ಹತ್ತೂರಿನಿಂದ ಹರಿದುಬಂತು ಹೊರೆಕಾಣಿಕೆ; ತುಂಬಿ ತುಳುಕಿದ ಉಗ್ರಾಣ
Team Udayavani, Jan 30, 2020, 11:47 PM IST
ಮಹಾನಗರ/ಬಜಪೆ: ಕಟೀಲಿನ ಮಹಾತಾಯಿಯ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ಹೊರೆಕಾಣಿಕೆಯ ಉಗ್ರಾಣ ತುಂಬಿ ತುಳುಕುತ್ತಿದೆ. ಹತ್ತಾರು ಭಾಗಗಳಿಂದ ಹರಿದುಬಂದ ಬಗೆ ಬಗೆಯ ವಸ್ತುಗಳಿಂದಾಗಿ ಉಗ್ರಾಣ ಭರ್ತಿಯಾಗಿದ್ದು, ಭಕ್ತರ ಆಕರ್ಷಣೆಗೆ ಕಾರಣವಾಗಿದೆ.
ಶ್ರೀಕ್ಷೇತ್ರ ಕಟೀಲಿಗೆ ಜ. 22ರಿಂದ ಹೊರೆಕಾಣಿಕೆ ಬರಲು ಆರಂಭವಾಗಿತ್ತು. ಆ ದಿನ ಶಿಬರೂರು, ಅತ್ತೂರು, ಕೊಡೆತ್ತೂರು, ಜ. 23ರಂದು ಮಂಗಳೂರು, ಸುರತ್ಕಲ್, ಇಡ್ಯಾ ಚೇಳಾರು, 24ರಂದು ಬಪ್ಪನಾಡು, ಮೂಲ್ಕಿ, ಬಜಪೆ ಆಸುಪಾಸು, 25ರಂದು ನಿಡ್ಡೋಡಿ, ಕಲ್ಲಮುಂಡ್ಕೂರು, ಕಾಸರ ಗೋಡು, ಸುಳ್ಯ, ಕುಂದಾಪುರ, 26ರಂದು ಬಂಟ್ವಾಳ, ವಿಟ್ಲ, 27ರಂದು ಸಾಲೆತ್ತೂರು, ಪುತ್ತೂರು, ಕಳತ್ತೂರು, 28ರಂದು ಉಡುಪಿ, ಕಾವೂರು, 29ರಂದು ಬೆಳ್ತಂಗಡಿ ಹಾಗೂ 30ರಂದು ಮೂಡುಬಿದಿರೆ, ಗಿಡಿಗೆರೆ, ಪಂಜ, ಕೊçಕುಡೆ ಭಾಗದಿಂದ ಹೊರೆಕಾಣಿಕೆ ಆಗಮಿಸಿವೆ. ಉಳಿದಂತೆ ಬೆಂಗಳೂರು, ಮೈಸೂರು, ಮುಂಬಯಿಯಿಂದಲೂ ಹೊರೆಕಾಣಿಕೆ ಬಂದಿದೆ.
ದೇವರ ಪಲ್ಲಕ್ಕಿ, 10,500ದಷ್ಟು ಸ್ಟೀಲ್ ಬಟ್ಟಲು, ಸಾವಿರಾರು ಪಾತ್ರೆಗಳು, ದಿನಸಿ ವಸ್ತುಗಳು, ತರಹೇವಾರಿ ತರಕಾರಿ, ಕಡಾಯಿ, ಗ್ರೈಂಡರ್, ಮಿಕ್ಸಿ, ಸ್ಟೀಲು ಕಪಾಟು, ಮುಟ್ಟತ್ತಿ, ಕತ್ತಿ, 60,000 ಬಾಳೆಗೊನೆ, ಅಡಿಕೆ ಸಹಿತ ಹತ್ತಾರು ಬಗೆಯ ವಸ್ತುಗಳು ಉಗ್ರಾಣದಲ್ಲಿದೆ. ಹೊರೆಕಾಣಿಕೆ ಅರ್ಪಿಸಿದವರಿಗೆ ಕ್ಷೇತ್ರದ ವತಿಯಿಂದ ಸರ್ಟಿಫಿಕೇಟ್, ಲಾಡು ವಿತರಿಸಲಾಗಿದೆ. 75,000 ಲಾಡನ್ನು ಇದಕ್ಕಾಗಿ ಬಳಸಲಾಗಿದೆ.
