ಕೊಂಕಣಿಗೆ ವೇದಿಕೆ ಅಗತ್ಯ: ಕಾಸರಗೋಡು ಚಿನ್ನಾ
Team Udayavani, Oct 16, 2017, 10:54 AM IST
ಮಹಾನಗರ : ಕೊಂಕಣಿ ಮಾತನಾಡುವ ಹೊಸ ಪೀಳಿಗೆಯ ನಾಗರಿಕರಿಗೆ ಭಾಷೆಗೆ ಸಂಬಂಧಿಸಿದಂತೆ ವೇದಿಕೆ ಸಿದ್ಧವಾಗಬೇಕು ಎಂದು ರಂಗಕರ್ಮಿ ಕಾಸರಗೋಡು ಚಿನ್ನಾ ಅಭಿಪ್ರಾಯಪಟ್ಟರು.
ಅವರು ಲೇಖಕಿ ಸ್ಮಿತಾ ಜೈದೀಪ್ ಶೆಣೈ ಅವರ ಮನೆಯಲ್ಲಿ ಇತ್ತೀಚೆಗೆ ಆಯೋಜಿಸಿದ 220ನೇ ‘ಘರ್‌ಘರ್ ಕೊಂಕಣಿ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮುದಾಯದತ್ತ ಸಾಗುವ ಪ್ರಯತ್ನ
ದೇವಸ್ಥಾನಗಳು ಹಾಗೂ ಸಾಮಾಜಿಕ ಸಂಘಗಳು ಭಾಷಾಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ಆಯೋಜಿಸಬೇಕು. ಇಲ್ಲವಾದಲ್ಲಿ ಕೊಂಕಣಿ ಭಾಷೆಯನ್ನು ಮುಂದಿನ ಜನಾಂಗ ಉಳಿಸಿಕೊಳ್ಳುವುದು ಸಾಧ್ಯವಾಗದು. ಈ ನಿಟ್ಟಿನಲ್ಲಿ ‘ಘರ್‌ಘರ್ ಕೊಂಕಣಿ’ ಸಮುದಾಯದತ್ತ ನೇರವಾಗಿ ಸಾಗುವ ಪ್ರಯತ್ನವಾಗಿದೆ. ಚಿತ್ರಾಪುರ ಬ್ರಾಹ್ಮಣರು ಮೇಧಾವಿಗಳು, ಕಲಾಕಾರರು. ಗೌಡ ಸಾರಸ್ವತರು ಭಜನ ಗಾಯನದಲ್ಲಿ ಚತುರರು ಹಾಗೂ ಮಾತುಗಾರಿಕೆಯಲ್ಲಿ ಪ್ರವೀಣರು. ಪ್ರತಿ ಕೊಂಕಣಿ ಜನಾಂಗವು ತನ್ನದೇ ಆದ ವಿಶೇಷ ಪ್ರತಿಭೆಯನ್ನು ತಮ್ಮ ಕೆಲಸದ ಮೂಲಕ ತೋರಿಸಿಕೊಂಡು ಬಂದಿದ್ದು, ಅದನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ ಎಂದರು.
ರೋಚಕ ಇತಿಹಾಸ
ಉದ್ಘಾಟಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಹಾಗೂ ಚಿಂತಕಿ ಪ್ರಭಾ ಕುಡ್ವ, ‘ಕೊಂಕಣಿ ಭಾಷಿಕರಾದ ನಾವು ಧರ್ಮ , ಭಾಷೆಗಳನ್ನು ಉಳಿಸಿಕೊಳ್ಳಲು ಬಹಳಷ್ಟು ಹೆಣಗಾಡಿದ್ದೇವೆ. ನಮ್ಮದೊಂದು ರೋಚಕ ಇತಿಹಾಸ. ಇತರ ಸಮಾಜದವರೊಡನೆ ಪ್ರೀತಿ, ವಿಶ್ವಾಸ, ಸಮನ್ವಯತೆಯಿಂದ ಬಾಳಿದಾಗ ನಮ್ಮ ಹಿರಿಯರ ಹೋರಾಟಗಳಿಗೆ ನ್ಯಾಯ ಒದಗಿಸಿದಂತಾಗುವುದು’ ಎಂದರು.
ಎ.ಜೆ. ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜಿನ ತಜ್ಞ ಡಾ| ಸುದೇಶ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದನ್ವಯ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೆನರಾ ಶಾಲೆಯ ಪಂಚಮಿ ಕೊಂಕಣಿ ಮಕ್ಕಳ ಗೀತೆ, ಪೀಯೂಶ್ ಶೆಣೈ ಹಾಗೂ ಪಾರಿತೋಷ್ ಶೆಣೈ ಕೊಂಕಣಿ ಅಜ್ಜಿಕಥೆ ಹೇಳಿದರು.
ಬೆಸೆಂಟ್ ಕಾಲೇಜಿನ ಹರ್ಷಿತಾ ದೇವರ ನಾಮ ಹಾಡಿದರು. ಅಶ್ವಿತ್ ತಬಲಾ ಸಾಥ್ ನೀಡಿದರು. 3 ವರ್ಷದ ಬಾಲಕ ಸಿದ್ದೇಶ್ ಶ್ಲೋಕ ಹಾಡಿದರು. ಮರೋಳಿ ಸಬಿತಾ ಕಾಮತ್ ಹಾಗೂ ಮಾಲತಿ ಕಾಮತ್ ಕೊಂಕಣಿಯಲ್ಲಿ ಹಾಸ್ಯ ಹರಟೆ ನಡೆಸಿದರು. ಸ್ಮಿತಾ ಶೆಣೈ ಕವಿತೆ ವಾಚಿಸಿದರು. ಅನುಷಾ
ಪೈ ಪ್ರಾರ್ಥನಾಗೀತೆ ಹಾಡಿದರು.
ಡಾ| ಸುಚೇತಾ ರಾವ್ ಶುಭ ಹಾರೈಸಿದರು. ಸಂತೋಷ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ರಂಗನಟ ಪ್ರಕಾಶ್ ನಾಯಕ್ ಮತ್ತು ಲೇಖಕ ಡಾ| ಅರವಿಂದ ಶ್ಯಾನುಭಾಗ್ ಉಪಸ್ಥಿತರಿದ್ದರು.ಲೇಡಿಹಿಲ್ ಹಾಗೂ ಅಶೋಕನಗರದ ಕೊಂಕಣಿ ಭಾಷಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.