ಸೈನಿಕನಾಗಲು ಪ್ರೇರಣೆ ನೀಡಿದ್ದು ಕಾರ್ಗಿಲ್ ಯುದ್ಧ !
Team Udayavani, Mar 9, 2018, 3:29 PM IST
ಬಡತನದಿಂದಾಗಿ ಓದುವುದು ಕಷ್ಟ ವಾದರೂ ಛಲದಿಂದ ಶಿಕ್ಷಣ ಪಡೆದು ದೇಶಸೇವೆಯ ಉತ್ಕಟ ಆಕಾಂಕ್ಷೆಯನ್ನು ಈಡೇರಿಸಿದರು. ಸಿಆರ್‌ಪಿಎಫ್ನ ಹೆಮ್ಮೆಯ ಯೋಧನಾಗಿ, ಹುಟ್ಟೂರು ಆಲಂಕಾರಿಗೂ ಹೆಮ್ಮೆ ತಂದರು.
ಆಲಂಕಾರು: ಭಾರತ-ಪಾಕಿಸ್ಥಾನ ನಡುವೆ ನಡೆದ ಕಾರ್ಗಿಲ್ ಯುದ್ಧ ದೇಶದಲ್ಲಿ ದೇಶಪ್ರೇಮದ ಕಿಡಿಯನ್ನು ತೀವ್ರವಾಗಿ ಹೊತ್ತಿಸಿದ್ದು ಮಾತ್ರವಲ್ಲ ಹಲವು ಮಂದಿಗೆ ಸೇನೆಗೆ ಸೇರಲು ಪ್ರೇರಣೆಯೂ ಆಗಿತ್ತು. ಈ ಕಾರಣದಿಂದಾಗಿಯೇ ದೇಶಸೇವೆಗೆ ತೊಡಗಿದವರು ಆಲಂಕಾರು ನಾಡ್ತಿಲ ನಿವಾಸಿ ಚೆನ್ನಪ್ಪ.
ಬಡತನದ ಹಿನ್ನೆಲೆ
ಕೂಲಿ ಕೆಲಸ ಮಾಡುತ್ತ ತುತ್ತಿನ ತತ್ವಾರ ನೀಗಿಸಿಕೊಂಡು, ಮಕ್ಕಳ ವಿದ್ಯಾಭ್ಯಾಸಕ್ಕೂ ಒತ್ತು ನೀಡುವಲ್ಲಿ ಚೆನ್ನಪ್ಪ ಹೆತ್ತವರು ಕಷ್ಟ ಎದುರಿಸಿದ್ದರು. ಪರಿಣಾಮ ಮಕ್ಕಳ ವಿದ್ಯಾಭ್ಯಾಸ ಪ್ರಾಥಮಿಕ ಶಿಕ್ಷಣಕ್ಕೇ ಸ್ಥಗಿತಗೊಂಡಿತು. ಚೆನ್ನಪ್ಪನವರಿಗೂ ಸಮಸ್ಯೆಯಾದ್ದರಿಂದ 8 ನೇ ತರಗತಿ ವರೆಗೆ ಹೋಗಿದ್ದರು. ವಿದ್ಯಾಭ್ಯಾಸ ನಿಂತಾಗ ಹಠ ಬಿಡದೇ ಕೂಲಿ ಕೆಲಸ ಮಾಡಿ ಹಣ ಹೊಂದಿಸಿ, ವಿದ್ಯಾಭ್ಯಾಸ ಮುಂದುವರಿಸಲು ಪ್ರಯತ್ನಿಸಿದರು. 10 ನೇ ತರಗತಿ ಟ್ಯೂಷನ್‌ಗೆ ಹಾಜರಾಗಿ ನೇರವಾಗಿ ಪರೀಕ್ಷೆ ಬರೆದರು. ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯನ್ನೂ ಹೊಂದಿದರು. ಬಾಲ್ಯದಿಂದಲೇ
ಸೇನೆ ಬಗ್ಗೆ ಒಲವು ಹೊಂದಿದ್ದ ಅವರು, ಬಳಿಕ ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದರು.
