ಕತ್ತರಿಗುಡ್ಡೆ: ಅಪಾಯ ಆಹ್ವಾನಿಸುತ್ತಿದೆ ನೀರಿನ ಟ್ಯಾಂಕ್
Team Udayavani, Nov 18, 2018, 11:56 AM IST
ಬೆಳ್ತಂಗಡಿ: ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಕತ್ತರಿಗುಡ್ಡೆಯಲ್ಲಿ 20 ವರ್ಷಗಳ ಹಿಂದಿನ ಬೃಹದಾಕಾರದ ನೀರಿನ ಟ್ಯಾಂಕೊಂದು ಇದ್ದು, ಶಿಥಿಲಾವಸ್ಥೆಗೆ ತಲುಪಿ ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಕೆ ಅನಿವಾರ್ಯ ವಾಗಿರುವ ಹೊಸ ಟ್ಯಾಂಕ್ ನಿರ್ಮಾಣದವರೆಗೆ ಹಳೆ ಟ್ಯಾಂಕನ್ನು ಉಳಿಸಬೇಕಿದೆ.
ಸ್ಥಳೀಯ ಮನೆ ಕಡೆಗೆ ವಾಲಿದಂತೆ ಕಾಣುತ್ತಿರುವ ಈ ಟ್ಯಾಂಕಿನ ಕೆಳಭಾಗದಲ್ಲಿ ಕಾಂಕ್ರೀಟ್ ಎದ್ದು ಹೋಗಿದ್ದು, ತುಕ್ಕು ಹಿಡಿದ ಕಬ್ಬಿಣ ಕಾಣುತ್ತಿದೆ. ಇದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದು, ಟ್ಯಾಂಕ್ ತೆರವುಗೊಳಿಸುವ ಕುರಿತು ಒತ್ತಾಯಿಸುತ್ತಿದ್ದಾರೆ. ಆದರೆ ಅದನ್ನು ಈಗಾಗಲೇ ಪರಿಶೀಲಿಸಲಾಗಿದ್ದು, ಯಾವುದೇ ತೊಂದರೆಯಿಲ್ಲ ಎಂದು ಗ್ರಾ.ಪಂ. ಮೂಲಗಳು ತಿಳಿಸಿವೆ.
ಅಂಗನವಾಡಿಯೂ ಇದೆ
ಶಿಥಿಲಾವಸ್ಥೆಯಲ್ಲಿರುವ ಟ್ಯಾಂಕ್‌ನ ಪಕ್ಕದಲ್ಲೇ ಅಂಗನವಾಡಿ ಕೇಂದ್ರವೊಂದಿದ್ದು, ಸಣ್ಣಪುಟ್ಟ ಮಕ್ಕಳು ಅಲ್ಲಿ ಓಡಾಡುತ್ತಿರುತ್ತಾರೆ. ಜತೆಗೆ ಸ್ಥಳೀಯವಾಗಿ ಒಂದು ಮನೆಯೂ ಇದೆ. ವಿದ್ಯುತ್ ಪರಿವರ್ತಕವೂ ಪಕ್ಕದಲ್ಲೇ ಇದ್ದು, ಸುತ್ತಮುತ್ತಲಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿವೆ. ಬುಡದಲ್ಲಿ ಪೊದೆ ತುಂಬಿದೆ. ಹೀಗಾಗಿ ಟ್ಯಾಂಕ್‌ನ ಸ್ಥಿತಿಗತಿ ಕುರಿತು ಸಂಬಂಧಿಸಿದ ಎಂಜಿನಿಯರ್‌ಗಳ ತಂಡ ಪರಿಶೀಲಿಸಿ, ಗುಣಮಟ್ಟದ ತಿಳಿಸಬೇಕಿದೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹಾಲಿ ಟ್ಯಾಂಕ್‌ನಿಂದ ಸುಮಾರು 50ಕ್ಕೂ ಅಧಿಕ ಮನೆಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಹೀಗಾಗಿ ಟ್ಯಾಂಕ್‌ಗೆ ನೀರು ಹಾಕುವುದು ಗ್ರಾ.ಪಂ.ಗೆ ಅನಿವಾರ್ಯವಾಗಿದೆ.
