ಕಾಂಪೋಸ್ಟ್ ಪೈಪ್ ಖರೀದಿ ಅವ್ಯವಹಾರ: ಗ್ರಾಮಸಭೆಯಲ್ಲಿ ಗದ್ದಲ
Team Udayavani, Jul 27, 2018, 1:15 AM IST
ಉಪ್ಪಿನಂಗಡಿ: ಕಾಂಪೋಸ್ಟ್ ಪೈಪ್ ಖರೀದಿ ಅವ್ಯವಹಾರದ ವಿಚಾರ ಕೋಡಿಂಬಾಡಿ ಗ್ರಾ.ಪಂ.ನ ಗ್ರಾಮಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ಆರೋಪ – ಪ್ರತ್ಯಾರೋಪಗಳ ನಡುವೆ ಸಭೆ ಆರಂಭದ ಹಂತದಲ್ಲಿಯೇ ಗೊಂದಲಮಯವಾಯಿತು. ಪೊಲೀಸರು ಹಾಗೂ ಚರ್ಚಾ ನಿಯಂತ್ರಣಾಧಿಕಾರಿ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಗ್ರಾ.ಪಂ. ಅಧ್ಯಕ್ಷೆ ಸಂಧ್ಯಾ ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾ ಭವನದಲ್ಲಿ ಗ್ರಾಮಸಭೆ ನಡೆಯಿತು. ವರದಿಯ ಅನುಮೋದನೆಯ ಸಂದರ್ಭ ಕಾಂಪೋಸ್ಟ್ ಪೈಪ್ ಗಳೊಂದಿಗೆ ಗ್ರಾಮ ಸಭೆಗೆ ಆಗಮಿಸಿದ 3-4 ಫಲಾನುಭವಿಗಳು, ಪೈಪ್ ಗಳನ್ನು ಗ್ರಾಮಸಭೆಯ ಮುಂದಿಟ್ಟು, ಕಾಂಪೋಸ್ಟ್ ಪೈಪ್ ಖರೀದಿಯ ಅವ್ಯವಹಾರದಲ್ಲಿ ಕೋಡಿಂಬಾಡಿ ಗ್ರಾ.ಪಂ.ನ ಹೆಸರು ಕೇಳಿ ಬಂದಿದೆ. ಭ್ರಷ್ಟಾಚಾರ ನಡೆಸಿ ನೀಡಲಾದ ಕಾಂಪೋಸ್ಟ್ ಪೈಪ್ ಗಳು ನಮಗೆ ಬೇಡ ಎಂದರು.
ಪೈಪ್ ಬೇಡ
ಗ್ರಾಮಸಭೆಯಲ್ಲಿದ್ದ ಇತರರು ಅವರನ್ನು ಬೆಂಬಲಿಸಿ, ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿರುವ ಅಧ್ಯಕ್ಷರು ಹಾಗೂ ಪಿಡಿಒ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಆಡಳಿತ ಹಾಗೂ ವಿಪಕ್ಷ ಗುಂಪುಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಅನುಮತಿ ಪಡೆಯದೇ ಇಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಅಧ್ಯಕ್ಷರು ತಿಳಿಸಿದರು. ಪೊಲೀಸರೂ ಪ್ರತಿಭಟನಕಾರರನ್ನು ತಡೆಯಲು ಮುಂದಾದರು. ನಾವೇನೂ ಪ್ರತಿಭಟನೆ ಮಾಡುತ್ತಿಲ್ಲ. ಉತ್ತಮ ಹೆಸರಿದ್ದ ಕೋಡಿಂಬಾಡಿ ಗ್ರಾ.ಪಂ.ಗೆ ಕಾಂಪೋಸ್ಟ್ ಪೈಪ್ ಹಗರಣದಿಂದ ಕೆಟ್ಟ ಹೆಸರು ಬರುವಂತಾಗಿದೆ. ಈ ಹಗರಣದಲ್ಲಿ ಪಂಚಾಯತ್ ಅಧ್ಯಕ್ಷೆ ಹಾಗೂ ಪಿಡಿಒ ಅವರನ್ನು ಆರೋಪಿಗಳನ್ನಾಗಿಸಿ ಎಸಿಬಿ ಪ್ರಕರಣ ದಾಖಲಿಸಿದೆ. ಭ್ರಷ್ಟಾ ಚಾರದ ಪಾಲು ನಮಗೆ ಬೇಡವೆಂದು ಫಲಾನುಭವಿಗಳು ಅದನ್ನು ಹಿಂದಿರುಗಿಸಲು ಬಂದಿದ್ದಾರೆ ಎಂದರು.
