ಕನ್ನಡದ ಕಟ್ಟಾಳು ಕಯ್ಯಾರ
ಕನ್ನಡ ಕಟ್ಟಿದ ಹಿರಿಯರು
Team Udayavani, Nov 5, 2020, 5:28 AM IST
ಕಿಂಞಣ್ಣ ರೈ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕುವೆಂಪು ಅಧ್ಯಕ್ಷತೆಯ ಕವಿಗೋಷ್ಠಿಯಲ್ಲಿ “ಬೆಂಕಿ ಬಿದ್ದಿದೆ ಮನೆಗೆ, ಓ ಬೇಗ ಬನ್ನಿ, ಕನ್ನಡ ಗಡಿ ಕಾಯೆ, ಗುಡಿ ಕಾಯೆ…’ ಎಂದು ಕಾಸರಗೋಡು ಮಾತ್ರವಲ್ಲದೆ ಗಡಿಭಾಗದ ಎಲ್ಲ ಕನ್ನಡಿಗರ ಪರವಾಗಿ ಧ್ವನಿ ಮೊಳಗಿಸಿದ್ದರು.
ಮಂಗಳೂರು: ಮಹಾಕವಿಯಾಗಿ, ಹಿರಿಯ ಸಾಹಿತಿಯಾಗಿ, ಬಹುಭಾಷಾ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಕರ್ತರಾಗಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಧ್ಯಾಪಕರಾಗಿ, ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಮುಂಚೂಣಿಯ ನಾಯಕರಾಗಿ ಮೇರು ವ್ಯಕ್ತಿತ್ವದಲ್ಲಿ ಮೆರೆದ ನಾಡೋಜ ಕಯ್ಯಾರ ಕಿಂಞಣ್ಣ ರೈ ಅವರು ಕನ್ನಡದ ಅಂತಃಸಾಕ್ಷಿಯಾಗಿದ್ದರು.
1915ರ ಜೂ. 8ರಂದು ಕಾಸರಗೋಡಿನ ಪೆರಡಾಲ ಗ್ರಾಮದಲ್ಲಿ ಜನಿಸಿದ್ದ ಕಯ್ಯಾರ ಕಿಂಞಣ್ಣ ರೈ ಅವರು ಕವಿ, ಸಾಹಿತಿಯಾಗಿ ಕನ್ನಡದ ಕಂಪನ್ನು ಪಸರಿಸಿದ್ದು ಮಾತ್ರವಲ್ಲದೆ ಕನ್ನಡದ ಗಟ್ಟಿ ಧ್ವನಿಯಾಗಿ ಕೊನೆಯುಸಿರಿನವರೆಗೂ ಹೋರಾಡಿದ ಕಟ್ಟಾಳು. ಕಾವ್ಯ, ಗದ್ಯ, ಜೀವನಚರಿತ್ರೆ, ಕಥಾ ಸಂಗ್ರಹ, ಅನುವಾದ ಕೃತಿ, ಮಕ್ಕಳ ಕವನ ಸಂಗ್ರಹ, ನಾಟಕ -ಹೀಗೆ ಬಹುತೇಕ ಎಲ್ಲ ಪ್ರಕಾರಗಳಲ್ಲೂ ಅನನ್ಯ ಕೃತಿಗಳ ಮೂಲಕ ತನ್ನ ಹಿರಿಮೆಯನ್ನು ಮೆರೆದವರು.
