ಕರಾವಳಿ – ಕೊಡಗಿನ ಹನ್ನೊಂದು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ 


Team Udayavani, Nov 29, 2018, 10:44 AM IST

karn.jpg

ಕರ್ನಾಟಕ  ರಾಜ್ಯ ಸರ್ಕಾರ ಬುಧವಾರ ಪ್ರಕಟಿಸಿದ ರಾಜ್ಯ ಪ್ರಶಸ್ತಿಗೆ ಕರಾವಳಿ ಕೊಡಗು ಭಾಗದ ಹಲವರು ಭಾಜರಾಗಿದ್ದಾರೆ. ಅವರ ಪರಿಚಯ ಇಲ್ಲಿದೆ.

ಡಿ. ಸುರೇಂದ್ರ ಕುಮಾರ್‌
ಬೆಳ್ತಂಗಡಿ: ಉಜಿರೆ ಎಸ್‌ಡಿಎಂ ಎಜುಕೇಶನ್‌ ಸೊಸೈಟಿಯ ಉಪಾಧ್ಯಕ್ಷ ಡಿ. ಸುರೇಂದ್ರಕುಮಾರ್‌ ಅವರು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಸಹೋದರ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಯಾಗಿ, ಮೈಸೂರಿನ ಎಸ್‌ಡಿಎಂ ಇನ್‌ಸ್ಟಿಟ್ಯೂಟ್‌ ಫಾರ್‌ ಮ್ಯಾನೇಜ್‌ಮೆಂಟ್‌ ಡೆವಲಪ್‌ಮೆಂಟ್‌ನ ಗವರ್ನಿಂಗ್‌ ಕೌನ್ಸಿಲ್‌ ಸದಸ್ಯರಾಗಿ, ಎಸ್‌ಡಿಎಂ ಧರ್ಮೋತ್ಥಾನ ಟ್ರಸ್ಟ್‌ನ ಸದಸ್ಯರಾಗಿ, ಕರ್ಣಾಟಕ ಬ್ಯಾಂಕ್‌ನ ನಿರ್ದೇಶಕರಾಗಿ, ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್‌ ಟ್ರಸ್ಟ್‌ನ ಸದಸ್ಯರಾಗಿ, ಸರ್ವೋದಯ ಅಂತಾರಾಷ್ಟ್ರೀಯ ಟ್ರಸ್ಟ್‌ನ ಕರ್ನಾಟಕ ಚಾಪ್ಟರ್‌ನ ಚೇರ್‌ಪರ್ಸನ್‌ ಆಗಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಎಲ್ಲ ಸೇವಾ ಕಾರ್ಯಗಳಲ್ಲೂ ಸಕ್ರಿಯರಾಗಿರುವ ಅವರು ಉದ್ಯಮಿಯೂ ಹೌದು. ಕರ್ನಾಟಕಿ ಸಂಗೀತ, ಕ್ರಿಕೆಟ್‌ಗಳಲ್ಲಿ ಅಪಾರ ಆಸಕ್ತಿ, ಪುಸ್ತಕ ಓದುವ ಹವ್ಯಾಸವನ್ನು ಹೊಂದಿದ್ದಾರೆ.