ಅಕ್ಕಿ, ಬೆಲ್ಲ ಸಕ್ಕರೆ!
29 ಬ್ರ್ಯಾಂಡ್‌ನ 17 ಲೋಡ್ ಅಕ್ಕಿ ಕಟೀಲಿಗೆ ಈ ಬಾರಿ ಬಂದಿದೆ. ಜತೆಗೆ, 5 ಲೋಡು ಬೆಲ್ಲ, 5 ಲೋಡು ಸಕ್ಕರೆ, 2 ಲೋಡು ಅವಲಕ್ಕಿ ಬಂದಿವೆ. 1 ಲಕ್ಷದಷ್ಟು ತೆಂಗಿನಕಾಯಿ ಬಂದಿವೆ. 10,000ದಷ್ಟು ಸೀಯಾಳವಿದೆ. ಬಂಟ್ವಾಳ-ಬೆಳ್ತಂಗಡಿಯಿಂದ 400ರಷ್ಟು ಅಕ್ಕಿಮುಡಿಗಳು ಬಂದಿವೆ.
ಹೊರೆಕಾಣಿಕೆಯನ್ನು ಉಗ್ರಾಣದಲ್ಲಿ ಇರಿಸಲು ಸಾವಿರಾರು ಸ್ವಯಂಸೇವಕರು ಶ್ರಮಿಸಿದ್ದಾರೆ. ಮೂರು ಗಂಟೆಗೊಮ್ಮೆ ಸ್ವಯಂಸೇವಕರ ತಂಡ ಬದಲಾಗುತ್ತದೆ. ದಿನಕ್ಕೆ ಸುಮಾರು 250ರಷ್ಟು ಸ್ವಯಂ ಸೇವಕರು ಈಗ ಉಗ್ರಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 62 ಜನರು ಉಗ್ರಾಣ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುವಾರದವರೆಗೆ ಸುಮಾರು 3 ಲಕ್ಷ ಭಕ್ತರು ಉಗ್ರಾಣವನ್ನು ವೀಕ್ಷಿಸಿದ್ದಾರೆ ಎಂದು ಉಗ್ರಾಣ ಸಮಿತಿಯ ಸಂಚಾಲಕ ಕೆ. ವಿನಯಾನಂದ ಕಾನಡ್ಕ “ಉದಯವಾಣಿ’ ಸುದಿನಕ್ಕೆ ತಿಳಿಸಿದ್ದಾರೆ.
