![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 13, 2022, 7:03 AM IST
ಮಂಗಳೂರು: ಕಡಲ್ಕೊರೆತದಿಂದ ಕಂಗೆಟ್ಟಿ ರುವ ಉಳ್ಳಾಲಕ್ಕೆ “ಸೀ ವೇವ್ ಬ್ರೇಕರ್’ ಎಂಬ ಹೊಸ ತಂತ್ರಜ್ಞಾನದ ಮೂಲಕ ಪರಿಹಾರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.
ಮಂಗಳವಾರ ಅವರು ಮಂಗಳೂರಿನ ಉಳ್ಳಾಲದ ಬಟ್ಟಪಾಡಿ ಭಾಗದಲ್ಲಿ ಕಡಲ್ಕೊರೆತದಿಂದ ಹಾನಿಗೊಂಡಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಹೊಸ ತಂತ್ರಜ್ಞಾನ ಅಲೆಗಳ ತೀವ್ರತೆಯನ್ನು ಕಡಿಮೆಗೊಳಿಸು ವಂಥದ್ದು ಎಂದರು.
ಬಟ್ಟಪಾಡಿಯಲ್ಲಿ ಹಿಂದೆ 800 ಮೀ.ಗಳಷ್ಟು ಕಡಲ್ಕೊರೆತ ಆಗಿತ್ತು, ಈಗ 600 ಮೀ.ಗಳಷ್ಟು ಪ್ರದೇಶ ಮತ್ತೆ ಕೊರೆತಕ್ಕೆ ಒಳಗಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರದ ಅಗತ್ಯವಿದೆ. ಸೀ ವೇವ್ ಬ್ರೇಕರ್ ತಂತ್ರಜ್ಞಾನದ ಬಗ್ಗೆ ಈಗಾಗಲೇ ತಜ್ಞರೊಬ್ಬರು ಪವರ್ ಪಾಯಿಂಟ್ ಮೂಲಕ ವಿವರಿಸಿದ್ದಾರೆ, ಅದನ್ನು ಇಲ್ಲಿ ಒಂದು ಕಿ.ಮೀ. ಉದ್ದಕ್ಕೆ ಅಳವಡಿಸುವುದಕ್ಕೆ ಸೂಚನೆ ನೀಡಿದ್ದೇನೆ ಎಂದರು.
ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ -ಮೂರು ಜಿಲ್ಲೆಗಳಲ್ಲೂ ಕಡಲ ಕೊರೆತದ ಸಮಸ್ಯೆ ಇದೆ. ಎಡಿಬಿ ಅನುದಾನದಲ್ಲಿ 300 ಕೋಟಿ ರೂ.ಗಳಷ್ಟು ನೆರವು ಪಡೆದು ಕೈಗೊಂಡಿರುವ ಕಾಮಗಾರಿಗಳು ಸರಿಯಾಗಿ ನಡೆದಿಲ್ಲ ಎಂಬ ಆರೋಪವಿದೆ. ಈಗ ಆಗಿರುವ ರಚನೆಗಳನ್ನು ಉಳಿಸಿ ಕೊಂಡು, ಅದನ್ನು ನಿರ್ವಹಣೆ ಮಾಡಿಕೊಂಡು ಹೋಗಬೇಕಾಗಿದೆ. ಕಡಲ್ಕೊರೆತ ತಡೆಗೆ ದೀರ್ಘಕಾಲದ ಯೋಜನೆ ಗಳನ್ನು ಬೆಂಗಳೂರಿನ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಕೈಗೊಳ್ಳಲಾಗುವುದು. ಜತೆಗೆ ತಾತ್ಕಾಲಿಕವಾಗಿ ಜನರಿಗೆ ಓಡಾಡುವುದಕ್ಕೆ ಬೇಕಾದಂತೆ ಕಲ್ಲುಗಳನ್ನು ಹಾಕಿ ವ್ಯವಸ್ಥೆ ಮಾಡಿಕೊಡುವುದಕ್ಕೂ ಸೂಚನೆ ನೀಡಿದ್ದೇನೆ ಎಂದರು.
