರಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಟ್ವಾಳ ಗ್ರಾ. ಠಾಣಾಧಿಕಾರಿ ಪ್ರಸನ್ನ ನೇತೃತ್ವದ ಪೊಲೀಸರು ಫರಂಗಿಪೇಟೆ ನಿವಾಸಿ ಉಮ್ಮರ್ ಫಾರೂಕ್ (37), ಎಫ್. ಮಹಮ್ಮದ್ ಅರಾಫಾ (25), ಇಕ್ಬಾಲ್ ಸಿ.(32), ಮಹಮ್ಮದ್ ಅಫೀಜ್ (21) ಅವರನ್ನು ಬಂಧಿಸಿದ್ದರು. ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದೆ.
ರವಿವಾರ ಮಧ್ಯಾಹ್ನ ಕುಂದಾಪುರ ನಿವಾಸಿ ಸುರೇಶ್ ಕರ್ತವ್ಯ ನಿಮಿತ್ತ ಬಂದವರು ಫರಂಗಿ ಪೇಟೆಯಲ್ಲಿ ಕಾರು ನಿಲ್ಲಿಸಿ ಪರಿಚಯದ ಮಹಿಳೆಯೊಂದಿಗೆ ಮಾತನಾಡಿದ್ದನ್ನು ಕಂಡಿದ್ದ ಯುವಕರು ಗುಂಪು ಸೇರಿ ಹಲ್ಲೆ ನಡೆಸಿದ್ದಲ್ಲದೆ ವಾಹನ ತಡೆದಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಗುಂಪನ್ನು ಚದುರಿಸಿ ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಿಸಿ ಕಳುಹಿಸಿದ್ದರು. ಬಳಿಕ ಕಾರು ಚಾಲಕ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ದೂರು ದಾಖಲಿಸಿದ್ದರು.
ಕಾರು ಢಿಕ್ಕಿ: ಪಾದಚಾರಿ ಗಂಭೀರ
ಕಾಪು: ಕಾಪು ವಿದ್ಯಾನಿಕೇತನ್ ಶಾಲೆಯ ಬಳಿ ಸೋಮವಾರ ಮಧ್ಯಾಹ್ನ ರಾ. ಹೆದ್ದಾರಿಯನ್ನು ದಾಟುತ್ತಿದ್ದ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಮಂಜುನಾಥ (24) ಅವರಿಗೆ ಕಾರು ಢಿಕ್ಕಿ ಹೊಡೆದಿದ್ದು, ಅವರು ತೀವ್ರ ಗಾಯಗೊಂಡಿದ್ದಾರೆ. ಮಂಗಳೂರು ಕಡೆಯಿಂದ ಉಡುಪಿಯತ್ತ ಹೋಗುತ್ತಿದ್ದ ಕಾರು ಢಿಕ್ಕಿಯಾದ ಪರಿಣಾಮ ತಲೆಗೆ ತೀವ್ರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಟ್ಟಡದಿಂದ ಬಿದ್ದ ಕಾರ್ಮಿಕ ಸಾವು
ಮಂಗಳೂರು: ಬಿಜೈ ಕಾಪಿಕಾಡು ಬಳಿಯ ಟಿವಿಎಸ್ ಶೋರೂಂ ಎದುರಿನ ಕಟ್ಟಡದಿಂದ ಬಿದ್ದು ಗಂಭೀರ ಗಾಯಗೊಂಡ ಕಾರ್ಮಿಕ ಮಧ್ಯಪ್ರದೇಶದ ಬಾಲ ಘಾಟ್ ಜಿಲ್ಲೆಯ ಬುರೇಶಿ ನಿವಾಸಿ ಅನಿಲ್‌ಕುಮಾರ್ ಮಾಡಾವಿ(27) ಅವರು ಸೋಮವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅವರು ಹಲವು ವರ್ಷಗಳಿಂದ ಕಟ್ಟಡ ಕಾರ್ಮಿಕರಾಗಿದ್ದರು. ರವಿವಾರ ರಾತ್ರಿ 9.30ಕ್ಕೆ ಒಂದನೇ ಮಹಡಿಯಿಂದ ಇಳಿಯುವಾಗ ಬಿದ್ದು ಗಂಭೀರ ಗಾಯಗೊಂಡಿದ್ದರು. ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆವರಣವಿಲ್ಲದ ಬಾವಿಗೆ ಬಿದ್ದು ವೃದ್ಧ ಸಾವು
