Mangaluru ಮಕ್ಕಳ ಅಪಹರಣ, ಅತ್ಯಾಚಾರ: ವಿದ್ಯಾರ್ಥಿಗಳ ಪೋಷಕರಿಗೆ ನಕಲಿ ಕರೆ
ಹಣ ಪೀಕಿಸಲು ವಿದೇಶದಲ್ಲಿ ಕುಳಿತು ವಂಚಕರ ತಂತ್ರ; ದಿಗಿಲುಗೊಂಡ ಪೋಷಕರು
Team Udayavani, Jun 12, 2024, 7:10 AM IST
ಮಂಗಳೂರು/ಸುರತ್ಕಲ್: ಕಾಲೇಜು ವಿದ್ಯಾರ್ಥಿಗಳ ಕೆಲವು ಪೋಷಕರಿಗೆ ಪೊಲೀಸ್ ಅಧಿಕಾರಿಗಳೆಂದು ಹೇಳಿ ನಕಲಿ ವ್ಯಕ್ತಿಗಳು ಕರೆ ಮಾಡಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ನಡೆದಿದೆ.
ಮಂಗಳವಾರ ಮಧ್ಯಾಹ್ನ ವೇಳೆ ಸುರತ್ಕಲ್ ಮತ್ತು ಮಂಗಳೂರಿನ ಕಾಲೇಜುಗಳ ಕೆಲವು ಪೋಷಕರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಗಳು “ನಿಮ್ಮ ಮಕ್ಕಳನ್ನು ಅರೆಸ್ಟ್ ಮಾಡಿ ಠಾಣೆಗೆ ಕರೆದೊಯ್ಯುತ್ತಿದ್ದೇವೆ. ಬಿಡುಗಡೆ ಮಾಡಬೇಕಾದರೆ ಸಹಾಯ ಮಾಡುತ್ತೇವೆ. 5 ಲ.ರೂ. ನೀಡಿ’, “ನಿಮ್ಮ ಮಕ್ಕಳು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಅದರಿಂದ ರಕ್ಷಿಸಲು ಸಹಾಯ ಮಾಡುತ್ತೇವೆ.’ ಎಂಬಿತ್ಯಾದಿಯಾಗಿ ಹೇಳಿ ಕರೆ ಮಾಡಿದ್ದಾರೆ. ಇದನ್ನು ನಂಬಿದ ಕೆಲವು ಪೋಷಕರು ಸ್ವಲ್ಪ ಸಮಯ ಆತಂಕಕ್ಕೆ ಒಳಗಾದರು. ಕೆಲವರು ಕಾಲೇಜಿಗೆ ಕರೆ ಮಾಡಿ ವಿಚಾರಿಸಿದರೆ, ಇನ್ನು ಕೆಲವರು ನೇರವಾಗಿ ಕಾಲೇಜಿಗೆ ಹೋಗಿ ವಿಚಾರಿಸಿದ್ದಾರೆ. ಬಳಿಕ ಇದೊಂದು ನಕಲಿ ಕರೆ ಎಂಬುದು ಗೊತ್ತಾಗಿದೆ.ಈ ರೀತಿ ಕರೆ ಸ್ವೀಕರಿಸಿದವರೆಲ್ಲರೂ ಪ್ರಥಮ ಪಿಯುಸಿ ಮಕ್ಕಳ ಪೋಷಕರು. ಕರೆ ಮಾಡಿದವರು ಹಿಂದಿ ಭಾಷೆಯಲ್ಲಿ ಮಾತನಾಡಿದ್ದರು.
923354533015, 48699532 787 ಸಂಖ್ಯೆಗಳಿಂದ ಕರೆ ಬಂದಿದೆ. ಟ್ರೂ ಕಾಲರ್‌ನಲ್ಲಿ ನೋಡಿದಾಗ ಸಿಬಿಐ ತನಿಖಾ ಸಂಸ್ಥೆ ಎಂಬುದಾಗಿ ತೋರಿಸಿದೆ. ಅಲ್ಲದೆ ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿಗಳ ಚಿತ್ರ ಕೂಡ ಅದರಲ್ಲಿ ತೋರಿಸಿದೆ ಎಂದು ಹೆತ್ತವರು ತಿಳಿಸಿದ್ದಾರೆ.
ಮಗನ ಕಿಡ್ನ್ಯಾಪ್ ಕರೆ
ಓರ್ವ ಪೋಷಕರಿಗೆ ಕರೆ ಮಾಡಿದ ಅಪರಿಚಿತರು “ನಿಮ್ಮ ಮಗನನ್ನು ಅಪಹರಿಸಲಾಗಿದೆ. ಅವನನ್ನು ಬಿಡಿಸಿಕೊಡಬೇಕಾದರೆ 5 ಲಕ್ಷ ರೂ. ಹಣ ನೀಡಿ’ ಎಂಬುದಾಗಿ ಹೇಳಿದ್ದಾರೆ. ಇದನ್ನು ಕೇಳಿ ಆತಂಕಕ್ಕೊಳಗಾದ ಅವರು ಕಾಲೇಜಿಗೆ ತೆರಳಿ ವಿಚಾರಿಸಿದರು. ಇದೇ ರೀತಿ ಇತರ ಕೆಲವು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಹೆತ್ತವರಿಗೂ ಇಂತಹ ಕರೆ ಬಂದಿರುವುದು ಅನಂತರ ಗೊತ್ತಾಗಿದೆ.
