ಕೇರಳ ಗಡಿ ಭಾಗದಲ್ಲಿ ಕಟ್ಟೆಚ್ಚರ; ಮುಂದುವರಿದ ವಾಹನ ತಪಾಸಣೆ
Team Udayavani, Jul 31, 2022, 7:20 AM IST
ದಕ್ಷಿಣ ಕನ್ನಡ: ಕೆಲವು ದಿನಗಳಿಂದ ನಡೆಯುತ್ತಿರುವ ಅಹಿತಕರ ಘಟನೆಗಳಿಂದ ಕರ್ನಾಟಕ ಕೇರಳ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಕೊಣಾಜೆ, ಉಳ್ಳಾಲ, ವಿಟ್ಲದ ಗಡಿಭಾಗಗಳು, ಪುತ್ತೂರು ಹಾಗೂ ಸುಳ್ಯ ತಾಲೂಕಿನ ಗಡಿ ಭಾಗಗಳಲ್ಲಿ ತುಸು ಬಂದೋಬಸ್ತ್ ಹೆಚ್ಚಿಸಲಾಗಿದೆ. ಆದರೆ ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಲು ಹೆಚ್ಚುವರಿ ಪೊಲೀಸ್ ಸಿಬಂದಿ ನಿಯೋಜನೆ, ನಿರಂತರ ಬಿಗಿ ತಪಾಸಣೆ, ಸಿಸಿ ಕೆಮರಾ ಕಣ್ಗಾವಲಿನಂಥ ಶಾಶ್ವತ ಮತ್ತು ಸುಸಜ್ಜಿತವಾದ ವ್ಯವಸ್ಥೆಗಳನ್ನು ಕಲ್ಪಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ. ಈ ಮಧ್ಯೆ ಗಡಿ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆ ಬಲಪಡಿಸುವ ಭರವಸೆಯೂ ರಾಜ್ಯ ಸರಕಾರದಿಂದ ಶುಕ್ರವಾರ ದೊರೆತಿದೆ.
ಉಳ್ಳಾಲ ಗಡಿ ಭಾಗ
ಕೊಣಾಜೆ ಮತ್ತು ಉಳ್ಳಾಲ ಪೊಲೀಸ್ ಠಾಣಾ ಗಡಿ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ವಾಹನಗಳ ತಪಾಸಣೆಯನ್ನು ಪೊಲೀಸರು ಚುರುಕುಗೊಳಿಸಿದ್ದರು. ತಲಪಾಡಿಯ ಮತ್ತೂಂದು ಕಡೆ ಕೇರಳ ಪೊಲೀಸರು ಗಡಿಯಲ್ಲೂ ತಪಾಸಣೆ ಕೈಗೊಂಡಿದ್ದಾರೆ.
ತಲಪಾಡಿಯಲ್ಲಿ ಉಳ್ಳಾಲ ಪೊಲೀಸರು, ನಗರ ಸಂಚಾರ ಪೊಲೀಸರು ಮತ್ತು ಕೆಎಸ್‌ಆರ್‌ಪಿ ಪೊಲೀಸರು ವಾಹನ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಅನುಮಾನಸ್ಪದ ವಾಹನಗಳು ಕಂಡು ಬಂದರೆ ವಾಹನಗಳ ಡಿಕ್ಕಿ ತೆರೆದೂ ಪರಿಶೀಲಿಸಲಾಗುತ್ತಿದೆ. ತಲಪಾಡಿ ದೇವಿಪುರದಲ್ಲಿಯೂ ಇಬ್ಬರು ಪೊಲೀಸರನ್ನು ತಪಾಸಣೆಗೆ ನಿಯುಕ್ತಿ ಮಾಡಲಾಗಿದೆ.
ಕಾಸರಗೋಡಿನಿಂದ ಕುಂಜತ್ತೂರು – ತೂಮಿನಾಡು ಮಾರ್ಗವಾಗಿ ದೇವಿಪುರ ಒಳರಸ್ತೆಯಾಗಿ ಆಗಮಿಸುವ ಸಂದರ್ಭಗಳು ಹೆಚ್ಚು. ಕೆಲವು ವಾಹನಗಳು ಟೋಲ್ ತಪ್ಪಿಸಲು ಈ ರಸ್ತೆಯನ್ನು ಬಳಸುತ್ತಾರೆ. ತೂಮಿನಾಡು ಮಾರ್ಗವಾಗಿ ನೆತ್ತಿಲಪದವು – ಮಂಜನಾಡಿ ಮಾರ್ಗವಾಗಿಯೂ ಒಳರಸ್ತೆಯ ಮೂಲಕ ವಾಹನಗಳು ಸಂಚರಿಸುವುದಂಟು.