ಹೊಸ ಟ್ಯಾಂಕ್ ನಿರ್ಮಾಣಕ್ಕೆ ಮೊದಲೇ ಇದನ್ನು ತೆರವುಗೊಳಿಸಿದರೂ ಗ್ರಾಮಸ್ಥರು ನೀರಿಗೆ ಹಾಹಾಕಾರ ಪಡಬೇಕಾದ ಸ್ಥಿತಿ ಇದೆ. ಅಥವಾ ಅದನ್ನು ತೆರವುಗೊಳಿಸದೇ ಧರೆಗುರುಳಿದರೂ ಗ್ರಾಮಸ್ಥರಿಗೆ ತೊಂದರೆ ತಪ್ಪಿದ್ದಲ್ಲ.
ಜಿಲ್ಲಾಧಿಕಾರಿ ಪರಿಶೀಲನೆ
ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಅ. 10ರಂದು ಬಂಜಾರುಮಲೆಗೆ ತೆರಳಿದ್ದ ಸಂದರ್ಭ ಕತ್ತರಿಗುಡ್ಡೆಗೂ ಭೇಟಿ ನೀಡಿದ್ದರು. ಆಗ ಸ್ಥಳೀಯ ನಿವಾಸಿಗಳು ಟ್ಯಾಂಕಿನ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದರು. ಜತೆಗೆ ಪರ್ಯಾಯ ಟ್ಯಾಂಕ್ ನಿರ್ಮಾ ಣಕ್ಕೆ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.
ಅನುದಾನ ಬಂದಿಲ್ಲ
ಕಳೆದ ಮೂರು ವರ್ಷಗಳಿಂದ ಚಾರ್ಮಾಡಿ ಗ್ರಾ.ಪಂ.ನ ಪ್ರತಿ ಗ್ರಾಮಸಭೆಯಲ್ಲೂ ಹೊಸ ಟ್ಯಾಂಕ್ ನಿರ್ಮಾಣಕ್ಕೆ ಗ್ರಾಮಸ್ಥರು ಆಗ್ರಹಿಸುತ್ತಲೇ ಇದ್ದಾರೆ. ಆ ಸಂದರ್ಭದಲ್ಲಿ ಇಲಾಖೆಗೆ ಪ್ರಸ್ತಾವನೆ ಹೋಗಿದೆ ಎಂಬ ಉತ್ತರ ಬರುತ್ತದೆಯೇ ವಿನಾ ಈ ತನಕ ಹೊಸ ಟ್ಯಾಂಕ್ ನಿರ್ಮಾಣಕ್ಕೆ ಅನುದಾನ ಬಂದಿಲ್ಲ.
ಪ್ರಸ್ತಾವನೆ ನೀಡಬೇಕು
ನೀರು ಪೂರೈಕೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವ್ಯಾಪ್ತಿಗೆ ನೀರಿನ ಟ್ಯಾಂಕ್ ಬರುತ್ತದೆ. ಟ್ಯಾಂಕ್ ಅಪಾಯದಲ್ಲಿದ್ದರೆ ಅವರು ತೆರವುಗೊಳಿಸುವುದು ಹಾಗೂ ಹೊಸ ಟ್ಯಾಂಕ್ ನಿರ್ಮಾಣಕ್ಕೆ ಪ್ರಸ್ತಾವನೆ ಕೊಡಬೇಕಾಗುತ್ತದೆ. ಅಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗಿದೆ.
– ಕುಸುಮಾಧರ್ ಬಿ.
ಕಾರ್ಯನಿರ್ವಹಣಾಧಿಕಾರಿ, ತಾ.ಪಂ., ಬೆಳ್ತಂಗಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.