ಕೊಯಿಲ: ದುರಸ್ತಿಯಾಗಲಿ ಪಶುಸಂಗೋಪನ ಕ್ಷೇತ್ರದ ರಸ್ತೆ!
Team Udayavani, Aug 24, 2018, 10:41 AM IST
ಆಲಂಕಾರು : ಜಿಲ್ಲೆಯ ಏಕೈಕ ಪಶು ಸಂಗೋಪನ ಕ್ಷೇತ್ರ ಕೊಯಿಲ ಫಾರ್ಮ್ನ ಮಧ್ಯೆ ಸಾರ್ವಜನಿಕರ ಉಪಯೋಗದ ರಸ್ತೆ ಹಲವು ವರ್ಷಗಳಿಂದ ದುರಸ್ತಿ ಕಂಡಿಲ್ಲ. ಇದಕ್ಕಾಗಿ ಹೋರಾಟಕ್ಕೆ ಮುನ್ನುಡಿ ಬರೆಯಲಾಗಿದೆ. ಪಶುಸಂಗೋಪನ ಕೇಂದ್ರದ ಭದ್ರತೆ ದೃಷ್ಟಿಯಿಂದ ಕೋಳಿಮರಿ ಉತ್ಪಾದನ ಕೇಂದ್ರ ಹಾಗೂ ಆಧುನಿಕ ಡೈರಿ ನಿರ್ಮಾಣದ ಕಾರಣವೊಡ್ಡಿ ಆರು ವರ್ಷ ಗಳ ಹಿಂದೆ 40 ಲಕ್ಷ ರೂ. ವೆಚ್ಚದಲ್ಲಿ ಅಗಳು, ಆವರಣ ನಿರ್ಮಿಸಲಾಗಿತ್ತು. ಕೊçಲ, ಆನೆ ಗುಂಡಿ,ಬೇಂಗದಪಡ್ಪು, ವೈಪಾಲ್, ಕೊನೆಮಜಲು, ಪೊಸಲಕ್ಕೆ, ಕಾಯರಟ್ಟ, ಪಲ್ಲಡ್ಕ, ಪಟ್ಟೆ, ಆತೂರು ದೇವಸ್ಥಾನ ಸಹಿತ 230 ಮನೆಗಳಿಗೆ ರಸ್ತೆ ಸಮಸ್ಯೆಯಾಯಿತು. ವಿದ್ಯಾರ್ಥಿಗಳು ಸುತ್ತುಬಳಸಿ ಸಾಗುವಂತಾಯಿತು. ನಿರ್ಜನ ದಾರಿಯಲ್ಲಿ ಸರಕಳ್ಳತನ, ದರೋಡೆ, ಅತ್ಯಾಚಾರವೂ ನಡೆಯಿತು. ಆರು ದಶಕಗಳ ಹಿಂದೆ ಫಾರ್ಮ್ ಅಸ್ತಿತ್ವಕ್ಕೆ ಬರುವಾಗ ಸಂತಸಪಟ್ಟ ಜನ, ಪಶ್ಚಾತ್ತಾಪ ಪಡುವಂತಾಯಿತು. ಸಮಸ್ಯೆ ನಿವಾರಿಸಿ, ರಸ್ತೆ ದುರಸ್ತಿಗೆ ಅನುದಾನ ನೀಡುವುದಾಗಿ ಜಿಲ್ಲಾಧಿಕಾರಿ ನೀಡಿರುವ ಭರವಸೆಯೂ ಈಡೇರಿಲ್ಲ. ಇದರಿಂದ ಬೇಸತ್ತ ಜನರು ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಜನಪ್ರತಿನಿಧಿಗಳು ಸಮಸ್ಯೆ ಆಲಿಸಿದರೂ ಪರಿಹಾರ ಒದಗಿಸಿಲ್ಲ. ಪಶುಸಂಗೋಪನ ಇಲಾಖೆಯ ಆಯುಕ್ತರು ಮೂರು ಬಾರಿ ಬಂದು ಪರಿಶೀಲಿಸಿದ್ದಾರೆ. ಕಡಬ ತಹಶೀಲ್ದಾರ್, ಕಂದಾಯ ಅಧಿಕಾರಿಗಳು ಬಂದರೂ ಬಗೆಹರಿಯಲಿಲ್ಲ.
