ಕಿಸಾನ್ ಕಾರ್ಡ್ ಸದ್ಬಳಕೆ ಅಗತ್ಯ: ನಳಿನ್
Team Udayavani, Oct 7, 2017, 9:50 AM IST
ಮಹಾನಗರ: ಜಿಲ್ಲೆಯಲ್ಲಿ ವಿವಿಧ ಬ್ಯಾಂಕ್‌ಗಳಿಂದ ನಾಲ್ಕೈದು ವರ್ಷ ಗಳ ಅವಧಿಯಲ್ಲಿ 83,291 ಮಂದಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಲಾಗಿದೆ ಯಾದರೂ, ಅದರಿಂದ ಒಬ್ಬರಿಗೂ ಪ್ರಯೋಜನವಾಗಿಲ್ಲ. ರೈತರಿಗೆ ಅತ್ಯಂತ ಉಪಯುಕ್ತವಾದ ಈ ಯೋಜನೆಯ ಬಗ್ಗೆ ಕೃಷಿಕರಿಗೆ ಮಾಹಿತಿ ಇಲ್ಲವಾದ್ದರಿಂದ ಅದರ ಪ್ರಯೋಜನ ಸಿಗುತ್ತಿಲ್ಲ.
ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಶುಕ್ರವಾರ ಜರಗಿದ ಜಿಲ್ಲೆಯ ಬ್ಯಾಂಕ್‌ಗಳ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ನಳಿನ್ ಕುಮಾರ್ ಅವರಿಗೆ ಬ್ಯಾಂಕ್ ಅಧಿಕಾರಿಗಳಿಂದ ಇಂಥ ಮಾಹಿತಿ ಸಿಕ್ಕಿತು!
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದ ರೈತರಿಗೆ ಆಕಸ್ಮಿಕ ಅಪಘಾತ ಹಾಗೂ ಸಾವು ಪ್ರಕರಣಗಳಿಗೆ ಪರಿಹಾರ ಧನ ಲಭ್ಯವಾಗುತ್ತದೆ. ಎಷ್ಟು ಮಂದಿ ಇದರ ಪ್ರಯೋಜನ ಪಡೆದಿದ್ದಾರೆ ಎಂದು ಸಂಸದರು ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಯಾರೂ ಇದರ ಲಾಭ ಪಡೆದುಕೊಂಡಿಲ್ಲ ಎಂಬ ಉತ್ತರ ಸಿಕ್ಕಿತು. ಈ ವೇಳೆ ಮಾತನಾಡಿದ ಸಂಸದರು, ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ನ ಪ್ರಯೋಜನದ ಬಗ್ಗೆ ಮಾಹಿತಿ ಇಲ್ಲದ್ದರಿಂದಾಗಿ ಫಲಾನುಭವಿಗಳೇ ಇಲ್ಲವಾಗಿದೆ. ಇಲ್ಲವಾದಲ್ಲಿ ಕಳೆದ ನಾಲ್ಕು ವರ್ಷ ಗಳಿಂದ ಜಿಲ್ಲೆಯಲ್ಲಿ ಕಿಸಾನ್ ಕಾರ್ಡ್ ಹಂಚಿಕೆಯಲ್ಲಿ ಉತ್ತಮ ಸಾಧನೆಯಾಗಿದೆಯಾದರೂ ಪ್ರಯೋಜನ ಪಡೆದವರೇ ಇಲ್ಲವೆಂದರೆ ನಂಬಲಾಗದು.
ಹೀಗಾಗಿ, ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳು ತಮ್ಮ ಪ್ರಚಾರ ಸಾಹಿತ್ಯ ಸಾಮಗ್ರಿಗಳಲ್ಲಿ (ಬ್ರೌಶರ್, ಕರಪತ್ರ) ಕಿಸಾನ್ ಕ್ರೆಡಿಟ್ ಕಾರ್ಡ್‌ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು ಎಂದು ಸೂಚಿಸಿದರು.
