ಹಳ್ಳಿಗಳಿಗೆ ಬರಲಿದ್ದಾರೆ ಪಶು, ಕೃಷಿ, ವನ ಸಖಿಯರು!
Team Udayavani, Sep 26, 2022, 6:55 AM IST
ಮಂಗಳೂರು: ಸರಕಾರದ ವಿವಿಧ ಯೋಜನೆಗಳು, ಸವಲತ್ತುಗಳ ಬಗ್ಗೆ ಅರಿವು ಮತ್ತು ಅವುಗಳ ಪ್ರಯೋಜನವನ್ನು ಅರ್ಹ ಫಲಾನು ಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಿಸುವ ನಿಟ್ಟಿನಲ್ಲಿ ಮನೆಬಾಗಿಲಿಗೆ ಬರಲಿದ್ದಾರೆ ಕೃಷಿ, ಪಶು ಸಖಿಯರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಶನ್ (ಎನ್‌ಆರ್‌ಎಲ್‌ಎಂ) ವತಿಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೃಷಿ ಸಖಿಯರು, ಪಶು ಸಖಿಯರು, ಕೃಷಿ ಉದ್ಯೋಗ ಸಖಿಯರು ಹಾಗೂ ವನ ಸಖೀಯರನ್ನು ನೇಮಕ ಮಾಡಲಾಗಿದೆ. ಇವರು ಸರಕಾರ ಮತ್ತು ಜನರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಪ್ರಸ್ತುತ ಸಖಿಯರಿಗೆ ತರಬೇತಿ ನಡೆಯುತ್ತಿದ್ದು ಅಕ್ಟೋಬರ್ ತಿಂಗಳಿನಿಂದ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಾಚರಿಸಲಿದ್ದಾರೆ. ಗ್ರಾ.ಪಂ. ಮಟ್ಟ ದಲ್ಲಿ ಸಂಜೀವಿನಿ ಸ್ವಸಹಾಯ ಸಂಘಗಳ ಒಕ್ಕೂಟದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಾರೆ.
ಸರಕಾರದ ವಿವಿಧ ಇಲಾಖೆಗಳಲ್ಲಿರುವ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ದೊರಕದಿರುವುದು, ಅವುಗಳನ್ನು ಹೇಗೆ ಪಡೆದು ಕೊಳ್ಳ ಬೇಕು ಎಂಬ ಬಗ್ಗೆ ಸೂಕ್ತ ಮಾರ್ಗದರ್ಶನ ಲಭ್ಯತೆ ಇಲ್ಲದಿರುವುದರಿಂದ ಗ್ರಾಮೀಣ ಭಾಗಕ್ಕೆ ಇವುಗಳು ಸರಿಯಾಗಿ ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ಅದರ ಸದುಪಯೋಗವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಮಾಡುವ ಕಾರ್ಯದಲ್ಲಿ ಸಖಿಯರು ಗ್ರಾ.ಪಂ. ಮಟ್ಟದಲ್ಲಿ ತೊಡಗಿಸಿ ಕೊಳ್ಳುತ್ತಾರೆ.
ಕೃಷಿ ಸಖಿಯರು
ಕೃಷಿ ಇಲಾಖೆಯ ಕೃಷಿ ಪಾಠಶಾಲೆ, ಯಂತ್ರೋಪಕರಣಗಳು, ಬೀಜಗಳು, ಕೀಟನಾಶಕಗಳು ಸೇರಿದಂತೆ ವಿವಿಧ ಸೌಲಭ್ಯಗಳು, ಪ್ರಧಾನಮಂತ್ರಿ ಕಿಸಾನ್, ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಗಳ ಉಪಯೋಗಗಳನ್ನು ಕೃಷಿಕರು ಸಮರ್ಥವಾಗಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾ.ಪಂ.ಗೆ ಓರ್ವರಂತೆ ಕೃಷಿ ಸಖಿಯರನ್ನು ನೇಮಕ ಮಾಡಲಾಗಿದೆ. ಇದರಂತೆ ದ.ಕ. ಜಿಲ್ಲೆಯಲ್ಲಿ 223 ಹಾಗೂ ಉಡುಪಿ ಜಿಲ್ಲೆಯಲ್ಲಿ 155 ಕೃಷಿ ಸಖಿಯರನ್ನು ನೇಮಕ ಮಾಡಲಾಗಿದೆ. ಕೃಷಿ ವಿಜ್ಞಾನ ಕೇಂದ್ರದಲ್ಲಿ ಇವರಿಗೆ ತರಬೇತಿ ನೀಡಲಾಗುತ್ತಿದೆ.
