ಕೆಂಚನಕೆರೆಗೆ ಅಭಿವೃದ್ಧಿ ಯೋಗ; ಗ್ರಾಮಸ್ಥರಿಗೆ ನೀರಿನ ಭಾಗ್ಯ
Team Udayavani, Mar 28, 2017, 10:54 AM IST
ಕಿನ್ನಿಗೋಳಿ: ನಗರೀಕರಣದ ಅಬ್ಬರದ ಬಿರುಗಾಳಿಗೆ ಯಾವ ಕೆರೆಯ ಅಂಗಳವೂ ಉಳಿಯುತ್ತಿಲ್ಲ. ಮಂಗಳೂರಿನಲ್ಲೂ ಎಮ್ಮೆಕೆರೆ ನಿಧಾನವಾಗಿ ಇಂಥದ್ದೇ ಒಂದು ಕಾರಣಕ್ಕೆ ನಾಶವಾಗುತ್ತಿದೆ. ಇನ್ನೂ ಹಲವೆಡೆ ಹಲವು ಕೆರೆಗಳ ಅಂಗಳವನ್ನು ಮಣ್ಣು ಹಾಕಿ ತುಂಬಿ, ಬಸ್ ಸ್ಟಾಂಡನ್ನೋ, ಬಹುಮಹಡಿ ಕಟ್ಟಡವನ್ನೋ ಕಟ್ಟಿ, ಈಗ ನೀರಿಲ್ಲ ನೀರಿಲ್ಲ…ಕೆರೆ ಇದ್ದಿದ್ದರೆ ಚೆನ್ನಾಗಿತ್ತು ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದೇವೆ. ಆ ಲೆಕ್ಕದಲ್ಲಿ ಕಿಲ್ಪಾಡಿ ಗ್ರಾಮ ಪಂಚಾಯತ್‌ನ ಕೆಂಚನಕೆರೆಯ ಸುತ್ತಮುತ್ತಲಿನ ಗ್ರಾಮಸ್ಥರು ಅದೃಷ್ಟವಂತರು.
ಮೂರು ವರ್ಷಗಳ ಹಿಂದೆ ಈ ಕೆಂಚನಕೆರೆಯೂ ಏದುಸಿರು ಬಿಡುತ್ತಿತ್ತು. ಒಂದೆಡೆ ತುಂಬಿದ ಹೂಳು, ಮತ್ತೂಂದೆಡೆ ಮಾಲಿನ್ಯ ಎಲ್ಲವೂ ಕೆರೆಯ ಜೀವವನ್ನು ಹಿಂಡುತ್ತಿದ್ದವು. ಸುತ್ತಲಿನ ಬಾವಿಗಳಲ್ಲೂ ನೀರಿನ ಕೊರತೆ ಉದ್ಭವಿಸಿತು. ಮೂರು ಬೆಳೆಗೆ ಸಹಾಯವಾಗುತ್ತಿದ್ದ 300 ವರ್ಷಗಳ ಕೆರೆ ಅವಸಾನದ ಅಂಚಿನಲ್ಲಿತ್ತು. ಈ ಹಿಂದೆ ಏತ ನೀರಾವರಿ ಪದ್ಧತಿ ಮೂಲಕ ಸುತ್ತಲಿನ ಸುಮಾರು 150 ಎಕ್ರೆ ಕೃಷಿಗೆ ಇಲ್ಲಿಂದ ನೀರು ಪೂರೈಸಲಾಗುತ್ತಿತ್ತು. ಇಂಥ ಕೆರೆ ಒಣಗಲು ಆರಂಭಿಸಿ, ಸುತ್ತಲಿನ ಬಾವಿಗಳೂ ಸುಸ್ತಾಗತೊಡಗಿದಾಗ, ಗ್ರಾಮಸ್ಥರು ಎಚ್ಚೆತ್ತರು. ಗ್ರಾಮಸಭೆಯಲ್ಲಿ ಕೆರೆಯನ್ನು ಪುನರುಜ್ಜೀವಗೊಳಿಸುವಂತೆ ಆಗ್ರಹಿಸಿದರು. ಶಾಸಕರು, ಸ್ಥಳೀಯ ಜನಪ್ರತಿನಿಧಿಗಳಿಗೂ ಮನವಿ ಮಾಡುವ ಮೂಲಕ ಒತ್ತಡ ಹೇರಿದರು. ಇದರ ಒಟ್ಟೂ ಪರಿಣಾಮದಿಂದ ಶಾಸಕರ ಮತ್ತು ಜಿಲ್ಲಾ ಪಂಚಾಯತ್ ಅನುದಾನದಲ್ಲಿ 2012-13 ರಲ್ಲಿ ಸುಮಾರು 12 ಲಕ್ಷ ರೂ. ವೆಚ್ಚ ಮಾಡಿ ಹೂಳು ತೆಗೆಯಿತಲ್ಲದೇ, ಸುತ್ತಲೂ ಅರ್ಧ ಭಾಗಕ್ಕೆ ಗೋಡೆಗಳನ್ನು ಕಟ್ಟಿಸಲಾಯಿತು.