ವಿದ್ಯಾರ್ಥಿಗಳು ಶಾಲೆಯಲ್ಲಿ ಇರುವ ಸಮಯ ದಲ್ಲಿಯೇ ವಂಚಕರು ಕರೆ ಮಾಡಿ ಮನೆ ಮಂದಿಯನ್ನು ತಮ್ಮ ಜಾಲದಲ್ಲಿ ಬೀಳಿಸಲು ಪ್ರಯತ್ನಿಸಿರುವುದು ಬೆಳಕಿಗೆ ಬಂದಿದೆ.
ಪಿಯುಸಿಗೆ ಸೇರ್ಪಡೆಯಾದವರಿಗೆ ಕರೆ
ಫೋನ್ ಕರೆ ಸ್ವೀಕರಿಸಿದವರಲ್ಲಿ ಬಹುತೇಕರು ಪ್ರಥಮ ಪಿಯುಸಿ ಮಕ್ಕಳ ಹೆತ್ತವರು. ಶಾಲೆಯಲ್ಲಿ ಯಾವ ಮೊಬೈಲ್ ಸಂಖ್ಯೆ ನೀಡಲಾಗಿದೆಯೋ ಅದೇ ಸಂಖ್ಯೆಗೆ ಫೋನ್ ಮಾಡಿದ್ದಾರೆ. ಮಾತ್ರವಲ್ಲದೆ ಶಾಲೆಯ ದಾಖಲೆ ಪತ್ರಗಳಲ್ಲಿ ಯಾವ ರೀತಿ ವಿದ್ಯಾರ್ಥಿಗಳ ಮತ್ತು ತಂದೆ-ತಾಯಿಯ ಹೆಸರು ನೀಡಲಾಗಿದೆಯೋ ಅದೇ ರೀತಿ ಕರೆ ಮಾಡಿದಾಗಲೂ ತಿಳಿಸಿದ್ದಾರೆ. ಆದುದರಿಂದ ಇವರಿಗೆ ಈ ಎಲ್ಲ ಮಾಹಿತಿಗಳು ಎಲ್ಲಿ ಸೋರಿಕೆಯಾಗಿದೆ ಎಂಬುದೇ ಮಕ್ಕಳ ಪೋಷಕರ ಪ್ರಶ್ನೆಯಾಗಿದೆ.
ಎಸೆಸೆಲ್ಸಿ ಪ್ರಮಾಣ ಪತ್ರವನ್ನು ನೋಡಿಕೊಂಡೇ ಅವರು ಫೋನ್ ಮಾಡಿದಂತಿದೆ. ನಾನು ಮಗಳ ಎಲ್ಲ ದಾಖಲೆಗಳಲ್ಲಿ ನನ್ನ ದೂರವಾಣಿ ಸಂಖ್ಯೆ ನೀಡಿದ್ದೇನೆ. ಕರೆ ಮಾಡಿದ ವ್ಯಕ್ತಿ ನನ್ನ ಪತಿಯ ಹೆಸರು ಹೇಳಿ ಮಾತು ಮುಂದುವರೆಸಿ ಮಗಳ ಹೆಸರು ಹೇಳಿ ಅಪರಾಧ ಪ್ರಕರಣದಲ್ಲಿ ಸಿಲುಕಿಕೊಂಡಿರುವುದಾಗಿ ತಿಳಿಸಿ ಕೂಡಲೇ ಸ್ಟೇಶನ್‌ಗೆ ಬರುವಂತೆ ತಿಳಿಸಿದ. ಆದರೆ ನನಗೆ ಮೊದಲೇ ಇಂತಹ ಕರೆಗಳ ಬಗ್ಗೆ ಸಂಶಯ ಇದ್ದುದರಿಂದ ಮಗಳು ನನ್ನ ಬಳಿಯೇ ಇರುವುದಾಗಿ ಹೇಳಿ ಜೋರು ಮಾಡಿದಾಗ ಆತ ಫೋನ್ ಕರೆ ಕಡಿತ ಮಾಡಿದ ಎಂದು ವಿದ್ಯಾರ್ಥಿನಿಯೋರ್ವರ ತಾಯಿ ಘಟನೆಯ ಕುರಿತಂತೆ ವಿವರವಾದ ಮಾಹಿತಿ ನೀಡಿದರು.
ಯೋಜನಾಬದ್ಧವಾಗಿ ಕರೆ!