ಭೂಕಂಪ ಅಧ್ಯಯನ
ಸುಳ್ಯ ಭಾಗದಲ್ಲಿ ಆಗಿರುವ ಭೂಕಂಪದ ಕುರಿತು ಮೂರ್‍ನಾಲ್ಕು ಸಂಸ್ಥೆಗಳು ಅಧ್ಯಯನ ನಡೆಸುತ್ತಿವೆ. ಬೆಂಗಳೂರು, ಮೈಸೂರು ವಿ.ವಿ.ಗಳಲ್ಲೂ ಅಧ್ಯಯನ ಮಾಡುತ್ತಿ ದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಬೇಕಾಗಿದೆ. ಅದಕ್ಕೆ ಸಂಬಂಧಿಸಿ ಅಧ್ಯಯನ ನಡೆಸಿ ಸಲಹೆ ನೀಡಿದರೆ ಅದನ್ನು ಅನುಷ್ಠಾನ ಮಾಡಲಾಗುವುದು. ಸೆಸ್ಮಿಕ್ ವಲಯದಲ್ಲಿ ನಿರಂತರ ಆಗುತ್ತಿರುವ ಭೂಕಂಪನಗಳ ಅಧ್ಯಯನಕ್ಕೆ ಕೇಂದ್ರ ಸರಕಾರ 40 ಕೋ.ರೂ. ಅನುದಾನ ಒದಗಿಸಿದೆ ಎಂದರು.
ಕಡಲ್ಕೊರೆತ ಸ್ಥಳಗಳಿಂದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿ ಎಲ್ಲ ವ್ಯವಸ್ಥೆ ಮಾಡುವಂತೆ ಡಿ.ಸಿ.ಗಳಿಗೆ ಸೂಚಿಸಿದ್ದೇನೆ. ಮಳೆ, ಕಡಲ್ಕೊರೆತ ಕುರಿತಂತೆ ಎಚ್ಚರಿಕೆ ಅಗತ್ಯ ಎಂದು ಸಿಎಂ ಹೇಳಿದರು.
ಕೇಂದ್ರದಿಂದ ಎನ್‌ಡಿಆರ್‌ಎಫ್ ನಿಧಿಯಲ್ಲಿ 739 ಕೋಟಿ ರೂ. ಅನುದಾನ ಬಂದಿದೆ. ಜಿಲ್ಲಾಧಿಕಾರಿಗಳು ಸಲ್ಲಿಸುವ ಬೇಡಿಕೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಶಿರಾಡಿ ರಸ್ತೆ: ಸರ್ವೇಗೆ ಸೂಚನೆ
ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟಿ ಪ್ರದೇಶದಲ್ಲಿ ರಸ್ತೆ ಕಾಮಗಾರಿ ಸರಿಯಾಗಿ ನಡೆದಿಲ್ಲ ಎಂಬ ಆರೋಪವಿದೆ. ಈ ಕುರಿತು ಸರ್ವೇ ನಡೆಸಲು ಈಗಾಗಲೇ ಲೋಕೋಪಯೋಗಿ ಸಚಿವರು ಸೂಚನೆ ನೀಡಿದ್ದಾರೆ. ನಾನು ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಜತೆಗೆ ಚರ್ಚೆ ಮಾಡಿದ್ದು, ಶಿರಾಡಿ ಘಾಟಿ ಚತುಷ್ಪಥ ಕಾಮಗಾರಿ ಪೂರ್ಣಗೊಂಡ ಕೂಡಲೇ ಸುರಂಗ ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು.
ಬೆಳಗ್ಗೆ ಕೊಡಗು ಜಿಲ್ಲೆಯ ಮೂಲಕ ಮಳೆಹಾನಿ ಪರಿಶೀಲನೆ ಆರಂಭಿಸಿದ ಸಿಎಂ ಬೊಮ್ಮಾಯಿ ಕೊಡಗು, ಸಂಪಾಜೆ, ಸುಳ್ಯ ಭಾಗಗಳಲ್ಲಿ ಭೂಕುಸಿತ, ಭೂಕಂಪದ ಹಾನಿಯನ್ನು ವೀಕ್ಷಿಸಿದರು.
“ಮಾರ್ಗ ಮಧ್ಯೆ ನೇತ್ರಾವತಿ- ಕುಮಾರಧಾರಾ ಸಂಗಮ ಪ್ರದೇಶದಲ್ಲಿ ತೋಟಗಳಿಗೆ ಹಾನಿಯಾಗಿರುವುದನ್ನು ವೀಕ್ಷಿಸಿದ್ದೇನೆ. ಬಂಟ್ವಾಳದಲ್ಲಿ ರಸ್ತೆ ಬಹಳಷ್ಟು ಕೆಟ್ಟಿದೆ, ಭೂಕುಸಿತ ಆಗಿದೆ ಅವೆಲ್ಲವನ್ನೂ ವೀಕ್ಷಿಸಿದ್ದೇನೆ, ಪರಿಹಾರ ಚೆಕ್ ವಿತರಿಸಿದ್ದೇನೆ’ ಎಂದು ಸಿಎಂ ಮಂಗಳೂರಿನಲ್ಲಿ ತಿಳಿಸಿದರು.