ಪೊಲೀಸ್ ಔಟ್‌ಪೋಸ್ಟ್
ಕೊಣಾಜೆ ಠಾಣಾ ವ್ಯಾಪ್ತಿಯ ನೆತ್ತಿಲಪದವು – ಕೆದುಂಬಾಡಿ ಗಡಿ ಪ್ರದೇಶ ಮಾರ್ಗವಾಗಿ ಕಾಸರಗೋಡು ಒಳಪ್ರದೇಶಗಳಿಂದ ಮಂಜೇಶ್ವರದ ವರ್ಕಾಡಿ ಗ್ರಾಮವಾಗಿ ಆಗಮಿಸುತ್ತಿರುವ ವಾಹನಗಳನ್ನು ಕೊಣಾಜೆ ಪೊಲೀಸರು ತಪಾಸಣೆ ನಡೆಸುತ್ತಿದ್ದುದು ಕಂಡು ಬಂದಿತು. ಇದೇ ಠಾಣಾ ವ್ಯಾಪ್ತಿಗೆ ಬರುವ ಮುದುಂಗಾರುಕಟ್ಟೆ, ಪಾತೂರು, ನಂದರಪಡು³, ನಾರ್ಯ ಗಡಿಭಾಗ ದಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ.
ವಿಟ್ಲ ಗಡಿ ಭಾಗ
ವಿಟ್ಲ ಹೋಬಳಿ ವ್ಯಾಪ್ತಿಯ ಗಡಿಭಾಗದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಗುರುವಾರ ರಾತ್ರಿಯಿಂದಲೇ ಚೆಕ್ ಪೋಸ್ಟ್‌ಗಳಲ್ಲಿ ಅಧಿಕ ಮಂದಿ ಪೊಲೀಸರೊಂದಿಗೆ ಗೃಹರಕ್ಷಕದಳದ ಸಿಬಂದಿಯನ್ನು ನಿಯೋಜಿಸಲಾಗಿತ್ತು. ವಿಟ್ಲಕ್ಕೆ ಶನಿವಾರ 25 ಸಿಬಂದಿಯ ಕೆಎಸ್‌ಆರ್‌ಪಿಯ ತುಕಡಿ ಆಗಮಿಸಿದೆ. ಇವರನ್ನು ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ನಿಯೋಜಿಸಲು ಯೋಜಿಸಲಾಗಿದೆ.
ಸಾರಡ್ಕ ಚೆಕ್‌ಪೋಸ್ಟ್, ಕನ್ಯಾನ, ಸಾಲೆತ್ತೂರು ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚುವರಿಯಾಗಿ ನಾಲ್ವರು ಪೊಲೀಸರು ಮತ್ತು ಗೃಹರಕ್ಷಕದಳದ ಸಿಬಂದಿ ನಿಗಾ ವಹಿಸಿದ್ದಾರೆ. ಪ್ರತಿ ವಾಹನ ತಪಾಸಣೆ, ವಾಹನ ಚಾಲಕರ, ಬೈಕ್ ಸವಾರರ ಮಾಹಿತಿ, ಮೊಬೈಲ್ ನಂಬರ್ ಕೇಳಿ ದಾಖಲಿಸಿಕೊಳ್ಳಲಾಗುತ್ತಿದೆ.