ಮಕ್ಕಳ ಪೋಷಕರಿಗೆ ಕರೆ ಮಾಡಿದವರು ಅತ್ಯಂತ ಯೋಜನಾಬದ್ಧವಾಗಿ ತಂತ್ರಗಾರಿಕೆ ಹೆಣೆದಿದ್ದರು. ಹಿಂದಿ ಭಾಷೆಯಲ್ಲಿ ಮಾತನಾಡಿದ ವ್ಯಕ್ತಿ ತಾನೋರ್ವ ಪೊಲೀಸ್ ಅಧಿಕಾರಿ ಎಂದು ಹೇಳಿ, ಮೊದಲು ಮಕ್ಕಳ ಪೋಷಕರು ಹೌದೇ ಎಂಬುದನ್ನು ತಿಳಿದುಕೊಂಡು ಅನಂತರ ಮಕ್ಕಳ ಹೆಸರು ಹೇಳಿ ಅಪರಾಧ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿ ಹಿರಿಯ ಅಧಿಕಾರಿಗಳಲ್ಲಿ ಮಾತನಾಡುವಂತೆ ಸಂಪರ್ಕ ಕಲ್ಪಿಸುತ್ತಾರೆ. ಅಲ್ಲಿಂದ ಹಿರಿಯ ಅಧಿಕಾರಿಯ ಸೋಗಿನಲ್ಲಿ ವ್ಯಕ್ತಿಯೋರ್ವ ಮಾತನಾಡಿ, ಪ್ರಕರಣದಿಂದ ಮುಕ್ತರನ್ನಾಗಿಸಲು ಹಣ ನೀಡುವಂತೆ ಬೇಡಿಕೆ ಮಂಡಿಸುತ್ತಾನೆ. ಮಾತ್ರವಲ್ಲದೆ ಅವರ ಹೆಸರು ಕೂಡ ಉನ್ನತ ತನಿಖಾ ಇಲಾಖೆಯೊಂದಿಗೆ ಸಂಪರ್ಕ ಹೊಂದಿರುವಂತೆ ಬಿಂಬಿಸುವ ವ್ಯವಸ್ಥೆ ಮಾಡಿರುತ್ತಾರೆ. ಒಟ್ಟಾರೆಯಾಗಿ ಫೋನ್ ಕರೆ ಸ್ವೀಕರಿಸಿದವರು ಅದನ್ನು ನಂಬುವ ಸನ್ನಿವೇಶ ಸೃಷ್ಟಿಸುತ್ತಾರೆ.
1930ಕ್ಕೆ ದೂರು ನೀಡಿ
ಇಂತಹ ಕರೆಗಳು ಬಂದಾಗ ಪೋಷಕರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಪೊಲೀಸರು ಈ ರೀತಿಯಾಗಿ ಕರೆ ಮಾಡುವುದಿಲ್ಲ. ಮುಖ್ಯವಾಗಿ ಇವರೆಲ್ಲ ವಿದೇಶದಿಂದ ಕರೆ ಮಾಡುತ್ತಾರೆ. ಭಾರತದ ಹೊರಗಿನ ಕರೆಗಳು ಬಂದಾಗ ಮೊಬೈಲ್‌ನಲ್ಲಿ ಗೊತ್ತಾಗುತ್ತದೆ. ವಿದೇಶದಿಂದ ಬರುವ ಅಪರಿಚಿತ ಕರೆಗಳನ್ನು ಸ್ವೀಕರಿಸಬಾರದು. ಒಂದು ವೇಳೆ ಇಂತಹ ಕರೆಗಳು ಬಂದ ಕೂಡಲೇ ಹತ್ತಿರದ ಸೆನ್ ಠಾಣೆಗೆ ಅಥವಾ ಮೊಬೈಲ್‌ನಲ್ಲಿ ನೇರವಾಗಿ 1930 ಸಂಖ್ಯೆಗೆ ಫೋನ್ ಮಾಡಿ ದೂರು ನೀಡಬೇಕು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆತಂಕ ಬೇಡ, ನಕಲಿ ಕರೆ
ನಕಲಿ ಅಧಿಕಾರಿಗಳು ಕರೆ ಮಾಡಿ ಬೆದರಿಸಿರುವ ಬಗ್ಗೆ ಕೆಲವರು ದೂರಿದ್ದಾರೆ. ಪ್ರಕರಣ ದಾಖಲಾಗಿಲ್ಲ. ಸೆನ್ ಪೊಲೀಸರು ತನಿಖೆ ನಡಸುತ್ತಿದ್ದಾರೆ. ಈ ರೀತಿಯ ಕರೆಗಳಿಂದ ಯಾರೂ ಆತಂಕಗೊಳ್ಳಬೇಕಿಲ್ಲ. ಇದು ನಕಲಿ ಕರೆ. ಇಂತಹ ಕರೆ ಬಂದರೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ.
– ಅನುಪಮ್ ಅಗರ್‌ವಾಲ್, ಪೊಲೀಸ್ ಆಯುಕ್ತರು, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.