ಈಗ ಅದರ ಅಂದ ನೋಡಬೇಕು !
ನಿಜ, ಈಗ ಅದರ ಅಂದ ನೋಡಬೇಕು. ಸುತ್ತಲೂ ಹಸಿರಷ್ಟೇ ಅಲ್ಲ ; ಸುತ್ತಲಿನ ಗ್ರಾಮಸ್ಥರ ಬಾವಿಗಳಿಗೆ ಉಸಿರಾಗಿ ಬದಲಾಗಿದೆ. ಮೂರು ವರ್ಷಗಳ ಬೇಸಗೆಯಲ್ಲೂ ಬಾವಿಗಳಲ್ಲಿ ನೀರು ಬತ್ತದಂತೆ ಕೆರೆ ನೋಡಿಕೊಂಡಿದೆ ಎಂದರೆ ಅಚ್ಚರಿಯಾಗಬಹುದು.
ಇದನ್ನು ಸುತ್ತಲಿನ ಗ್ರಾಮಸ್ಥರೇ ಒಪ್ಪಿಕೊಳ್ಳುತ್ತಾರೆ. “ಮೂರು ವರ್ಷಗಳ ಹಿಂದೆ ಕೆರೆಯಲ್ಲಿ ನೀರಿನ ಸಂಗ್ರಹ ಪ್ರಮಾಣ ಕುಸಿದಿತ್ತು. ಅದರಿಂದ ನಮ್ಮ ಬಾವಿಗಳಲ್ಲೂ ನೀರಿನ ಕೊರತೆ ಉದ್ಭವಿಸಿತ್ತು. ಈಗ ಕೆರೆಯನ್ನು ಅಭಿವೃದ್ಧಿಪಡಿಸಿದ್ದರಿಂದ ಬೇಸಗೆಯಲ್ಲಿ ನೀರಿನ ಕೊರತೆಯಾಗುತ್ತಿಲ್ಲ’ ಎನ್ನುತ್ತಾರೆ ಗ್ರಾಮಸ್ಥರು.
“ಈಗ ಹಲವು ಬಾವಿಗಳಲ್ಲಿ ಸುಮಾರು ಆರು ಅಡಿಯಷ್ಟು ನೀರಿದೆ. ತೆಗೆದ ಸ್ವಲ್ಪ ಹೊತ್ತಿಗೆ ತುಂಬಿಕೊಳ್ಳುತ್ತದೆ. ಕೆರೆಯ ಕಾರಣದಿಂದ ಒರತೆಗೆ ಕೊರತೆ ಇಲ್ಲ. ಈಗಿನಷ್ಟು ಪ್ರಮಾಣದ ಒರತೆ ಹಿಂದೆ ಇರಲಿಲ್ಲ’ ಎನ್ನುತ್ತಾರೆ ಅವರು.
ಕಲುಷಿತವಾಗದಂತೆ ಜಾಗ್ರತೆ
ಈಗ ಗ್ರಾಮಸ್ಥರೇ ಕೆರೆಯ ನೀರು ಕಲುಷಿತವಾಗದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಯಾರೂ ಕೆರೆಯಲ್ಲಿ ಬಟ್ಟೆ ಒಗೆಯುವುದು, ಸೋಪು ಹಾಕುವುದು ಇತ್ಯಾದಿಯನ್ನು ಮಾಡುವಂತಿಲ್ಲ. ಅದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ಯಾರಾದರೂ ಆ ಕೆಲಸದಲ್ಲಿ ತೊಡಗಿದರೆ, ಗ್ರಾಮಸ್ಥರು ಎಚ್ಚರಿಸಿ ಕಳುಹಿಸುತ್ತಾರೆ. ಸುತ್ತಲಿನ ಕೊಳಚೆಯೂ ಸೇರದಂತೆ ಎಚ್ಚರವಹಿಸಲಾಗಿದೆ.