ಅಮ್ಮೆಂಬಳ ಆನಂದ 
ಉಡುಪಿ: ಹಿರಿಯ ಪತ್ರಕರ್ತ ಅಮ್ಮೆಂಬಳ ಆನಂದ ಅವರು 1927ರಲ್ಲಿ ಬಂಟ್ವಾಳ ತಾಲೂಕಿನ ಅಮ್ಮೆಂಬಳದಲ್ಲಿ ಜನಿಸಿದರು. ನವಭಾರತ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. ಧಾರವಾಡದ ನವಯುಗ ಪತ್ರಿಕೆಯಲ್ಲಿ ಉಪಸಂಪಾದಕನಾಗಿದ್ದರು. ಜಾರ್ಜ್‌ ಫೆರ್ನಾಂಡಿಸ್‌ ಮತ್ತು ಕೆ.ಆರ್‌. ಕಾರಂತರ ಒಡನಾಡಿ ಯಾಗಿದ್ದರು. “ಜನ ಸೇವಕನ ನೆನಪಿನಂಗಳ’ ಇವರ ಲೇಖನಗಳ ಸಂಕಲನ. 1955 ಜ.26ರಿಂದ 1962ರ ಆ.2ರ ವರೆಗೆ “ಜನಸೇವಕ’ದ ಸಂಪಾದಕರಾಗಿದ್ದರು. ಬಳಿಕ ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ಗಳ ವರದಿಗಾರನಾಗಿ ನಿವೃತ್ತ ರಾದರು. “ಪತ್ರಿಕೋದ್ಯಮ ಮತ್ತು ಉತ್ತರ ಕನ್ನಡ’ ಇವರ ಪ್ರಕಟಿತ ಕೃತಿ. ಕರ್ನಾಟಕ ವಿವಿ ಸೆನೆಟ್‌ ಸಿಂಡಿಕೇಟ್‌ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. 1987ರಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿಯ ಗೌರವ ಪ್ರಶಸ್ತಿ, 1996ರಲ್ಲಿ ಖಾದ್ರಿ ಶಾಮಣ್ಣ ನೆನಪಿನ ಪ್ರಶಸ್ತಿ ಪಡೆದಿದ್ದರು. ಪ್ರಸ್ತುತ ಮಣಿಪಾಲದಲ್ಲಿ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ.

ಡಾ| ಎ.ಎ. ಶೆಟ್ಟಿ
ಕುಂದಾಪುರ
: ಕೀಲು ನೋವು, ಮೂಳೆ ನೋವು ಚಿಕಿತ್ಸೆಗೆ ಸಂಬಂಧಿಸಿ, ಆಕರ ಜೀವಕೋಶ ಚಿಕಿತ್ಸೆಯ ಮೂಲಕ ಮೂಳೆ ಬೆಳವಣಿಗೆ ಆಗುವಂತೆ ಮಾಡುವ ಅಮೂಲ್ಯ ಚಿಕಿತ್ಸಾ ಸಂಶೋಧನೆಯೊಂದು ಅತ್ಯಂತ ಕಡಿಮೆದರದಲ್ಲಿ ಜನಸಾಮಾನ್ಯರಿಗೂ ಲಭ್ಯ ವಾಗುವಂತೆ ಮಾಡಿದ ಡಾ| ಎ.ಎ. ಶೆಟ್ಟಿ (ಅಸೋಡು ಅನಂತ್ರಾಮ ಶೆಟ್ಟಿ) ಕೋಟೇಶ್ವರದ ಅಸೋಡು ಮೂಲದವರು. ಪ್ರಸ್ತುತ ಲಂಡನ್‌ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ.  
ತಜ್ಞ ವೈದ್ಯ, ಪ್ರಾಧ್ಯಾಪಕರಾಗಿರುವ ಡಾ| ಶೆಟ್ಟಿ, ಲಂಡನ್‌ನಲ್ಲಿ ಮೂಳೆ, ಮೊಣಕಾಲಿನ ಶಸ್ತ್ರಚಿಕಿತ್ಸಾ ತಜ್ಞರಾಗಿ ಖ್ಯಾತರು. ತಮ್ಮ ಅಮೂಲ್ಯ ಸಂಶೋಧನೆಯನ್ನು ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಕಳೆದ ವರ್ಷ ಹಸ್ತಾಂತರಿಸಿದ್ದರು. 2017ರಲ್ಲಿ ರಾಯಲ್‌ ಕಾಲೇಜ್‌ ಆಫ್‌ ಸರ್ಜನ್ಸ್‌ ಆಫ್‌ ಇಂಗ್ಲಂಡ್‌ನಿಂದ ಜಾಗತಿಕ ವೈದ್ಯ ಸಂಶೋಧನ ಕ್ಷೇತ್ರದ “ಸರ್ಜಿಕಲ್‌ ನೊಬೆಲ್‌’ ಎಂದೇ ಪರಿಗಣಿತವಾದ “ಹಂಟೇರಿಯನ್‌ ಮೆಡಲ್‌’ಗೆ ಭಾಜನರಾಗಿದ್ದರು. 