ಮೂಡಬಿದಿರೆ: ತೆಂಕಮಿಜಾರು ಗ್ರಾಮದ ಉಕ್ಕಿಲಾಡಿ ನಿವಾಸಿ ಚಂದ್ರಯ್ಯ ಶೆಟ್ಟಿ (78) ಅವರು ಸೋಮವಾರ ಆವರಣವಿಲ್ಲದ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಇವರಿಗೆ ಸೇರಿದ ತೋಟದಲ್ಲಿ ಆವರಣವಿಲ್ಲದ ಬಾವಿಯಿದೆ. ಅದರ ಪಕ್ಕದಲ್ಲಿ ಕಾಲುದಾರಿ ಇದ್ದು, ಬೆಳಗ್ಗೆ ನಡೆದುಕೊಂಡು ಮನೆಗೆ ಬರುತ್ತಿದ್ದಾಗ ಅಕಸ್ಮಾತ್ ಕಾಲು ಜಾರಿ ಬಿದ್ದು ಮೃತಪಟ್ಟರೆನ್ನಲಾಗಿದೆ. ಅಗ್ನಿಶಾಮಕ ಸಿಬಂದಿ ನೆರವಿನಿಂದ ಶವವನ್ನು ಮೇಲಕ್ಕೆತ್ತಲಾಯಿತು. ಮೂಡಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಬಾವಿಗೆ ಹಾರಿ ನವ ವಿವಾಹಿತೆ ಆತ್ಮಹತ್ಯೆ
ಕಾಪು: ಉದ್ಯಾವರ ಶಂಭುಕಲ್ಲು ದೇಗುಲದ ಹಿಂಬದಿ ನಿವಾಸಿ, ನವವಿವಾಹಿತೆ ಮಮತಾ ಭಂಡಾರಿ(26) ಅವರು ಸೋಮವಾರ ಮಧ್ಯಾಹ್ನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎ. 19ರಂದು ಅಚ್ಲಾಡಿಯ ಪ್ರಶಾಂತ್ ಅವರೊಂದಿಗೆ ವಿವಾಹವಾಗಿದ್ದ ಇವರು ತನ್ನ ತಾಯಿ ಮನೆಯಲ್ಲಿ ಈ ಕೃತ್ಯವೆಸಗಿದ್ದರು. ಮೂರ್ಛೆರೋಗದಿಂದ ಬಳಲುತ್ತಿದ್ದ ಇವರು ಸೋಮವಾರ ಬೆಳಗ್ಗೆ 11-30ರ ವೇಳೆಗೆ ಸ್ನಾನ ಮಾಡಲೆಂದು ಹೋದವರು ಮರಳಿ ಬಾರದ ಕಾರಣ ಹುಡುಕಾಡಿದಾಗ ಬಾವಿಯಲ್ಲಿ ಮೃತದೇಹ ತೇಲುತ್ತಿರುವುದು ಪತ್ತೆಯಾಗಿತ್ತು. ಕಾಪು ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.
ಪಡುಬೆಳ್ಳೆ: ನೇಣು ಬಿಗಿದು ಆತ್ಮಹತ್ಯೆ
ಶಿರ್ವ : ಪಡುಬೆಳ್ಳೆಯ ಮಧ್ವ ಕಾಲನಿ ನಿವಾಸಿ ಧರ್ಮರಾಜ್(40) ಅವರು ರವಿವಾರ ತನ್ನ ಮನೆ ಸಮೀಪದ ಮಾವಿನ ಮರದ ಕೊಂಬೆಗೆ ಚೂಡಿದಾರದ ಶಾಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನ ಸಹೋದರ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.