ದುರಸ್ತಿಗೆ ಮನವಿ
ಕೆರೆಯ ಮೆಟ್ಟಿಲುಗಳು ತುಂಡಾಗಿದ್ದು, ದುರಸ್ತಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಕಿಲ್ಪಾಡಿ ಗ್ರಾ.ಪಂ. ಹಾಗೂ ಜಿಲ್ಲಾ ಪಂಚಾಯತ್‌ಗೆ ಮನವಿ ನೀಡಿದ್ದಾರೆ.
ಹೀಗೂ ಉಳಿಸಿ
ಒಬ್ಬರ ಸ್ನಾನಕ್ಕಾಗುವಷ್ಟು ನೀರು ಗೀಸರ್‌ನಲ್ಲಿ 5 ನಿಮಿಷದಲ್ಲಿ ಬಿಸಿಯಾಗುತ್ತದೆ. ಇಲ್ಲಿ ಕಟ್ಟುನಿಟ್ಟಾಗಿ ಸಮಯ ಪಾಲನೆ ಮಾಡಿದರೆ ಅಗತ್ಯಕ್ಕಿಂತ ಹೆಚ್ಚು ತಣ್ಣಗಿನ ನೀರು ಬಳಸುವುದು ಉಳಿತಾಯವಾಗುತ್ತದೆ.
ನೀರಿನ ಗಣಿತ
ಇದೂ ಸತ್ಯವೇ. ಇಡೀ ಜಗತ್ತಿನಲ್ಲೇ ನೀರಿಗಾಗಿ ಬಡಿದಾಡುವ ಸಂದರ್ಭ ಉದ್ಭವಿಸಿರುವಾಗ ಅಮೆರಿಕದ ಕಥೆ ಗೊತ್ತಿದೆಯೇ? ಅಲ್ಲಿ ದಿನಕ್ಕೆ 400 ಬಿಲಿಯನ್ ಗ್ಯಾಲನ್ ನಷ್ಟು ನೀರನ್ನು ಶಾಖೋತ್ಪನ್ನ ವಿದ್ಯುತ್ ಉತ್ಪಾದನ ಘಟಕಗಳಲ್ಲಿ ಬಳಸುತ್ತಾರಂತೆ. ಇವೆಲ್ಲವೂ ಶುದ್ಧ ನೀರು. ಇನ್ನೊಂದು ರೀತಿಯಲ್ಲಿ ಹೇಳಬಹುದಾದರೆ ನಯಾಗರ ಜಲಪಾತದಲ್ಲಿ ಒಂದು ನಿಮಿಷಕ್ಕೆ ಹರಿದು ಹೋಗಬಹುದಾದ ಸರಾಸರಿ ನೀರಿನ ಮೂರರಷ್ಟು ಪ್ರಮಾಣವನ್ನು ಅಮೆರಿಕದ ವಿದ್ಯುತ್ ಘಟಕಗಳು ಪ್ರತಿ ನಿಮಿಷಕ್ಕೆ ಬಳಸುತ್ತವಂತೆ.
1.8
ವಿಶ್ವದಲ್ಲಿ ಕೇವಲ 1.8 ಬಿಲಿಯನ್ ಮಂದಿ ಮಾತ್ರ ಕುಡಿಯಲು ಶುದ್ಧ ನೀರಿನ ಬಳಕೆ ಮಾಡುತ್ತಿದ್ದು. ಉಳಿದವರೆಲ್ಲರೂ ಕಲುಷಿತ ನೀರನ್ನು ಸೇವಿಸುತ್ತಿದ್ದಾರೆ.
70%
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಶೇ. 70ರಷ್ಟು ಕೈಗಾರಿಕೆಗಳು ತ್ಯಾಜ್ಯ ನೀರನ್ನು ಸಂಸ್ಕರಿಸದೆ ರಬಿಡುವುದರಿಂದ ಸುತ್ತಲಿರುವ ಶುದ್ಧ ನೀರಿನ ಮೂಲವು ಕಲುಷಿತಗೊಳ್ಳುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.