ಅಣ್ಣು ದೇವಾಡಿಗ
ಬೆಳ್ತಂಗಡಿ:
 ಧರ್ಮಸ್ಥಳ ಕ್ಷೇತ್ರದ ನಾಗಸ್ವರ ವಾದಕ, ಆಕಾಶವಾಣಿ ಎ ಗ್ರೇಡ್‌, ದೂರದರ್ಶನ ಕಲಾವಿದ ಅಣ್ಣು ದೇವಾ ಡಿಗ ಸಂಗೀತ ಕ್ಷೇತ್ರದ ಸಾಧಕ. ತನ್ನ 9ನೇ ವಯಸ್ಸಿನಲ್ಲಿ ಟಿ.ಎಂ. ಗೋವಿಂದರಾಜ ಪಿಳ್ಳೈ ಅವರಿಂದ ನಾಗಸ್ವರ ಕಲಿಕೆ ಆರಂಭಿಸಿದರು. ಬಳಿಕ ಗುರುಗಳಾದ ಕೋದಂಡರಾಮ ಮತ್ತು ಕೆ.ಎನ್‌. ರಾಜರತ್ನ ಪಿಳ್ಳೈ ಅವರಿಂದ ಹೆಚ್ಚಿನ ಜ್ಞಾನವನ್ನು ಪಡೆದರು. 1985ರಲ್ಲಿ ಆಕಾಶವಾಣಿ – ದೂರದರ್ಶನ ಕಲಾವಿದರಾಗಿಯೂ ಅವಕಾಶ ಪಡೆದರು. ತನ್ನ ನಾಗಸ್ವರ ವಾದನ ಕ್ಷೇತ್ರದ ಸಾಧನೆಗಾಗಿ ನಾಗಸ್ವರ ಪಟು, ನಾಗಸ್ವರ ದೊರೆ ಎಂಬ ಬಿರುದನ್ನೂ ಪಡೆದಿದ್ದಾರೆ. ಚೆನ್ನೈಯಲ್ಲಿ ವಿಶೇಷ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನೃತ್ಯ ಅಕಾಡೆಮಿ ಕಲಾಶ್ರೀ ಪ್ರಶಸ್ತಿ ಪಡೆದಿದ್ದಾರೆ. 2012ರಲ್ಲಿ ಮಲೇಶಿಯಾದ ದೇವಸ್ಥಾವೊಂದರಲ್ಲಿ ನಾಗಸ್ವರ ವಾದನ ನೀಡಿದ ಕೀರ್ತಿ ಇವರದು. 2017ರಲ್ಲಿ ಧರ್ಮಾಧಿಕಾರಿ ಡಾ| ಹೆಗ್ಗಡೆ ಅವರ 50ನೇ ಪಟ್ಟಾಭಿಷೇಕ ವರ್ಷಾಚರಣೆಯ ಸಂದರ್ಭ ಪೂಜ್ಯರಿಂದ ವಿಶೇಷ ಸಮ್ಮಾನ ಪಡೆದಿದ್ದಾರೆ.

ಹಿರಿಯಡಕ ಗೋಪಾಲ ರಾವ್‌
ಉಡುಪಿ
: ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲರಾಯರು 1919 ಡಿ.15ರಂದು ಜನಿಸಿದವರು. 99ರ ಹರೆಯದ ಗೋಪಾಲ ರಾಯರು ಸ್ವಾತಂತ್ರ್ಯ ಹೋರಾಟಗಾರರೂ ಹೌದು. ತಂದೆ ಶೇಷಗಿರಿ ರಾವ್‌ ಅವರಿಂದ ಮದ್ದಳೆ, ಗುರು ನಾಗಪ್ಪ ಕಾಮತ್‌ ಅವರಿಂದ ನೃತ್ಯ ಕಲಿತರು. 1934ರಲ್ಲಿ ಹಿರಿಯಡಕ ಮೇಳ ದಲ್ಲಿ ಪಾತ್ರಧಾರಿಯಾಗಿ ಪ್ರವೇಶ. 1936ರಲ್ಲಿ ಒತ್ತು ಮದ್ದಳೆಗಾರರಾದರು. 1937ರಲ್ಲಿ ಮುಖ್ಯ ಮದ್ದಳೆಗಾರನಾಗಿ ಪೆರ್ಡೂರು ಮೇಳ ಪ್ರವೇಶಿಸಿದರು. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಅಧ್ಯಾಪಕರಾಗಿದ್ದರು, ಡಾ| ಶಿವರಾಮ ಕಾರಂತ ಅವರ ಯಕ್ಷ ಪ್ರಯೋಗಗಳಿಗೆ ಸಾಥ್‌ ನೀಡಿದ್ದರು. 1972ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ. 1969ರಲ್ಲಿ ಅಮೆರಿಕದ ಜಾನಪದ ತಜ್ಞ ಪೀಟರ್‌ ಕ್ಲಾಸ್‌ ಅವರಿಗೆ ಮದ್ದಳೆ ವಾದನ, ಯಕ್ಷಗಾನ ಕಲಿಸಿ ವಿದೇಶದಲ್ಲೂ ಯಕ್ಷಗಾನದ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಸಂಶೋಧಕಿ ಮಾರ್ಥಾ ಆ್ಯಶನ್‌ ಅವರ ಯಕ್ಷಗಾನ ಸಂಶೋಧನೆಗೆ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ.

