ಕುಕ್ಕೆ : ಕಿರುಷಷ್ಠಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ
Team Udayavani, Dec 20, 2017, 2:35 PM IST
ಸುಬ್ರಹ್ಮಣ್ಯ: ಸ್ಥಳೀಯ ಮಟ್ಟದಲ್ಲಿ ಪ್ರತಿಭಾವಂತ ಕಲಾವಿದರಿದ್ದಾರೆ. ಅಂತಹ ಸುಪ್ತ ಪ್ರತಿಭೆಗಳಿಗೆ ಹೆಚ್ಚು ಅವಕಾಶ ಸಿಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಕಲಾವಿದರ ತಂಡಗಳ ಜತೆ ಸ್ಥಳೀಯ ಪ್ರತಿಭೆಗಳಿಗೂ ಈ ಬಾರಿ ಕಿರುಷಷ್ಠಿ ಕಾರ್ಯಕ್ರಮದ ವೇದಿಕೆಯಲ್ಲಿ ಹೆಚ್ಚು ಅವಕಾಶ ಕಲ್ಪಿಸಿಕೊಟ್ಟಿದ್ದೇವೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.
ಕುಕ್ಕೆ ಸುಬ್ರಹ್ಮಣದಲ್ಲಿ ಕಿರುಷಷ್ಠಿ ಪ್ರಯುಕ್ತ ರಥಬೀದಿಯ ಕಿರುಷಷ್ಠಿ ವೇದಿಕೆಯಲ್ಲಿ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಮಟ್ಟದ ಪ್ರತಿಭೆಗಳ ಜತೆ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ದೊರೆತಿದೆ. ಕಳೆದ ಕಿರುಷಷ್ಠಿ ವೇಳೆ ಪ್ರಸ್ತಾಪಿಸಿದಂತೆ ಅದನ್ನು ಜಾರಿಗೆ ತಂದಿದ್ದೇವೆ ಎಂದರು.
ದೇಗುಲದ ಇಒ ರವೀಂದ್ರ ಎಂ.ಎಚ್., ಸಹಾಯಕ ಇಒ ಚಂದ್ರ ಶೇಖರ ಪೇರಾಲ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಕೃಷ್ಣ ಮೂರ್ತಿ ಭಟ್, ಬಾಲಕೃಷ್ಣ ಬಲ್ಲೇರಿ. ಮಾಧವ ಡಿ., ಮಾಸ್ಟರ್ ಪ್ಲಾನ್ ಸಮಿತಿಯ ಶಿವರಾಮ ರೈ, ಕೆ.ಪಿ ಗಿರಿಧರ, ಜಿಲ್ಲಾ
ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ. ಕೆಎಸ್‌ಎಸ್ ಕಾಲೇಜು ಪ್ರಾಂಶುಪಾಲ ರಂಗಯ್ಯ ಶೆಟ್ಟಿಗಾರ್, ಸಿಬಂದಿ
ಅಶೋಕ ಉಪಸ್ಥಿತರಿದ್ದರು. ಮಂಜುನಾಥ ಭಟ್ ಎನ್. ನಿರ್ವಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ
ಸುಬ್ರಹ್ಮಣ್ಯದ ಬಾಲ ಕಲಾವಿದರಾದ ದಿಲೀಶ್ ಮತ್ತು ಲಿಖೀತಾ ಅವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು. ಬಳಿಕ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು. ವಿಶ್ವಕಲಾನಿಕೇತನ ನೃತ್ಯ ಕಲಾ ಶಾಲೆ ಪುತ್ತೂರು ಇದರ ವಿದ್ಯಾರ್ಥಿಗಳಿಂದ ನೃತ್ಯಧಾರೆ, ನೂಪುರ ಫೈನ್ ಆರ್ಟ್ಸ್ ಅಕಾಡೆಮಿ ಬೆಂಗಳೂರು ಇದರ ರೂಪಾ ರಾಜೇಶ್ ಹಾಗೂ ತಂಡದವರಿಂದ ಕೂಚುಪುಡಿ ನೃತ್ಯ ಜರಗಿತು. ರಾತ್ರಿ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಮ್ಮಿಲನದಲ್ಲಿ ಶ್ರೀ ದೇವಿ ಮಹಾತ್ಮೆ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು.
ಸಮಿತಿ ನಿರ್ಧಾರದಲ್ಲಿ ಇರಲಿಲ್ಲ
ಸಂಪ್ರದಾಯಬದ್ಧ ಆಚರಣೆಯನ್ನು ಯಥಾಸ್ಥಿತಿ ಕಾಪಾಡಿಕೊಂಡು ಭಕ್ತರ ಭಾವನೆಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ಧರ್ಮ ಸಮ್ಮೇಳನ ಕಾರ್ಯಕ್ರಮ ರದ್ದತಿ ವಿಚಾರ ಸಮಿತಿ ನಿರ್ಧಾರದಲ್ಲಿ ಇರಲಿಲ್ಲ. ಪ್ರತ್ಯೇಕ ದಿನ ನಿಗದಿಪಡಿಸಿ ಮತ್ತಷ್ಟು ಅರ್ಥಪೂರ್ಣವನ್ನಾಗಿ ನಡೆಸಲು ಚಿಂತನೆ ನಡೆಸಲಾಗಿತ್ತು ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.