ಶಿಕ್ಷಣ
ಚೆನ್ನಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಆಲಂಕಾರು ಸರಕಾರಿ ಹಿರಿಯ ಪ್ರಾಥುಕ ಶಾಲೆಯಲ್ಲಿ ಪೂರೈಸಿದ್ದರೆ, ಎಂಟನೇ ತರಗತಿಯನ್ನು ಆಲಂಕಾರು ಶ್ರೀ ದುರ್ಗಾಂಬ ಪ್ರೌಢ ಶಾಲೆಯಲ್ಲಿ ಮುಗಿಸಿದ್ದರು. 10ನೇ ತರಗತಿಗೆ ಕಡಬ ಕಿರಣ್ ರೈ ಟ್ಯೂಷನ್ ನೀಡಿದ್ದರು. 10ನೇ ತರಗತಿ ಉತ್ತೀರ್ಣ ಬಳಿಕ ಪೊಲೀಸ್ ಇಲಾಖೆ ಮತ್ತು ಸಿಆರ್‌ಪಿಎಫ್ ನೇಮಕಾತಿ ಪರೀಕ್ಷೆ ಬರೆದಿದ್ದು, ಸಿಆರ್‌ಪಿಎಫ್ನಲ್ಲಿ ತೇರ್ಗಡೆ ಹೊಂದಿದ್ದರು. ಶಾಲಾವಧಿಯಲ್ಲೇ ಉತ್ತಮ ಕ್ರೀಡಾಪಟುವಾಗಿದ್ದ ಚೆನ್ನಪ್ಪ ಅವರಿಗೆ ಕೇಂದ್ರೀಯ ಮೀಸಲು ಪಡೆ ಸೇರುವುದು ಕಷ್ಟವೇನೂ ಆಗಿರಲಿಲ್ಲ. ಸೈನಿಕರಾದ ಮೇಲೂ ಅಲ್ಲಿ ಅವರು ತಮ್ಮ ಕ್ರೀಡಾ ಸಾಧನೆ ಮೆರೆದಿದ್ದಾರೆ. ವಾಲಿಬಾಲ್, ಕಬಡ್ಡಿ ಸ್ಪರ್ಧೆಯಲ್ಲಿ ಹಲವು ಬಾರಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದ್ದಾರೆ.
ಮರೆಯದ ನೆನಪು
2009 ಮತ್ತು 2010ನೇ ಇಸವಿಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಈ ಸಂದರ್ಭದಲ್ಲಿ ಅಮರನಾಥ ಯಾತ್ರಾರ್ಥಿಗಳ ಮೇಲೆ ಉಗ್ರಗಾಮಿಗಳು ದಾಳಿ ಮಾಡುವ ಸಾಧ್ಯತೆ ಹೆಚ್ಚಿದ್ದರಿಂದ ಸರಕಾರ ರಕ್ಷಣೆಗಾಗಿ ನಮ್ಮ ತಂಡವನ್ನು ನಿಯೋಜಿಸಿತ್ತು. ಸತತ ಎರಡು ವರ್ಷ ಕರ್ತವ್ಯಕ್ಕೆ ನಿಯೋಜಿಸಿದ್ದು, ಈ ಸಂದರ್ಭದಲ್ಲಿ ಕರ್ತವ್ಯ ಯಶಸ್ವಿಯಾಗಿ ನಿರ್ವಹಿಸಿರುವುದು ಒಂದು ಮರೆಯದ ಅನುಭವ ಎನ್ನುತ್ತಾರೆ ಚೆನ್ನಪ್ಪ.