ವಿ.ಎಸ್‌. ವಿನಯ
ಮಡಿಕೇರಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿ.ಎಸ್‌. ವಿನಯ ಅವರು ಭಾರತೀಯ ರಾಷ್ಟ್ರೀಯ ಹಾಕಿ ತಂಡದ ಕ್ರೀಡಾಪಟುಗಳಲ್ಲೊಬ್ಬರು. 10 ವರ್ಷ ಅವರು ಹಾಕಿ ತಂಡಕ್ಕಾಗಿ ಆಡಿದ್ದು, ವಿಶ್ವಕಪ್‌, ಏಷ್ಯನ್‌ ಗೇಮ್ಸ್‌, ಜೂ. ವರ್ಲ್ಡ್ಕಪ್‌, ಕಾಮನ್‌ವೆಲ್ತ್‌, ಒಲಿಂಪಿಕ್ಸ್‌ ಅರ್ಹತಾ ಸುತ್ತು ಇತ್ಯಾದಿ ಅಂ.ರಾ. ಸ್ಪರ್ಧೆಗಳಲ್ಲಿ ಭಾರತದ ಪರ ಆಡಿದ್ದಾರೆ. ಜತೆಗೆ ಸ್ಟಟ್‌ಗರ್ಟ್ಸ್ ಕಿಕ್ಕರ್ ಜರ್ಮನಿ, ಎಫ್ಸಿ ಬಾರ್ಸಿಲೋನಾ ಸ್ಪೇನ್‌ ಇತ್ಯಾದಿ ವಿದೇಶಿ ಲೀಗ್‌ಗಳಲ್ಲೂ ಮಿಂಚಿದ್ದಾರೆ. ಏಕಲವ್ಯ ಪ್ರಶಸ್ತಿ, ಕೆಎಒ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ಫೆಡರೇಶನ್‌ ಆಫ್ ಹಾಕಿ ಪ್ಲೇಯರ್‌ ಆಫ್ ದಿ ಇಯರ್‌ನಲ್ಲಿ ಟಾಪ್‌ 10 ಒಳಗೆ ಹೆಸರು ಮಾಡಿದ್ದರು. ಸದ್ಯ ಅವರು ಏರ್‌ ಇಂಡಿಯಾ ಉದ್ಯೋಗಿ.