ಅಧ್ಯಕ್ಷೆ ಸಂಧ್ಯಾ ರಾಮಚಂದ್ರ ಮಾತನಾಡಿ, ನ್ಯಾಯಾಲಯದಲ್ಲಿರುವ ಪ್ರಕರಣ ಮುಂದಿಟ್ಟುಕೊಂಡು ನೀವು ರಾಜಕೀಯ ಮಾಡುತ್ತಿದ್ದೀರಿ. ಇದೆಲ್ಲ ನಾಟಕ ರಾಜಕೀಯ ಮಾಡಲು ನಮಗೂ ಗೊತ್ತು ಎಂದು ಏರು ಧ್ವನಿಯಲ್ಲಿ ಹೇಳಿದರು. ಇದರಿಂದಾಗಿ ಸಭೆ ಗದ್ದಲದಿಂದ ತುಂಬಿ ಹೋಯಿತು.
ಮನವೊಲಿಕೆ
ಚರ್ಚಾ ನಿಯಂತ್ರಣಾಧಿಕಾರಿ ನೆಲ್ಲಿಕಟ್ಟೆಯ BRC ವಿಷ್ಣುಪ್ರಸಾದ್ ಮಾತನಾಡಿ, ನ್ಯಾಯಾಲಯದಲ್ಲಿ ಇರುವ ಪ್ರಕರಣದ ಬಗ್ಗೆ ಇಲ್ಲಿ ಚರ್ಚೆ ನಡೆಸುವುದು ಸರಿಯಲ್ಲ ಎಂದರು. ಬಳಿಕ ಕಾಂಪೋಸ್ಟ್ ಪೈಪ್ ಗಳನ್ನು ಪಂಚಾಯತ್ ನಲ್ಲಿ ಇರಿಸಲಾಯಿತು.
ಸಂಚಾರಿ ಪೊಲೀಸರಿಂದ ಸಮಸ್ಯೆ
ಸಂಚಾರಿ ಪೊಲೀಸರು ಸೇಡಿಯಾಪು ಹಾಗೂ ಕೇಪುಳು ಜಂಕ್ಷನ್‌ಗಳಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಾರೆ. ವಾರಕ್ಕೆ ಮೂರು ಸಲವಾದರೂ ಅಲ್ಲಿರುತ್ತಾರೆ. ನಮ್ಮಲ್ಲಿ ದಾಖಲೆಗಳಿದ್ದರೂ ಪ್ರತಿ ಬಾರಿ ನಿಲ್ಲಿಸಿ ತಪಾಸಣೆ ಮಾಡುತ್ತಾರೆ. ತುರ್ತಾಗಿ ಹೋಗುವ ಸಂದರ್ಭದಲ್ಲೂ ಸರದಿಯಲ್ಲಿ 10 ನಿಮಿಷ ಕಾದು ದಾಖಲೆ ತೋರಿಸಬೇಕು. ಒಮ್ಮೆ ತಪಾಸಣೆ ಮಾಡಿದ ಮೇಲೆ, ದಾಖಲೆಗಳು ಸರಿಯಿದ್ದ ವಾಹನಕ್ಕೆ ಒಂದು ತಿಂಗಳ ಕಾಲ ಪಾಸ್ ನೀಡಲಿ ಎಂದು ಗ್ರಾಮಸ್ಥ ಜಯಾನಂದ್ ಆಗ್ರಹಿಸಿದರು. ಈ ಅಭಿಪ್ರಾಯಕ್ಕೆ ಒಬ್ಬ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ಜಿ.ಪಂ. ಸದಸ್ಯೆ ಶಯನಾ ಜಯಾನಂದ್ ಮಾತನಾಡಿ, ಪೊಲೀಸರು ಇಲಾಖೆ ವಾಹನ ನಿಲ್ಲಿಸಿ ತಪಾಸಣೆ ಮಾಡುತ್ತಾರೆಯೇ? ಇಲಾಖೆಗಳ ಕೆಲವು ಚಾಲಕರೇ ಪಾನಮತ್ತರಾಗಿ ವಾಹನ ಓಡಿಸುತ್ತಾರೆ ಎಂದು ಆರೋಪಿಸಿದರು. ಸಭೆಯಲ್ಲಿದ್ದ ಪೊಲೀಸರು, ಕಾನೂನು ಎಲ್ಲರಿಗೂ ಸಮಾನ. ಈ ಬಗ್ಗೆ ಮಾಹಿತಿ ಇದ್ದರೆ ಕೊಡಿ, ಕ್ರಮ ಕೈಗೊಳ್ಳುತ್ತೇವೆ ಎಂದರು.