ಕರ್ನಾಟಕ ಏಕೀಕರಣದ ಗಟ್ಟಿ ದನಿ
ಕರ್ನಾಟಕ ಏಕೀಕರಣದ ಗಟ್ಟಿ ದನಿಯಾಗಿದ್ದ ಕಯ್ಯಾರ ಅವರು ತಮ್ಮ ಕೊನೆಯುಸಿರಿನವರೆಗೂ ಕಾಸರಗೋಡು, ಕರ್ನಾಟಕದೊಂದಿಗೆ ವಿಲೀನವಾಗಲು ಪ್ರಯತ್ನಿಸಿದ್ದರು. 1957ರಲ್ಲಿ ಧಾರವಾಡದಲ್ಲಿ ನಡೆದಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕುವೆಂಪು ಅಧ್ಯಕ್ಷತೆಯ ಕವಿಗೋಷ್ಠಿಯಲ್ಲಿ “ಬೆಂಕಿ ಬಿದ್ದಿದೆ ಮನೆಗೆ, ಓ ಬೇಗ ಬನ್ನಿ, ಕನ್ನಡ ಗಡಿ ಕಾಯೆ, ಗುಡಿ ಕಾಯೆ…’ ಎಂದು ಕಾಸರಗೋಡು ಮಾತ್ರವಲ್ಲದೆ ಗಡಿಭಾಗದ ಎಲ್ಲ ಕನ್ನಡಿಗರ ಪರವಾಗಿ ಧ್ವನಿ ಮೊಳಗಿಸಿದ್ದರು. ಮಂಗಳೂರಿನಲ್ಲಿ 1997ರ ಡಿ.11ರಿಂದ 14ರ ವರೆಗೆ ಜರಗಿದ್ದ 66ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಅಧ್ಯಕ್ಷೀಯ ಭಾಷಣದಲ್ಲಿ “ಒಂದಲ್ಲ ಒಂದು ದಿನ ಕಾಸರಗೋಡು ಕರ್ನಾಟಕಕ್ಕೆ ಸೇರಿಯೇ ಸೇರುತ್ತದೆ’ ಎಂಬ ಆಶಾವಾದವನ್ನು ವ್ಯಕ್ತಪಡಿಸುತ್ತ “ಈ ಜನ್ಮದಲ್ಲಿ ಕಾಸರಗೋಡಿನ ವಿಲೀನೀಕರಣದ ಪರಮ ಸಿದ್ಧಿ ಫಲಿಸದೆ ಹೋದರೆ ಈ ತಾಯ್ನೆಲದಲ್ಲಿ ಮರಳಿಯೂ ಜನ್ಮವೆತ್ತಿ ಮಾತೃಭೂಮಿಯ ಋಣ ಸಲ್ಲಿಸುವ ಆಸೆ ನನ್ನದು. ಕಾಸರಗೋಡಿನ ಜ್ಯೋತಿ ಕರ್ನಾಟಕದ ಪರಂಜ್ಯೋತಿಯಲ್ಲಿ ಲೀನವಾಗುತ್ತದೆಂಬ ಅಚಲ ವಿಶ್ವಾಸ ನನಗಿದೆ’ ಎಂಬುದಾಗಿ ಘೋಷಿಸಿದ್ದರು.
ಸ್ಮಾರಕದ ಬೇಡಿಕೆ
ಶತಮಾನದ ಕವಿ ಎಂದು ಕರೆಯಿಸಿಕೊಂಡ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯ ನಾಯಕರಾಗಿದ್ದ ಕಯ್ಯಾರ ಕಿಂಞಣ್ಣ ರೈ ಅವರ ನೆನಪು ಚಿರಸ್ಥಾಯಿಯಾಗಿ ಉಳಿಯುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಸ್ಮಾರಕವೊಂದು ರಚಿಸಬೇಕು ಎಂಬ ಬೇಡಿಕೆ ಹಲವಾರು ವರ್ಷಗಳಿಂದ ಇದೆ. ಮಂಗಳೂರಿನ ನಂತೂರು ವೃತ್ತಕ್ಕೆ ಅವರ ಹೆಸರಿಡಬೇಕು ಎಂಬ ಸಲಹೆಗಳು ಕೇಳಿಬಂದಿದ್ದವು. ಕನ್ನಡಪರ ಸಂಘಟನೆಯೊಂದು ಇಲ್ಲಿ ಕಯ್ನಾರ ಕಿಂಞಣ್ಣ ರೈ ವೃತ್ತ ಎಂಬ ಫಲಕವನ್ನು ಕೂಡ ಅಳವಡಿಸಿತ್ತು.
ಪ್ರಮುಖ ಕೃತಿಗಳು
ಶ್ರೀಮುಖ, ಐಕ್ಯಗಾನ, ಪುನರ್ನವ, ಪ್ರತಿಭಾ ಪಯಸ್ವಿನೀ, ಗಂಧವತೀ ಮುಂತಾದ ಕವನ ಸಂಕಲನಗಳು; ಪಂಚಮಿ, ಆಶಾನರ ಖಂಡ ಕಾವ್ಯಗಳು ಅನುವಾದಿತ ಕೃತಿಗಳು, ರತ್ನರಾಶಿ, ಲಕ್ಷ್ಮೀಶನ ಲಲಿತ ಕಥೆಗಳು, ಅನ್ನದೇವರು ಮತ್ತು ಇತರ ಕಥೆಗಳು, ಪರಶುರಾಮ, ಸಾಹಿತ್ಯ ದೃಷ್ಟಿ, ಸಂಸ್ಕೃತಿಯ ಹೆಗ್ಗುರುತುಗಳು ಮುಂತಾದವುಗಳು ಸೇರಿದಂತೆ ಅನೇಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ತುಳು ಕವನಗಳು, ಸಾವಿರಾರು ಲೇಖನಗಳನ್ನು ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.