ಜೈಜಗದೀಶ್‌ 
ನಟ, ನಿರ್ದೇಶಕ ಜೈ ಜಗದೀಶ್‌ ಅವರ ಹುಟ್ಟೂರು ಸೋಮವಾರ ಪೇಟೆ ತಾಲೂಕಿನ ಕಾರೆಕೊಪ್ಪ ಗ್ರಾಮದ ಬೇಳೂರು. 1956ರ ಜೂನ್‌ 19ರಂದು ಜನನ. ತಂದೆ ಪೂವಯ್ಯ, ತಾಯಿ ಗೌರಮ್ಮ. ಮೂಲತಃ ಕೃಷಿ ಕುಟುಂಬದಿಂದ ಬಂದ ಅವರು 1973ರಲ್ಲಿ “ಫ‌ಲಿತಾಂಶ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಪುಟ್ಟಣ್ಣ ಕಣಗಾಲ್‌ ಅವರ ಸಿನೆಮಾ ಜಗತ್ತಿನ ಗುರುಗಳು. 800 ಚಲನಚಿತ್ರಗಳಲ್ಲಿ ಅಭಿನಯಿಸಿದ್ದಲ್ಲದೆ ನಿರ್ದೇಶಕ, ನಿರ್ಮಾಪಕರಾಗಿಯೂ ಹೆಸರು ಮಾಡಿದ್ದಾರೆ.  ಅವರು ನಿರ್ದೇಶಿಸಿರುವ “ಮುಂಗಾರಿನ ಮಿಂಚು’, ಕುರಿಗಳು ಸರ್‌ ಕುರಿಗಳು’ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ, “ಭೂಮಿ ತಾಯ ಚೊಚ್ಚಲ ಮಗ’, “ಕೋತಿಗಳು ಸರ್‌ ಕೋತಿಗಳು’, “ಕಾಂಚನ ಗಂಗಾ’ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಮತ್ತು ಫಿಲಂಫೇರ್‌ ಅವಾರ್ಡ್‌ ಗಳು ಅರಸಿಬಂದಿವೆ. ಪತ್ನಿ ವಿಜಯಲಕ್ಷ್ಮೀ ಮತ್ತು ನಾಲ್ವರು ಪುತ್ರಿಯರ ಸಂಸಾರ ಅವರದು. ಅವರು ನಿರ್ಮಿಸಿ, ನಿರ್ದೇಶಿಸಿರುವ ಇತ್ತೀಚಿನ ಚಿತ್ರ “ತಾಣ’. ಅದರಲ್ಲಿ ಅವರ ನಾಲ್ವರು ಪುತ್ರಿಯರೂ ಪಾತ್ರ ವಹಿಸಿರುವುದು ವಿಶೇಷ. ಚಿತ್ರ ಇನ್ನಷ್ಟೇ ತೆರೆ ಕಾಣಬೇಕಿದೆ.