ಅವಿಭಕ್ತ ಕುಟುಂಬ
ಬಾಲಣ್ಣ ಕುಂಬಾರ ಮತ್ತು ಕುಂಞಕ್ಕೆ ದಂಪತಿಯ ಮೂರನೇ ಪುತ್ರ ಚೆನ್ನಪ್ಪ(29 ವ). ಅವರ ಪತ್ನಿ ಅಕ್ಷತಾ ಉಜಿರೆ ಪ್ರಸನ್ನಾ ಕಾಲೇಜಿನ ಉಪನ್ಯಾಸಕಿಯಾಗಿದ್ದಾರೆ. ಅಣ್ಣಂದಿರಾದ ವೆಂಕಪ್ಪ ಮತ್ತು ಉಮೇಶ್, ಅತ್ತಿಗೆಯಂದಿರಾದ ಅರುಣಾ ಹಾಗೂ ರಾಜೀ, ಸಹೋದರಿ ಲೀಲಾವತಿ ಅವರೊಂದಿಗಿನ ಸುಂದರ ಸಂಸಾರ ಅವರದ್ದು. ಚೆನ್ನಪ್ಪನವರ ಹೆತ್ತವರು ಕೂಲಿ
ಕೆಲಸ ಮಾಡಿದರೆ, ಸಹೋದರ ವೆಂಕಪ್ಪ ಉಜಿರೆಯಲ್ಲಿ ಫ್ಯಾನ್ಸಿ ಅಂಗಡಿಯಲ್ಲಿದ್ದಾರೆ. ಮತ್ತೋರ್ವ ಸಹೋದರ ಉಮೇಶ್ ಮರದ ಕೆತ್ತನೆ ಕೆಲಸ ಮಾಡುತ್ತಾರೆ.
ಜೀವನ ಪರ್ಯಂತ ದೇಶಸೇವೆಯ ಆಸೆ
ಸೇನೆಗೆ ಸೇರಿ ದೇಶಸೇವೆ ಮಾಡುವುದು ನಿಜಕ್ಕೂ ಒಂದು ವಿಶಿಷ್ಟ ಅನುಭವ. ಇನ್ನೂ ಹತ್ತು ವರ್ಷ ನಾನು ಸೇವೆ ಸಲ್ಲಿಸ
ಲಿದ್ದು, ನನ್ನ ಜೀವನ ಪರ್ಯಂತ ದೇಶಸೇವೆ ಮಾಡಬೇಕು ಎನ್ನುವುದು ನನ್ನ ಆಸೆ.
-ಚೆನ್ನಪ್ಪ
ಉನ್ನತ ಮಟ್ಟ ದ ಸೇವೆ ತಮ್ಮನದ್ದಾಗಲಿ
ದೇಶಸೇವೆಯ ಮೂಲಕ ನನ್ನ ಸಹೋದರ ಆಲಂಕಾರು ಗ್ರಾಮಕ್ಕೆ ಹೆಸರು ತಂದಿದ್ದಾನೆ. ಸೇನೆಗೆ ಸೇರುವ ಕನಸು ನನ್ನದೂ ಆಗಿತ್ತು. ಆದರೆ ಸೋದರನಿಗೆ ಮಾತ್ರ ಇದು ಸಾಧ್ಯವಾಗಿದೆ. ಇನ್ನಷ್ಟು ಉನ್ನತ ಮಟ್ಟದ ಸೇವೆ ಆತನದ್ದಾಗಲಿ.
– ಉಮೇಶ್, ಸಹೋದರ
ನನ್ನ ಕನಸು ನನಸಾಯಿತು
ದೇಶಸೇವೆಯಲ್ಲಿರುವ ಸೈನಿಕನನ್ನೇ ಮದುವೆಯಾಗಿ ಸಂಸಾರ ಮಾಡಬೇಕೆಂಬುದು ನನ್ನ ಕನಸಾಗಿತ್ತು. ಅದು
ಚೆನ್ನಪ್ಪರಂತಹ ಪತಿಯನ್ನು ಪಡೆಯುವ ಮೂಲಕ ನನಸಾಗಿದೆ. ದೇಶಸೇವೆಗಾಗಿ ನನ್ನ ಸರ್ವಸ್ವವನ್ನೂ ಧಾರೆ
ಎರೆಯಲು ನಾನು ಸಿದ್ಧ. ಸಂಸಾರದ ಭಾರವನ್ನು ಪತಿಯ ಹೆಗಲಿಗೆ ಹಾಕುವುದಿಲ್ಲ. ಎಲ್ಲವನ್ನೂ ನಾನೇ ನಿರ್ವಹಿಸಿ, ಪತಿಯ ದೇಶಸೇವೆಗೆ ಚ್ಯುತಿ ಬಾರದಂತೆ ಮುತುವರ್ಜಿವಹಿಸುತ್ತೇನೆ.
-ಅಕ್ಷತಾ, ಪತ್ನಿ
ಸದಾನಂದ ಆಲಂಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.