ಕೃಷಿ ಉದ್ಯೋಗ ಸಖಿಯರು
ಗ್ರಾಮೀಣ ಪ್ರದೇಶದಲ್ಲಿ ಕೃಷಿ ಆಧಾರಿತ ಉತ್ಪನ್ನಗಳ ಸ್ವಸಹಾಯ ಗುಂಪುಗಳಿಗೆ ಪೂರಕವಾಗಿ ಕೃಷಿ ಉದ್ಯೋಗ ಸಖಿಯರ ನೇಮಕ ಮಾಡಲಾಗಿದೆ. ಕೃಷಿ ಆಧಾರಿತ ಉತ್ಪನ್ನಗಳ ಗುಂಪುಗಳು ಕೃಷಿ ಉತ್ಪನ್ನಗಳ ಮೌಲ್ಯವರ್ಧಿತ ವಸ್ತುಗಳನ್ನು ತಯಾರಿಸಿ ಮಾರುಕಟ್ಟೆಗೆ ತರುತ್ತವೆ. ದ.ಕ. ಜಿಲ್ಲೆಯಲ್ಲಿ 133 ಉತ್ಪಾದಕರ ಗುಂಪುಗಳಿವೆ.
ಪಶು ಸಖಿಯರು
ಪಶು ಸಂಗೋಪನ ಇಲಾಖೆಯ ಯೋಜನೆ, ಸವಲತ್ತಗಳು, ಸಹಾಯಧನ ಬಗ್ಗೆ ರೈತರಿಗೆ, ಹೈನುಗಾರರಿಗೆ ಮಾಹಿತಿ ನೀಡಿ ಅರ್ಹ ಫಲಾನುಭವಿಗಳಿಗೆ ತಲುಪಿಸುವುದು. ಜಾನುವಾರುಗಳ ಸಾಂಕ್ರಾಮಿಕ ರೋಗದ ಬಗ್ಗೆ ಮಾಹಿತಿ ತಡೆ ಚುಚ್ಚುಮದ್ದು ರೋಗಗಳ ಬಗ್ಗೆ ಮಾಹಿತಿ ಮುಂತಾದ ಕಾರ್ಯಗಳನ್ನು ಪಶು ಸಖಿಯರು ನಿರ್ವಹಿಸುತ್ತಾರೆ. ಉಭಯ ಜಿಲ್ಲೆಗಳಲ್ಲಿ ಒಟ್ಟು 378 (223+155) ಪಶು ಸಖಿಯರನ್ನು ನೇಮಕ ಮಾಡಲಾಗಿದೆ. ಇವರಿಗೆ ರುಡ್‌ಸೆಟಿಯಲ್ಲಿ ತರಬೇತಿ ನೀಡಲಾಗುತ್ತದೆ.
ವನಸಖಿಯರು
ಮರಗಳನ್ನು ಹೊರತುಪಡಿಸಿ ಇತರ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಅವುಗಳಿಂದ ಮೌಲ್ಯವರ್ಧಿತ ಉತ್ಪನಗಳನ್ನು ತಯಾರಿಸಿ ಮಾರು ಕಟ್ಟೆಗೆ ತರಲಾಗುತ್ತದೆ. ದ.ಕ. ಜಿಲ್ಲೆಯಲ್ಲಿ 3 ವನ ಧನ ಹಾಗೂ ಉಡುಪಿ ಜಿಲ್ಲೆಯಲ್ಲಿ 1 ವನಧನ ಕೇಂದ್ರಗಳಿವೆ. ವನಸಖೀಯರು ಇವುಗಳ ಕಾರ್ಯ ನಿರ್ವಹಣೆಯಲ್ಲಿ ನೆರವು ನೀಡುತ್ತಾರೆ.