ಪ್ರಯೋಗಶೀಲ ಕೃಷಿಗೆ ಒತ್ತು ನೀಡಿ
ಜಿಲ್ಲೆಯಲ್ಲಿ ಕೃಷಿಕರು ಹಾಗೂ ಕೃಷಿ ಕೂಲಿ ಕಾರ್ಮಿಕರು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಹೋಗುವ ಬದಲು ಸಹಕಾರಿ ಬ್ಯಾಂಕ್‌ಗಳನ್ನೇ ಅವಲಂಬಿಸಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತ ಸ್ನೇಹಿಯಾಗಿಲ್ಲ ಎಂಬ ಕಲ್ಪನೆ ಅವರಲ್ಲಿದೆ. ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂಬ ಅಪವಾದವೂ ಇದೆ. ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆಯನ್ನು ವಾಣಿಜ್ಯ ಬೆಳೆಯಾಗಿ ರೈತರು ಬೆಳೆಯುತ್ತಿರುವುದರಿಂದ ನಷ್ಟ ಕಡಿಮೆ. ಹಳೆಯಂಗಡಿಯಲ್ಲಿ ರೈತರೊಬ್ಬರು ಹೊಂಡದಲ್ಲಿ ಸಿಗಡಿ ಕೃಷಿ ಮಾಡಿ ಮೂರು ತಿಂಗಳಲ್ಲೇ ದುಪ್ಪಟ್ಟು ಆದಾಯವನ್ನು ಗಳಿಸಿದ್ದಾರೆ. ಇಂತಹ ಪ್ರಕರಣಗಳು ಹಲವು ಇವೆ. ಬ್ಯಾಂಕ್‌ಗಳು ರೈತರನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿನೂತನ ಪ್ರಯೋಗಶೀಲತೆಯೊಂದಿಗೆ ಕೃಷಿ ಚಟುವಟಿಕೆಗಳಿಗೆ ಒತ್ತು ನೀಡಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ 61,346 ಕೋಟಿ ರೂ. ವ್ಯವಹಾರ
2017ರ ಜೂನ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಬ್ಯಾಂಕ್‌ಗಳು ಒಟ್ಟು 61,346 ಕೋಟಿ ರೂ.ಗಳ ವ್ಯವಹಾರವನ್ನು ದಾಖಲಿಸಿವೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ರಾಘವ ಯಜಮಾನ್ಯ ತಿಳಿಸಿದರು. ಆರ್‌ಬಿಐ ಪ್ರತಿನಿಧಿ ವಿದ್ಯಾಸಾಗರ್, ನಬಾರ್ಡ್ ಡಿಡಿಎಂ ಪ್ರತಾಪ್, ಸಿಂಡಿಕೇಟ್ ಬ್ಯಾಂಕ್ ಡಿಜಿಎಂ ಸೋಮಯಾಜಿ, ಜಿ.ಪಂ. ಉಪ ಕಾರ್ಯದರ್ಶಿ ಎನ್. ಆರ್. ಉಮೇಶ್ ಉಪಸ್ಥಿತರಿದ್ದರು.
ಸಂಸದರು ಗರಂ
ಸಭೆಯಲ್ಲಿ ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳೇ ಭಾಗವಹಿಸಬೇಕಾಗಿದ್ದು, 10 ದಿನಗಳ ಮುಂಚಿತವಾಗಿಯೇ ಎಲ್ಲ ಬ್ಯಾಂಕ್‌ಗಳಿಗೂ ನೋಟಿಸ್ ನೀಡಲಾಗಿತ್ತು. ಸಭೆ ಆರಂಭಗೊಂಡು ಸುಮಾರು 30 ನಿಮಿಷಗಳಾದರೂ 49 ಬ್ಯಾಂಕ್ ಗಳ ಪೈಕಿ 21 ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳ ಅನುಪಸ್ಥಿತಿ ಸಂಸದರ ಕೋಪಕ್ಕೆ ಕಾರಣವಾಯಿತು. ಈ ಹಿಂದೆಯೂ ಬ್ಯಾಂಕ್ ಅಧಿಕಾರಿಗಳು ಸಭೆಗೆ ಬಾರದಿದ್ದ ಕಾರಣಕ್ಕಾಗಿ ಸಭೆಯನ್ನೇ ಮುಂದೂಡಲಾಗಿತ್ತು. ಬಳಿಕ ಕೆಲವು ದಿನದ ಹಿಂದೆ ನಡೆದ ಸಭೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆಯ ಮಹತ್ವದ ಬಗ್ಗೆ ಸ್ಪಷ್ಟ ಸೂಚನೆ, ಪತ್ರ ಕಳುಹಿಸಿ, ಶುಕ್ರವಾರದ ಸಭೆಗೆ ಬರಲೇಬೇಕು ಎಂದು ಸೂಚಿಸಿದ್ದರೂ, ಅಧಿಕಾರಿಗಳ ಗೈರು ಹಾಜರಿಯನ್ನು ಸಹಿಸುವುದಿಲ್ಲ ಎಂದು ಸಂಸದ ನಳಿನ್ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ಸಭೆಗೆ ಎಲ್ಲರೂ ಹಾಜರಾಗಬೇಕು. ಗೈರಾಗುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಆರ್‌ಬಿಐ ನಿಯಮದಡಿ, ಯಾವ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯ ಅದನ್ನೂ ಮಾಡಬೇಕು ಎಂದು ಲೀಡ್ ಬ್ಯಾಂಕ್ ಹಾಗೂ ಆರ್‌ಬಿಐ ಅಧಿಕಾರಿಗಳಿಗೆ ಸಂಸದರು ನಿರ್ದೇಶಿಸಿದರು. ಬಳಿಕ ಕೆಲವು ಅಧಿಕಾರಿಗಳು ಆಗಮಿಸಿದ ಹಿನ್ನೆಲೆಯಲ್ಲಿ ಸಭೆ ನಡೆಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.