ಆನಂದ್‌ ಸಿ.ಕುಂದರ್‌
ಕೋಟ:  
ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆಗೈಯುತ್ತಿರುವ ಉದ್ಯಮಿ ಆನಂದ್‌ ಸಿ. ಕುಂದರ್‌. ಕೋಟ ಸಮೀಪದ ಮಣೂರು ಪಡುಕರೆಯ ನಿವಾಸಿಯಾಗಿರುವ ಇವರು ಹುಟ್ಟೂರಿನಲ್ಲೇ ಜನತಾ ಫಿಶ್‌ಮಿಲ್‌ ಎನ್ನುವ ಯಶಸ್ವಿ ಉದ್ಯಮವನ್ನು ನಡೆಸುತ್ತಿದ್ದಾರೆ. ಜತೆಗೆ ಗೀತಾನಂದ ಫೌಂಡೇಶನ್‌ ಪ್ರವರ್ತಕರಾಗಿ ಸಮಾಜ ಸೇವೆಗೈಯುತ್ತಿದ್ದಾರೆ. 2017ನೇ ಸಾಲಿನಲ್ಲಿ ಆರೋಗ್ಯ, ಧಾರ್ಮಿಕ, ಶಿಕ್ಷಣ ಮುಂತಾದ ಸಮಾಜಮುಖೀ ಕಾರ್ಯ ಕ್ರಮಗಳಿಗಾಗಿ ಈ ಫೌಂಡೇಶನ್‌ ಸುಮಾರು 60 ಲಕ್ಷ ರೂ.ಗೂ ಅಧಿಕ ಸಹಾಯಧನ ನೀಡಿದೆ.  ಪ್ರತಿ ವರ್ಷ ಸ್ಥಳೀಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ 35 ಲಕ್ಷ ರೂ.ಗಿಂತ ಅಧಿಕ ಮೌಲ್ಯದ ಶೈಕ್ಷಣಿಕ ಸಹಾಯಧನ, ಶೈಕ್ಷಣಿಕ ಪರಿಕರ ವಿತರಣೆ ನಡೆಸುತ್ತಿದೆ. ಕೋಟ ಅಮೃತೇಶ್ವರೀ ದೇವಸ್ಥಾನ, ಬೆಣ್ಣೆಕುದ್ರು ಕುಲಮಹಾಸ್ತ್ರೀ ದೇವಸ್ಥಾನ, ಕೋಡಿ ಮಹಾಸತೀಶ್ವರಿ ದೇವಸ್ಥಾನ ಸೇರಿದಂತೆ ಹಲವಾರು ದೇಗುಲಗಳಆಡಳಿತಮಂಡಳಿಗಳ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಟೀಲು ಸೀತಾರಾಮ ಕುಮಾರ್‌
ಕಿನ್ನಿಗೋಳಿ: ಉದ್ಯೋಗ ಅರಸಿ ಮುಂಬಯಿಗೆ ಹೋದರೂ ಬಳಿಕ ಯಕ್ಷಗಾನ ಆಸಕ್ತಿ ಬೆಳೆಸಿಕೊಂಡು ತೆಂಕು- ಬಡಗು ತಿಟ್ಟುಗಳಲ್ಲಿ ಪ್ರಸಿದ್ಧ ಹಾಗೂ ಬೇಡಿಕೆಯ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡವರು ಸೀತಾರಾಮ ಕುಮಾರ್‌. ವಿಶಿಷ್ಟ ಬಣ್ಣಗಾರಿಕೆ, ಸಂಭಾಷಣೆ, ವಾದ ಸಂವಾದಗಳಲ್ಲಿ ಅವರದು ಸೃಜನಶೀಲತೆಯ ಶುದ್ಧ ಹಾಸ್ಯ.
1955ರ ಅ.10ರಂದು ಜನಿಸಿದ ಸೀತಾರಾಮ ಅವರು ಬಾಲ್ಯದಲ್ಲಿ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ಏಕಲವ್ಯನಂತೆ ಗುರುವಿಲ್ಲದೆ ಕಲಿತರು. ಉದ್ಯೋಗ ಅರಸಿ ಮುಂಬಯಿಗೆ ಹೋದವರು ಸಂಘ ಸಂಸ್ಥೆಗಳ ಯಕ್ಷಗಾನ ಪ್ರದರ್ಶನಗಳಲ್ಲಿ ಪಾತ್ರ ಮಾಡತೊಡಗಿದರು. ಅನಂತರ ಕದ್ರಿ ಮೇಳಕ್ಕೆ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರ ಮೂಲಕ ಪುಂಡು ವೇಷಧಾರಿಯಾಗಿ ಸೇರಿದರು. ಕ್ರಮೇಣ ವಾಸುದೇವ ಸಾಮಗರಿಂದಾಗಿ ಹಾಸ್ಯಗಾರರಾದರು. ಬಳಿಕ ಬಡಗಿನ ಪೆರ್ಡೂರು ಮೇಳದಲ್ಲಿ ಖ್ಯಾತಿ ಗಳಿಸಿದರು. ಪ್ರಸ್ತುತ ತೆಂಕಿನ ಹನುಮಗಿರಿ ಮೇಳದ ಪ್ರಧಾನ ಹಾಸ್ಯಗಾರರಾಗಿದ್ದಾರೆ. 