ಪರಿಹರಿಸಲು ಪ್ರಯತ್ನ
ಕಳೆದ ಅವಧಿಯಲ್ಲಿ ಕೊಯಿಲ ಗ್ರಾ.ಪಂ. ಅಧ್ಯಕ್ಷರಾಗಿದ್ದ ಬಾಲಕೃಷ್ಣ ಗೌಡ, ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳನ್ನು ಒಟ್ಟು ಸೇರಿಸಿ ದಾರಿ ಸಮಸ್ಯೆ ಪರಹರಿಸಬೇಕು ಎಂದು ಶತಪ್ರಯತ್ನ ಮಾಡಿದ್ದರು. ಜಿಲ್ಲಾಧಿಕಾರಿ ಏಳು ಬಾರಿ ಕೊಯಿಲಕ್ಕೆ ಬರುವುದಾಗಿ ಹೇಳಿ ತಪ್ಪಿಸಿಕೊಂಡು ಎಂಟನೇ ಬಾರಿಗೆ ಪಶು ಸಂಗೋಪನ ಕ್ಷೇತ್ರಕ್ಕೆ ಬಂದರು. ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಹಾಗೂ ಶಾಸಕ ಎಸ್. ಅಂಗಾರ ಅವರ ಸೂಚನೆಯ ಮೇರೆಗೆ ಡಿಸಿ ಆಗಮಿಸಿ, ಕ್ಷೇತ್ರದೊಳಗೆ ಬಂದ್ ಮಾಡಿರುವ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸುಮಾರು 1 ಕಿ.ಮೀ. ಇರುವ ಮುಖ್ಯ ರಸ್ತೆಯ ಡಾಮರು ಕಿತ್ತುಹೋಗಿದ್ದನ್ನು ದುರಸ್ತಿ ಮಾಡಲು ತಮ್ಮ ನಿಧಿಯಿಂದ 2 ಲಕ್ಷ ರೂ. ಬಿಡುಗಡೆ ಮಾಡಲಾಗುವುದು. ನಿರ್ಮಿತಿ ಕೇಂದ್ರದವರು ಕಾಮಗಾರಿ ನಡೆಸಲಿದ್ದಾರೆ ಎಂದು ಹೇಳಿ ಹೋಗಿದ್ದರು. ನಿರ್ಮಿತಿ ಕೇಂದ್ರ ಅಂದಾಜು ಪಟ್ಟಿಯನ್ನೂ ಸಲ್ಲಿಸಿತ್ತು. ಆದರೆ ಅನುದಾನ ಬಿಡುಗಡೆಯಾಗಲೇ ಇಲ್ಲ. ಆಗ ಮುಖ್ಯಮಂತ್ರಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಪಶುವೈದ್ಯಕೀಯ ಕಾಲೇಜು ಶಿಲಾನ್ಯಾಸಕ್ಕಾಗಿ ಕೊಯಿಲಕ್ಕೆ ಆಗಮಿಸಿದಾಗಲೂ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಅದೂ ಪರಿಗಣನೆಗೆ ಬರಲಿಲ್ಲ. ರಸ್ತೆ ದಿನದಿಂದ ದಿನಕ್ಕೆ ಹದಗೆಡುತ್ತಲೇ ಇದೆ. ಡಾಮರು ರಸ್ತೆ ಈಗ ಕಚ್ಚಾ ರಸ್ತೆಯ ಸ್ವರೂಪ ಪಡೆದುಕೊಂಡಿದೆ. ಇತ್ತ ಆತೂರಿನ ದೂರವಾಣಿ ಕೇಂದ್ರದ ಬಳಿಯಿಂದ ಸದಾಶಿವ ದೇವಸ್ಥಾನದ ಮೂಲಕ ಪಶುಸಂಗೋಪನ ಕ್ಷೇತ್ರದ ಪಕ್ಕದಿಂದಲೇ ಹಾದು ಹೋಗುವ ರಸ್ತೆಯೂ ಅವ್ಯವಸ್ಥೆಯ ಆಗರವಾಗಿದೆ. ಈ ರಸ್ತೆಗೆ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎನ್ನಲಾಗುತ್ತಿದ್ದರೂ ಖಾತ್ರಿಯಿಲ್ಲ.
ಹೋರಾಟಕ್ಕೆ ಸಮಿತಿ
ರಸ್ತೆ ದುರಸ್ತಿಯಾಗದೆ ಬೇಸತ್ತಿರುವ ಗ್ರಾಮಸ್ಥರು ಇತ್ತೀಚೆಗೆ ನಡೆದ ಕೊಯಿಲ ಗ್ರಾಮ ಸಭೆಯಲ್ಲಿ ಭಾರೀ ಗದ್ದಲ ಎಬ್ಬಿಸಿದ್ದರು. ಸಭೆ ನಡೆಸಿ, ಯತೀಶ್ ಪುತ್ಯೆ ಅವರ ನೇತೃತ್ವದಲ್ಲಿ ಹೋರಾಟ ಸಮಿತಿ ರಚಿಸಿಕೊಂಡಿದ್ದಾರೆ.