3,000 ರೂ. ಗೌರವಧನ
ವಿವಿಧ ಯೋಜನೆಗಳ ಸಖೀಯರಿಗೆ ಎನ್‌ಎಲ್‌ಆರ್‌ಎಂ ವತಿಯಿಂದ ಸದ್ಯಕ್ಕೆ ಮಾಸಿಕ 3 ಸಾವಿರ ರೂ. ಗೌರವಧನ ನಿಗದಿ ಯಾಗಿದೆ. ಗ್ರಾ.ಪಂ. ಮಟ್ಟದ ಸಂಜೀವಿನಿ ಒಕ್ಕೂಟದ ಮೂಲಕ ಸಂಭಾವನೆಯನ್ನು ಅವರಿಗೆ ಪಾವತಿಸಲಾಗುತ್ತದೆ. ಇವರ ದೈನಂದಿನ ಕಾರ್ಯ ನಿರ್ವಹಣೆಯ ಬಗ್ಗೆ ಒಕ್ಕೂಟ ನಿಗಾ ಇರಿಸುತ್ತದೆ.
ಸಂಜೀವಿನಿ ಒಕ್ಕೂಟದ ಮೂಲಕ ಕೃಷಿ, ಪಶು ಸಖಿಯರ ನೇಮಕ ಮಾಡಲಾಗಿದ್ದು, ಅವರಿಗೆ ತರಬೇತಿ ನೀಡಿ ಗ್ರಾ.ಪಂ. ಮಟ್ಟದಲ್ಲಿ ನಿಯೋಜಿಸಲಾಗುವುದು. ಕೃಷಿ ಇಲಾಖೆ, ಪಶಸಂಗೋಪನೆ ಇಲಾಖೆಗಳಿಗೆ ಸಂಬಂಧಿಸಿದ ಜನರಿಗೆ ಪರಿಣಾಮ ಕಾರಿಯಾಗಿ ತಲುಪುವ ನಿಟ್ಟಿನಲ್ಲಿ ಅವರು ಕಾರ್ಯ ನಿರ್ವಹಿಸುತ್ತಾರೆ.
– ಡಾ| ಕುಮಾರ್, ದ.ಕ. ಜಿ.ಪಂ. ಸಿಇಒ
-ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM Siddaramaiah: ಕರಾವಳಿಗೆ ಎರಡು ಸರಕಾರಿ ಮೆಡಿಕಲ್ ಕಾಲೇಜು
CM Siddaramaiah: ಜಾತಿಗಣತಿ ವರದಿ ಮುಂದಿನ ಸಂಪುಟ ಸಭೆಯಲ್ಲಿ ಮಂಡನೆ
Mangaluru: ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಳುಗಳಿಗೆ ಕೃಪಾಂಕ ನೀಡಲು ತೀರ್ಮಾನ : ಸಿಎಂ
Fraud: ಆನ್‌ಲೈನ್ ಟ್ರೇಡಿಂಗ್: ಮಹಿಳೆಗೆ 15.27 ಲಕ್ಷ ರೂ. ವಂಚನೆ
Mangaluru: ಆರೋಪಿಗೆ 20 ವರ್ಷ ಕಠಿನ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ
MUST WATCH
ಹೊಸ ಸೇರ್ಪಡೆ
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ
Maha Kumbh; 7 ಕೋಟಿ ರುದ್ರಾಕ್ಷಿಗಳಿಂದ 12 ಜ್ಯೋತಿರ್ ಲಿಂಗಗಳ ರಚನೆ
Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.