ಕಾವೇರುತ್ತಿದೆ ಕರಾವಳಿ
Team Udayavani, Apr 2, 2017, 12:30 PM IST
ಮಂಗಳೂರು/ಉಡುಪಿ: ಕರಾವಳಿ ಭಾಗದಲ್ಲಿ ದಿನೇ ದಿನೇ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದು, ಸೆಕೆ ಅಧಿಕಗೊಳ್ಳುತ್ತಿದೆ. ಇದರಿಂದ ಬಿಸಿಲಿಗೆ ಹೊರಗಡೆ ಹೋಗಲು ಅಸಾಧ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಶನಿವಾರ ಮಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 35.7 ಡಿಗ್ರಿ ದಾಖಲಾಗಿತ್ತು. ಇದು ಈ ಸಮಯದಲ್ಲಿನ ಸಾಮಾನ್ಯ ಉಷ್ಣತೆಗಿಂತ 3 ಡಿ.ಸೆ. ಹೆಚ್ಚಾಗಿದೆ. ಉಡುಪಿಯಲ್ಲಿ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿತ್ತು. ಗಾಳಿಯಲ್ಲಿ ತೇವಾಂಶದ ಅಂಶ ಕಡಿಮೆ ಇದ್ದುದರಿಂದ ಸೆಕೆಯ ಅನುಭವ ಇದಕ್ಕಿಂತಲೂ ಹೆಚ್ಚಾಗಿತ್ತು. ಕೆಲವೆಡೆ ಮೋಡ ಇರುವುದು ಕೂಡ ಬೆವರು ಹೆಚ್ಚಾಗಲು ಕಾರಣವಾಗಿದೆ. ಇನ್ನೂ ಎರಡು-ಮೂರು ದಿನ ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪುತ್ತೂರು, ಸುಳ್ಯ, ಕಾರ್ಕಳ ಪ್ರಖರ ಬಿಸಿಲು
ಪುತ್ತೂರು, ಸುಳ್ಯ ಮತ್ತು ಕಾರ್ಕಳ ತಾಲೂಕಿನ ವಿವಿಧೆಡೆ ಸೆಕೆಯ ಪ್ರಮಾಣ ಗಣನೀಯವಾಗಿ ಏರುವ ಸಂಭವ ಇದೆ ಎಂದು ಖಾಸಗಿ ಹವಾಮಾನ ಸಂಸ್ಥೆಗಳು ತಿಳಿಧಿಸಿವೆ. ಭಾರತೀಯ ಹವಾಮಾನ ಕೇಂದ್ರದ ತಾಪಮಾನ ಮಾಪನ ಕೇಂದ್ರ ಮಂಗಳೂರು ತಾಲೂಕಿನಲ್ಲಿ ಮಾತ್ರವೇ ಇದೆ.
ಪುತ್ತೂರಿನಲ್ಲಿ ಗರಿಷ್ಠ ತಾಪಮಾನ 40 ಡಿ.ಸೆ. ದಾಟುವ ಸಂಭವ ಇದೆ. ಎ. 8, 9, 10ರಂದು ಬಿಸಿಲಿನ ಪ್ರಖರತೆ ಜೋರಾಗಲಿದೆ. ಕಾರ್ಕಳ, ಸುಳ್ಯಧಿದಲ್ಲಿಯೂ ತಾಪಮಾನ ಹೆಚ್ಚಲಿದ್ದು, 40 ಡಿ.ಸೆ. ತಲುಪುವ ಸಾಧ್ಯತೆ ಇದೆ ಎಂದು ಖಾಸಗಿ ಹವಾಮಾನ ಸಂಸ್ಥೆ ತಿಳಿಸಿದೆ.
ಈ ನಡುವೆ ದಕ್ಷಿಣ ಒಳನಾಡು ಮತ್ತು ಕರಾವಳಿಯ ಒಂದೆರಡು ಕಡೆ ಸಿಡಿಲು ಸಹಿತ ಲಘು ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.
ಮಾಳ: ಉತ್ತಮ ಮಳೆ
ಕಾರ್ಕಳ ತಾಲೂಕಿನ ಮಾಳ- ಕುದುರೆಮುಖ ಹೆದ್ದಾರಿಯಲ್ಲಿ ಸಂಜೆ ವೇಳೆ ಅರ್ಧ ಗಂಟೆ ಉತ್ತಮ ಮಳೆಯಾಗಿದೆ. ಮಾಳ ಘಾಟಿ ಮತ್ತು ಎಸ್‌ಕೆ ಬಾರ್ಡರ್ ಪರಿಸರದಲ್ಲಿಯೂ ಉತ್ತಮ ಮಳೆಯಾಗಿದೆ. ಕಾರ್ಕಳ ತಾಲೂಕಿನ ಇತರೆಡೆ ಮೋಡ ಕವಿದ ವಾತಾವರಣವಿತ್ತು.
ಬಳ್ಳಾರಿ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ರಾಜ್ಯದಲ್ಲಿಯೇ ಗರಿಷ್ಠ ಉಷ್ಣತೆ 42 ಡಿ.ಸೆ. ದಾಖಲಾದರೆ ದಾವಣಗೆರೆಯಲ್ಲಿ ಕನಿಷ್ಠ 18.3 ಡಿ.ಸೆ. ತಾಪಮಾನ ದಾಖಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.