ಬೆಳ್ಳಿಪ್ಪಾಡಿ ಅಂಗನವಾಡಿ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಮೋರಿ ಅಳವಡಿಸಲಾಗಿದ್ದು, ನಮ್ಮ ತೋಟದೊಳಗೆ ನೀರು ಹರಿಯುವಂತಾಗಿದೆ ಎಂದು ವಿನ್ಸೆಂಟ್ ವೇಗಸ್ ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿರುವುದಾಗಿಯೂ ತಿಳಿಸಿದರು. ಕೋಡಿಂಬಾಡಿ – ಮಿತ್ತಳಿಕೆ – ನೆಕ್ಕರಾಜೆ ರಸ್ತೆಯ ಸ್ವಲ್ಪ ಜಾಗ ಖಾಸಗಿಯಾಗಿದ್ದು, ಮಾಲಕರು ಗ್ರಾ.ಪಂ.ಗೆ ಬರೆದುಕೊಡಲು ಸಿದ್ಧರಿದ್ದಾರೆ. ಆದರೆ, ಆ ವ್ಯಕ್ತಿಯೇ ಸ್ವಂತ ಖರ್ಚಿನಲ್ಲಿ ಪಂಚಾಯತ್ ಹೆಸರಿಗೆ ನೋಂದಾಯಿಸಿ ಕೊಡಬೇಕು ಎನ್ನುತ್ತಿದ್ದಾರೆ. ಹಿಂದೆಯೂ ಹಲವರು ಗ್ರಾ.ಪಂ.ಗೆ ಜಾಗ ಬಿಟ್ಟುಕೊಟ್ಟಿದ್ದಾರೆ. ರಸ್ತೆಗಳ ಅಭಿವೃದ್ಧಿ ಯಾಗಿದೆ. ಆಗ ಇಲ್ಲದ ನಿಯಮ ಈಗೇಕೆ ಎಂದು ಗ್ರಾಮಸ್ಥ ಜಯಪ್ರಕಾಶ್
ಬದಿನಾರು ಪ್ರಶ್ನಿಸಿದರು.
ಜಿ.ಪಂ. ಸದಸ್ಯೆ ಶಯನಾ ಜಯಾನಂದ್, ತಾ.ಪಂ. ಸದಸ್ಯ ಲಕ್ಷ್ಮಣ ಬೆಳ್ಳಿಪ್ಪಾಡಿ, ಗ್ರಾ.ಪಂ. ಉಪಾಧ್ಯಕ್ಷ ಬಾಬು ಗೌಡ, ಸದಸ್ಯರಾದ ಜಗನ್ನಾಥ ಶೆಟ್ಟಿ, ರಮಣಿ, ಚಿತ್ರಾ, ಯಶೋದಾ, ಭವಾನಿ, ರಾಮಚಂದ್ರ ಪೂಜಾರಿ, ಲಿಂಗಪ್ಪ, ಮನೋಹರ ಗೌಡ, ಭವ್ಯಾ ಉಪಸ್ಥಿತರಿದ್ದರು. ಗ್ರಾಮಸ್ಥರಾದ ಯೋಗೀಶ್ ಸಾಮಾನಿ, ರಾಮಣ್ಣ ಗೌಡ ಗುಂಡೋಲೆ, ಪ್ರಭಾಕರ ಸಾಮಾನಿ, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಸುಭಾಶ್, ದೇವಾನಂದ, ಮೋಹನ್ ಪಕ್ಕಳ, ಜಯಾನಂದ್, ಕೃಷ್ಣ ನಾಯ್ಕ, ನಿರಂಜನ್ ರೈ ಮಠಂತಬೆಟ್ಟು ಉಪಸ್ಥಿತರಿದ್ದರು. ಗ್ರಾಮ ಕರಣಿಕ ಚಂದ್ರನಾಯಕ್, ಪಂಚಾಯತ್ ರಾಜ್ ಉಪವಿಭಾಗದ ಕಿರಿಯ ಎಂಜಿನಿಯರ್ ಸಂದೀಪ್, ಸಿಆರ್‌ಪಿ ಗಣೇಶ್, ಮೆಸ್ಕಾಂ ಜೆಇ ವೀರ ನಾಯ್ಕ, ಪಶು ಚಿಕಿತ್ಸಾಲಯದ ವೈದ್ಯಾಧಿ ಕಾರಿ ಮೋಹನ್ ದಾಸ್ ಎಸ್.ಪಿ., ಸಮಾಜ ಕಲ್ಯಾಣ ಇಲಾಖೆಯ ಕೃಷ್ಣ ಬಿ., ಆರೋಗ್ಯ ಇಲಾಖೆಯ ಡಾ| ಲಿಖೀತ್, ಕೃಷಿ ಅಧಿಕಾರಿ ತಿರುಪತಿ ಎನ್. ಭರಮಣ್ಣನವರ್, ಸಿಡಿಪಿಒ ಜಲಜಾಕ್ಷಿ, ತೋಟಗಾರಿಕೆಯ ಬಸವರಾಜ್ ಹಡಪದ ಇಲಾಖಾ ಮಾಹಿತಿ ನೀಡಿದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚಿತ್ರಾವತಿ ಸ್ವಾಗತಿಸಿದರು. ಕಾರ್ಯದರ್ಶಿ ರಮೇಶ್ ವಂದಿಸಿದರು.