ಕರೋಪಾಡಿ ಗ್ರಾಮದಲ್ಲಿ ಎರಡು ಪ್ರಮುಖ ಹೆದ್ದಾರಿಗಳಿವೆ. ಆನೆಕಲ್ಲು ಮೂಲಕ ಮಂಜೇಶ್ವರ ಮತ್ತು ನೆಲ್ಲಿಕಟ್ಟೆ ಮೂಲಕ ಬಾಯಾರು, ಉಪ್ಪಳ (ಕುರ್ಚಿಪಳ್ಳ)ವನ್ನು ಸಂಪರ್ಕಿಸಲಾಗುತ್ತದೆ. ಗಡಿ ಗ್ರಾಮವಾದ ಕರೋಪಾಡಿಯ ಒಂದು ಭಾಗ ಉದ್ದಕ್ಕೂ ಕೇರಳವನ್ನು ತಾಗಿಕೊಂಡಿದೆ. ಅನೇಕ ಕಾಲುದಾರಿಗಳಿವೆ, ಮಣ್ಣಿನ ರಸ್ತೆಗಳಿವೆ. ಹೆದ್ದಾರಿಗಳಿಗೆ ಹೆಬ್ಟಾಗಿಲು ಕನ್ಯಾನ ಆಗಿರುವುದರಿಂದ ಕನ್ಯಾನದಲ್ಲೇ ತಪಾಸಣೆ ನಡೆಸಲಾಗುತ್ತಿದೆ. ಸಣ್ಣ ದಾರಿಗಳಲ್ಲೂ ಇನ್ನಷ್ಟು ಬಿಗಿ ಭದ್ರತೆ ಕೈಗೊಳ್ಳಬೇಕಿದೆ.
ವಿಟ್ಲ ಹೋಬಳಿಯ ಹಲವೆಡೆ ಶುಕ್ರವಾರ ದಿಂದಲೇ ತಪಾಸಣೆ ಕಾರ್ಯ ಆರಂಭಿಸಲಾಗಿದೆ. ವಿಟ್ಲ ಪೇಟೆ ಜಂಕ್ಷನ್‌ನಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಮಂಗಳೂರು, ಪುತ್ತೂರು ಹಾಗೂ ಸಾಲೆತ್ತೂರು ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಮೇಲೆ ನಿಗಾವಹಿಸಲಾಗಿದೆ.
ಪಾಣಾಜೆ: ಇಬ್ಬರು ಸಿಬಂದಿ ನಿಯೋಜನೆ
ಪುತ್ತೂರಿನಿಂದ ಕಾಸರಗೋಡಿಗೆ ಸಂಪರ್ಕ ಕಲ್ಪಿಸುವ ಪಾಣಾಜೆ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಬಿಗಿಗೊಳಿಸಲಾಗಿದ್ದು ಇಬ್ಬರು ಸಿಬಂದಿಯನ್ನು ನಿಯೋಜಿಸಲಾಗಿದೆ. ಸಿಸಿ ಕೆಮರಾವೂ ಇದ್ದು ವಾಹನ ಹಾಗೂ ಸಾರ್ವಜನಿಕರ ಚಲನವಲನದ ಮೇಲೆ ನಿಗಾ ವಹಿಸಿದೆ.
ಪೆರ್ಲ ಭಾಗದಿಂದ ಪಾಣಾಜೆ ಚೆಕ್‌ಪೋಸ್ಟ್ ಮೂಲಕ ಹೆಚ್ಚು ಮಂದಿ ಪುತ್ತೂರು ಪ್ರವೇಶಿಸುತ್ತಾರೆ. ಈ ಹಿಂದೆ ಅಷ್ಟೊಂದು ವಾಹನ ತಪಾಸಣೆ, ಬಿಗಿ ವ್ಯವಸ್ಥೆ ಇರಲಿಲ್ಲ. ಈಗ ಪ್ರತಿ ವಾಹನ ತಪಾಸಣೆ ನಡೆಸಿ ಒಳ-ಹೊರ ಪ್ರವೇಶಕ್ಕೆ ಅನುಮತಿ ನೀಡುವಂತೆ ಸಿಬಂದಿಗೆ ಸೂಚಿಸಲಾಗಿದೆ ಎಂದು ಪುತ್ತೂರು ಗ್ರಾಮಾಂತರ ಠಾಣಾ ಎಸ್‌ಐ ಉದಯ ರವಿ ತಿಳಿಸಿದ್ದಾರೆ.