3 ಜಿಲ್ಲಾಧಿಕಾರಿಗಳು
ಕ್ಷೇತ್ರದ ಶಾಸಕ ಎಸ್. ಅಂಗಾರ, ಅಂದಿನ ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಅವರ ಸಮ್ಮುಖದಲ್ಲಿ ಆಗಿನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ತಮ್ಮ ನಿಧಿಯಿಂದ 2 ಲಕ್ಷ ರೂ. ಅನುದಾ ನದಲ್ಲಿ ಮುಖ್ಯರಸ್ತೆ ದುರಸ್ತಿ ಮಾಡಿಸುವುದಾಗಿ ತಿಳಿಸಿದ್ದರು. ಆ ಬಳಿಕ ಮೂವರು ಜಿಲ್ಲಾಧಿಕಾರಿಗಳು ಬದಲಾದರೂ ಭರವಸೆ ಈಡೇರಿಲ್ಲ. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರ ಕನಸಿನ ಕೂಸಾದ ಪಶುವೈದ್ಯಕೀಯ ಮಹಾವಿದ್ಯಾಲಯ ಅನುಷ್ಠಾನಕ್ಕೆ ಚಾಲನೆ ದೊರೆತರೂ ರಸ್ತೆ ದುರಸ್ತಿ ಕಾರ್ಯ ಮಾತ್ರ ಹಳ್ಳಹಿಡಿದಿದೆ.
ಅನುದಾನಕ್ಕೆ ಪ್ರಯತ್ನ
ಕೊಯಿಲ ಪಶು ಸಂಗೋಪನ ಕ್ಷೇತ್ರದೊಳಗಿನ ರಸ್ತೆ ದುರಸ್ತಿಗಾಗಿ ಹೋರಾಟ ಸಮಿತಿ ರಚಿಸಲಾಗಿದೆ. ಸಂಸದರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಹೋರಾಟ ಸಮಿತಿಯ ಮುಖಂಡರು ಹಾಗೂ ಸ್ಥಳೀಯರನ್ನು ಸೇರಿಸಿಕೊಂಡು ಶೀಘ್ರದಲ್ಲೇ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ, ಅನುದಾನ ಬಿಡುಗಡೆಗೆ ಶ್ರಮಿಸಲಾಗುವುದು.
- ಹೇಮಾ ಮೋಹನ್‌ದಾಸ್ ಶೆಟ್ಟಿ
ಕೊಯಿಲ ಗ್ರಾ.ಪಂ. ಅಧ್ಯಕ್ಷರು
ಶಾಶ್ವತ ಪರಿಹಾರ
ಪಶುಸಂಗೋಪನ ಕ್ಷೇತ್ರದೊಳಗಿನ ಮುಖ್ಯ ರಸ್ತೆ ಇಲ್ಲಿ ಕ್ಷೇತ್ರ ಅನುಷ್ಠಾನ ಆಗುವಾಗಲೇ ಊರ್ಜಿತದಲ್ಲಿತ್ತು. ಈ ರಸ್ತೆಯನ್ನು ಫಾರ್ಮ್ನವರೇ ದುರಸ್ತಿ ಮಾಡಬೇಕು. ಇಲ್ಲದಿದ್ದರೆ ಗ್ರಾ.ಪಂ. ಅಥವಾ ಸ್ಥಳೀಯರೇ ದುರಸ್ತಿ ಮಾಡಿಕೊಳ್ಳಲು ಅನುವು ಮಾಡಿಕೊಡಬೇಕು. ರಸ್ತೆ ಸಮಸ್ಯೆ ಇತ್ಯರ್ಥಪಡಿಸಲು ರಾಜಕೀಯ ರಹಿತವಾಗಿ ಪ್ರಯತ್ನ ಸಾಗಬೇಕು. ಶಾಸಕರು, ಜಿ.ಪಂ. ಹಾಗೂ ತಾ.ಪಂ. ಸದಸ್ಯರನ್ನೊಳಗೊಂಡ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಿ ಸಚಿವ ಸಂಪುಟದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಮಾಡಿದರೆ, ಪರಿಹಾರ ದೊರೆಯಬಹುದು.
– ಸರ್ವೋತ್ತಮ ಗೌಡ
ಜಿ.ಪಂ. ಸದಸ್ಯರು, ನೆಲ್ಯಾಡಿ ಕ್ಷೇತ್ರ
ಸದಾನಂದ ಆಲಂಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.