ಸೂಕ್ಷ್ಮ ಪ್ರದೇಶದಿಂದ ಕೈಬಿಡಿ
ಈ ಹಿಂದೆ ಕೋಡಿಂಬಾಡಿ ಮತಗಟ್ಟೆಯನ್ನು ಸೂಕ್ಷ್ಮ ಪಟ್ಟಿಗೆ ಸೇರಿಸಲಾಗಿತ್ತು. ಈಗ ಅದನ್ನು ಕೈಬಿಟ್ಟು, ಬೆಳ್ಳಿಪ್ಪಾಡಿ ಗ್ರಾಮವನ್ನು ಸೇರಿಸಲಾಗಿದೆ. ಬೆಳ್ಳಿಪ್ಪಾಡಿಯಲ್ಲಿ ಈವರೆಗೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಇದನ್ನು ಕೈಬಿಡಬೇಕೆಂಬ ಆಗ್ರಹ ಗ್ರಾಮಸಭೆಯಲ್ಲಿ ಕೇಳಿ ಬಂತು. ಬೆಳ್ಳಿಪ್ಪಾಡಿಯಲ್ಲಿ ಮಂಗಗಳ ಹಾವಳಿ ವಿಪರೀತವಾಗಿದ್ದು, ಸಾಕಷ್ಟು ಕೃಷಿ ಹಾನಿಯಾಗುತ್ತಿದೆ. ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಯಿತು. ಅರಣ್ಯಾಧಿಕಾರಿ ಗಿರೀಶ್ ಉತ್ತರಿಸಿ, ಈಗ ಕಾಡಿನಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಲಾಗುತ್ತಿದೆ. ಮುಂದಕ್ಕೆ ಮಂಗಗಳು ನಾಡಿಗೆ ಬರಲಾರವು ಎಂದು ಭರವಸೆ ನೀಡಿದರು.
ಮೊಬೈಲ್ ನಲ್ಲಿ ಚಿತ್ರೀಕರಣ
ಗ್ರಾಮಸಭೆಯ ವೀಡಿಯೋ ಚಿತ್ರೀಕರಣ ಮಾಡಬೇಕೆಂದು ಸುತ್ತೋಲೆ ಇದೆ. ಅದು ಏಕೆ ಪಾಲನೆ ಆಗುತ್ತಿಲ್ಲ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ವೀಡಿಯೋ ಕೆಮರಾ ಹಾಳಾಗಿದೆ ಎಂದು ಅಧ್ಯಕ್ಷರು ಹೇಳಿದರು. ಕಳೆದ ಸಭೆಯಲ್ಲೂ ಇದೇ ಮಾತು ಕೇಳಿ ಬಂದಿತ್ತು. ಈ ಬಾರಿಯೂ ಮೊಬೈಲ್‌ನಲ್ಲಿ ಅರ್ಧಂಬರ್ಧ ವೀಡಿಯೋ ತೆಗೆಯಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Deepawali: ಸುಳ್ಯದಲ್ಲಿ ಗಮನ ಸೆಳೆದ ಬಲೀಂದ್ರ ಅಲಂಕಾರ ಸರ್ಧೆ
Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ
Puttur: ಮುಂಜಾನೆ 3 ಗಂಟೆಗೆ ನಡೆಯಿತು ಅಗಲಿದವರಿಗೆ ಅವಲಕ್ಕಿ ಸಮರ್ಪಣೆ!
ಮರ ಬಿದ್ದು ಸವಾರ ಸಾವು; ಅಪಾಯಕಾರಿ ಮರ ತೆರವಿಗೆ ಅಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.