ಕೃಷ್ಣಕುಮಾರ್‌ ಪೂಂಜ
ಬಂಟ್ವಾಳ: ಕೃಷ್ಣ ಕುಮಾರ್‌ ಪೂಂಜ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿಯಾಗಿ ಮೂರು ದಶಕಗಳ ಹಿಂದೆ ದೇರಳಕಟ್ಟೆ ಜ| ಕೆ.ಎಸ್‌. ಹೆಗ್ಡೆ ಆಸ್ಪತ್ರೆಯ ಘಟಕವನ್ನು ಬಳಸಿಕೊಂಡು ಸೇವೆ ಆರಂಭಿಸಿದರು. ಆರೋಗ್ಯ ಕ್ಷೇತ್ರದಲ್ಲಿ ಸಹಾಯ- ಸೇವೆಗಳ ಮೂಲಕ ಸೇವಾಂಜಲಿ ಇಂದು ವಿಶಾಲ ಸ್ವರೂಪ ಪಡೆದಿದೆ. ರಕ್ತದಾನ ಶಿಬಿರ ಸಂಘಟಿಸುತ್ತಿದೆ. ದೀನ ದುರ್ಬಲರಿಗೆ, ಅಶಕ್ತರಿಗೆ, ನೋವುಂಡವರಿಗೆ ನಿತ್ಯ ನಿರಂತರ ಸೇವಾಂಜಲಿಯ ಮೂಲಕ ಸೇವೆ ನೀಡುತ್ತಾ ಬಂದಿದ್ದಾರೆ.  ಧಾರ್ಮಿಕ ಕ್ಷೇತ್ರದಲ್ಲೂ  ಸೇವೆ ಸಲ್ಲಿಸಿದ್ದಾರೆ. ವರ್ಷಂಪ್ರತಿ ಆಮ್‌ ಆದ್ಮಿ ಗುಂಪು ವಿಮಾ ಯೋಜನೆ, ವಿದ್ಯಾರ್ಥಿವೇತನ, ಪ್ರತಿಭಾವಂತ ಬಡ ಕುಟುಂಬಗಳ ನೂರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಪೂರ್ತಿ ವೆಚ್ಚ ಭರಿಸುವುದು ಅವರ ಸಮಾಜ ಸೇವೆಯ ವಿವಿಧ ಸ್ವರೂಪಗಳು. ಸೇವಾಂಜಲಿ ಮೂಲಕ ಕೆ.ಎಸ್‌. ಹೆಗ್ಡೆ ಆಸ್ಪತ್ರೆಯ ಕ್ಷೇಮಾ ಆರೋಗ್ಯ ಕಾರ್ಡ್‌ ಮೂಲಕ ಸುಮಾರು ಹತ್ತು ಸಾವಿರ ಮಂದಿಗೆ ಆರೋಗ್ಯ ವಿಮೆಯನ್ನು ಪ್ರತಿವರ್ಷ ಉಚಿತವಾಗಿ ಒದಗಿಸುತ್ತಿದ್ದಾರೆ. 

ಗುರುವ ಕೊರಗ 
ಉಡುಪಿ: ಕೊರಗ ಪರಂಪರೆಯ ವಾದ್ಯ ಕಡ್ಡಾಯಿ (ಡೋಲು) ನುಡಿಸುವುದರ ಮೂಲಕ ಜನಪದ ಸಂಸ್ಕೃತಿಯ ಅನನ್ಯತೆಯನ್ನು ಪರಿಚಯಿಸುತ್ತಿರುವ ಶತಾಯುಷಿ ಗುರುವ ಕೊರಗ ಅವರು ಕಡ್ಡಾಯಿ ಸಂಸ್ಕೃತಿಯ ಬಗ್ಗೆ ಮೊದಲು ರಾಷ್ಟ್ರೀಯ ಗಮನ ಸೆಳೆದದ್ದು 1988ರಲ್ಲಿ ಮಂಗಳೂರು ಆಕಾಶವಾಣಿಯ ಮೂಲಕ. ಗುರುವ ಅವರು ಇಳಿ ವಯಸ್ಸಿನಲ್ಲೂ ಡೋಲು ಬಾರಿಸಲು ಆರಂಭಿಸಿದರೆ ತರುಣರನ್ನು ನಾಚಿಸುತ್ತಾರೆ. ಸುಮಾರು ಐದೂ ಮುಕ್ಕಾಲು ಅಡಿ ಎತ್ತರದ ಆಜಾನುಬಾಹು15 ಕೆ.ಜಿ. ತೂಕದ ಡೋಲನ್ನು ಹೊತ್ತು ಒಂದೂವರೆ ಗಂಟೆ ಕಾಲ ಲೀಲಾಜಾಲವಾಗಿ ಬಾರಿಸುತ್ತಾರೆ. ಸಾಂಪ್ರದಾಯಿಕ ಡೋಲು ಬಾರಿಸುವಿಕೆಯಲ್ಲಿ ಅಪ್ರತಿಮ ಪ್ರತಿಭೆ. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ ಸಂಸ್ಥೆಗಳು, ಉಡುಪಿ ಆರ್‌ಆರ್‌ಸಿ, ಮಣಿಪಾಲದ ಮಾಹೆ, ಎಂಜಿಎಂ ಕಾಲೇಜು ವತಿಯಿಂದ ಕಳೆದ ಮಾರ್ಚ್‌ನಲ್ಲಿ ಗುರು ಕೊರಗ ಅವರ ಶತಮಾನೋತ್ಸವ ವನ್ನು ಉಡುಪಿಯಲ್ಲಿ ಆಯೋಜಿಸಲಾಗಿತ್ತು.

ಟಾಪ್ ನ್ಯೂಸ್

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

Ullala-Balepuni

Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.