2007ರಲ್ಲಿಯೂ ಹೊರೆಕಾಣಿಕೆಗಳ ಮಹಾಪೂರ
2007ರ ಮಾ. 28ರಿಂದ ಎ.6ರ ವರೆಗೆ ಶ್ರೀ ಕ್ಷೇತ್ರ ಕಟೀಲಿನಲ್ಲಿ ನಡೆದ ಬ್ರಹ್ಮಕಲಶೋತ್ಸವದ ವೇಳೆ ಉಭಯ ಜಿಲ್ಲೆಗಳ ನೂರಾರು ಕಡೆಗಳಿಂದ ಹೊರೆಕಾಣಿಕೆ ಬಂದಿತ್ತು. ಅಂದಿನ ಹೊರೆಕಾಣಿಕೆ ಸಮಿತಿಯವರ ಪ್ರಕಾರ; 925 ಅಕ್ಕಿ ಮುಡಿಗಳು, 50 ಕಿಲೋದ 101 ಚೀಲಗಳು ಸಹಿತ 1,79,427 ಕಿಲೋ ಅಕ್ಕಿ, 10470 ಕಿಲೋ ಬೆಲ್ಲ, 6726 ಕಿಲೋ ಸಕ್ಕರೆ, 1,84,000 ಸಿಪ್ಪೆಸಹಿತ ತೆಂಗಿನ ಕಾಯಿ, 53,000 ಸಿಪ್ಪೆರಹಿತ ತೆಂಗಿನ ಕಾಯಿ, 43,700 ಸೀಯಾಳ, 1070 ಬಾಳೆಗೊನೆ, 317 ಕಿಲೋ ಅರಳು, 90 ಕಿಲೋ ಅವಲಕ್ಕಿ, 22 ಕಿಲೋ ಅರಸಿನ ಹುಡಿ, 22 ಲೋಡು ತರಕಾರಿ, 92 ಕಿಲೋ ಗೇರು ಬೀಜ, 20,000 ಬಾಳೆಎಲೆ, 615 ಲೀ ಎಳ್ಳೆಣ್ಣೆ, 220 ಕೆ.ಜಿ. ರವೆ, ಸುಮಾರು 15,000 ಹಿಂಗಾರ, 71 ಕಿಲೋ ತುಪ್ಪ ಸುಮಾರು 10.15 ಲಕ್ಷ ರೂ. ಮೌಲ್ಯದ ಸ್ಟೀಲ್ ಮತ್ತು ತಾಮ್ರದ ಪಾತ್ರೆಗಳು ಸೇರಿದಂತೆ ಹತ್ತಾರು ಸಾಮಾನು ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆಯ ರೂಪದಲ್ಲಿ ಸಂದಾಯವಾಗಿತ್ತು.
ಬ್ರಹ್ಮಕಲಶೋತ್ಸವ ಆದ ಬಳಿಕ ಉಳಿದ ಅಕ್ಕಿ, ಕಾಯಿ, ತರಕಾರಿಗಳನ್ನು ಸುತ್ತಲಿನ ದೇವಸ್ಥಾನಗಳಿಗೆ ಹಾಗೂ ಉತ್ಸವಗಳಿಗೆ ಶ್ರೀ ದೇಗುಲದ ವತಿಯಿಂದ ಹೊರೆಕಾಣಿಕೆಯಾಗಿ ನೀಡಲಾಗಿತ್ತು ಎಂದು ಹಿರಿಯರು ನೆನಪು ಮಾಡುತ್ತಾರೆ.
ದಾಖಲೆಯ ಹೊರೆಕಾಣಿಕೆ
ಕಟೀಲಿಗೆ ಭಕ್ತರು ನೀಡಿದ ಹೊರೆಕಾಣಿಕೆ ಸಹಕಾರ ಅತ್ಯದ್ಭುತ. ಉಗ್ರಾಣವೆಲ್ಲ ಇಂತಹ ವಸ್ತುಗಳಿಂದ ತುಂಬಿದೆ. ಭಕ್ತರು ನೀಡಿದ ಎಲ್ಲ ಹೊರೆಕಾಣಿಕೆ ಸೇವೆಗೂ ಕ್ಷೇತ್ರದ ವತಿಯಿಂದ ಸರ್ಟಿಫಿಕೇಟ್ ನೀಡಲಾಗಿದೆ. ಇಷ್ಟು ಪ್ರಮಾಣದಲ್ಲಿ ಹೊರೆಕಾಣಿಕೆ ಬಂದಿರುವುದು ಕರಾವಳಿಯ ದೇವಸ್ಥಾನಗಳ ಪೈಕಿ ದಾಖಲೆ.
- ರವಿರಾಜ ಆಚಾರ್ ಬಜ್ಪೆ, ಅಧ್ಯಕ್ಷರು, ಹೊರೆಕಾಣಿಕೆ ಉಗ್ರಾಣ ಸಮಿತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.