ಈಶ್ವರಮಂಗಲ ಗಡಿ ಭಾಗ
ಗಡಿ ಭಾಗವಾದ ಪಾಣಾಜೆ ಮತ್ತು ಪಳ್ಳತ್ತೂರು ಎಂಬಲ್ಲಿ ಚೆಕ್ ಪೋಸ್ಟ್‌ಗಳಿದ್ದು ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ವಾಹನದ ನೋಂದಣಿ ಸಂಖ್ಯೆ ಎಲ್ಲಿಂದ ಎಲ್ಲಿಗೆ ಪ್ರಯಾಣ, ಪ್ರಯಾಣದ ಉದ್ದೇಶವನ್ನು ಪುಸ್ತಕದಲ್ಲಿ ದಾಖಲಿಸಲಾಗುತ್ತಿದೆ.
ಸುಳ್ಯ ಗಡಿ ಭಾಗ
ಸುಳ್ಯದ ಗಡಿ ಭಾಗವಾದ ಜಾಲೂÕರು ಚೆಕ್‌ಪೋಸ್ಟ್‌ನಲ್ಲೂ ವಾಹನಗಳ ತಪಾಸಣೆ ನಡೆಯುತ್ತಿದೆ. ಅಡೂರು ಚೆಕ್‌ಪೋಸ್ಟ್‌ನಲ್ಲೂ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಇನ್ನಷ್ಟು ಹೆಚ್ಚುವರಿ ಸಿಬಂದಿ ನಿಯೋಜನೆ ಹಾಗೂ ತಪಾಸಣೆ ವ್ಯವಸ್ಥೆಯನ್ನು ಬಿಗಿಗೊಳಿಸಬೇಕೆಂಬ ಅಭಿಪ್ರಾಯ ಕೇಳಿಬಂದಿದೆ.
ಪ್ರಮುಖ ಭಾಗದಲ್ಲಿ
ಸಿಸಿ ಕೆಮರಾ ಇಲ್ಲ
ರಾಷ್ಟ್ರೀಯ ಹೆದ್ದಾರಿ 66ರ ಕೇರಳ ಕರ್ನಾಟಕ ಸಂಪರ್ಕಿಸುವ ಪ್ರಮುಖ ಗಡಿಯಲ್ಲಿ ಸಿಸಿ ಕೆಮರಾವೇ ಮಾಯವಾಗಿದೆ. ಈ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ಅಥವಾ ಇನ್ನಿತರ ಅಪರಾಧಕ್ಕೆ ಸಂಬಂಧಿಸಿ ಸುತ್ತಲಿನವರ ಸಿಸಿ ಕೆಮರಾಗಳನ್ನು ಅವಲಂಬಿಸಬೇಕಿದೆ. ದೇವಿಪುರ ವ್ಯಾಪ್ತಿಯಲ್ಲೂ ಸುತ್ತಲಿನವರ ಸಿಸಿ ಕೆಮರಾವೇ ಅನಿವಾರ್ಯ. ಈ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಣೆ ಸೇರಿದಂತೆ ಹಲವು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಹಾಗಾಗಿ ಸಿಸಿ ಕೆಮರಾವನ್ನೇ ಮಾಯ ಮಾಡಲಾಗಿದೆ.
ನೆತ್ತಿಲಪದವು – ಕೆದುಂಬಾಡಿಯಲ್ಲಿ ಅಳವ ಡಿಸಿದ್ದ ಸಿಸಿ ಕೆಮರಾ ಕೆಲವೇ ತಿಂಗಳ ಕಾಲ ಕಾರ್ಯ ನಿರ್ವಹಿಸಿ ಬಳಿಕ ಸ್ಥಗಿತಗೊಂಡಿತ್ತು. ಈಗ ದುರಸ್ತಿಗೊಳ್ಳಬೇಕಿದೆ. ಪೊಲೀಸರು ಈ ಪ್ರದೇಶದಲ್ಲಿ ತುರ್ತು ಸಂದರ್ಭದಲ್ಲಿ ಮಾತ್ರ ಗಡಿ ತಪಾಸಣೆ ನಡೆಸುತ್ತಿದ್ದು, ಪಿಸಿಆರ್ ವಾಹನಗಳು ನೆತ್ತಿಲಪದವು ರಸ್ತೆಯಲ್ಲಿ ಪೆಟ್ರೋಲಿಂಗ್ ಕಾರ್ಯ ನಡೆಸುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.