ಬೆಂಗಳೂರಿನಲ್ಲಿ ಕಡಲ್ಕೊರೆತ ಸಭೆ
ಸಿಎಂ ಬೊಮ್ಮಾಯಿ ಅವರು ಮಂಗಳೂರು ತಲುಪುವಾಗ ರಾತ್ರಿಯಾಗಿದ್ದು, ಸುರಿಯುವ ಮಳೆಯ ನಡುವೆಯೇ ಉಳ್ಳಾಲದಲ್ಲಿ ಕಡಲ್ಕೊರೆತ ಸ್ಥಳವನ್ನು ವೀಕ್ಷಿಸಿದರು. ಸ್ಥಳೀಯ ಶಾಸಕ ಯು.ಟಿ. ಖಾದರ್ ಅವರ ಮನವಿ ಸ್ವೀಕರಿಸಿ, ಬೆಂಗಳೂರಿನಲ್ಲಿ ಈ ಸಂಬಂಧ ಸಭೆ ಕರೆಯುವುದಾಗಿ ತಿಳಿಸಿದರು.
ಸಚಿವರಾದ ಆರ್. ಅಶೋಕ್, ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಸಂತೋಷ್ ರೈ ಬೊಳಿಯಾರ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಸತೀಶ್ ಕುಂಪಲ, ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ, ಪೊಲೀಸ್ ಆಯುಕ್ತ ಶಶಿಕುಮಾರ್, ಜಿ.ಪಂ. ಸಿಇಒ ಡಾ| ಕುಮಾರ್ ಇದ್ದರು.
ದಿನವಿಡೀ ಸಿಎಂ ಮಳೆಹಾನಿ ವೀಕ್ಷಣೆ
ಕೊಡಗು ಜಿಲ್ಲೆಯಲ್ಲಿ ಮಳೆಹಾನಿ ಪ್ರದೇಶ ವೀಕ್ಷಣೆ ಮುಗಿಸಿ ದಕ್ಷಿಣ ಕನ್ನಡಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸುಳ್ಯ ತಾಲೂಕಿನ ಗಡಿಯಲ್ಲಿ ಸ್ವಾಗತಿಸಲಾಯಿತು. ಬಳಿಕ ಸುಳ್ಯದಲ್ಲಿ ಅಧಿ ಕಾರಿಗಳು, ಸಚಿವರು, ಶಾಸಕರಿಂದ ಜಿಲ್ಲೆ ಮತ್ತು ತಾಲೂಕಿನಲ್ಲಿ ಮಳೆಯಿಂದ ಉಂಟಾಗಿರುವ ಹಾನಿ ವಿವರ ಪಡೆದುಕೊಂಡರು. ಇದಕ್ಕೆ ಮುನ್ನ ಅವರು ಸಂಪಾಜೆ ಯಲ್ಲಿ ಭೂಕಂಪನದಿಂದ ಹಾನಿಗೊಳಗಾದ ಮನೆಗೆ ಭೇಟಿ ನೀಡಿದರು. ಉಪ್ಪಿನಂಗಡಿಯಲ್ಲಿ ನೆರೆ ನೀರಿನಲ್ಲಿ ಮುಳುಗಿದ್ದ ತೋಟ , ಬಳಿಕ ಕುಮಾರಧಾರಾ ಸೇತುವೆ ಯಿಂದ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ಸಂಗಮ ದೃಶ್ಯವನ್ನು ವೀಕ್ಷಿಸಿದರು.
ಇಂದು ಉಡುಪಿ,ಉ.ಕ. ಭೇಟಿ
ಮಂಗಳವಾರ ರಾತ್ರಿ ಉಡುಪಿ ತಲುಪಿ ಮಣಿಪಾಲದಲ್ಲಿ ವಾಸ್ತವ್ಯ ಹೂಡಿದ ಸಿಎಂ ಬೊಮ್ಮಾಯಿ ಬುಧವಾರ ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿಯೂ ಮಳೆಹಾನಿ ಪ್ರದೇಶಗಳ ವೀಕ್ಷಣೆ ನಡೆಸಲಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.